Advertisement

Wayanad landslides; ಚೂರಲ್‌ವುಲ ತಲುಪಿದ ಸಚಿವ ಸಂತೋಷ್‌ ಲಾಡ್‌

12:29 AM Aug 01, 2024 | Team Udayavani |

ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಸೂಚನೆ ಮೇರೆಗೆ ಕೇರಳದ ಚೂರಲ್‌ವುಲ ತಲುಪಿರುವ ಕಾರ್ಮಿಕ ಸಚಿವ ಸಂತೋಷ್‌ ಲಾಡ್‌ ಅವರು, ನೆರೆ ಸಂತ್ರಸ್ತರ ರಕ್ಷಣಾ ಕಾರ್ಯಕ್ಕೆ ಮುಂದಾಗಿದ್ದಾರೆ.

Advertisement

ಪ್ರವಾಹ ಪೀಡಿತ ಪ್ರದೇಶದಲ್ಲಿ ಪರಿಹಾರ ಕಾರ್ಯಗಳು, ಸಂತ್ರಸ್ಥರ ರಕ್ಷಣೆ ಸೇರಿದಂತೆ ಅಗತ್ಯ ಎಲ್ಲ ರೀತಿಯ ನೆರವುಗಳಿಗೆ ಕೇರಳ ಸರ್ಕಾರದ ಜೊತೆ ಕೈ ಜೋಡಿಸಿ ಜನರ ಜೀವ, ಆರೋಗ್ಯ ರಕ್ಷಣೆಗೆ ನೆರವಾಗುವಂತೆ ಮುಖ್ಯಮಂತ್ರಿಗಳು ದೂರವಾಣಿ ಮೂಲಕ ಸೂಚನೆ ನೀಡಿದ್ದಾರೆ.

ಕೇರಳ ಸಿಎಂ ಪಿಣರಾಯಿ ವಿಜಯನ್‌ ಅವರೊಂದಿಗೂ ದೂರವಾಣಿ ಮೂಲಕ ಮಾತನಾಡಿದ ಸಿಎಂ ಸಿದ್ದರಾಮಯ್ಯ, ದುರಂತದ ಬಗ್ಗೆ ಆಘಾತ ವ್ಯಕ್ತಪಡಿಸಿದ್ದು, ಪರಿಹಾರ ಕಾರ್ಯದಲ್ಲಿ ನಮ್ಮ ಸರ್ಕಾರ ನಿಮ್ಮೊಂದಿಗೆ ಕೈಜೋಡಿಸಲಿದೆ. ಅಗತ್ಯ ನೆರವು ಹಾಗೂ ರಕ್ಷಣಾ ತಂಡ ಮತ್ತು ಸಾಮಗ್ರಿಗಳನ್ನು ಕಳುಹಿಸಿಕೊಡುತ್ತೇವೆ ಎಂದು ಭರವಸೆ ನೀಡಿದ್ದಾರೆ.

ಇತ್ತ ದೂರವಾಣಿ ಕರೆ ಸ್ವೀಕರಿಸುತ್ತಿದ್ದಂತೆ ವಯನಾಡಿಗೆ ಹೊರಟ ಸಚಿವ ಸಂತೋಷ್‌ ಲಾಡ್‌, ಸದ್ಯ ಕೇರಳ ರಾಜ್ಯದ ಮುಖ್ಯಮಂತ್ರಿ ಕಚೇರಿ ಜೊತೆ ನಿರಂತರ ಸಂಪರ್ಕದಲ್ಲಿದ್ದಾರೆ. ರಕ್ಷಣಾ ಕಾರ್ಯದ ಕುರಿತು “ಉದಯವಾಣಿ’ ಪತ್ರಿಕೆ ಮಾತನಾಡಿರುವ ಅವರು, ದುರಂತದಲ್ಲಿ ಸಿಲುಕಿರುವ ಕನ್ನಡಿಗರ ರಕ್ಷಣೆಗೆ ತುರ್ತು ಮತ್ತು ಕ್ಷಿಪ್ರ ಕ್ರಮಗಳನ್ನು ಕೈಗೊಳ್ಳಲು ಮುಖ್ಯಮಂತ್ರಿಗಳು ಸೂಚನೆ ನೀಡಿದ್ದಾರೆ. ಅಗತ್ಯ ಎಲ್ಲಾ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ ಎಂದು ತಿಳಿಸಿದ್ದಾರೆ.

