ಅಕ್ಕ-ತಂಗಿ ಜೊತೆಯಾಗಿ ಹೇಳುತ್ತಾ ಹೋದರು. ಅವರನ್ನು ಅಕ್ಕ-ತಂಗಿ ಅನ್ನೋದಕ್ಕಿಂತ ಫ್ರೆಂಡ್ಸ್ ಎನ್ನಬಹುದು. ಅದಕ್ಕೂ ಮೀರಿ ನೀವಿ ಟ್ವಿನ್ಸ್ ಎನ್ನಬಹುದು. ಅದ್ವಿತಿ ಶೆಟ್ಟಿ ಹಾಗೂ ಅಶ್ವಿತಿ ಶೆಟ್ಟಿ ಎಂಬ ಈ ಕುಡ್ಲದ ಅವಳಿ-ಜವಳಿ ಈಗ ಕನ್ನಡ ಚಿತ್ರರಂಗಕ್ಕೆ ಎಂಟ್ರಿಕೊಟ್ಟಿದ್ದಾರೆ. ಈ ಜೋಡಿಗೆ ಬಣ್ಣದ ಲೋಕವಷ್ಟೇ ಹೊಸದು. ಮನರಂಜನಾ ಕ್ಷೇತ್ರ ಹೊಸತಲ್ಲ. ಏಕೆಂದರೆ ಈ ಜೋಡಿ ಮೂಲತಃ ಡ್ಯಾನ್ಸರ್. ಈಗಾಗಲೇ ಸಾಕಷ್ಟು ಶೋಗಳನ್ನು ನೀಡಿರುವ ಅದ್ವಿತಿ ಹಾಗೂ ಅಶ್ವಿತಿ ಆ ಕ್ಷೇತ್ರದಲ್ಲಿ ಒಳ್ಳೆಯ ಹೆಸರು ಕೂಡಾ ಮಾಡಿದ್ದಾರೆ. ಆದರೆ, ಡ್ಯಾನ್ಸ್ ಜೊತೆಗೆ ಸಿನಿಮಾ ಕ್ಷೇತ್ರದಲ್ಲೂ ಏನಾದರೂ ಸಾಧಿಸಬೇಕೆಂಬ ಆಸೆಯಿಂದ ಈಗಷ್ಟೇ ಚಿತ್ರರಂಗಕ್ಕೆ ಎಂಟ್ರಿಕೊಟ್ಟಿದ್ದಾರೆ. ಎಂಟ್ರಿ ಚೆನ್ನಾಗಿರಬೇಕು, ಆಗ ಜರ್ನಿ ಕೂಡಾ ಚೆನ್ನಾಗಿರುತ್ತದೆ ಎಂಬುದು ಅನೇಕರ ಮಾತು. ಆ ವಿಷಯದಲ್ಲಿ ಈ ಡ್ಯಾನ್ಸ್ ಜೋಡಿ ಅದೃಷ್ಟ ಮಾಡಿದೆ. ದೊಡ್ಡ ಹಾಗೂ ಹಿಟ್ ಸಿನಿಮಾ ಮೂಲಕವೇ ಈ ಇಬ್ಬರ ಎಂಟ್ರಿಯಾಗಿದೆ. ಅದು “ಮಿಸ್ಟರ್ ಅಂಡ್ ಮಿಸಸ್ ರಾಮಾಚಾರಿ’ ಚಿತ್ರದ ಮೂಲಕ.
Advertisement
ಹೌದು, ಈ ಚಿತ್ರದಲ್ಲಿ ನಾಯಕಿ ರಾಧಿಕಾ ಪಂಡಿತ್ ಅವರ ಸ್ನೇಹಿತೆಯರಾಗಿ ನಟಿಸುವ ಮೂಲಕ ಬಣ್ಣದ ಲೋಕಕ್ಕೆ ಎಂಟ್ರಿಕೊಟ್ಟವರು ಇವರು. ಮೊದಲ ಸಿನಿಮಾವೇ ಹಿಟ್ ಆಗುವ ಮೂಲಕ ಇಬ್ಬರಿಗೂ ಅವಕಾಶಗಳ ಬಾಗಿಲು ತೆರೆದುಕೊಂಡಿದೆ. ನಿಧಾನವಾಗಿ ಸಿನಿಮಾಗಳನ್ನು ಒಪ್ಪಿಕೊಳ್ಳುತ್ತಾ ಚಿತ್ರರಂಗದಲ್ಲಿ ಮುಂದುವರೆಯುತ್ತಿರುವ ಈ ಜೋಡಿಗೆ ಮುಂದೊಂದು ದಿನ ಚಿತ್ರರಂಗದಲ್ಲಿ ಬೆಳೆಯುವ ವಿಶ್ವಾಸವಿದೆ.
