Advertisement

ಕೆಎಸ್ಸಾರ್ಟಿಸಿ ಸಿಬ್ಬಂದಿ ಶಿಸ್ತು ಮೈಗೂಡಿಸಿಕೊಳ್ಳಲಿ

11:19 AM Feb 08, 2019 | Team Udayavani |

ಚಿಕ್ಕಮಗಳೂರು: ಕೆಎಸ್ಸಾರ್ಟಿಸಿ ನಿಗಮದ ಸಿಬ್ಬಂದಿಗಳು ಕರ್ತವ್ಯ ನಿರ್ವಹಿಸುವಾಗ ಶಿಸ್ತು ಮೈಗೊಡಿಸಿಕೊಳ್ಳಬೇಕು ಎಂದು ಹಿರಿಯ ನ್ಯಾಯಾಧೀಶರಾದ ಬಸವರಾಜ್‌ ಚೆಂಗಟ್ಟಿ ಹೇಳಿದರು.

Advertisement

ನಗರದ ಹೊರವಲಯದಲ್ಲಿರುವ ಕೆಎಸ್ಸಾರ್ಟಿಸಿ ತಾಲೂಕು ಘಟಕದ ಡಿಪೋದಲ್ಲಿ ಆಯೋಜಿಸಿದ್ದ ಅಪಘಾತ ರಹಿತ ಚಾಲಕರಿಗೆ ಪುರಸ್ಕಾರ ವಿತರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ಇಂತಹ ಸನ್ಮಾನ ಸಮಾರಂಭ ಸನ್ಮಾನಿತರ ಕುಟುಂಬಕ್ಕೆ ಸಂತೋಷ ನೀಡುವುದಲ್ಲದೇ ಇಡೀ ಘಟಕಕ್ಕೆ ಸ್ಫೂರ್ತಿದಾಯಕ ಎಂದರು.

ಚಾಲಕರಿಗೆ ಕಾನೂನಿನ ಅರಿವುವಿರಬೇಕು. ವಾಹನ ಚಾಲನೆ ಮಾಡುವಾಗ ಸಹನೆ, ಶಿಸ್ತು ಅಳವಡಿಸಿಕೊಳ್ಳಬೇಕು. ಇದರಿಂದ ಸುರಕ್ಷತಾ ಚಾಲನೆ ಸಾಧ್ಯವಾಗುತ್ತದೆ. ಕಾನೂನಿನ ಅರಿವಿಲ್ಲದಿರುವುದು ಅಕ್ಷಮ್ಯ ಅಪರಾಧ. ಜನಸಾಮಾನ್ಯರು ಎಲ್ಲ ಕಾನೂನುಗಳನ್ನು ತಿಳಿದುಕೊಳ್ಳುವ ಅವಶ್ಯವಿಲ್ಲ. ಜೀವನಕ್ಕೆ ಅವಶ್ಯವಿರುವ ಪ್ರಾಥಮಿಕ ಕಾನೂನುಗಳ ಅರಿವಿರಬೇಕು ಎಂದು ಹೇಳಿದರು.

ಹಿಂದಿನ ಕಾಲದಲ್ಲಿ ಧರ್ಮ ಎಂಬುದನ್ನೇ ಆಧುನಿಕ ದಿನಮಾನಗಳಲ್ಲಿ ಕಾನೂನಾಗಿ ಮಾರ್ಪಾಡಿಸಲಾಗಿದೆ. ಬಸವಣ್ಣನವರ ಕಳಬೇಡ, ಕೊಲ್ಲಬೇಡ ವಚನ ಭಾರತ ದಂಡಸಂಹಿತೆಯ ಹಲವು ಕಲಂಗಳನ್ನು ಸೂಚಿಸುತ್ತದೆ ಎಂದರು.

ಸಹಾಯಕ ಅಭಿಯೋಜಕ ರಾಘವೇಂದ್ರರಾಯಕರ್‌ ಮಾತನಾಡಿ, ಸಾರಿಗೆ ಸಿಬ್ಬಂದಿ ಬಹು ಒತ್ತಡದ ಪರಿಸ್ಥಿತಿಯಲ್ಲಿ ಕಾರ್ಯನಿರ್ವಹಿಸುತ್ತಾರೆ. ಅಪಘಾತಗಳನ್ನು ಯಾರೆ ಚಾಲಕರಾದರೂ ಬೇಕೆಂದು ಮಾಡುವುದಿಲ್ಲ. ಆದರೆ, ಕೆಲವು ಪ್ರಕರಣಗಳಲ್ಲಿ ತಮ್ಮದಲ್ಲ ತಪ್ಪಿಗೆ ಕೆಎಸ್‌ಆರ್‌ಟಿಸಿಯ ಚಾಲಕ ಸಿಬ್ಬಂದಿ ಶಿಕ್ಷೆ ಅನುಭವಿಸಬೇಕಾದುದು ವಿಷಾದನೀಯ ಎಂದು ವಿಷಾದ ವ್ಯಕ್ತಪಡಿಸಿದರು.

