ಕಲಬುರಗಿ: ಬಸವ ಧರ್ಮ ಪೀಠದಿಂದ ಜ.12ರಿಂದ 14ರ ವರೆಗೆ ಕೂಡಲ ಸಂಗಮದಲ್ಲಿ ಹಮ್ಮಿಕೊಂಡಿರುವ 35ನೇ ಶರಣ ಮೇಳದಲ್ಲಿ ಜಾಗತಿಕ ಲಿಂಗಾಯಿತ ಮಹಾಸಭಾ ನೇತೃತ್ವದಲ್ಲಿ ಜಿಲ್ಲೆಯ ಬಸವ ಪರ ಸಂಘಟನೆಯವರು ಭಾಗವಹಿಸುತ್ತಿದ್ದು, ಎಲ್ಲ ಬಸವ ಭಕ್ತರು ಪಾಲ್ಗೊಳ್ಳಬೇಕೆಂದು ಮಹಾಸಭಾ ರಾಜ್ಯ ಸಂಚಾಲಕ ರವೀಂದ್ರ ಶಾಬಾದಿ, ಜಿಲ್ಲಾಧ್ಯಕ್ಷ ಪ್ರಭುಲಿಂಗ ಮಹಾ ಗಾಂವಕರ್ ಕರೆ ನೀಡಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, 1988ರಲ್ಲಿ ಶರಣ ಮೇಳ ಆರಂಭವಾಗಿದ್ದು, ನೆರೆಯ ರಾಜ್ಯ ಗಳಾದ ತೆಲಂಗಾಣ, ಮಹಾರಾಷ್ಟ್ರ, ತಮಿಳುನಾಡಿನಿಂದ ಲಕ್ಷಾಂತರ ಭಕ್ತರು ಆಗಮಿಸುತ್ತಿದ್ದಾರೆ. ಜ.12ರಂದು ರಾಷ್ಟ್ರೀಯ ಬಸವ ದಳದ ಅಧಿವೇಶನ ನಡೆಯಲಿದೆ. ಜ.13ರಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಶರಣ ಮೇಳಕ್ಕೆ ಚಾಲನೆ ನೀಡಲಿದ್ದಾರೆ ಎಂದರು.
1996ರಲ್ಲಿ ಬಸವಣ್ಣನವರ ವಚನಗಳ ಅಂಕಿತ ನಾಮದಲ್ಲಿ “ಕೂಡಲ ಸಂಗಮ’ದ ಬದಲು “ಲಿಂಗದೇವ’ ಎಂದು ಡಾ| ಮಾತೆ ಗಂಗಾದೇವಿ ಬದಲಾವಣೆ ಮಾಡಿದ್ದರು. ಇದರಿಂದ ಶರಣ ಮೇಳದಲ್ಲಿ ಭಾಗವಹಿಸುವವರ ಸಂಖ್ಯೆ ಕಡಿಮೆಯಾಗಿತ್ತು. ಇದೀಗ ಲಿಂಗಾಯಿತ ಧರ್ಮ ಸಂಘಟನೆ ಹಿತದೃಷ್ಟಿಯಿಂದ ಮತ್ತು ನ್ಯಾಯಾಲಯದ ನಿರ್ದೇಶನದ ಮೇರೆಗೆ “ಲಿಂಗದೇವ’ ಅಂಕಿತವನ್ನು ಪುನರ್ ಪರಿಶೀಲಿಸಿ ಹಿಂದಕ್ಕೆ ಪಡೆದಿರುವುದು ಬಸವ ಭಕ್ತರಿಗೆಲ್ಲ ಸಂತಸ ತಂದಿದೆ ಎಂದು ಹೇಳಿದರು.
ಅಂಕಿತ ನಾಮ ಪುನರ್ ಪರಿಶೀಲನೆಯಿಂದ ಲಿಂಗಾಯಿತ ಸ್ವತಂತ್ರ ಧರ್ಮಕ್ಕೂ ಬಲ ಬಂದಂತೆ ಆಗಿದೆ. ಜತೆಗೆ ಎಲ್ಲ ಬಸವ ಸಂಘಟನೆಗಳು ಒಗ್ಗಟ್ಟಾಗಿ ಹೋಗಬೇಕೆನ್ನುವ ಸದುದ್ದೇಶವನ್ನು ಹೆಚ್ಚಿಸಿದೆ. ಹೀಗಾಗಿ ಈ ಬಾರಿಯ ಶರಣ ಮೇಳದಲ್ಲಿ ಭಾಗವಹಿಸಲು ನಿರ್ಧರಿಸಿದ್ದೇವೆ. ಮೇಳದಲ್ಲಿ ಹೆಚ್ಚು ಜನ ಪಾಲ್ಗೊಳ್ಳಲು ಸರ್ಕಾರ ಅವಕಾಶ ನೀಡಿದರೆ, ಕಲಬುರಗಿಯಿಂದಲೇ 25 ಬಸ್‌ಗಳಲ್ಲಿ ಜನರು ತೆರಳಲಿದ್ದೇವೆ ಎಂದು ಹೇಳಿದರು.
ಮಹಾಸಭಾ ಮಹಾ ಪ್ರಧಾನ ಕಾರ್ಯ ದರ್ಶಿ ಆರ್.ಜಿ.ಶೆಟಗಾರ ಮಾತನಾಡಿ, ಲಿಂಗಾಯಿತ ಸ್ವತಂತ್ರ ಧರ್ಮದ ಬಗ್ಗೆ ಕರ್ನಾ ಟಕ ಮಾತ್ರವಲ್ಲದೇ ಪಕ್ಕದ ರಾಜ್ಯ ಗಳಲ್ಲೂ ಜಾಗೃತಿ ಹೆಚ್ಚಾಗಿದೆ. ಇತ್ತೀಚೆಗೆ ಪ್ರತ್ಯೇಕ ಧರ್ಮಕ್ಕಾಗಿ ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡಬೇಕೆಂದು ಮಹಾರಾಷ್ಟ್ರ ಸರ್ಕಾರಕ್ಕೆ ಒತ್ತಾಯಿಸಲಾಗಿದೆ. ಅಲ್ಲದೇ, ಫೆಬ್ರವರಿ ಅಥವಾ ಮಾರ್ಚ್‌ನಲ್ಲಿ ಹೈದ್ರಾಬಾದ್‌ನಲ್ಲಿ ಲಿಂಗಾಯಿತ ಪ್ರತ್ಯೇಕ ಧರ್ಮಕ್ಕಾಗಿ ಒತ್ತಾಯಿಸಿ ಬೃಹತ್ ಸಮಾವೇಶ ಆಯೋಜಿ ಸುವ ಉದ್ದೇಶವಿದೆ ಎಂದು ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಮಹಾಸಭಾ ಪದಾಧಿ ಕಾರಿಗಳಾದ ಅಶೋಕ ಘೂಳಿ, ಬಸವರಾಜ ಮೊರಬದ ಹಾಗೂ ಮತ್ತಿತರರು ಇದ್ದರು.