ಬೆಳ್ತಂಗಡಿ: ಬಹುಶಃ ಕೆಲವೇ ಕೆಲವು ವರ್ಷಗಳು ಕಳೆದರೆ ವನ್ಯಜೀವಿ ಅರಣ್ಯ ವಿಭಾಗ ಎಂಬ ಇಲಾಖೆಯೇ ಇನ್ಮುಂದೆ ವ್ಯರ್ಥವಾಗಿಬಿಡಬಹುದೇನೋ. ಅರಣ್ಯವೇ ಇಲ್ಲದ ಮೇಲೆ ಇಲಾಖೆ ಇದ್ದು ಏನು ಮಾಡಿತು? ಕಾರಣ ಕುದುರೆಮುಖ ರಾಷ್ಟ್ರೀಯ ಉದ್ಯಾನವನ ಇನ್ನಿಲ್ಲದಂತೆ ವರ್ಷದಿಂದ ವರ್ಷಕ್ಕೆ ಬೆಂಕಿಗೆ ಸಿಕ್ಕಿ ಬೆತ್ತಲಾಗುತ್ತಿದೆ.
ಬೆಳ್ತಂಗಡಿ ವನ್ಯಜೀವಿ ವಿಭಾಗದ ಅರಣ್ಯ ಭಾಗದಲ್ಲಿ ಈ ವರ್ಷವು ಭಯಬೀತ ರೂಪದಲ್ಲಿ ಬೆಂಕಿ ಕೆನ್ನಾಲಗೆ ಶನಿವಾರ ಸಂಜೆ ಹೊತ್ತಿ ಉರಿಯುವ ದೃಶ್ಯ ಕಂಡಾಗ ಅಕ್ಷರಶಃ ನಾವೆ ನಿಂತಲ್ಲೆ ಸುಟ್ಟ ಭಸ್ಮವಾದಂತ ಅನುಭವಾಗುತ್ತಿದೆ. ಕುದುರೆಮುಖ ತುತ್ತತುದಿಯಿಂದ
ಶನಿವಾರ ಸಂಜೆ ಬೆಂಕಿ ಆವರಿಸತೊಡಗಿದ್ದು ನಾವೂರು ಗ್ರಾಮದ ತೊಳಲಿ ಏಳು ಸುತ್ತು ಎಂಬಲ್ಲಿಯವರೆಗೆ ವ್ಯಾಪಿಸಿದೆ.
ಬಿಸಿಲ ತಾಪಮಾನಕ್ಕೆ ವನ್ಯಜೀವಿ ವಿಭಾಗದ ಅರಣ್ಯದಲ್ಲಿರುವ ಹುಲ್ಲು ಗಾವಲು ಪ್ರದೇಶ ಬೆಂಕಿ ಜತೆಗೆ ಗಾಳಿಯ ವೇಗಕ್ಕೆ ನಿಮಿಷಾರ್ಧದಲ್ಲಿ ವ್ಯಾಪಿಸುತ್ತಿದೆ. ನಾವೂರು ಮುಖ್ಯರಸ್ತೆಯಿಂದ ಸುಮಾರು 10 ಕಿ.ಮೀ. ದೂರದಲ್ಲಿ ಬೆಂಕಿ ಕಂಡುಬಂದಿದ್ದು ಇಲ್ಲಿಗೆ 8 ಕಿ.ಮೀ.ಕಾಲ್ನಡಿಗೆ ಮೂಲಕವೇ ಸಾಗಬೇಕಾಗಿದೆ. ಅರಣ್ಯದಲ್ಲಿ ನೀರಿನ ವ್ಯವಸ್ಥೆ ಇಲ್ಲದಿರುವುದು ಅಗತ್ಯ ಸಲಕರಣೆಗಳನ್ನು ಒಯ್ಯಲು ಅಸಾಧ್ಯವಾಗಿರುವುದರಿಂದ ಈ ಪರಿಸರದಲ್ಲಿ ಸೊಪ್ಪಿನ ಮೂಲಕ ಹೊಡೆದು ಬೆಂಕಿ ನಂದಿಸಬೇಕಿದೆ.
ಬೆಳ್ತಂಗಡಿ ವನ್ಯಜೀವಿ ವಿಭಾಗದ ಪ್ರಭಾರ ಆರ್ ಎಫ್ ಒ ರಾಘವೇಂದ್ರ ಮತ್ತು ಸಿಬಂದಿಗಳು ರವಿವಾರ ಬೆಳಗಿನ ಜಾವವೇ ಕಾರ್ಯಾಚರಣೆಗೆ ತೆರಳಿದ್ದು ಬೆಂಕಿ ಇನ್ನಷ್ಟು ಹರಡದಂತೆ ಕ್ರಮ ಕೈಗೊಂಡಿದ್ದಾರೆ. ಮಗದೊಂದು ಭಾಗದಿಂದ ಕುದುರೆಮುಖ ಕಡೆಯ ಸಿಬಂದಿ ಕಾರ್ಯಾಚರಣೆ ನಡೆಸುತ್ತಿದ್ದಾರೆ. ಸಂಜೆ ವೇಳೆ ಕುದುರೆಮುಖ ವನ್ಯಜೀವಿ ವಿಭಾಗದ ಅರಣ್ಯ ಉಪ ಸಂರಕ್ಷಣಾಧಿಕಾರಿ ಶಿವರಾಮ್ ಬಾಬು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿರುವ ಕುರಿತು ತಿಳಿದು ಬಂದಿದೆ.
