Advertisement

ನೆಲಮಂಗಲ: 2ಎ ಮೀಸಲಾತಿ ಆದೇಶ ಪಡೆಯದ ಕೂಡಲ ಸಂಗಮಕ್ಕೆ ಹಿಂತಿರುಗುವುದಿಲ್ಲ ಎಂದು ಕೂಡಲಸಂಗಮ ಪಂಚಮಸಾಲಿ ಪೀಠದ ಶ್ರೀ ಜಯಮೃತ್ಯುಂಜಯ ಸ್ವಾಮೀಜಿ ಹೇಳಿದರು.

Advertisement

ಪಟ್ಟಣದ ಬಸವಣ್ಣದೇವರದ ಪಂಚಮಸಾಲಿ ಪಂಚಲಕ್ಷ ಪಾದಯಾತ್ರೆಗೆ ಚಾಲನೆ ನೀಡಿ, ಪತ್ರಿಕೆಯೊಂದಿಗೆ ಮಾತನಾಡಿದ ಅವರು, ಲಿಂಗಾಯತ ಎಲ್ಲ ಒಳಪಂಗಡಗಳಿಗೆ 2ಎ ಮೀಸಲಾತಿ ನೀಡುವಂತೆ ಆಗ್ರಹಿಸಿ, ಪಾದಯಾತ್ರೆ ಕೈಗೊಳ್ಳಲಾಗಿದೆ ಹೊರತು, ಸಿಎಂ ಯಡಿಯೂರಪ್ಪ ಅವರ ವಿರುದ್ಧವಲ್ಲ ಎಂದು ಸ್ಪಷ್ಟ ಪಡಿಸಿದರು.

ಪಾದಯಾತ್ರೆಯ ದಿಕ್ಕನ್ನು ಬದಲಿಸಿ ರ್ಯಾಲಿಯನ್ನು ಹತ್ತಿಕ್ಕುವ ಹುನ್ನಾರ ಯಾರೂ ಮಾಡಬಾರದು.  ಜ.14 ಸಂಕ್ರಾಂತಿಯಂದು ಪ್ರಾರಂಭವಾದ ಪಾದಯಾತ್ರೆ ಇಂದಿಗೆ 670 ಕಿ.ಮೀ. ತಲುಪಿದ್ದು, ರಾಜ್ಯದ ಇತಿಹಾಸದಲ್ಲಿ ಇದೊಂದು ಐತಿಹಾಸಿಕ ಪಾದಯಾತ್ರೆಯಾಗಿದೆ ಎಂದರು.

ಪಾದಯಾತ್ರೆ ಹಿನ್ನೆಲೆ ಸಂಚಿವ ಸಂಪುಟ ಕರೆದಿರುವುದು ಸರ್ಕಾರಕ್ಕೆ ಧ್ವನಿ ಕೇಳಿಸಿದೆ ಎಂದು ಭಾವಿಸಿದ್ದೇವೆ. ಸಿಎಂ ಯಡಿಯೂರಪ್ಪ ಅವರು ನಮ್ಮನ್ನು ಕೈಬಿಡುವುದಿಲ್ಲ ಎಂಭ ಭರವಸೆ ಇದೆ ಎಂದರು.

ಅವಶ್ಯಕತೆ ಇಲ್ಲ: ಈಗಾಗಲೇ ಮೀಸಲಾತಿ ಕುರಿತಾಗಿ 2003ರಲ್ಲಿ ಎಸ್‌.ಎಂ.ಕೃಷ್ಣ , 2009ರಲ್ಲಿ ಬಿ.ಎಸ್‌ . ಯಡಿಯೂರಪ್ಪ, 2012ರಲ್ಲಿ ಜಗದೀಶ್‌ ಶೆಟ್ಟರ್‌ ಅವರು ಮುಖ್ಯಮಂತ್ರಿಗಳಾಗಿದ್ದ ವೇಳೆ ಮೀಸಲಾತಿ ಕುರಿತ ವರದಿ ಪಡೆಯಲಾಗಿದೆ. ಈ ವರದಿಗಳನ್ನು ಪರಿಶೀಲಿಸಿ ಮೀಸಲಾತಿ ನೀಡಬಹುದಾಗಿದೆ. ಇದಕ್ಕೆ ಪದೆ ಪದೇ ವರದಿಗಳ ಅವಶ್ಯಕತೆಯಿಲ್ಲ. ನಾವು ಈಗಾಗಲೆ ಪ್ರವರ್ಗ 3ಬಿ ಮೀಸಲಾತಿ ಹೊಂದಿರುವುದರಿಂದ ಯಾವ ಕಾನೂನು ಅಡೆತಡೆ ಎದುರಾಗುವುದಿಲ್ಲ. ಸಚಿವ ಮಾಧುಸ್ವಾಮಿ ಅವರು ಕಾನೂನು ಬಲ್ಲವರಾಗಿದ್ದು, ಕೂಲಂಕಷವಾಗಿ ಚಿಂತನೆಯನ್ನು ನಡೆಸಬೇಕೆಂದು ಕುಟುಕಿದರು.

