Advertisement
ರಾಜ್ಯದ ಸಂಘಟಿತ ಮತ್ತು ಅಸಂಘಟಿತ ಕಾರ್ಮಿಕರಿಗೆ ರಿಯಾಯ್ತಿ ಪಾಸು ನೀಡಲು ಕೆಎಸ್‌ಆರ್‌ಟಿಸಿ ಮುಂದಾಗಿದೆ. ಈ ಸಂಬಂಧ ಕಾರ್ಮಿಕ ಇಲಾಖೆಗೆ ಪ್ರಸ್ತಾವನೆ ಸಲ್ಲಿಸಿದ್ದು, ಹಾಗೊಂದು ವೇಳೆ ಇದಕ್ಕೆ ಅನುಮತಿ ದೊರೆತರೆ ಬಿಎಂಟಿಸಿಯಂತೆಯೇ ಕೆಎಸ್‌ಆರ್‌ಟಿಸಿ ವ್ಯಾಪ್ತಿಯಲ್ಲೂ ಕಾರ್ಮಿಕರಿಗೆ ಸೌಲಭ್ಯ ದೊರೆಯಲಿದೆ. ಜತೆಗೆ ನಿಗಮಕ್ಕೂ ಹೊಸ ಪ್ರಯಾಣಿಕ ವರ್ಗ ದೊರೆಯಲಿದೆ.
Related Articles
Advertisement
ಆದರೆ, ಇದು ಕೂಡ ಸರ್ಕಾರದಿಂದಲೇ ಬರಬೇಕು. ಅಲ್ಲದೆ, ಸಂಘಟಿತ ವಲಯದ ಲೆಕ್ಕ ಇದೆ; ಅಸಂಘಟಿತ ಕಾರ್ಮಿಕರ ಲೆಕ್ಕವಿಲ್ಲ. ಅಂಥವರನ್ನು ಪತ್ತೆಹಚ್ಚಿ ಗುರುತಿನಚೀಟಿ ನೀಡಬೇಕಾಗುತ್ತದೆ. ಇದೆಲ್ಲವೂ ಅಂದುಕೊಂಡಂತಾದರೆ, ತಕ್ಕಮಟ್ಟಿಗೆ ನಿಗಮಕ್ಕೆ ನೆರವಾಗಲಿದೆ ಎಂದು ಕೆಎಸ್‌ಆರ್‌ಟಿಸಿಯ ಹೆಸರು ಹೇಳಲಿಚ್ಛಿಸದ ಅಧಿಕಾರಿಯೊಬ್ಬರು “ಉದಯವಾಣಿ’ಗೆ ಮಾಹಿತಿ ನೀಡಿದರು.
ವಿದ್ಯಾರ್ಥಿಗಳ ಬಸ್ ಪಾಸ್ ದರ ಏರಿಕೆ ಆಗಿದ್ದರೆ, ಸುಮಾರು 15ರಿಂದ 20 ಕೋಟಿ ರೂ. ಆದಾಯ ಬರುತ್ತಿತ್ತು. ಹೆಚ್ಚು-ಕಡಿಮೆ ಇಷ್ಟೇ ಆದಾಯವನ್ನು ನಿಗಮವು ಕಾರ್ಮಿಕ ವಲಯದಿಂದ ನಿರೀಕ್ಷಿಸುತ್ತಿದೆ. ಆದರೆ, ಬಿಎಂಟಿಸಿಯಲ್ಲಿ ಈಗಾಗಲೇ ಕಾರ್ಮಿಕರಿಗೆ ರಿಯಾಯ್ತಿ ಪಾಸು ವಿತರಣೆ ಯೋಜನೆ ಜಾರಿಯಲ್ಲಿದೆ. ಅಲ್ಲಿ ನಿರೀಕ್ಷಿತ ಮಟ್ಟದಲ್ಲಿ ಪ್ರಯಾಣಿಕರಿಂದ ಸ್ಪಂದನೆ ದೊರೆಯುತ್ತಿಲ್ಲ.
ಹೀಗಿರುವಾಗ, ಕೆಎಸ್‌ಆರ್‌ಟಿಸಿಯಲ್ಲಿ ಇದು ಫಲ ನೀಡಲಿದೆಯೇ ಎಂದೂ ಅಧಿಕಾರಿಗಳು ಅನುಮಾನ ವ್ಯಕ್ತಪಡಿಸುತ್ತಾರೆ. ಕಾರ್ಮಿಕ ಇಲಾಖೆಗೆ ಸಲ್ಲಿಸಿದ ಪ್ರಸ್ತಾವನೆ ಬಗ್ಗೆ ನಿಗಮದ ವ್ಯವಸ್ಥಾಪಕ ನಿರ್ದೇಶಕ ಶಿವಯೋಗಿ ಕಳಸದ ಅವರನ್ನು ಸಂಪರ್ಕಿಸಿದಾಗ, ಕರೆ ಸ್ವೀಕರಿಸಲಿಲ್ಲ. ಮೊಬೈಲ್ ಸಂದೇಶಕ್ಕೂ ಯಾವುದೇ ಪ್ರತಿಕ್ರಿಯೆ ನೀಡಲಿಲ್ಲ.
ಸರ್ಕಾರಿ ಸೌಲಭ್ಯ ಪಡೆದವರು 3.82 ಲಕ್ಷ: ವಿವಿಧ ಕಾರ್ಮಿಕ ಸಂಘಟನೆಗಳ ಪ್ರಕಾರ ರಾಜ್ಯದಲ್ಲಿ 60 ಲಕ್ಷ ಅಸಂಘಟಿತ ಕಾರ್ಮಿಕರಿದ್ದು, ಈ ಪೈಕಿ ರಾಜ್ಯ ಕಟ್ಟಡ ನಿರ್ಮಾಣ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಮಂಡಳಿಯಲ್ಲಿ ಹೆಸರು ನೋಂದಾಯಿಸಿಕೊಂಡವರ ಸಂಖ್ಯೆ 20.74 ಲಕ್ಷ. ಇದರಲ್ಲಿ ಇತ್ತೀಚೆಗೆ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆ ಅಡಿ ಕೆಲಸ ಮಾಡುವವರೂ ಇದ್ದಾರೆ. ಇನ್ನು ಸರ್ಕಾರಿ ಸೌಲಭ್ಯ ಪಡೆದವರು 3.82 ಲಕ್ಷ.
ಕತ್ತರಿ ಹಾಕಲು ಚಿಂತನೆ: ಕಾರ್ಮಿಕ ಇಲಾಖೆಯಿಂದ ಪ್ರಸ್ತಾವನೆ ಜತೆಗೆ ನಷ್ಟಕ್ಕೆ ಕಾರಣವಾಗಿರುವ ಕೆಲವು ಅನುಸೂಚಿಗಳಿಗೆ ಕತ್ತರಿ ಹಾಕಲಿಕ್ಕೂ ಕೆಎಸ್‌ಆರ್‌ಟಿಸಿ ಉದ್ದೇಶಿಸಿದೆ. ನಿಗಮದ ಬಸ್‌ಗಳು ಪ್ರತಿ ಕಿ.ಮೀ. ಸಂಚಾರಕ್ಕೆ ಸರಾಸರಿ 32 ರೂ. ಖರ್ಚಾಗುತ್ತದೆ. ಆದರೆ, ಕೆಲವು ಮಾರ್ಗಗಳಲ್ಲಿ ಪ್ರತಿ ಕಿ.ಮೀ. ಆದಾಯವು 25 ರೂ.ಗಳಿಗಿಂತ ಕಡಿಮೆ ಇದೆ. ಅಂತವುಗಳನ್ನು ಗುರುತಿಸಿ ಅದರಲ್ಲೂ ವೇಗದೂತಗಳಿಗೆ ಸಾಧ್ಯವಾದಷ್ಟು ಕತ್ತರಿ ಹಾಕಲು ಚಿಂತನೆ ನಡೆದಿದೆ. ಈ ಸಂಬಂಧದ ಪಟ್ಟಿಯನ್ನೂ ಸಿದ್ಧಪಡಿಸಲಾಗುತ್ತಿದೆ ಎಂದು ನಿಗಮದ ಮೂಲಗಳು ತಿಳಿಸಿವೆ.
ಈಗಷ್ಟೇ ಇಲಾಖೆಯ ಅಧಿಕಾರ ಸ್ವೀಕರಿಸಿದ್ದೇನೆ. ಪ್ರಸ್ತಾವನೆ ಬಗ್ಗೆ ನನಗೆ ಇನ್ನೂ ಗಮನಕ್ಕೆ ಬಂದಿಲ್ಲ. ಹಾಗೊಂದು ವೇಳೆ ಪ್ರಸ್ತಾವನೆ ಸಲ್ಲಿಕೆ ಆಗಿದ್ದರೂ, ಒಂದೆರಡು ದಿನಗಳಲ್ಲಿ ಪರಿಶೀಲಿಸಿ ನಂತರ ಕ್ರಮ ಕೈಗೊಳ್ಳಲಾಗುವುದು. -ಮಂಜುನಾಥ್ ನಾಯಕ್, ಕಾರ್ಯದರ್ಶಿಗಳು, ಕಾರ್ಮಿಕ ಕಲ್ಯಾಣ ಇಲಾಖೆ * ವಿಜಯಕುಮಾರ್ ಚಂದರಗಿ