ಪ್ರತಿಭೆಗೆ ಪ್ರೋತ್ಸಾಹ ಸಿಕ್ಕಾಗ ಹೆಚ್ಚಿನ ಸಾಧನೆ ಮಾಡಲಾಗುತ್ತದೆ. ಹಾಗಂತ ಎಲ್ಲರಿಗೂ ಪ್ರೋತ್ಸಾಹ ಸಿಗುತ್ತದೆ ಎನ್ನುವಂತಿಲ್ಲ. ಆದರೆ ಛಲ ಇದ್ದರೆ ತಮ್ಮ ಪ್ರತಿಭೆಯನ್ನು ತಾವೇ ಪೋಷಿಸಿಕೊಂಡು ಹೋಗಬಹುದು ಎಂಬುದಕ್ಕೆ ಈ ಟ್ವಿನ್ಸ್ ಉದಾಹರಣೆ. ಶಾಲಾ ದಿನಗಳಲ್ಲೇ ನಟನೆ, ಡ್ಯಾನ್ಸ್ ಸೇರಿದಂತೆ ಮನರಂಜನಾ ವಿಷಯದಲ್ಲಿ ಹೆಚ್ಚಿನ ಆಸಕ್ತಿ ಹೊಂದಿದ್ದವರು ಅದ್ವಿತಿ ಹಾಗೂ ಅಶ್ವಿತಿ. ಅದರಲ್ಲೂ ಡ್ಯಾನ್ಸ್‌ನಲ್ಲಿ ಸ್ವಲ್ಪ ಹೆಚ್ಚೇ ಆಸಕ್ತಿ ಹೊಂದಿದ್ದವರು ಈ ಇವರು. ಕಾಲೇಜಿನಲ್ಲಿ ಸಾಕಷ್ಟು ಡ್ಯಾನ್ಸ್ ತಂಡಗಳಿದ್ದರೂ ಅದರಿಂದ ಇವರಿಗೆ ಹೇಳಿಕೊಳ್ಳುವಂತಹ ಪ್ರೋತ್ಸಾಹವೇನೂ ಸಿಗಲಿಲ್ಲ. ಆಸೆಯಿಂದ ಕಾದ ಇವರು ಅನಿವಾರ್ಯವಾಗಿ ತಾವೇ ಡ್ಯಾನ್ಸ್ ತಂಡ ಕಟ್ಟಬೇಕಾಗಿ ಬಂತು. “ಕೆಲವರು ಅವಳಿ-ಜವಳಿ ಇದ್ದರೆ ಅವರೇ ಫೋಕಸ್ ಆಗುತ್ತಾರೆಂಬ ಕಾರಣಕ್ಕೆ ನಮ್ಮನ್ನು ತಂಡಕ್ಕೆ ಸೇರಿಸಿಕೊಳ್ಳಲಿಲ್ಲ. ಕೊನೆಗೆ ನಾವೇ ಒಂದು ಡ್ಯಾನ್ಸ್ ತಂಡ ಆರಂಭಿಸಿ ಕಾಲೇಜಿನಲ್ಲಿ ಶೋ ನೀಡಲಾರಂಭಿಸಿದರು. ನಿಧಾನವಾಗಿ ನಮ್ಮ ಶೋ ಇಷ್ಟವಾಗುತ್ತಾ ಹೋಗುವ ಮೂಲಕ “ಶೆಟ್ಟಿ ಸಿಸ್ಟರ್’ ಎಂಬ ಹೆಸರು ಕೂಡಾ ಬಂತು’ ಎಂದು ತಮ್ಮ ಕಾಲೇಜು ದಿನಗಳ ಬಗ್ಗೆ ಹೇಳುತ್ತಾರೆ ಅದ್ವಿತಿ ಹಾಗೂ ಅಶ್ವಿತಿ. ಅಂದಹಾಗೆ, ಈ ಇಬ್ಬರಿಗೆ ಡ್ಯಾನ್ಸ್‌ನಲ್ಲಿ ಹೆಚ್ಚಿನ ಆಸಕ್ತಿ. ಹಾಗಾಗಿ ತರಬೇತಿಗಿಂತ ಸ್ವ ಆಸಕ್ತಿಯಲ್ಲೇ ಕಲಿತವರು. ಹೀಗೆ ಇವರ ಆಸಕ್ತಿಗೆ ಬೆಂಬಲವಾಗಿ ನಿಂತಿದ್ದು ಮನೆಯವರು. “ನೀವಿಬ್ಬರು ನ್ಯಾಚುರಲ್ ಡ್ಯಾನ್ಸರ್. ನಿಮ್ಮ ಪ್ರಯತ್ನವನ್ನು ಮುಂದುವರೆಸಿ’ ಎಂದು ಹೇಳುವ ಮೂಲಕ ಡ್ಯಾನ್ಸ್‌ನಲ್ಲಿ ಮತ್ತಷ್ಟು ಸಾಧನೆ ಮಾಡುತ್ತಾ ಹೋದವರು ಈ ಟ್ವಿನ್ಸ್.
