Advertisement

KSRTC ಬೆಳ್ತಂಗಡಿ-ಬೆಂಗಳೂರು ಪಲ್ಲಕ್ಕಿ ಬಸ್‌ ಆರಂಭ

12:06 AM Nov 22, 2023 | Team Udayavani |

ಬೆಳ್ತಂಗಡಿ: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ಪಲ್ಲಕ್ಕಿ ಬಸ್‌ನ ಮೂಲಕ ಬೆಳ್ತಂಗಡಿ – ಬೆಂಗಳೂರು ನಡುವಣ ಪ್ರಯಾಣವನ್ನು ಮತ್ತಷ್ಟು ಹತ್ತಿರ ಮತ್ತು ಸುಗಮಗೊಳಿಸಿದೆ. ಪ್ರತೀ ದಿನ ಈ ಬಸ್‌ಗಳ ಸೇವೆ ತಾಲೂಕಿನ ಜನತೆಗೆ ದೊರಕಲಿದೆ ಎಂದು ಶಾಸಕ ಹರೀಶ್‌ ಪೂಂಜ ಹೇಳಿದರು.

Advertisement

ಕೆಎಸ್ಸಾರ್ಟಿಸಿಯು ರಾಜ್ಯಾದ್ಯಂತ ಆರಂಭಿಸಿರುವ ಪಲ್ಲಕ್ಕಿ ಬಸ್‌ ಸೇವೆಯ ಪ್ರಯುಕ್ತ ಸೋಮವಾರ ಬೆಳ್ತಂಗಡಿ ಬಸ್‌ ನಿಲ್ದಾಣದಲ್ಲಿ ಬೆಳ್ತಂಗಡಿ- ಬೆಂಗಳೂರು ಮಧ್ಯೆ ನೂತನ ಬಸ್‌ ಸೇವೆಗೆ ಚಾಲನೆ ನೀಡಿ ಅವರು ಮಾತನಾಡಿದರು.

ಪುತ್ತೂರು ವಿಭಾಗಕ್ಕೆ 4 ಪಲ್ಲಕ್ಕಿ ಬಸ್‌ಗಳನ್ನು ಒದಗಿಸಲಾಗಿತ್ತು. 2 ಬಸ್‌ಗಳನ್ನು ಬೆಳ್ತಂಗಡಿಗೆ ನೀಡಲಾಗಿದೆ. 1 ಬಸ್‌ ಬೆಳ್ತಂಗಡಿಯಿಂದ ಬೆಂಗಳೂರಿಗೆ ಮತ್ತೂಂದು ಬೆಂಗಳೂರಿನಿಂದ ಬೆಳ್ತಂಗಡಿಗೆ ಸಂಚರಿಸಲಿದೆ. ತಾಲೂಕಿನ ಜನತೆಗೆ ಉತ್ತಮ ರೀತಿಯ ಬಸ್‌ನ ವ್ಯವಸ್ಥೆ ಬೇಕು ಎನ್ನುವ ಬೇಡಿಕೆ ಇಂದು ಈಡೇರಿದೆ ಎಂದರು.

ಸುಸಜ್ಜಿತ ಬಸ್‌ ಸೇವೆ
ಹಸುರು ನಿಶಾನೆ ತೋರಿಸುವ ಮೂಲಕ ಬಸ್‌ ಸಂಚಾರಕ್ಕೆ ಚಾಲನೆ ನೀಡಿದ ವಿಧಾನ ಪರಿಷತ್‌ ಸದಸ್ಯ ಪ್ರತಾಪಸಿಂಹ ನಾಯಕ್‌ ಮಾತನಾಡಿ, ಬದುಕು ಒಂದು ಪಯಣ, ಅದನ್ನು ಸುಂದರವಾಗಿಸಲು ಕೆಎಸ್ಸಾರ್ಟಿಸಿ ಉತ್ತಮವಾದ ವ್ಯವಸ್ಥೆಯನ್ನು ಮಾಡುತ್ತಿದೆ. ಜನತೆಯ ಬೇಡಿಕೆಗೆ ಅನುಗುಣ ವಾಗಿ ಸುಸಜ್ಜಿತ ಬಸ್‌ ಸೇವೆಯಾಗಿ ಇಂದಿನ ಕಾಲದ ಅಗತ್ಯಕ್ಕೆ ತಕ್ಕಂತೆ ಪಲ್ಲಕ್ಕಿ ಬಸ್‌ ಇದೆ ಎಂದು ಹೇಳಿದರು.

ಪುತ್ತೂರು ವಿಭಾಗೀಯ ನಿಯಂತ್ರಣಾಧಿಕಾರಿ ಜಯಕರ ಶೆಟ್ಟಿ, ಘಟಕ ವ್ಯವಸ್ಥಾಪಕ ಉದಯ್‌ ಕುಮಾರ್‌ ಶೆಟ್ಟಿ, ಕಾರ್ಮಿಕ ಕಲ್ಯಾಣಧಿಕಾರಿ ಸೋಮಶೇಖರ್‌, ಭದ್ರತಾ ಮತ್ತು ಜಾಗ್ರತ ಅಧಿಕಾರಿ ಶರತ್‌, ಬಿಜೆಪಿ ಮಂಡಲ ಪ್ರಧಾನ ಕಾರ್ಯದರ್ಶಿ ಗಣೇಶ್‌ ಗೌಡ ನಾವೂರು, ಉಪಾಧ್ಯಕ್ಷ ಸೀತಾರಾಮ ಬೆಳಾಲು, ಪಟ್ಟಣ ಪಂಚಾಯತ್‌ ನಿಕಟಪೂರ್ವ ಉಪಾ ಧ್ಯಕ್ಷ ಜಯಾನಂದ ಗೌಡ, ಸದಸ್ಯ ಶರತ್‌ ಕುಮಾರ್‌ಸೇರಿದಂತೆ ಬಿಜೆಪಿ ಪ್ರಮುಖರು, ಕೆಎಸ್ಸಾರ್ಟಿಸಿ ಸಿಬಂದಿ ಉಪಸ್ಥಿತರಿದ್ದರು.

Advertisement

ಪಲ್ಲಕ್ಕಿ ಬಸ್‌ನಲ್ಲಿ ಬೆಳ್ತಂಗಡಿಯಿಂದ ಬೆಂಗಳೂರಿಗೆ ಸರಕಾರದ ಪ್ರತಿನಿಧಿ ಯಾಗಿ ವಿಧಾನ ಪರಿಷತ್‌ ಸದಸ್ಯ ಪ್ರತಾಪಸಿಂಹ ನಾಯಕ್‌ ಅವರು ಮೊದಲ ಪ್ರಯಾಣ ಬೆಳೆಸಿದರು.

ರಾಜ್ಯದಲ್ಲಿ 50, ಪುತ್ತೂರು ವಿಭಾಗಕ್ಕೆ 4, ಧರ್ಮಸ್ಥಳ ಘಟಕಕ್ಕೆ 2 ಪಲ್ಲಕ್ಕಿ ಬಸ್‌ಗಳು ಸೇವೆ ಆರಂಭಿಸಿದೆ.

ಬೆಳ್ತಂಗಡಿಯಿಂದ ರಾತ್ರಿ 9.45ಕ್ಕೆ, ಬೆಂಗಳೂರಿಂದ ಬೆಳ್ತಂಗಡಿಗೆ ರಾತ್ರಿ 9.30ಕ್ಕೆ ಸಂಚಾರ ಆರಂಭ

Advertisement

Udayavani is now on Telegram. Click here to join our channel and stay updated with the latest news.

Next