ಬಾಗಲಕೋಟೆ: ಘಟಪ್ರಭೆ, ಮಲಪ್ರಭೆ ಹಾಗೂ ಕೃಷ್ಣೆ ಸಂಗಮವಾಗಿರುವ ವಿಶ್ವಗುರು ಬಸವಣ್ಣನವರ ಐಕ್ಯ ಸ್ಥಳ ಕೂಡಲಸಂಗಮದಲ್ಲಿ ಭಕ್ತರ ಪುಣ್ಯಸ್ನಾನಕ್ಕೀಗ ನಲ್ಲಿ ನೀರೇ ಗತಿಯಾಗಿದೆ.
ಮೂರು ನದಿಗಳು ಕೂಡುವ ಸ್ಥಳದಲ್ಲಿ ಸ್ನಾನ ಮಾಡಿ ಸಂಗಮನಾಥ, ಬಸವಣ್ಣನವರ ಐಕ್ಯ ಮಂಟಪದ ದರ್ಶನ ಪಡೆದರೆ ಪುಣ್ಯ ಲಭಿಸುತ್ತದೆ ಎಂಬ ನಂಬಿಕೆ ಭಕ್ತರಲ್ಲಿದೆ. ಹೀಗಾಗಿ, ನಿತ್ಯವೂ ಸಾವಿರಾರು ಭಕ್ತರು ಇಲ್ಲಿಗೆ ಬರುತ್ತಾರೆ. ಆದರೆ, ಕಳೆದ 15 ದಿನಗಳಿಂದ ತ್ರಿವೇಣಿ ಸಂಗಮದಲ್ಲಿ ಪುಣ್ಯಸ್ನಾನಕ್ಕೆ ತ್ರಿವೇಣಿ ಸಂಗಮದ ಬದಲಾಗಿ ನಲ್ಲಿ ನೀರು ಒದಗಿಸಲಾಗುತ್ತಿದೆ.
ಕೂಡಲಸಂಗಮ, ನಾರಾಯಣಪುರ ಜಲಾಶಯದ ಹಿನ್ನೀರ ಪ್ರದೇಶ ವ್ಯಾಪ್ತಿಯಲ್ಲಿದ್ದು, ಸದ್ಯ ಹಿನ್ನೀರು ಖಾಲಿಯಾಗಿದೆ. ಹೀಗಾಗಿ, ನದಿಯ ಒಡಲಿನಲ್ಲಿ ಅಲ್ಲಲ್ಲಿ ನಿಂತಿರುವ ನೀರನ್ನೇ ಪೈಪ್‌ಲೈನ್ ಮೂಲಕ ಟ್ಯಾಂಕ್‌ಗೆ ಭರ್ತಿ ಮಾಡಿಕೊಂಡು, ಆ ನೀರನ್ನು ಪುಣ್ಯಸ್ನಾನಕ್ಕೆ ನಲ್ಲಿ ಮೂಲಕ ಒದಗಿಸುವ ಕಾರ್ಯವನ್ನು ಕೂಡಲಸಂಗಮ ಅಭಿವೃದ್ಧಿ ಪ್ರಾಧಿಕಾರ ಮಾಡುತ್ತಿದೆ. ಈ ಪರ್ಯಾಯ ವ್ಯವಸ್ಥೆ ಬಿಟ್ಟರೆ ಬೇರೆ ಮಾರ್ಗ ಈ ಪುಣ್ಯ ಕ್ಷೇತ್ರದಲ್ಲಿ ಇಲ್ಲ.
ಬಸವಣ್ಣನವರ ಐಕ್ಯ ಮಂಟಪದ ಸುತ್ತಲಿನ ಕೃಷ್ಣಾ ನದಿ ಪ್ರದೇಶದಲ್ಲಿ ಶಾಶ್ವತವಾಗಿ ನೀರು ಹಿಡಿದಿಟ್ಟುಕೊಂಡು ಭಕ್ತರಿಗೆ ಅನುಕೂಲ ಕಲ್ಪಿಸಬೇಕೆಂಬ ಬೇಡಿಕೆ ಬಹುದಿನಗಳಿಂದ ಇದೆ. ಆದರೆ, ಹಿನ್ನೀರ ಪ್ರದೇಶವಾದ್ದರಿಂದ ಸಂಪೂರ್ಣ ಹೂಳು ತುಂಬಿಕೊಂಡಿದೆ. ಅದನ್ನು ತೆಗೆದು ನೀರು ಹಿಡಿದಿಟ್ಟುಕೊಳ್ಳುವುದು ವೆಚ್ಚದಾಯಕ.
ಹೀಗಾಗಿ, ನದಿಯಲ್ಲಿ ನಿಂತ ನೀರನ್ನೇ (ಆಲಮಟ್ಟಿ ಜಲಾಶಯದಿಂದ ಬಿಡುಗಡೆಗೊಳ್ಳುವ ನೀರು ಇಲ್ಲಿಂದಲೇ ಹರಿದು ಮುಂದೆ ಸಾಗುತ್ತದೆ) ಟ್ಯಾಂಕ್‌ನಲ್ಲಿ ತುಂಬಿಸಿಕೊಂಡು ಭಕ್ತರ ಸ್ನಾನಕ್ಕೆ ಕಲ್ಪಿಸಲಾಗುತ್ತಿದೆ ಎಂದು ಕೂಡಲಸಂಗಮ ಅಭಿವೃದ್ಧಿ ಪ್ರಾಧಿಕಾರದ ಅಧಿಕಾರಿಗಳು ತಿಳಿಸಿದ್ದಾರೆ.
* ಶ್ರೀಶೈಲ ಕೆ. ಬಿರಾದಾರ