Advertisement

ಬಸ್‌ ಆರಂಭವಾದರೂ ಪ್ರಯಾಣಿಕರ ಕೊರತೆ

11:59 PM May 13, 2020 | Sriram |

ಉಡುಪಿ: ಸುಮಾರು ಒಂದೂವರೆ ತಿಂಗಳ ಬಳಿಕ ಬುಧವಾರ ಉಡುಪಿ ಜಿಲ್ಲೆಯಲ್ಲಿ ಬಸ್‌ ಓಡಾಟ ಆರಂಭವಾಗಿದೆ. ಆದರೆ ಪ್ರಯಾಣಿಕರಿಲ್ಲದೆ ಬಸ್ಸುಗಳನ್ನು ಓಡಿಸುವ ಸ್ಥಿತಿ ಎದುರಾಗಿದೆ.

Advertisement

ಬೆಳಗ್ಗಿನ ಹೊತ್ತು ಕೆಲವು ಪ್ರಯಾಣಿಕರು ಬಸ್‌ ನಿಲ್ದಾಣದಲ್ಲಿದ್ದರೂ ಮಧ್ಯಾಹ್ನ, ಸಂಜೆಯ ಹೊತ್ತು ಜನರು ಇದ್ದಿರಲಿಲ್ಲ. ಉಡುಪಿಯಿಂದ ಕುಂದಾಪುರ, ಕಾರ್ಕಳ ಮತ್ತು ಮಣಿಪಾಲ ಮೂಲಕ ಜಿಲ್ಲಾಧಿಕಾರಿ ಕಚೇರಿಗೆ ಕೆಎಸ್ಸಾರ್ಟಿಸಿ ಬಸ್ಸುಗಳು ಸಂಚರಿಸಿದವು. ಇವುಗಳು ಕೆಎಸ್ಸಾರ್ಟಿಸಿ ಮತ್ತು ಸಿಟಿ ಬಸ್‌ ನಿಲ್ದಾಣದಿಂದ ಸಂಚರಿಸಿದವು. ಭಾರತೀ ಮೋಟಾರ್ ಬಸ್ಸುಗಳು ಉಡುಪಿ ಮತ್ತು ಕುಂದಾಪುನಡುವೆ ಸಂಚರಿಸಿದವು.

ಗುರುವಾರವೂ ಇದೇ ರೀತಿ ಬಸ್ಸುಗಳು ಸಂಚರಿಸುತ್ತವೆ. ಪ್ರಯಾಣಿಕರಿಲ್ಲದೆ ಏನು ಮಾಡಬಹುದು. ಹೆಚ್ಚುವರಿ ಬಸ್‌ಗಳನ್ನು ಸದ್ಯ ಓಡಿಸುವ ಪರಿಸ್ಥಿತಿ ಇಲ್ಲ ಎನ್ನುತ್ತಾರೆ ಕೆಎಸ್ಸಾರ್ಟಿಸಿ ಉಡುಪಿ ಡಿಪೋ ಮೆನೇಜರ್‌ ಉದಯಕುಮಾರ್‌ ಶೆಟ್ಟಿ ತಿಳಿಸಿದ್ದಾರೆ.

“ನಮಗೆ ಟೋಲ್‌ ಖರ್ಚು ಹುಟ್ಟಲಿಲ್ಲ. ಇದುವರೆಗೆ ಒಂದು ಟ್ರಿಪ್‌ಗೆ 210 ರೂ. ಟೋಲ್‌ ಶುಲ್ಕವಿದ್ದರೆ ಬುಧವಾರ 230 ರೂ.ಗೆ ಏರಿಸಿದ್ದೂ ಗೊತ್ತಿರಲಿಲ್ಲ. ಗುರುವಾರ ಉಡುಪಿಯಿಂದ ಕಾರ್ಕಳ, ಮಂಚಕಲ್‌ ಕಡೆಗೆ ಕೆಲವು ಬಸ್‌ ಮಾಲಕರು ಬಸ್ಸುಗಳನ್ನು ಓಡಿಸುವ ಸಾಧ್ಯತೆ ಇದೆ’ ಎಂದು ಭಾರತೀ ಮೋಟಾರ್ನ ಮಾಲಕ ರಾಘವೇಂದ್ರ ಭಟ್‌ ತಿಳಿಸಿದರು.

“ಉಡುಪಿಯಿಂದ ಕುಂದಾಪುರಕ್ಕೆ ಹೋಗಿ ಬರಲು ಡೀಸೆಲ್‌ ಖರ್ಚು 400 ರೂ. ತಗಲುತ್ತದೆ. 20 ಪ್ರಯಾಣಿಕರಿಂದ ಒಂದು ಟ್ರಿಪ್‌ನಲ್ಲಿ 300 ರೂ. ಬರಬಹುದು. 230 ರೂ. ಟೋಲ್‌ ಶುಲ್ಕ ಪಾವತಿಸಬೇಕು’ ಎಂದು ತಮ್ಮ ಸ್ಥಿತಿಯನ್ನು ಭಾರತೀ ಬಸ್‌ ಚಾಲಕ ಮೊಹಮ್ಮದ್‌ ರಫೀಕ್‌ ತಿಳಿಸಿದ್ದಾರೆ.

