Advertisement

ಕೂಡ್ಲಿಗಿ ಬಿಜೆಪಿ ಟಿಕೆಟ್‌ ಭಾರೀ ಪೈಪೋಟಿ

11:33 PM Mar 31, 2023 | Team Udayavani |

ಬಳ್ಳಾರಿ: ಕೂಡ್ಲಿಗಿ ಶಾಸಕ ಎನ್‌.ವೈ.ಗೋಪಾಲಕೃಷ್ಣ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ ಬೆನ್ನಲ್ಲೇ ಕ್ಷೇತ್ರದಲ್ಲಿ ಬಿಜೆಪಿ ಟಿಕೆಟ್‌ ಆಕಾಂಕ್ಷಿಗಳ ಸಂಖ್ಯೆ ಹೆಚ್ಚಿದ್ದು, ಪೈಪೋಟಿ ಏರ್ಪಟ್ಟಿದೆ. ಅಭ್ಯರ್ಥಿಗಳ ಆಯ್ಕೆಗೆ ನಡೆದ ಕಾರ್ಯಕರ್ತರ ಅಭಿಪ್ರಾಯ ಸಂಗ್ರಹದಲ್ಲಿ ಯಾರ ಮೇಲೆ ಹೆಚ್ಚು ಒಲವಿದೆ ಎಂಬುದು ಕುತೂಹಲ ಮೂಡಿಸಿದೆ.
ಕಾಂಗ್ರೆಸ್‌ ಮೂಲದ ಗೋಪಾಲಕೃಷ್ಣ ಅವರು ಕಳೆದ 2018ರಲ್ಲಿ ಕೇವಲ 15 ದಿನದಲ್ಲೇ ಬಿಜೆಪಿ ಸೇರಿ ಕೂಡ್ಲಿಗಿ ಕ್ಷೇತ್ರದಿಂದ ಸ್ಪರ್ಧಿಸಿ ಗೆಲ್ಲುವಲ್ಲಿ ಯಶಸ್ವಿ ಯಾಗಿದ್ದರು. ಮತ್ತೊಂದು ಅವಧಿಗೆ ಟಿಕೆಟ್‌ ಬಯಸಿದ್ದ ಅವರಿಗೆ ವಯಸ್ಸಿನ ಆಧಾರದಲ್ಲಿ ಟಿಕೆಟ್‌ ದೊರೆಯದಿ ರುವುದು ಖಚಿತವಾಗುತ್ತಿದ್ದಂತೆ ಶಾಸಕ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದಾರೆ. ಪರಿಣಾಮ ಕ್ಷೇತ್ರದಲ್ಲಿ ಬಿಜೆಪಿ ಟಿಕೆಟ್‌ ಆಕಾಂಕ್ಷಿಗಳ ಸಂಖ್ಯೆ ದಿಢೀರನೆ ಹೆಚ್ಚಳವಾಗಲು ಕಾರಣವಾಗಿದೆ. ಸ್ಥಳೀ ಯರೊಂದಿಗೆ ಹೊರಗಿನವರು ಸಹ ಟಿಕೆಟ್‌ಗಾಗಿ ಎಲ್ಲಿಲ್ಲದ ಕಸರತ್ತು ನಡೆಸುತ್ತಿದ್ದಾರೆ.

