ರಾಮನಗರ: ಕನಕಪುರ ತಾಲೂಕಿನ ಕಪಾಲ ಬೆಟ್ಟದಲ್ಲಿ ಏಸು ಕ್ರಿಸ್ತ ಪ್ರತಿಮೆ ಸ್ಥಾಪನೆಗೆ ಕರ್ನಾಟಕ ಸಮತಾ ಸೈನಿಕ ದಳ (ಕೆ.ಎಸ್.ಎಸ್.ಡಿ) ಬೆಂಬಲ ವ್ಯಕ್ತಪಡಿಸಿದೆ.
ನಗರದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಕರ್ನಾಟಕ ಸಮತಾ ಸೈನಿಕ ದಳದ ಜಿಲ್ಲಾಧ್ಯಕ್ಷ ಕೋಟೆ ಕುಮಾರ್ ಮಾತನಾಡಿ, ಶಾಂತಿ ದೂತ ಏಸು ಪ್ರತಿಮೆ ಸ್ಥಾಪನೆಗೆ ವಿರೋಧ ವ್ಯಕ್ತವಾಗುತ್ತಿರುವುದು ಸರಿಯಲ್ಲ. ಪ್ರತಿಮೆ ಸ್ಥಾಪನೆಗೆ ತಮ್ಮ ಸಂಘಟನೆಯ ಬೆಂಲವಿದೆ ಎಂದರು.
ಏಸು ಪ್ರತಿಮೆ ಸ್ಥಾಪನೆಯನ್ನು ವಿರೋಧಿ ಸುವುದು ಸಂವಿಧಾನ ವಿರೋಧಿ ಧೋರಣೆ, ಸಂವಿಧಾನದಲ್ಲಿ ಎಲ್ಲ ಪ್ರಜೆಗಳು ತಮಗೆ ಬೇಕಾದ ಜಾತಿ, ಮತವನ್ನು ಪಾಲಿಸಲು ಹಕ್ಕನ್ನು ಉಳ್ಳವರಾಗಿದ್ದಾರೆ. ತಮಗಿಷ್ಟವಾದ ದೇವರನ್ನು ಪೂಜಿಸುವ ಹಕ್ಕು ಪಡೆದಿದ್ದಾರೆ. ಸಂವಿಧಾನದ ಆರ್ಟಿಕಲ್ 15ರಲ್ಲಿ ಧರ್ಮ, ಜಾತಿ, ಲಿಂಗಬೇಧವಿಲ್ಲದೆ ಬದುಕುವ ಹಕ್ಕನ್ನು ದೇಶದ ಪ್ರಜೆಗಳಿಗೆ ನೀಡಿದೆ. ಹೀಗಿದ್ದರೂ, ಕೆಲವು ಮತಾಂಧರು ಧರ್ಮ-ಧರ್ಮಗಳ ನಡುವೆ ಬೆಂಕಿ ಹಚ್ಚುವ ಕೆಲಸ ಮಾಡುತ್ತಿದ್ದಾರೆ. ಇದು ಸಂವಿಧಾನ ವಿರೋಧಿ ಕ್ರಮ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಕನಕಪುರ ತಾಲೂಕು ಹಾರೋಬೆಲೆ ಗ್ರಾಮದ ಬಳಿ ಕಪಾಲ ಬೆಟ್ಟದಲ್ಲಿ ಏಸು ಕ್ರಿಸ್ತ ಪ್ರತಿಮೆ ಸ್ಥಾಪನೆಗೆ ವಿರೋಧ ಸಲ್ಲದು. ಸಮಾಜದಲ್ಲಿ ಸಮಾನತೆಯನ್ನು ಸಾರಿದ ಕಾಯಕ ಯೋಗಿ ಬಸವಣ್ಣನ ಪ್ರತಿಮೆಯನ್ನು ಲಂಡನ್‌ನಲ್ಲಿ ಸ್ಥಾಪಿಸಲಾಗಿದೆ. ಕ್ರೈಸ್ತರ ನಾಡಿನಲ್ಲಿ ಭಾರತದ ಸಂತರೊಬ್ಬರ ಪ್ರತಿಮೆಯನ್ನು ಸ್ಥಾಪನೆಯಾಗಿದೆ. ವಿಶ್ವದ ಅನೇಕ ರಾಷ್ಟ್ರಗಳಲ್ಲಿ ಹಿಂದೂ ದೇವಾಲಯಗಳನ್ನು ನಿರ್ಮಿಸಲಾಗಿದೆ. ಇದು ಸಹ ಬಾಳ್ವೆಗೆ ಹಿಡಿದ ಕೈಗನ್ನಡಿ ಎಂದರು.
ರಾಜ್ಯದಲ್ಲಿರುವ ಬಿಜೆಪಿ ಸರ್ಕಾರ ಧರ್ಮಾಧಾರಿತ ರಾಜಕರಣ ಮಾಡುತ್ತಿದೆ ಎಂದು ಆರೋಪಿಸಿದ ಅವರು, ಮತಾಂತರ ಮಾಡಲಾಗುತ್ತಿದೆ ಎಂಬ ಊಹಾ ಪೋಹಗಳನ್ನು ಇಟ್ಟುಕೊಂಡು ಏಸು ಕ್ರಿಸ್ತ ಪ್ರತಿಮೆ ನಿರ್ಮಾಣ ಕಾರ್ಯಕ್ಕೆ ಅಡ್ಡಿಪಡಿಸುತ್ತಿರುವ ಶಕ್ತಿಗಳನ್ನು ತಮ್ಮ ಸಂಘಟನೆ ತೀವ್ರವಾಗಿ ಖಂಡಿಸುತ್ತದೆ ಎಂದರು.
ಏಸು ಕ್ರಿಸ್ತ ಪ್ರತಿಮೆ ಸ್ಥಾಪನೆಗೆ ತಮ್ಮ ಸಂಘಟನೆ ಬೆಂಬಲ ನೀಡುತ್ತದೆ. ಈ ವಿಚಾರದಲ್ಲಿ ನಡೆಯುವ ಎಲ್ಲಾ ಹೋರಾಟಗಳಿಗೂ ತಮ್ಮ ಸಂಘಟನೆ ಬೆಂಬಲ ನೀಡುತ್ತದೆ ಎಂದರು.
ಗೋಷ್ಠಿಯಲ್ಲಿ ಕೆ.ಎಸ್.ಎಸ್.ಡಿಯ ಜಿಲ್ಲಾ ಕಾರ್ಯಾಧ್ಯಕ್ಷ ಗುಡ್ಡೆ ವೆಂಕಟೇಶ, ಖಜಾಂಚಿ ಬಿ.ಎಸ್.ರುದ್ರೇಶ್, ಕನಕಪುರ ತಾಲೂಕು ಅಧ್ಯಕ್ಷ ಕೋಟೆ ಪ್ರಕಾಶ್, ರಾಮನಗರ ತಾಲೂಕು ಘಟಕದ ಅಧ್ಯಕ್ಷ ರಮೇಶ್, ಸಂಘಟನಾ ಕಾರ್ಯದರ್ಶಿ ಮಧು ಎಚ್.ಎಸ್.ಕೋಟೆ ಮುಂತಾದವರು ಉಪಸ್ಥಿತರಿದ್ದರು.