Advertisement
ಕುದೂರು ಗ್ರಾಮ ಪಂಚಾಯಿತಿಯಲ್ಲಿ ಕಳೆದ ಮಾ. 11ರಂದು ನಡೆದ ಸಾಮಾನ್ಯ ಸಭೆಯ ನಡಾವಳಿ ಗ್ರಾ.ಪಂ.ಸದಸ್ಯರ ಕೈ ಸೇರಲು ಬರೋಬ್ಬರಿ ಒಂದು ತಿಂಗಳು ತೆಗೆದುಕೊಂಡಿದೆ. ಸಭೆಯಲ್ಲಿ ಗ್ರಾಮದ ಎಚ್.ಕೆ.ವಿಜಯಕುಮಾರ್ ಗ್ರಾಪಂ ಸ್ವತ್ತನ್ನು ಕಬಳಿಸಿದ್ದಾರೆ ಎಂದು ಚರ್ಚೆ ನಡೆದು ಈ ವಿಷಯಕ್ಕೆ ಸಂಬಂಧಿಸಿದಂತೆ ತಾ.ಪಂ. ಕಾರ್ಯನಿರ್ವಹಣಾಧಿಕಾರಿ ಗಮನಕ್ಕೆ ತರಬೇಕೆಂದು ಸಭೆಯಲ್ಲಿ ತೀರ್ಮಾನವಾಗಿತ್ತು.
Related Articles
Advertisement
ತನಿಖೆ ಅಗತ್ಯ: ಕುದೂರು ಗ್ರಾಪಂ ವ್ಯಾಪ್ತಿಯಲ್ಲಿನ ಎಚ್.ಕೆ.ವಿಜಯಕುಮಾರ್ ಎಂಬುವವರು ತಮ್ಮ ಜಮೀನಿನ ಭೂಪರಿವರ್ತನೆ ಮಾಡಿಸಿಕೊಂಡು ಗ್ರಾಮ ಪಂಚಾಯಿತಿಯಲ್ಲಿ ಖಾತೆ ಮಾಡಿಸಿ ಮಾರ್ಚ್‌ವರೆಗೆ 3,27665 ರೂ. ಕಂದಾಯ ಬಾಕಿ ಉಳಿಸಿಕೊಂಡಿದ್ದಾರೆ. ಅಂತಹದರಲ್ಲಿ ಅವರಿಂದ ಯಾವುದೇ ಶುಲ್ಕವನ್ನು ವಸೂಲಿ ಮಾಡದೇ ದಾಖಲೆಗಳನ್ನು ನೀಡಬೇಕೆಂಬ ವಿಷಯ ಚರ್ಚೆಯೇ ಆಗಿಲ್ಲ. ಅಧ್ಯಕ್ಷರು ಹೇಗೆ ಸಹಿ ಹಾಕಿದ್ದಾರೆ. ಈ ಅಕ್ರಮದಲ್ಲಿ ನಡಾವಳಿ ಬರೆಯುವವರ ಕೈಚಳಕವಿದೆಯೋ ಅಥವಾ ಹೇಳಿ ಕೊಟ್ಟು ಬರೆಸುವವರ ಚಾಣಾಕ್ಷತನ ವಿದೆಯೋ ಎಂಬುದು ತನಿಖೆ ಮಾಡಿದರಷ್ಟೇ ತಿಳಿಯುತ್ತದೆ ಎಂದು ಗ್ರಾಮ ಪಂಚಾಯತ್ ಸದಸ್ಯ ಬಾಲಕೃಷ್ಣ ಹೇಳುತ್ತಾರೆ.
ನಿಯಮ ಹೇಳುವುದೇನು: ಗ್ರಾ.ಪಂ.ನಿಯಮದ ಪ್ರಕಾರ ಸಾಮಾನ್ಯ ಸಭೆಯಲ್ಲಿಯೇ ನಡಾವಳಿ ಯನ್ನು ಬರೆದು ಮುಗಿಸಬೇಕು. ಮೂರು ದಿನಗಳಲ್ಲಿ ಅದರ ನಕಲು ಪ್ರತಿಯನ್ನು ತಾಲೂಕು ಕಾರ್ಯನಿರ್ವಹಣಾಧಿಕಾರಿ ಕಚೇರಿ ತಲುಪಿಸಬೇಕು. ಕ್ಲಿಷ್ಟಕರ ಚರ್ಚೆಗಳು ಸಭೆಯಲ್ಲಿ ನಡೆದಾಗ ಪರ ವಿರೋಧಗಳು ವ್ಯಕ್ತವಾದರೆ ಅಂತಹ ಸಂದರ್ಭಗಳಲ್ಲಿ ಪರ ವಿರೋಧ ವ್ಯಕ್ತಪಡಿಸಿದ ಸದಸ್ಯರ ಸಹಿಯನ್ನು ಪ್ರತ್ಯೇಕವಾಗಿ ಪಡೆದು ನಡಾವಳಿ ಪುಸ್ತಕದಲ್ಲಿ ಚರ್ಚಿತ ವಿಷಯಯನ್ನು ನಮೂದಿಸುವುದು ಕಡ್ಡಾಯ. ಸದಸ್ಯರು ಸಭೆಯ ನಡಾವಳಿಯನ್ನು ಅಂದೇ ಕೇಳಿದರೆ ಕೊಡಬೇಕಿರುವುದು ಗ್ರಾ.ಪಂ. ಅಧ್ಯಕ್ಷರ ಹಾಗೂ ಪಿಡಿಒ ರವರ ಕರ್ತವ್ಯ ಎಂದು ಜಿಲ್ಲೆಯ ಗ್ರಾಪಂ ಅಭಿವೃದ್ಧಿ ಅಧಿಕಾರಿಯೊಬ್ಬರು ಹೇಳುತ್ತಾರೆ.
ಎ.ಕೆ.ವಿಜಯಕುಮಾರ್ ಸ್ವತ್ತಿಗೆ ಸಂಬಂಧಿಸಿದಂತೆ ಅವರಿಂದ ಯಾವ ಶುಲ್ಕವನ್ನು ಪಡೆಯದೇ ಅವರಿಗೆ ಗ್ರಾ.ಪಂ.ನಿಂದ ದಾಖಲೆಗಳನ್ನು ನೀಡಬೇಕೆಂದು ಸಭೆಯಲ್ಲಿ ಚರ್ಚೆಯೇ ಆಗಿಲ್ಲ. ಆದರೆ ನಡಾವಳಿ ಪುಸ್ತಕ ಬರೆಯುವಾಗ ಹೇಗೆ ಬರೆದರು, ಯಾರು ಬರೆದರು ಎಂದು ನನಗೆ ತಿಳಿದಿಲ್ಲ. – ಭಾಗ್ಯಮ್ಮ, ಕುದೂರುಗ್ರಾ.ಪಂ.ಅಧ್ಯಕ್ಷೆ
-ಕೆ.ಎಸ್.ಮಂಜುನಾಥ್ ಕುದೂರು