ಕಾರ್ಯಾಚರಣೆಗೆ ಉರಿ ಬಿಸಿಲು ಹಾಗೂ ಗಾಳಿ ಬೀಸುತ್ತಿರುವುದು ಅಡಚಣೆ ನೀಡುತ್ತಿದೆ. ಪರಿಸರದಲ್ಲಿ ಮೊಬೈಲ್ ನೆಟ್ವರ್ಕ್ ಇಲ್ಲದಿರುವುದು ಸಮಸ್ಯೆಯಾಗಿದೆ.
ಕಳೆದ ವರ್ಷ ಈ ಭಾಗದಲ್ಲಿ ಬೆಂಕಿ ಕಾಣಿಸಿಕೊಂಡು ಕಾಡ್ಗಿಚ್ಚು ನಿರ್ಮಾಣವಾಗಿ ಅರಣ್ಯ ನಾಶ ಉಂಟಾಗಿತ್ತು. ಇಲಾಖೆ ಅಹರ್ನಿಶಿ ಕಾರ್ಯಾಚರಣೆ ನಡೆಸಿದರು, ಬೆಂಕಿ ಸಾಕಷ್ಟು ಪರಿಸರವನ್ನು ವ್ಯಾಪಿಸಿತ್ತು.
ಚಾರ್ಮಾಡಿ ಘಾಟಿ ಪರಿಸರದಲ್ಲಿ ಬೆಂಕಿ ಕಾಣಿಸಿಕೊಂಡಿದ್ದು ಬೆಳ್ತಂಗಡಿ ಅರಣ್ಯ ಇಲಾಖೆ ಸಿಬ್ಬಂದಿಗಳು ನೆರಿಯ ಮೂಲಕ ಅರಣ್ಯ ಪ್ರದೇಶಕ್ಕೆ ತೆರಳಿ ಪರಿಶೀಲನೆ ನಡೆಸಿದರು. ಈ ವೇಳೆ ಇಲ್ಲಿನ ಖಾಸಗಿ ಜಾಗವೊಂದರ ಪರಿಸರದಲ್ಲಿ ಬೆಂಕಿ ಕಂಡುಬಂದಿದ್ದು, ಅದನ್ನು ಹತೋಟಿಗೆ ತರಲಾಯಿತು. ಉಳಿದಂತೆ ಚಾರ್ಮಾಡಿ ಘಾಟಿ ಪರಿಸರದ ಅರಣ್ಯದಲ್ಲಿ ಕಂಡು ಬರುತ್ತಿರುವ ಬೆಂಕಿ, ದಕ್ಷಿಣ ಕನ್ನಡ ಜಿಲ್ಲೆಯ ಅರಣ್ಯ ಪ್ರದೇಶದ ಪಸರಿಸುವ ಸಾಧ್ಯತೆ ಇಲ್ಲದ ಕಾರಣ ತಂಡ ಹಿಂದಿರುಗಿತು.
ಹೆಲಿಕಾಪ್ಟರ್ ಅಭಿಯಾನ ವ್ಯರ್ಥ
ವನ್ಯಜೀವಿ ಅರಣ್ಯ ವಿಭಾಗ ಶೋಲಾ ಸಂಪತ್ತನ್ನು ಹೊಂದಿದ್ದು, ವಿಶೇಷ ಪ್ರಾಣಿ ಸಂಕುಲಗಳು ವ್ಯಾಪಕವಾಗಿದೆ. ಇಷ್ಟೆಲ್ಲ ಇದ್ದರೂ ರಕ್ಷಣೆಗೆ ಅರಣ್ಯ ಸಿಬಂದಿಗಳಿಗೆ ಬೆಂಕಿ ನಂದಿಸಲು ಮರದ ಸೊಪ್ಪೇ ಗತಿ. ಸಾಕಷ್ಟು ಸಿಬಂದಿಗಳ ಕೊರತೆ ನಡುವೆ ಬೆಂಕಿ ಶಮನಕ್ಕೆ ವಿದೇಶದಲ್ಲಿರುವಂತೆ ಹೆಲಿಕಾಪ್ಟರ್ ತಂತ್ರಜ್ಞಾನ ಅಳವಡಿಕೆಗೆ ಕಳೆದ ವರ್ಷ ಬಹಳಷ್ಟು ಅಭಿಯಾನ, ಒತ್ತಾಯ ಕೂಗು ಕೇಳಿಬಂದಿತ್ತು. ನೇತ್ರಾವತಿ ತಿರುವು ಯೋಜನೆಗೆ ಸಾವಿರಾರು ಕೋಟಿ ಸುರಿದ ಸರಕಾರಗಳು ಅದೇ ನೇತ್ರಾವತಿ ಉಗಮ ತಾಣವಾದ ಕುದುರೇಮುಖದ ನೀರಿನ ಮೂಲ ಅರಣ್ಯ ರಕ್ಷಣೆಗೆ ಹಾತೊರೆಯುತ್ತಿಲ್ಲ. ಅಥವಾ ಸುಧಾರಿತ ತಂತ್ರಜ್ಞಾನ ಇನ್ನೂ ಬಳಕೆ ಮಾಡುತ್ತಿಲ್ಲ. ಹೀಗೆ ಮುಂದುವರೆದರೆ ಅರಣ್ಯ ಸಂಪತ್ತಿನ ಗತಿಯೇನು? ಎಂಬಂತಾಗಿದೆ.