Advertisement

ಏತನ್ಮಧ್ಯೆ ಬುಧವಾರ ಸಭೆ ಸೇರಿದ ಉಡುಪಿ ಸಿಟಿ ಬಸ್‌ ಮಾಲಕರ ಸಂಘದ ಪದಾಧಿಕಾರಿಗಳು ಸದ್ಯ ಒಂದು ವಾರ ಬಸ್‌ಗಳನ್ನು ರಸ್ತೆಗೆ ಇಳಿಸುವುದು ಬೇಡವೆಂಬ ನಿರ್ಧಾರಕ್ಕೆ ಬಂದರು.

“ಬುಧವಾರ ಓಡಾಡಿದ ಬಸ್ಸುಗಳಲ್ಲಿ ಬೆರಳೆಣಿಕೆ ಪ್ರಯಾಣಿಕರು ಇದ್ದರು. ನಾವು ಬಸ್‌ ಸಂಚಾರ ಆರಂಭಿಸಿದರೆ ಆ ದಿನದಿಂದ 30 ದಿನಗಳ ತೆರಿಗೆ ಪಾವತಿಸಬೇಕು. ಪ್ರಯಾಣಿಕರಿಲ್ಲದೆ ಬಸ್‌ ಓಡಾಟ ನಿಲ್ಲಿಸಿದರೂ ತಿಂಗಳ ತೆರಿಗೆ ಪಾವತಿಸಬೇಕು. ಹೀಗಾಗಿ ಬಸ್‌ ಮಾಲಕರು ಬಸ್ಸುಗಳನ್ನು ಓಡಿಸಲು ಸಭೆಯಲ್ಲಿ ಒಲವು ತೋರಲಿಲ್ಲ’ ಎಂದು ಸಂಘದ ಅಧ್ಯಕ್ಷ ಕೆ.ಸುರೇಶ್‌ ನಾಯಕ್‌ ತಿಳಿಸಿದರು.

ಬಸ್‌ ಸಂಚಾರ ಆರಂಭ
ಕುಂದಾಪುರ: ಉಡುಪಿ – ಕುಂದಾಪುರ ನಡುವೆ ಖಾಸಗಿ ಹಾಗೂ ಕೆಎಸ್‌ಆರ್‌ಟಿಸಿ ಬಸ್‌ ಸಂಚಾರ ಮಂಗಳವಾರದಿಂದ ಓಡಾಟ ಆರಂಭಿಸಿದೆ. ಕುಂದಾಪುರದಿಂದ ಉಡುಪಿಗೆ ಕೇವಲ ಒಂದು ಕೆಎಸ್‌ಆರ್‌ಟಿಸಿ ಬಸ್‌ ಮಾತ್ರ ಸಂಚರಿಸಿದರೆ, 6 ಖಾಸಗಿ ಬಸ್‌ಗಳು ಈ ಮಾರ್ಗವಾಗಿ ಸಂಚರಿಸಿತು.

ಬೈಂದೂರು – ಕುಂದಾಪುರ ನಡುವೆ 2 ಕೆಎಸ್‌ಆರ್‌ಟಿಸಿ ಬಸ್‌ಗೆ ಅನುಮತಿ ನೀಡಿದ್ದರೂ, ಪ್ರಯಾಣಿಕರಿಲ್ಲದ ಕಾರಣ ಈ ಮಾರ್ಗದಲ್ಲಿ ಬಸ್‌ ಸಂಚಾರವನ್ನು ರದ್ದುಪಡಿಸಲಾಯಿತು ಎಂದು ಕೆಎಸ್‌ಆರ್‌ಟಿಸಿ ಅಧಿಕಾರಿಗಳು ತಿಳಿಸಿದ್ದಾರೆ.

ಜನಜಾಗೃತಿ
ಖಾಸಗಿ ಬಸ್‌ ಎಕ್ಸ್‌ಪ್ರೆಸ್‌ ಬಸ್ಸಾಗಿದ್ದರೂ ಉಡುಪಿಯಿಂದ ಕುಂದಾಪುರಕ್ಕೆ ಹೋಗುವಾಗ ಅಲ್ಲಲ್ಲಿ ಬಸ್‌ ಸ್ಟಾಪ್‌ಗ್ಳಲ್ಲಿ ನಿಲುಗಡೆ ಕೊಟ್ಟು ಶೆಟ್ಲ ಬಸ್‌ ಆಗಿ ಸಂಚರಿಸಿತು. ಒಂದು ಬಸ್‌ನಲ್ಲಿ ಸುಮಾರು 20 ಜನರು ಸಂಚರಿಸಿದರು. ಜನರು ಅವರಾಗಿಯೇ ಪ್ರತ್ಯೇಕ ಆಸನಗಳಲ್ಲಿ ಕುಳಿತುಕೊಳ್ಳುತ್ತಿದ್ದರು. ಬಸ್‌ಗಳಲ್ಲಿ ಸ್ಯಾನಿಟೈಸರ್‌ ವ್ಯವಸ್ಥೆ ಮಾಡಲಾಗಿತ್ತು. ಪ್ರಯಾಣಿಕರು ಮಾಸ್ಕ್ ಧರಿಸದೆ ಇದ್ದಲ್ಲಿ ಬಸ್‌ ಸಿಬಂದಿಗಳು ಮಾಸ್ಕ್ ಒದಗಿಸಿದರು. ಕೊರೊನಾ ಕುರಿತು ಜನಜಾಗೃತಿಯನ್ನೂ ಮೂಡಿ ಸಲಾಗಿತ್ತು. ಎರಡೂ ನಿಲ್ದಾಣಗಳಲ್ಲಿ ಜನರ ಓಡಾಟ ಕಂಡುಬರಲಿಲ್ಲ.

Advertisement

Udayavani is now on Telegram. Click here to join our channel and stay updated with the latest news.

Next