Advertisement

ಕೆಎಸ್ಸಾರ್ಟಿಸಿ ಹಳೆ ಬಸ್‌ ಇನ್ನು ಸಂಚಾರಿ ಗ್ರಂಥಾಲಯ

09:37 PM Nov 25, 2020 | mahesh |

ಮಹಾನಗರ: ಕೆಎಸ್ಸಾರ್ಟಿಸಿಯಲ್ಲಿ ಸುಮಾರು ಹತ್ತು ಲಕ್ಷ ಕಿಲೋ ಮೀ. ಸಂಚರಿಸಿದ ಹಳೆಯ ಬಸ್‌ಗಳನ್ನು ಉಪಯೋಗಿಸಿಕೊಂಡು ಸಂಚಾರಿ ಗ್ರಂಥಾಲಯ ನಿರ್ಮಾಣ ಮಾಡಲು ನಿಗಮ ಚಿಂತಿಸುತ್ತಿದೆ.

Advertisement

ಹಳೆಯ ಬಸ್‌ಗಳನ್ನು ಸದುಪಯೋಗಿ ಸುವ ಉದ್ದೇಶದಿಂದ ಈ ಯೋಜನೆ ರೂಪಿಸಲಾಗುತ್ತಿದ್ದು, ಬಸ್‌ ಲೈಬ್ರೆರಿ, ಮೊಬೈಲ್‌ ಕ್ಲಿನಿಕ್‌ ತೆರೆಯಲು ಸಹಾಯ ನೀಡುವಂತೆ ನಿಗಮದಿಂದ ಈಗಾಗಲೇ ಕೆಲವೊಂದು ಸ್ವಯಂಸೇವಾ ಸಂಘ ಸಂಸ್ಥೆಗಳಿಗೆ ಪ್ರಸ್ತಾವ ಸಲ್ಲಿಸಲಾಗಿದೆ. ಮುಂದಿನ ದಿನಗಳಲ್ಲಿ ಧನಾತ್ಮಕ ಪ್ರತಿಕ್ರಿಯೆ ಬರುವ ವಿಶ್ವಾಸ ನಿಗಮಕ್ಕಿದ್ದು, ಈ ಯೋಜನೆಯನ್ನು ಪ್ರಾಯೋಗಿಕವಾಗಿ ಮಂಗಳೂರು ಸಹಿತ ಕೆಲವೊಂದು ವಿಭಾಗಗಳಲ್ಲಿ ಪರಿಚಯಿಸಲು ನಿರ್ಧರಿಸಲಾಗಿದೆ.

ಗ್ರಾಮೀಣ ಓದುಗರಿಗೆ ಅನುಕೂಲದ ಉದ್ದೇಶ
ಹೆಚ್ಚಾಗಿ ಗ್ರಾಮೀಣ ಭಾಗದಲ್ಲಿ ಗ್ರಂಥಾಲಯ ವ್ಯವಸ್ಥೆ ಇರುವುದು ಕಡಿಮೆ. ಹೀಗಿರುವಾಗ ಒಂದು ಕಡೆಯಿಂದ ಮತ್ತೂಂದೆಡೆ ಸಂಚರಿಸುವ ಬಸ್‌ಗಳು ಗ್ರಂಥಾಲಯವಾಗಿ ಪರಿವರ್ತನೆಯಾದರೆ ಗ್ರಾಮೀಣ ಭಾಗದ ಓದುಗರಿಗೆ ಇದರಿಂದ ಅನುಕೂಲವಾಗಲಿದೆ. ಈ ಯೋಜನೆ ಯನ್ನು ಯಾವ ರೀತಿಯಲ್ಲಿ ಅನುಷ್ಠಾನಕ್ಕೆ ತರಬಹುದು, ಸಾಧ್ಯಾ-ಸಾಧ್ಯತೆಗಳ ಬಗ್ಗೆ ಮುಂದಿನ ದಿನಗಳಲ್ಲಿ ಯೋಜನೆ ರೂಪಿಸಲಾಗುತ್ತದೆ.

ಕೇರಳ ಮಾದರಿ ವ್ಯವಸ್ಥೆ
ಕೇರಳ ಕೆಎಸ್ಸಾರ್ಟಿಸಿ ಮಾದರಿ ವ್ಯವಸ್ಥೆಯನ್ನೂ ಜಾರಿಗೆ ತರುವ ಬಗ್ಗೆ ಯೋಚಿಸಲಾಗುತ್ತಿದೆ. ಕೇರಳ ಕೆಎಸ್‌ಆರ್‌ಟಿಸಿ ನಷ್ಟವನ್ನು ಸರಿದೂಗಿಸುವ ದೃಷ್ಟಿಯಿಂದ ಹೊಸ ಹೆಜ್ಜೆಗಳನ್ನು ಇಡುತ್ತಿದೆ. ಅದರಲ್ಲೂ ಮುಖ್ಯವಾಗಿ ಕೇರಳದಲ್ಲಿ ಕೆಲವೊಂದು ಬಸ್‌ಗಳನ್ನು ಮೊಬೈಲ್‌ ಕ್ಯಾಂಟೀನ್‌ ಆಗಿ ಪರಿವರ್ತನೆ ಮಾಡಲಾಗಿದೆ. ಇದರಿಂದ ಉದ್ಯೋಗದ ಜತೆ, ರಿಯಾಯಿತಿ ದರದಲ್ಲಿ ತಿಂಡಿಗಳು ಸಿಗಲಿವೆ. ಇತ್ತ ರಾಜ್ಯದಲ್ಲಿಯೂ ಈ ವ್ಯವಸ್ಥೆಯನ್ನು ಬೇಡಿಕೆಗನುಸಾರವಾಗಿ ಅನುಷ್ಠಾನಕ್ಕೆ ತರಲು ನಿರ್ಧರಿಸಲಾಗಿದೆ.