ಮಳೆಯಿಂದ ರಕ್ಷಣಾ ಕಾರ್ಯ ಕಷ್ಟ:
ಸಿಎಂ ಸೂಚನೆ ಮೇರೆಗೆ ನಾವೀಗ ಚೋರಲ್ಮಲ ಎಂಬ ಪ್ರದೇಶ ತಲುಪಿದ್ದು, ಭಾರೀ ಮಳೆ ಹಾಗೂ ಗುಡ್ಡ ಕುಸಿತದಿಂದ ಬಹುಪಾಲು ಪ್ರದೇಶವು ಕೆಸರಿನಿಂದ ಕೂಡಿದೆ. ಹೊಸದಾಗಿ ಯಾವುದೇ ಅನಾಹುತ ಸಂಭವಿಸದೇ ಇದ್ದರೂ ಮಳೆ ಸುರಿಯುತ್ತಲೇ ಇರುವುದರಿಂದ ರಕ್ಷಣಾ ಕಾರ್ಯಕ್ಕೆ ಸ್ವಲ್ಪ ಸಮಸ್ಯೆಯಾಗಿದೆ. ಅದರ ನಡುವೆಯೂ ತುಂಬಿ ಹರಿಯುತ್ತಿರುವ ನೀರಿನ ಮಧ್ಯೆ ಯೋಧರು ಸೇತುವೆ ಕಟ್ಟಿ ಸಂತ್ರಸ್ತರ ರಕ್ಷಣೆಗೆ ತಯಾರಿ ಮಾಡಿಕೊಂಡಿದ್ದಾರೆ. ಕೆಲವೆಡೆ ಸೇತುವೆ ನಿರ್ಮಿಸಲಾಗದಿದ್ದರೂ ಹಗ್ಗ ಕಟ್ಟಿ ಕೆಸರಿನಲ್ಲಿ ಹೂತಿರುವವನ್ನು ರಕ್ಷಿಸಿಕೊಂಡು ಬರಲಾಗುತ್ತಿದೆ.

Advertisement

ಇಬ್ಬರ ಮೃತದೇಹ ಪತ್ತೆ, ಇನ್ನಿಬ್ಬರಿಗಾಗಿ ಹುಡುಕಾಟ:
ಸುರಕ್ಷಿತ ಸ್ಥಳಕ್ಕೆ ಸಂತ್ರಸ್ತರನ್ನು ರವಾನಿಸಿ ಅಲ್ಲಿಯೇ ಕಾಳಜಿ ಕೇಂದ್ರ ತೆರೆದು ವೈದ್ಯೋಪಚಾರ ಹಾಗೂ ಊಟೋಪಚಾರ ನಿರ್ವಹಿಸಲಾಗುತ್ತಿದೆ. ಇಲ್ಲಿ ಸಂತ್ರಸ್ತರಾಗಿರುವ ಬಹುತೇಕ ಕನ್ನಡಿಗರು ಮೂರ್‍ನಾಲ್ಕು ದಶಕಗಳಿಂದ ಇಲ್ಲಿಯೇ ವಾಸವಿದ್ದು, ಟೀ ಎಸ್ಟೇಟ್‌ ಸೇರಿದಂತೆ ಹಲವೆಡೆ ಕೆಲಸ ಮಾಡಿಕೊಂಡಿದ್ದಾರೆ. ಪುಟ್ಟಸಿದ್ಧಿ (62), ರಾಣಿ (50) ಅವರ ಮೃತದೇಹಗಳು ಪತ್ತೆಯಾಗಿದ್ದು, ಚಾಮರಾಜನಗರ ತಾಲೂಕಿನ ಇರಸವಾಡಿ ಮೂಲದ ರಾಜೇಂದ್ರ (50), ರತ್ನಮ್ಮ (45) ಅವರ ಪಾರ್ಥಿವ ಶರೀರಕ್ಕಾಗಿ ಹುಡುಕಾಟ ನಡೆಯುತ್ತಿದೆ. ಗಾಯಗೊಂಡಿರುವ ಗುಂಡ್ಲುಪೇಟೆ ತಾಲೂಕು ತ್ರಿಯಂಬಕಪುರ ಮೂಲದ ಸ್ವಾಮಿಶೆಟ್ಟಿ (70) ಅವರನ್ನು ವೈತ್ರಿ ತಾಲೂಕು ಆಸ್ಪತ್ರೆಗೆ ದಾಖಲಿಸಲಾಗಿದೆ.

ಮಲಯಾಳಂ ಬಲ್ಲ ಜಾಫ‌ರ್‌ ಸಹಾಯ
ಮೈಸೂರು ಮತ್ತು ಚಾಮರಾಜನಗರ ಮೂಲದ 9 ಜನರು ನಾಪತ್ತೆಯಾಗಿದ್ದು, ಅವರಿಗಾಗಿ ಹುಡುಕಾಟ ನಡೆಸಲಾಗುತ್ತಿದೆ. ಕಾಳಜಿ ಕೇಂದ್ರದಲ್ಲಿ 13 ಮಂದಿ ಕನ್ನಡಿಗರನ್ನು ಆರೈಕೆ ಮಾಡಲಾಗುತ್ತಿದೆ. ನಮ್ಮ ಸರ್ಕಾರದ ಐಎಎಸ್‌ ಅಧಿಕಾರಿ ಪಿ.ಸಿ. ಜಾಫ‌ರ್‌ ಅವರಿಗೆ ಮಲಯಾಳಂ ಭಾಷೆಯೂ ಬರುವುದರಿಂದ ಸ್ಥಳೀಯವಾಗಿ ವ್ಯವಹರಿಸಲು ಅನುಕೂಲವಾಗುತ್ತಿದ್ದು, ಕನ್ನಡಿಗರು, ಕೇರಳದವರೆಂದು ನೋಡಲಾಗುತ್ತಿಲ್ಲ. ಸಂಕಷ್ಟದಲ್ಲಿರುವವನ್ನು ರಕ್ಷಿಸಲಾಗುತ್ತಿದೆ. ಬಳಿಕ ಕನ್ನಡಿಗರನ್ನು ಗುರುತಿಸಿ ಮುಂದಿನ ಕ್ರಮ ವಹಿಸಲಾಗುತ್ತಿದೆ ಎಂದು ವಿವರಣೆ ನೀಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next