Advertisement

ಖನಿಜ ಅನ್ವೇಷಣೆ ಮಂಗಳೂರಿನ KIOCL‌ ಹೆಗಲಿಗೆ

03:10 AM Jul 20, 2020 | Hari Prasad |

ಮಂಗಳೂರು: ಸರಕಾರಿ ಸ್ವಾಮ್ಯದ ಕೇಂದ್ರ ಸರಕಾರದ ಮಂಗಳೂರಿನ ಬೃಹತ್‌ ಕೈಗಾರಿಕೆ ಕುದುರೆಮುಖ ಕಬ್ಬಿಣ ಅದಿರು ಸಂಸ್ಥೆಗೆ (ಕೆಐಒಸಿಎಲ್‌) ಖನಿಜ ನಿಕ್ಷೇಪಗಳನ್ನು ಅನ್ವೇಷಿಸಲು ಅನುಮತಿ ಲಭಿಸಿದೆ.

Advertisement

ಅದರಂತೆ ದೇಶದ ವಿವಿಧ ರಾಜ್ಯ ಹಾಗೂ ಕರ್ನಾಟಕದ ವಿವಿಧ ಭಾಗಗಳಲ್ಲಿ ಇರಬಹುದಾದ ಖನಿಜ ನಿಕ್ಷೇಪಗಳ ಬಗ್ಗೆ ಅನ್ವೇಷಣೆ ಹಾಗೂ ಅದರ ಕುರಿತಾದ ಅಧ್ಯಯನ ನಡೆಸಿ ಕೇಂದ್ರ ಉಕ್ಕು ಸಚಿವಾಲಯಕ್ಕೆ ವರದಿಯನ್ನು ಕೆಐಒಸಿಎಲ್‌ ನೀಡಲಿದೆ. ಕಾರ್ಯಚಟುವಟಿಕೆ ಆರಂಭಗೊಂಡಿದ್ದು, ಅನ್ವೇಷಣೆ ನಡೆಯುತ್ತಿದೆ. 105 ಕೋ.ರೂ.ಗಳನ್ನು ಕೇಂದ್ರ/ರಾಜ್ಯ ಸರಕಾರವು ಇದಕ್ಕಾಗಿ ಮೀಸಲಿಟ್ಟಿದ್ದು, ಮೈಸೂರಿನಲ್ಲಿ ಸದ್ಯ ಖನಿಜ ಅನ್ವೇಷಣೆ ನಡೆಯುತ್ತಿದೆ.

ಖನಿಜ ಅನ್ವೇಷಣೆ ಮಾಡಿದ ಅನಂತರ ಅದನ್ನು ಮಂಗಳೂರಿನ ಕೆಐಒಸಿಎಲ್‌ನ ಕೇಂದ್ರ ಕಚೇರಿಯಲ್ಲಿರುವ ಟೆಸ್ಟಿಂಗ್‌ ಲ್ಯಾಬ್‌ನಲ್ಲಿ ಪರಿಶೀಲಿಸಲಾಗುತ್ತದೆ. ಜತೆಗೆ ಕಂಪೆನಿಯ ತಜ್ಞರ ತಂಡ ಪರಿಶೀಲಿಸಿ ವರದಿ ಸಿದ್ಧಪಡಿಸಲಿದೆ.
ಅಂತಾರಾಷ್ಟ್ರೀಯ ಖನಿಜ ಶಾಸ್ತ್ರೀಯ ಒಕ್ಕೂಟ ದೃಢಪಡಿಸಿರುವಂತೆ ಈವರೆಗೆ ಒಟ್ಟು 5,413 ವಿಧದ ಖನಿಜಗಳನ್ನು ಗುರುತಿಸಲಾಗಿದೆ. ಇವುಗಳ ನಿರಂತರ ಅನ್ವೇಷಣೆ ದೇಶದ ಬೇರೆ ಬೇರೆ ಕಡೆಗಳಲ್ಲಿ ನಡೆಯುತ್ತಿದೆ.

ಬಳ್ಳಾರಿಯಲ್ಲಿ ಗಣಿ
ಸುಪ್ರೀಂ ಕೋರ್ಟ್‌ನ ಆದೇಶದಂತೆ 2006ರ ಜ. 1ರಿಂದ ಕುದುರೆಮುಖದಲ್ಲಿ ಗಣಿಗಾರಿಕೆ ನಿಲ್ಲಿಸಿದ ಬಳಿಕ ರಾಜ್ಯದಲ್ಲಿ ಸಾಕಷ್ಟು ನಿಕ್ಷೇಪಗಳಿದ್ದರೂ ಕುದುರೆಮುಖ ಕಬ್ಬಿಣ ಅದಿರು ಸ್ಥಾವರಕ್ಕೆ ಪರ್ಯಾಯ ನಿಕ್ಷೇಪದ ವ್ಯವಸ್ಥೆ ಆಗಿರಲಿಲ್ಲ. 1999ರಲ್ಲಿ ಕುದುರೆಮುಖದಲ್ಲಿ ಗುತ್ತಿಗೆ ಪ್ರಥಮ ಅವಧಿ ಮುಗಿದ ಕೂಡಲೇ ಪರ್ಯಾಯ ಅದಿರು ನಿಕ್ಷೇಪಕ್ಕೆ ಕಂಪೆನಿ ರಾಜ್ಯ ಸರಕಾರಕ್ಕೆ ಬೇಡಿಕೆ ಸಲ್ಲಿಸಿತ್ತು.