Advertisement

ರಾಜ್ಯದಲ್ಲಿನ ಲಿಂಗಾಯತ ಪಂಚಮಸಾಲಿ ಸೇರಿದಂತೆ ಎಲ್ಲ ಒಳಪಂಗಡಗಳ ಮೀಸಲಾತಿ 2ಎ ಗೆ  ಸೇರಿಸುವಂತೆ ಸಮುದಾಯದ ಎಲ್ಲ ಹಂತದ ಜನಪ್ರತಿನಿಧಿಗಳು ಪಕ್ಷಾತೀತವಾಗಿ ಹೊಂದಾಗಿದ್ದಾರೆ. ಇದು ಯಾವುದೇ ರಾಜಕೀಯ ಪ್ರೇರಿತವಲ್ಲ. ಲಕ್ಷಾಂತರ ಮಂದಿ ಸಮುದಾಯದ ಜನರ ಅನುಕೂಲತೆಗಾಗಿ ಹೊರತು ರಾಜಕೀಯ ಲಾಭಕ್ಕಲ್ಲ. ನಮ್ಮ ಬೇಡಿಕೆ ಕೇವಲ ಶಿಕ್ಷಣ ಮತ್ತು ಉದ್ಯೋಗಕ್ಕಾಗಿ ಎಂದು ಸ್ಪಷ್ಟಪಡಿಸಿದರು.

ಪಟ್ಟಣದ ಪರಮಣ್ಣ ಲೇಔಟ್‌ನಲ್ಲಿರುವ ಲೊಕೇಶ್‌ ಮತ್ತು ಜಗದೀಶ್‌ ಅವರ ಮನೆಯಲ್ಲಿ ತಂಗಿದ್ದ ಶ್ರೀ ಜಯಮೃತ್ಯುಂಜಯ ಸ್ವಾಮೀಜಿಗಳನ್ನು ಸ್ಥಳೀಯ ಶಾಸಕ ಡಾ.ಕೆ. ಶ್ರೀನಿವಾಸ್‌ ಮೂರ್ತಿ ಭೇಟಿ ಮಾಡಿ ಯೋಗಕ್ಷೇಮ ವಿಚಾರಿಸಿ ಶ್ರೀಗಳಿಗೆ ಗುರುವಂದನೆ ಸಲ್ಲಿಸಿದರು.

ಪತ್ರಿಕೆ ಓದಿದ ಶ್ರೀಗಳು : ಸುದೀರ್ಘ‌ 670 ಕಿ.ಮೀ. ಪಾದಯಾತ್ರೆ ನಡೆಸುತ್ತಿರುವ ಶ್ರೀಗಳು ಬುಧವಾರ ಬೆಳಗ್ಗೆ ಉದಯವಾಣಿ ಪತ್ರಿಕೆ ಓದುವ ಮೂಲಕ ಪಾದಯಾತ್ರೆಗೆ ಬೆಂಬಲ ನೀಡುತ್ತಿರುವ ಪತ್ರಿಕೆಯ ಕಾರ್ಯವೈಖರಿ ಯನ್ನು ಪ್ರಶಂಶಿಸಿದರು.

