ಆದಶ೯ ಶಿಕ್ಷಕರಾಗಿ ಶಿಕ್ಷಣಕ್ಷೇತ್ರದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಜಿಲ್ಲೆಯ ಹತ್ತು ಹಲವು ಕಾರ್ಯಕ್ರಮಗಳ ಸಂಯೇೂಜಕರಾಗಿ,ನಿರೂಪಕರಾಗಿ ತಮ್ಮ ಅನುಪಮ ಸೇವೆ ನೀಡುತ್ತಿದ್ದ ಕುದಿ ವಸಂತ ಶೆಟ್ಟಿಯವರು ಇನ್ನು ನಮ್ಮ ಮುಂದೆ ಇಲ್ಲ ಅನ್ನುವುದು ಅತ್ಯಂತ ದು:ಖದ ಸುದ್ದಿ.
ಶಿಕ್ಷಕ ಕುಟುಂಬದಲ್ಲಿ ಹುಟ್ಟಿ ಬಂದ ವಸಂತ ಶೆಟ್ಟಿಯವರು ಹಿರಿಯಡಕ ಸಮೀಪದ ಕುದಿ ಗ್ರಾಮದಲ್ಲಿ ಶ್ರೀ ವಿಷ್ಣುಮೂತಿ೯ ಪ್ರೌಢಶಾಲೆ ಸ್ಥಾಪಿಸುವುದರ ಮೂಲಕ ಗ್ರಾಮೀಣ ಪರಿಸರಕ್ಕೆ ಮೌಲ್ಯಾಧಾರಿತ ಶಿಕ್ಷಣ ನೀಡುವುದರಲ್ಲಿ ಕೊಡುಗೆ ಅನನ್ಯವಾದದ್ದು.ತಾವು ಸ್ಥಾಪಿಸಿದ ಪ್ರೌಢಶಾಲೆಯಲ್ಲಿ ಮುಖ್ಯೇೂಪಾಧ್ಯಾರಾಗಿ ಸುದೀರ್ಘ ಕಾಲ ಗುಣಮಟ್ಟದ ಶಿಕ್ಷಣ ನೀಡುವಲ್ಲಿ ಅವರ ಸೇವೆ ಸದಾ ನೆನಪಿಸುವಂತೆ ಮಾಡಿದೆ.ರಾಷ್ಟ್ರ ಪ್ರಶಸ್ತಿ ಪುರಸ್ಕೃತ ರಾಗಿ ಶಿಕ್ಷಣ ರಂಗದಲ್ಲಿ ಮೇರು ವ್ಯಕ್ತಿತ್ವ ಬೆಳೆಸಿಕೊಂಡವರು.
ತುಳು ಭಾಷೆ ಸಂಸ್ಕೃತಿ ಆಚರಣೆಗಳು.. ಮುಂತಾದ ತುಳುವರ ಬದುಕನ್ನು ತುಳು ಚಾವಡಿಯಲ್ಲಿ ಪ್ರಧಾನ ಸಂಪನ್ಮೂಲ ಉಪನ್ಯಾಸಕರಾಗಿ ಈ ಕ್ಷೇತ್ರದಲ್ಲಿ ವಿಶೇಷವಾಗಿ ಅಧ್ಯಯನ ಮಾಡಿ ಉಣ ಬಡಿಸುತ್ತಿದ್ದ ರೀತಿ ನಿಜಕ್ಕೂ ಉತ್ಕೃಷ್ಟವಾದದ್ದು. ಸಂತಸ ಸಂತಾಪ ಕಾರ್ಯಕ್ರಮಗಳಲ್ಲಿ ತಾವೇ ಮುಂದೆ ನಿಂತು ಸಮಾಧಾನಿಸುತ್ತಿದ್ದ ರೀತಿ ನಿಜಕ್ಕೂ ಇನ್ನೂ ಸಹ ಕಣ್ಣ ಮುಂದೆ ನಿಂತಿದೆ.
ಕುದಿ ವಸಂತ ಶೆಟ್ಟಿಯವರು ಎಂಜಿಎಂ.ಕಾಲೇಜಿನ ಪ್ರತಿಭಾವಂತ ಪ್ರಾಕ್ತನ ವಿದ್ಯಾರ್ಥಿಯಾಗಿದ್ದರು. ಪ್ರೊ.ಕು.ಶಿ.ಹರಿದಾಸ್ ಭಟ್ಟರ ಆಪ್ತ ಶಿಷ್ಯರಾಗಿ ಬೆಳೆದ ವಸಂತ ಶೆಟ್ಟಿಯವರು ತಾನುಕಲಿತ ವಿದ್ಯಾ ಸಂಸ್ಥೆಯನ್ನು ಸದಾ ನೆನಪಿಸಿಕೊಳ್ಳುತ್ತಿದ್ದರು.ಇಂತಹ ಒಬ್ಬ ಮಹಾನ್ ಶಿಕ್ಷಕನನ್ನು ನಾವಿಂದು ಕಳೆದುಕೊಂಡಿದ್ದೇವೆ ಅನ್ನುವುದನ್ನು ನಂಬಲು ಅಸಾಧ್ಯವಾದ ಸುದ್ದಿ.
ಕೊಕ್ಕಣೆ೯ ಸುರೇಂದ್ರ ನಾಥ ಶೆಟ್ಟಿ