ಡಬಲ್‌ ಡೆಕ್ಕರ್‌ ಬಸ್‌ಗೆ ಮರುಜೀವ
ಅನೇಕ ವರ್ಷಗಳ ಹಿಂದೆ ರಾಜ್ಯದಲ್ಲಿ ಓಡಾಡುತ್ತಿದ್ದ ಡಬಲ್‌ ಡೆಕ್ಕರ್‌ ಬಸ್‌ಗಳಿಗೆ ಮತ್ತಷ್ಟು ಜನಪ್ರಿಯತೆ ನೀಡಲು ನಿಗಮ ಮುಂದಾಗಿದೆ. ಕರ್ನಾಟಕ ರಾಜ್ಯ ಪ್ರವಾಸೋದ್ಯಮ ಅಭಿವೃದ್ಧಿ ನಿಗಮ (ಕೆಎಸ್‌ಟಿಡಿಸಿ) ಮತ್ತು ಕೆಎಸ್ಸಾರ್ಟಿಸಿ ಜತೆಗೂಡಿ ಡಬಲ್‌ ಡೆಕ್ಕರ್‌ ಬಸ್‌ ಸೇವೆಯನ್ನು ಮತ್ತಷ್ಟು ಪ್ರವಾಸಿ ತಾಣಗಳಿಗೆ ಪರಿಚಯಿಸಲು ಮುಂದಾಗಿದೆ. ಈಗಾಗಲೇ ಮೈಸೂರಿನಲ್ಲಿ ಪ್ರಾಯೋಗಿಕವಾಗಿ ಈ ಬಸ್‌ ಸಂಚರಿಸುತ್ತಿದ್ದು, ಮುಂದಿನ ದಿನಗಳಲ್ಲಿ ಹಂಪಿ, ಪಟ್ಟದಕಲ್ಲು, ಬಾದಾಮಿ ಸಹಿತ ಇನ್ನಿತರ ಭಾಗಗಳಲ್ಲಿ ಈ ಬಸ್‌ ಪರಿಚಯಕ್ಕೆ ಚಿಂತನೆ ನಡೆಯುತ್ತಿದೆ ಎನ್ನುತ್ತಾರೆ ಕೆಎಸ್ಸಾರ್ಟಿಸಿಯ ಅಧಿಕಾರಿಗಳು.

Advertisement

ಜನಪರ ಕೆಲಸಗಳಿಗೆ ಬಳಕೆ
ಸುಮಾರು 10 ಲಕ್ಷ ಕಿ.ಮೀ. ಕ್ರಮಿಸಿದ ಗುಣಮಟ್ಟ ಉತ್ತಮವಾಗಿರುವ ಕೆಎಸ್ಸಾರ್ಟಿಸಿ ಬಸ್‌ಗಳನ್ನು ನಿಷ್ಕ್ರಿಯಗೊಳಿಸುವ ಬದಲು ಅನೇಕ ಜನಪರ ಕೆಲಸಗಳಿಗೆ ಉಪಯೋಗ ಮಾಡಲಾಗುತ್ತಿದೆ. ಮುಂದಿನ ದಿನಗಳಲ್ಲಿ ಸಂಚಾರಿ ಗ್ರಂಥಾಲಯವಾಗಿ ಪರಿವರ್ತನೆ ಮಾಡುವ ಉದ್ದೇಶ ನಿಗಮಕ್ಕಿದೆ. ಈ ಕುರಿತು ಕೆಲವೊಂದು ಸ್ವಯಂಸೇವಾ ಸಂಘಟನೆಗಳಿಗೆ ಪ್ರಸ್ತಾವನೆ ಸಲ್ಲಿಸಲಾಗಿದೆ.
-ಬಸವರಾಜು, ಕೆಎಸ್ಸಾರ್ಟಿಸಿ ಚೀಫ್‌ ಮೆಕ್ಯಾನಿಕಲ್‌ ಎಂಜಿನಿಯರ್‌, ಕೇಂದ್ರ ಕಚೇರಿ ಬೆಂಗಳೂರು

Advertisement

Udayavani is now on Telegram. Click here to join our channel and stay updated with the latest news.

Next