2006ರಲ್ಲಿ ಗಣಿಗಾರಿಕೆ ಸಂಪೂರ್ಣ ಸ್ಥಗಿತಗೊಂಡ ಅನಂತರ ಪರ್ಯಾಯ ನಿಕ್ಷೇಪ ಪ್ರದೇಶವನ್ನು ಒದಗಿಸಿ ಕೊಡುವಂತೆ ನಿರಂತರವಾಗಿ ಸರಕಾರಕ್ಕೆ ಕೋರಿಕೆ ಸಲ್ಲಿಸುತ್ತಲೇ ಬಂದಿತ್ತು. ಇದೀಗ ಅಂತಿಮವಾಗಿ ಬಳ್ಳಾರಿಯ ಗಣಿಯನ್ನು ಕೆಐಒಸಿಎಲ್‌ಗೆ ನೀಡಲಾಗಿದೆ.

Advertisement

ಚೀನ ರಫ್ತು ನಿರಾತಂಕ
ಕೆಐಒಸಿಎಲ್‌ನಲ್ಲಿ 2019-20ನೇ ಸಾಲಿನ 4ನೇ ತ್ತೈಮಾಸಿಕದಲ್ಲಿ 2.375 ಮಿಲಿಯ ಟನ್‌ ಪೆಲ್ಲೆಟ್‌ ಉತ್ಪಾದನೆ ಹಾಗೂ 2.356 ಮಿಲಿಯ ಟನ್‌ ರವಾನೆ ಆಗಿದೆ. ಇದೇ ಅವಧಿಯಲ್ಲಿ ಹಿಂದಿನ ವರ್ಷ 2.238 ಮಿಲಿಯ ಟನ್‌ ಉತ್ಪಾದನೆ ಹಾಗೂ 2.206 ಮಿಲಿಯ ಟನ್‌ ರವಾನೆ ಆಗಿತ್ತು. ಇಲ್ಲಿಂದ ರಫ್ತು ಮಾರುಕಟ್ಟೆ ಶೇ. 31ರಷ್ಟು ಏರಿಕೆ ಕಂಡಿದೆ. ಕಬ್ಬಿಣದ ಉಂಡೆಗಳನ್ನು ಬ್ರೆಜಿಲ್‌, ಮಧ್ಯಪ್ರಾಚ್ಯ, ಚೀನ, ಯುರೋಪ್‌ ಮುಂತಾದ ದೇಶಗಳಿಗೆ ಇಲ್ಲಿಂದ ರಫ್ತು ಮಾಡಲಾಗುತ್ತದೆ.

ಕರ್ನಾಟಕದಲ್ಲಿ ಖನಿಜ ಸಂಪನ್ಮೂಲ
ಕರ್ನಾಟಕ ರಾಜ್ಯವು ಹೇರಳವಾದ ಖನಿಜ ಸಂಪನ್ಮೂಲ ಹೊಂದಿದೆ. ಬಳ್ಳಾರಿ, ಚಿತ್ರದುರ್ಗ, ತುಮಕೂರು, ಉತ್ತರ ಕನ್ನಡ ಹಾಗೂ ಚಿಕ್ಕಮಗಳೂರು ಜಿಲ್ಲೆಗಳಲ್ಲಿ ಕಬ್ಬಿಣ, ಮ್ಯಾಂಗನೀಸ್‌ ಅದಿರುಗಳ ನಿಕ್ಷೇಪಗಳಿವೆ. ಇವುಗಳಲ್ಲದೆ ಹಾಸನ ಹಾಗೂ ಮೈಸೂರಿನಲ್ಲಿ ಕ್ರೋಮಿಯಂ, ಬೆಳಗಾವಿಯಲ್ಲಿ ಬಾಕ್ಸೈಟ್‌, ಚಿತ್ರದುರ್ಗ, ರಾಯಚೂರಿನಲ್ಲಿ ತಾಮ್ರದ ಅದಿರು ದೊರೆಯುತ್ತದೆ.

ಕೆಐಒಸಿಎಲ್‌ ಕಂಪೆನಿಯು ಖನಿಜ ಪರಿಶೋಧನೆ ನಡೆಸಲು ಕೇಂದ್ರ ಹಾಗೂ ರಾಜ್ಯ ಸರಕಾರದಿಂದ ಅನುಮೋದನೆ ದೊರಕಿದೆ. 105 ಕೋ.ರೂ.ಗಳ ಯೋಜನೆಗೆ ಅನುಮತಿ ದೊರೆತಿದ್ದು, ಮೈಸೂರಿನಲ್ಲಿ ಈಗಾಗಲೇ ಕಾರ್ಯಾರಂಭವಾಗಿದೆ.
– ಎಂ.ವಿ. ಸುಬ್ಬರಾವ್‌, ಅಧ್ಯಕ್ಷರು, ವ್ಯವಸ್ಥಾಪಕ ನಿರ್ದೇಶಕರು, ಕೆಐಒಸಿಎಲ್‌

Advertisement

Udayavani is now on Telegram. Click here to join our channel and stay updated with the latest news.

Next