Advertisement

ವಕೀಲರ ಸಂಘದ ಜಿಲ್ಲಾಧ್ಯಕ್ಷ ಎಸ್‌.ಎಸ್‌. ವೆಂಕಟೇಶ್‌ ಮಾತನಾಡಿ, ಚಾಲಕ ಎಂಬುದು ಕೇವಲ ಹುದ್ದೆಯಲ್ಲ. ಅದು ಹಲವು ಜನರ ಕನಸು, ಭವಿಷ್ಯ, ಬದುಕುಗಳನ್ನು ಸುರಕ್ಷತೆಯಿಂದ ಸಾಗಿಸುವ ಮಹೋನ್ನತ ಜವಾಬ್ದಾರಿ. ಅದನ್ನು ನಿರ್ಲಕ್ಷ ್ಯತೆಯಿಂದ ಕಾರ್ಯನಿರ್ವಹಿಸಿದ್ದಲ್ಲಿ ಹಲವು ಮಂದಿಯ ಭವಿಷ್ಯ, ಕನಸು ಆಶೋತ್ತರಗಳು ಮಣ್ಣುಪಾಲಾಗುವ ಸಂಭವವಿದ್ದು, ಚಾಲಕರು ಕರ್ತವ್ಯ ನಿರ್ವಹಿಸಿದ ಸಂದರ್ಭದಲ್ಲಿ ಜಾಗೃತಿ ವಹಿಸಬೇಕು ಎಂದರು.

ಕೆಎಸ್ಸಾರ್ಟಿಸಿ ಅಧಿಕಾರಿ ನಾಗರಾಜು ಮೂರ್ತಿ ಮಾತನಾಡಿ, ಚಿಕ್ಕಮಗಳೂರು ಘಟಕ ಆರಂಭವಾಗಿಂದಲೂ ಅಪಘಾತ ರಹಿತ ಚಾಲನೆ, ತಾಂತ್ರಿಕ ಪರಿಣಿತಿ, ವೈಜ್ಞಾನಿಕ ಯೋಜನೆಗಳ ಅನುಷ್ಠಾನ ಸೇರಿದಂತೆ ಹಲವು ವಿಭಾಗಗಳಲ್ಲಿ ಅತ್ಯುತ್ನತ ಸೇವೆ ಸಲ್ಲಿಸಿದ್ದಕ್ಕಾಗಿ ರಾಜ್ಯ ಮಟ್ಟದ 8 ಚಿನ್ನದ ಪದಕ ಮತ್ತು 131 ಬೆಳ್ಳಿ ಪದಕಗಳನ್ನು ತನ್ನದಾಗಿಸಿಕೊಂಡಿದೆ. ಈ ಮೂಲಕ ಜಿಲ್ಲಾ ಘಟಕ ಪ್ರತಿಷ್ಠಿತ ರಾಷ್ಟ್ರಪತಿ ಪದಕಗಳನ್ನು ಸತತವಾಗಿ ತನ್ನ ಮಡಿಲಿಗೆ ಹಾಕಿಕೊಂಡಿದೆ ಎಂದರು.

ಇಲಾಖೆಯ ವಾಹನಗಳ ಅಪಘಾತಗಳ ಸಂಖ್ಯೆ ಇಳಿಮುಖಗೊಳಿಸಲು ಪ್ರತಿವರ್ಷ ರಸ್ತೆ ಸುರಕ್ಷತಾ ದಿನ ಆಚರಿಸಿ ಅಪಘಾತ ತಡೆಗಟ್ಟಲು ಜಾಗೃತಿ ಮೂಡಿಸುವುದು ಮತ್ತು ವೈಜ್ಞಾನಿಕ ಯೋಜನೆಗಳನ್ನು ಜಾರಿಗೊಳಿಸುವುದು, ಚಾಲಕರಿಗೆ ವೈದ್ಯಕೀಯ ತಪಾಸಣೆ, ವಾಹನಗಳ ತಾಂತ್ರಿಕ ದೋಷ ನಿವಾರಣೆ ಸೇರಿದಂತೆ ಹಲವು ಯೋಜನೆಗಳನ್ನು ಸಮರ್ಪಕವಾಗಿ ಅನುಷ್ಠಾನಗೊಳಿಸಲಾಗುತ್ತದೆ ಎಂದರು.

ವಿಭಾಗೀಯ ನಿಯಂತ್ರಣಾಧಿಕಾರಿ ಅನಿಲ್‌ಕುಮಾರ್‌, ಅಧಿಕಾರಿಗಳಾದ ಅರುಣ್‌, ಸುಮಾ ಇತರರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next