Advertisement

ಯಾರ್ಯಾರು ಆಕಾಂಕ್ಷಿಗಳು: ಬಳ್ಳಾರಿ-ವಿಜಯನಗರ ಅವಳಿ ಜಿಲ್ಲೆಗಳ ಸಂಸದ ವೈ.ದೇವೇಂದ್ರಪ್ಪ ಅವರ ಪುತ್ರ ಅಣ್ಣಪ್ಪ, ಮಾಜಿ ಸಂಸದೆ-ಸಚಿವ ಬಿ.ಶ್ರೀರಾಮುಲು ಸಹೋದರಿ ಜೆ.ಶಾಂತಾ, ಬಿಜೆಪಿ ಎಸ್‌ಟಿ ಮೋರ್ಚಾ ರಾಜ್ಯ ಘಟಕದ ಖಜಾಂಚಿ ಬಂಗಾರು ಹನುಮಂತು, ಕೋಡಿಹಳ್ಳಿ ಭೀಮಣ್ಣ, ಸೂರ್ಯ ಪಾಪಣ್ಣ, ಜಿ.ಪಂ. ಮಾಜಿ ಸದಸ್ಯ ಪ್ರಕಾಶ್‌ ಈ ಕ್ಷೇತ್ರದ ಬಿಜೆಪಿ ಟಿಕೆಟ್‌ ಆಕಾಂಕ್ಷಿಗಳಾಗಿದ್ದಾರೆ. ಈ ನಡುವೆ ಬಳ್ಳಾರಿ ಜಿಲ್ಲಾ ಉಸ್ತುವಾರಿ ಸಚಿವ ಬಿ.ಶ್ರೀರಾಮುಲು, ರಾಯಚೂರು ಮಾಜಿ ಸಂಸದ ಸಣ್ಣ ಫಕ್ಕೀರಪ್ಪ ಅವರ ಹೆಸರು ಸಹ ಆಕಾಂಕ್ಷಿಗಳ ಪಟ್ಟಿಯಲ್ಲಿ ತಳಕು ಹಾಕಿಕೊಂಡಿದೆ.

ಸ್ಥಳೀಯರಿಗೆ ಕೊಡಿ: ಈ ಕ್ಷೇತ್ರದಲ್ಲಿ ಕಳೆದ ಎರಡು ದಶಕಗಳಿಂದ ಹೊರಗಿನವರೇ ಶಾಸಕರಾಗುತ್ತಿದ್ದಾರೆ. ಮೇಲಾಗಿ ಮೂರು ಅವ ಧಿಗೆ ಬಿಜೆಪಿ ಟಿಕೆಟ್‌ ಹೊರಗಿನವರಿಗೆ ನೀಡಲಾಗಿದೆ. ಹಾಗಾಗಿ ಈ ಬಾರಿ ಸ್ಥಳೀಯರಿಗೆ ಟಿಕೆಟ್‌ ನೀಡಬೇಕೆಂಬ ಮಾತುಗಳು ಪಕ್ಷದಲ್ಲಿ ಕೇಳಿಬರುತ್ತಿವೆ. ಬಂಗಾರು ಹನುಮಂತು ಸಹಿತ ಕೆಲ ವರು ಆಕಾಂಕ್ಷಿಗಳಾಗಿದ್ದಾರೆ.

ಸ್ಥಳೀಯರಿಗೆ ನೀಡಬೇಕೆಂದು ಹಲವರು ಟಿಕೆಟ್‌ ಕೇಳುತ್ತಿ ದ್ದಾರೆ. ಆದರೆ, ಯಾರಿಗೆ ನೀಡಬೇಕು ಎಂಬುದನ್ನು ಕಾರ್ಯಕರ್ತರಿಂದ ಗೌಪ್ಯ ಮತದಾನದ ಮೂಲಕ ಅಭಿಪ್ರಾಯ ಸಂಗ್ರಹಿಸಲಾಗಿದೆ.
-ಚನ್ನಬಸವನಗೌಡ ಪಾಟೀಲ್‌, ಜಿಲ್ಲಾಧ್ಯಕ್ಷರು, ವಿಜಯನಗರ ಜಿಲ್ಲೆ

ಕೂಡ್ಲಿಗಿ ಕ್ಷೇತ್ರದಿಂದ ಈ ಬಾರಿ ಬಿಜೆಪಿ ಟಿಕೆಟ್‌ ಆಕಾಂಕ್ಷಿಯಾಗಿದ್ದೇನೆ. ಸಚಿವ ಬಿ.ಶ್ರೀರಾಮುಲು ಸೇರಿ ಪಕ್ಷ ತೀರ್ಮಾನ ಕೈಗೊಂಡಲ್ಲಿ ಸ್ಪರ್ಧಿಸುವೆ.
-ಜೆ.ಶಾಂತಾ, ಮಾಜಿ ಸಂಸದರು

Advertisement

-ವೆಂಕೋಬಿ ಸಂಗನಕಲ್ಲು

Advertisement

Udayavani is now on Telegram. Click here to join our channel and stay updated with the latest news.

Next