Advertisement

ಹಬ್ಬದ ನೆಪದಲ್ಲಿ  ಖಾಸಗಿ ಬಸ್‌ಗಳ ಪ್ರಯಾಣ ದರ ಮೂರು ಪಟ್ಟು ಜಾಸ್ತಿ!

09:56 AM Nov 08, 2018 | Team Udayavani |

ಮಹಾನಗರ: ದೀಪಾವಳಿ ಸಹಿತ ಹಬ್ಬಗಳ ಸಮಯದಲ್ಲಿ ದೂರದ ಊರುಗಳಿಗೆ ಬಂದು ಹೋಗುವ ಪ್ರಯಾಣಿಕರಿಂದ ಸಾಮಾನ್ಯ ದರಕ್ಕಿಂತ ಮೂರ್‍ನಾಲ್ಕು ಪಟ್ಟು ಅಧಿಕ ಹಣ ಸುಲಿಗೆ ಮಾಡುತ್ತಿರುವ ಕೆಲವು ಖಾಸಗಿ ಬಸ್‌ ಮಾಲಕರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಲ್ಲಿ ಅಸಹಾಯಕವಾಗಿರುವ ಸರಕಾರವು ಇದೀಗ ಅದಕ್ಕೆ ಪರ್ಯಾಯವಾಗಿ ಹೆಚ್ಚಿನ ಸಂಖ್ಯೆಯಲ್ಲಿ ಕೆಎಸ್‌ಆರ್‌ಟಿಸಿ ಬಸ್‌ ಗಳನ್ನು ರಸ್ತೆಗಿಳಿಸುವ ಮೂಲಕ ಸೆಡ್ಡು ಹೊಡೆಯಲು ತೀರ್ಮಾನಿಸಿದೆ.

Advertisement

ದೀಪಾವಳಿ ಹಬ್ಬದ ಹಿನ್ನೆಲೆಯಲ್ಲಿ ಯಾವೆಲ್ಲ ಮಾರ್ಗಗಳಲ್ಲಿ ಪ್ರಯಾಣಿಕರ ಬೇಡಿಕೆಯನ್ನು ನೆಪವಾಗಿಸಿಕೊಂಡು ಖಾಸಗಿ ಬಸ್‌ ಮಾಲಕರು ದುಪ್ಪಟ್ಟು ದರ ವಸೂಲಿ ಮಾಡಲು ಹೊರಟಿದೆಯೋ ಅಂಥಹ ಕಡೆಗಳಲ್ಲಿ ಹೆಚ್ಚುವರಿ ಬಸ್‌ ಸೇವೆ ಒದಗಿಸುವ ಮೂಲಕ ತೀವ್ರ ಪೈಪೋಟಿ ನೀಡಲು ರಾಜ್ಯ ರಸ್ತೆ ಸಾರಿಗೆ ನಿಗಮ ನಿರ್ಧರಿಸಿದೆ. ಈ ವಿಚಾರವನ್ನು ಖುದ್ದು ಸಾರಿಗೆ ಸಚಿವ ಡಿ.ಸಿ. ತಮ್ಮಯ್ಯ ಅವರು ‘ಉದಯವಾಣಿ’ಗೆ ತಿಳಿಸಿದ್ದಾರೆ.

ಕೆಲವು ಖಾಸಗಿ ಬಸ್‌ಗಳಲ್ಲಿ ಮುಂಗಡ ಟಿಕೆಟ್‌ ದರವನ್ನು ಮೂರು ಪಟ್ಟು ಹೆಚ್ಚಿಸಿದ್ದು, ಇದರಿಂದಾಗಿ ಪ್ರಯಾಣಿಕರು ಹಬ್ಬದ ಸಮಯದಲ್ಲಿ ಊರುಗಳಿಂದ ಹೋಗುವುದಕ್ಕೆ ಹೆಚ್ಚಿನ ದುಡ್ಡು ಖರ್ಚು ಮಾಡಬೇಕಾಗಿದೆ. ಸಾರಿಗೆ ಇಲಾಖೆ ಇದನ್ನು ಗಂಭೀರವಾಗಿ ಪರಿಗಣಿಸಿದ್ದು, ದ.ಕ., ಉಡುಪಿ ಜಿಲ್ಲೆಗಳಿಂದ ನೂರಕ್ಕೂ ಹೆಚ್ಚಿನ ಸರಕಾರಿ ಬಸ್‌ಗಳನ್ನು ಓಡಿಸಲು ತೀರ್ಮಾನಿಸಿದೆ. ಅದರಲ್ಲಿಯೂ ಲಕ್ಸುರಿ ಬಸ್‌ಗಳಿಗೆ ಆದ್ಯತೆ ನೀಡಲು ತೀರ್ಮಾನಿಸಲಾಗಿದೆ.