Related Articles
Advertisement
ಮಾಡೆಲಿಂಗ್‌ನಿಂದ ಸಿನಿಮಾಕ್ಕೆಬೆಂಗಳೂರಿಗೆ ಬಂದು ತಮ್ಮ ಪಾಡಿಗೆ ಕಂಪೆನಿಯಲ್ಲಿ ಕೆಲಸದಲ್ಲಿದ್ದ ಅದ್ವಿತಿ ಹಾಗೂ ಅಶ್ವಿತಿ ಹೇಗೋ ಮಾಡೆಲಿಂಗ್ ಕ್ಷೇತ್ರಕ್ಕೆ ಎಂಟ್ರಿಕೊಡುವ ಮೂಲಕ ಬಣ್ಣದ ಕನಸು ಕಂಡವರು. ಅದಕ್ಕೆ ಸರಿಯಾಗಿ ಅನೇಕರು “ಹೇಗೂ ನೀವು ಡ್ಯಾನ್ಸ್ ಚೆನ್ನಾಗಿ ಮಾಡುತ್ತೀರಿ. ಸಿನಿಮಾಕ್ಕೆ ಯಾಕೆ ಪ್ರಯತ್ನಿಸಬಾರದು’ ಎಂದು ಹೇಳುವ ಮೂಲಕ ಇವರ ಕನಸು ಬೆಳೆಯುತ್ತಾ ಹೋಯಿತು. ಸಿನಿಮಾ ಅವಕಾಶಗಳಿಗಾಗಿ ಪ್ರಯತ್ನಿಸುತ್ತಿದ್ದಾಗ ಇವರಿಗೆ ಸಿಕ್ಕಿದ್ದು “ಮಿಸ್ಟರ್ ಅಂಡ್ ಮಿಸಸ್ ರಾಮಾಚಾರಿ’. ನಿರ್ದೇಶಕ ಸಂತೋಷ್ ಆನಂದರಾಮ್ ರಾಧಿಕಾ ಪಂಡಿತ್ ಸ್ನೇಹಿತೆಯರ ಪಾತ್ರಕ್ಕಾಗಿ ಆಡಿಷನ್ ಮಾಡುತ್ತಿದ್ದಾಗ ಕಣ್ಣಿಗೆ ಬಿದ್ದಿದ್ದು ಅದ್ವಿತಿ ಹಾಗೂ ಅಶ್ವಿತಿ. “ರಾಮಾಚಾರಿ ಸಿನಿಮಾದಲ್ಲಿ ಅವಕಾಶ ಸಿಕ್ಕಾಗ ತುಂಬಾ ಖುಷಿಯಾಯಿತು. ನಾವು ರಾಧಿಕಾ ಪಂಡಿತ್ ಅಭಿಮಾನಿ. ಅವರ ಸಿನಿಮಾದಲ್ಲಿ ಅವರ ಸ್ನೇಹಿತೆಯಾಗಿ ನಟಿಸುವ ಸಿಕ್ಕಿದ್ದು ನಮ್ಮ ಭಾಗ್ಯ. ಅವರಿಂದ ಸಾಕಷ್ಟು ಕಲಿತೆವು. ಇವತ್ತಿಗೂ ಒಳ್ಳೆಯ ಸ್ನೇಹಿತೆಯಾಗಿದ್ದಾರೆ. ಸಿನಿಮಾ ಕುರಿತಾಗಿ ಏನಾದರೂ ಸಂದೇಹವಿದ್ದರೆ ಅವರಲ್ಲಿ ಕೇಳುತ್ತೇವೆ’ ಎಂದು ಖುಷಿಯಿಂದ ಹೇಳುತ್ತಾರೆ. “ರಾಮಾಚಾರಿ’ ಸಿನಿಮಾ ಬಿಡುಗಡೆಯಾದ ನಂತರ ನಮಗೆ ಒಳ್ಳೆಯ ಹೆಸರು ಬಂತು. ಅದರಲ್ಲೂ “ಕಸ್ತೂರಿ-ಸುವರ್ಣ’ ಎಂಬ ಡೈಲಾಗ್ ತುಂಬಾ ಫೇಮಸ್ ಆಯಿತು. ಆ ಸಿನಿಮಾ ಮೂಲಕ ನಮ್ಮನ್ನು ಹೋದಲ್ಲೆಲ್ಲಾ ಗುರುತಿಸುತ್ತಾರೆ’ ಎಂಬುದು ಇವರ ಮಾತು. “ರಾಮಾಚಾರಿ’ ಮೂಲಕ ಬಂದ ಈ ಜೋಡಿಗೆ ಈಗ ಒಂದಷ್ಟು ಅವಕಾಶಗಳು ಹುಡುಕಿಕೊಂಡು ಬರುತ್ತಿವೆ. ಅದ್ವಿತಿ ಈಗಾಗಲೇ “ದೊಡ್ಮನೆ ಹುಡುಗ’ದಲ್ಲಿ ಒಂದು ಸಣ್ಣ ಪಾತ್ರ ಮಾಡಿದ್ದಾರೆ. ಜೊತೆಗೆ ಇಬ್ಬರು ಜೊತೆಯಾಗಿ “ಸುಳಿ’ ಸಿನಿಮಾದಲ್ಲಿ ನಟಿಸಿದ್ದಾರೆ. ಸಿನಿಮಾದುದ್ದಕ್ಕೂ ಸಾಗಿಬರುವ ಪಾತ್ರ ಸಿಕ್ಕಿರುವುದರಿಂದ ಖುಷಿಯಾಗಿದ್ದಾರೆ. “ತುಂಬಾ ಒಳ್ಳೆಯ ಪಾತ್ರ. ಆದರೆ, ಆ ಪಾತ್ರಕ್ಕಾಗಿ ನಾವು ಸ್ಪಷ್ಟವಾಗಿ ಕನ್ನಡ ಮಾತನಾಡಬೇಕಿತ್ತು. ನಾವು ಮಂಗಳೂರಿನವರಾದ್ದರಿಂದ ನಮ್ಮ ಕನ್ನಡ ಮಂಗಳೂರು ಸ್ಲಾéಂಗ್‌ನಲ್ಲಿತ್ತು. ಹಾಗಾಗಿ ನಿರ್ದೇಶಕ ಪಿ.ಎಚ್.ವಿಶ್ವನಾಥ್, ಕನ್ನಡ ಕಲಿಯುವಂತೆ ಹೇಳಿದರು. ಹಾಗಾಗಿ ನ್ಯೂಸ್ ಪೇಪರ್ ಅನ್ನು ಜೋರಾಗಿ ಓದುತ್ತಾ ಕನ್ನಡ ಕಲಿತು “ಸುಳಿ’ ಸಿನಿಮಾದ ನಮ್ಮ ಪಾತ್ರಕ್ಕೆ ನಾವೇ ಡಬ್ ಮಾಡಿದ್ದೇವೆ. ಈಗ ನಮ್ಮ ಕನ್ನಡ ಸ್ಪಷ್ಟವಾಗಿದೆ’ ಎನ್ನುತ್ತಾರೆ ಅದ್ವಿತಿ ಹಾಗೂ ಅಶ್ವಿತಿ. ಜೊತೆ ಜೊತೆಯಾಗಿ ಸಾಗುತ್ತಿರುವ ಈ ಜೋಡಿಗೆ ಯಾರಿಗೆ ಅವಕಾಶ ಸಿಕ್ಕರೂ ಖುಷಿಯಂತೆ. “ಒಂದು ಸಿನಿಮಾದಲ್ಲಿ ನಮ್ಮಿಬ್ಬರಿಗೂ ಅವಕಾಶ ಕೊಡಬೇಕೆಂದಿಲ್ಲ. ನಮ್ಮಲ್ಲಿ ಯಾರಿಗೆ ಸಿಕ್ಕರೂ ಖುಷಿಯೇ. ಒಬ್ಬರಿಗೊಬ್ಬರು ಪ್ರೋತ್ಸಾಹ ಕೊಡುತ್ತಲೇ ಈ ಮಟ್ಟಕ್ಕೆ ಬಂದಿದ್ದೇವೆ. ನಾಯಕಿಯಿಂದ ಹಿಡಿದು ಒಳ್ಳೆಯ ಪಾತ್ರಗಳವರೆಗೆ ನಟಿಸಲು ನಾವು ಸಿದ್ಧ’ ಎನ್ನುವುದು ಈ ಜೋಡಿಯ ಮಾತು. ಬರಹ: ರವಿಪ್ರಕಾಶ್ ರೈ; ಚಿತ್ರಗಳು: ಸಂಗ್ರಹ