ಸುಬ್ರಹ್ಮಣ್ಯ: ಮಹತೋಭಾರ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ವಾರ್ಷಿಕ ಚಂಪಾಷಷ್ಠಿ ಮಹೋತ್ಸವದ ಅಂಗವಾಗಿ ಶನಿವಾರ ಪೂರ್ವಾಹ್ನ 11.15ರ ಸುಮುಹೂರ್ತದಲ್ಲಿ ದೇವಸ್ಥಾನದ ಗರ್ಭಗುಡಿಯಿಂದ ಪ್ರಧಾನ ಅರ್ಚಕ ವೇ|ಮೂ| ಸೀತಾರಾಮ ಎಡಪಡಿತ್ತಾಯ ಅವರು ಮೂಲಮೃತ್ತಿಕೆಯನ್ನು ತೆಗೆದರು.
ಆರಂಭದಲ್ಲಿ ದೇಗುಲದ ಪುರೋಹಿತರಿಗೆ ಮತ್ತು ಆಡಳಿತ ಮಂಡಳಿಯವರಿಗೆ, ಬಳಿಕ ಭಕ್ತರಿಗೆ ಮೂಲಮೃತ್ತಿಕೆಯನ್ನು ವಿತರಿಸಲಾಯಿತು. ಸಹಸ್ರಾರು ಭಕ್ತರು ಬೆಳಗ್ಗೆ 10 ಗಂಟೆಯಿಂದಲೇ ಸಾಲಿನಲ್ಲಿ ನಿಂತು ಮೃತ್ತಿಕಾ ಪ್ರಸಾದ ಪಡೆದರು. ಮೂಲಮೃತ್ತಿಕಾ ಪ್ರಸಾದ ತೆಗೆಯುವ ಹಿನ್ನೆಲೆಯಲ್ಲಿ ಪೂರ್ವಾಹ್ನ ಭಕ್ತರಿಗೆ ಶ್ರೀ ದೇವರ ದರುಶನಕ್ಕೆ ಅವಕಾಶ ಇರಲಿಲ್ಲ. ಅಪರಾಹ್ನ 2 ಗಂಟೆಯ ಬಳಿಕ ಅವಕಾಶ ಕಲ್ಪಿಸಲಾಯಿತು.
ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಮೋಹನರಾಂ ಸುಳ್ಳಿ, ಕಾರ್ಯ ನಿರ್ವಹಣಾಧಿಕಾರಿ ಡಾ| ನಿಂಗಯ್ಯ, ಎಇಒ ರಾಜಣ್ಣ, ವ್ಯವಸ್ಥಾಪನ ಸಮಿತಿ ಸದಸ್ಯರಾದ ಪ್ರಸನ್ನ ದರ್ಬೆ, ಪಿ.ಜಿ.ಎಸ್.ಎನ್. ಪ್ರಸಾದ್, ಶ್ರೀವತ್ಸ ಬೆಂಗಳೂರು, ಮನೋಹರ ರೈ, ಶೋಭಾ ಗಿರಿಧರ್, ಲೋಕೇಶ್ ಮುಂಡುಕಜೆ, ವನಜಾ ವಿ. ಭಟ್, ಅಧೀಕ್ಷಕ ಪದ್ಮನಾಭ ಶೆಟ್ಟಿಗಾರ್, ಹೆಬ್ಟಾರ್ ಪ್ರಸನ್ನ ಭಟ್, ಪಾಟಾಳಿ ಲೋಕೇಶ್ ಎ.ಆರ್. ಉಪಸ್ಥಿತರಿದ್ದರು.
ಚಂಪಾಷಷ್ಠಿ ಮಹೋತ್ಸವ
ಕುಕ್ಕೆ ದೇವಸ್ಥಾನದ ವಾರ್ಷಿಕ ಜಾತ್ರೆ ಚಂಪಾಷಷ್ಠಿ ಮಹೋತ್ಸವ ಡಿ. 10ರಂದು ಕೊಪ್ಪರಿಗೆ ಏರುವುದರ ಮೂಲಕ ಆರಂಭಗೊಂಡು ಡಿ. 24ರ ವರೆಗೆ ನಡೆಯಲಿದೆ. ಡಿ. 10 ಮತ್ತು 11ರಂದು ರಾತ್ರಿ ಶೇಷವಾಹನಯುಕ್ತ ಬಂಡಿ ಉತ್ಸವ ಜರಗಲಿದೆ.