ಅಖೀಲ ಭಾರತ ವೀರಶೈವ ಮಹಾಸಭಾ ರಾಜ್ಯಘಟಕದ ಸದಸ್ಯ ಎಂ.ಬಿ. ಮಂಜುನಾಥ್‌, ಪುರಸಭೆ ಮಾಜಿ ಅಧ್ಯಕ್ಷ ಆರ್‌.ಉಮಾಶಂಕರ್‌, ಎಪಿಎಂಸಿ ನಿರ್ದೇಶಕ ಬೂದಿಹಾಳ್‌ ಗೋವಿಂದರಾಜು, ಬರಗೇನಹಳ್ಳಿ ಪರಮೇಶ್‌, ಮೈಲನಹಳ್ಳಿ ಲೊಕೇಶ್‌, ಜಗದೀಶ್‌, ಹರ್ಷ, ಸತೀಶ್‌ ಇದ್ದರು.

ಉಪವಾಸ ಸತ್ಯಾಗ್ರಹ ಸಮಾವೇಶ ಫೆ.21 ನಡೆಯಲಿದ್ದು, ಅದರೊಳಗೆ ಸಿಎಂ ಸಚಿವ ಸಂಪುಟ ಸಭೆ ನಡೆಸಿ ಸೂಕ್ತ ಕ್ರಮವಹಿಸಿದ್ದರೆ ಸಮಾವೇಶದ ಬಳಿಕ ವಿಧಾನಸೌದದ ವರೆಗೂ ಪಾದಯಾತ್ರೆ ನಡೆಸಿ ನಂತರ ಹೋರಾಟದ ದಿಕ್ಕನ್ನು ಬದಲಿಸಲಾಗುತ್ತದೆ. ಮಾ. 04 ಮುಖ್ಯಮಂತ್ರಿಗಳಿಗೆ ಅಂತಿಮ ಗಡುವನ್ನು ನೀಡಲಾ ಗಿದ್ದು, ಮೀಸಲಾತಿ ಆದೇಶ ಹೊರಡಿಸದಿದ್ದರೆ ಗಾಂಧೀ ಗಿರಿ ಮೂಲಕ ವಿಧಾನಸೌಧದ ಮುಂಭಾಗ ಆಮರಣಾಂತ ಉಪವಾಸ ಸತ್ಯಾಗ್ರಹ ನಡೆಸಲಾಗುತ್ತದೆ ಎಂದು ಕೂಡಲಸಂಗಮ ಪಂಚಮಸಾಲಿ ಪೀಠದ ಶ್ರೀ ಜಯಮೃತ್ಯುಂಜಯ ಸ್ವಾಮೀಜಿ ಸರ್ಕಾರಕ್ಕೆ ಎಚ್ಚರಿಕೆ ನೀಡಿದರು.

ರಾಜೀನಾಮೆ ಬೇಡ : ಮೀಸಲಾತಿ ನೀಡುವ ಕುರಿತಾದ ವಿಚಾರದಲ್ಲಿ ನಿರ್ಲಕ್ಷಿತ ಹಾಗೂ ವಿಳಂಬ ಧೋರಣೆ ತೋರಿದರೆ ಸಮುದಾಯದ ಯಾವುದೇ ಶಾಸಕರು ರಾಜೀನಾಮೆಯನ್ನು ನೀಡುವ ಅವಶ್ಯಕತೆಯಿಲ್ಲ. ಪದವಿಯಲ್ಲಿದ್ದುಕೊಂಡೇ ರಾಜ್ಯ, ಕೇಂದ್ರ ಸರ್ಕಾರ ಸೇರಿದಂತೆ ಪಕ್ಷದ ಮುಖಂಡರ ಮೇಲೆ ಒತ್ತಡ ಹಾಕುವ ಮೂಲಕ ಗಮನಸೆಳೆಯಬೇಕೆಂದು ಕೂಡಲಸಂಗಮ ಪಂಚಮಸಾಲಿ ಪೀಠದ ಶ್ರೀ ಜಯಮೃತ್ಯುಂಜಯ ಸ್ವಾಮೀಜಿ ಕರೆ ನೀಡಿದರು.

Advertisement

Udayavani is now on Telegram. Click here to join our channel and stay updated with the latest news.

Next