ಮಂಗಳೂರು ಕೆಎಸ್‌ಆರ್‌ಟಿಸಿ ವಿಭಾಗದಿಂದ (ಮಂಗಳೂರಿನಲ್ಲಿ-3, ಕುಂದಾಪುರ, ಉಡುಪಿ) ಪ್ರತಿ ದಿನ 350ಕ್ಕೂ ಹೆಚ್ಚು ಬಸ್‌ಗಳು ಸಂಚರಿಸುತ್ತವೆ. ಅದರಂತೆಯೇ ಪುತ್ತೂರು ವಿಭಾಗದಿಂದ (ಪುತ್ತೂರು, ಬಿ.ಸಿ. ರೋಡು, ಧರ್ಮಸ್ಥಳ, ಮಡಿಕೇರಿ, ಸುಳ್ಯ) ಸುಮಾರು 560 ಬಸ್‌ಗಳು ಸಂಚರಿಸುತ್ತದೆ, ಇದೀಗ ದೀಪಾವಳಿ ಹಬ್ಬದ ಸಮಯದಲ್ಲಿ ಎರಡೂ ವಿಭಾಗದಿಂದ ಸುಮಾರು 100ಕ್ಕೂ ಹೆಚ್ಚು ಹೆಚ್ಚುವರಿ ಬಸ್‌ಗಳನ್ನು ಕಾರ್ಯಾಚರಣೆ ಮಾಡಲು ಕೆಎಸ್‌ಆರ್‌ ಟಿಸಿ ತೀರ್ಮಾನಿಸಿದೆ. ಪ್ರಯಾಣಿಕರ ಒತ್ತಡಕ್ಕೆ ಅನುಗುಣವಾಗಿ ಮತ್ತಷ್ಟು ಹೆಚ್ಚುವರಿ ಬಸ್‌ಗಳು ಸಂಚರಿಸಲಿದೆ.

ಖಾಸಗಿ ಬಸ್‌ ದರ 3 ಪಟ್ಟು ಹೆಚ್ಚು
ಕರಾವಳಿ ಪ್ರದೇಶದ ಹಲವು ಮಂದಿ ಬೆಂಗಳೂರಿನಲ್ಲಿ ವಾಸವಿದ್ದು, ಹಬ್ಬಕಳೆದು ಹಿಂದಿರುಗುವ ವೇಳೆ ಕೆಲವು ಖಾಸಗಿ ಬಸ್‌ಗಳಲ್ಲಿ ಸಾಮಾನ್ಯ ದರಕ್ಕಿಂತ ಮೂರು ಪಟ್ಟು ಹೆಚ್ಚು ಹಣ ನೀಡಬೇಕಿದೆ. ಖಾಸಗಿ ಬಸ್‌ಗಳಲ್ಲಿ ಮಂಗಳೂರಿಂದ ಬೆಂಗಳೂರಿಗೆ ಸಾಮಾನ್ಯ ದಿನಗಳಲ್ಲಿ ಸುಮಾರು 750 ರೂ. ಇದ್ದು, ನ. 11ರಂದು ಕೆಲವು ಖಾಸಗಿ ಬಸ್‌ಗಳು 2,400 ರೂ. ದರ ವಿಧಿಸುತ್ತಿವೆ. ರಾಜ್ಯ ದಲ್ಲಿ ಈಗಾಗಲೇ ದಿನನಿತ್ಯದ ರೂಟ್‌ಗಳಲ್ಲಿ ಸಂಚರಿಸುವಂತಹ ಕೆಎಸ್‌ಆರ್‌ಟಿಸಿ ಬಸ್‌ಗಳಿಗೆ ಹಬ್ಬದ ಸಮಯದಲ್ಲಿ ಯಾವುದೇ ರೀತಿಯ ಹೆಚ್ಚುವರಿ ದರ ನಿಗದಿಪಡಿಸಿಲ್ಲ. ಆದರೆ, ಹೆಚ್ಚುವರಿಯಾಗಿ ಕಾರ್ಯಾಚರಿಸುತ್ತಿರುವ ಬಸ್‌ಗಳಿಗೆ ಮಾತ್ರ ಶೇ. 5ರಿಂದ 10ರಷ್ಟು ಹೆಚ್ಚುವರಿ ದರ ವಿಧಿಸಲಾಗುತ್ತದೆ.

Advertisement

ಸರಕಾರವೇ ದರ ನಿಗದಿ ಮಾಡಲಿ
ಕೆನರಾ ಬಸ್‌ ಮಾಲಕರ ಸಂಘದ ವಕ್ತಾರ ಸದಾನಂದ ಚಾತ್ರ ಅವರು ‘ಉದಯವಾಣಿ’ಗೆ ಪ್ರತಿಕ್ರಿಯಿಸಿ, ಕೆಲವೊಂದು ಖಾಸಗಿ ಬಸ್‌ಗಳಲ್ಲಿ ಹಬ್ಬದ ಸಮಯದಲ್ಲಿ ಹೆಚ್ಚಿನ ದರ ವಿಧಿಸಲಾಗುತ್ತಿದೆ. ಒಪ್ಪಂದದ ಮೇರೆಗೆ ಓಡಾಡುವ ಖಾಸಗಿ ಬಸ್‌ ಗಳಲ್ಲಿ ನಿರ್ದಿಷ್ಟ ದರ ವಿಧಿಸಲು ರಾಜ್ಯ ಸರಕಾರ ಮುಂದಾಗಬೇಕೇ ವಿನಾ ಬಸ್‌ ಮಾಲಕರ ಸಂಘವು ನಿರ್ದಿಷ್ಟ ದರ ನಿಗದಿಪಡಿಸಲು ಸಾಧ್ಯವಾಗುವುದಿಲ್ಲ. ಆದರೆ ನಮ್ಮ ಅಸೋಸಿಯೇಶನ್‌ನಲ್ಲಿರುವ ಖಾಸಗಿ ಬಸ್‌ ಮಾಲಕರು ಹಬ್ಬದ ಸಮಯದಲ್ಲಿ ತಮ್ಮ ಬಸ್‌ ದರವನ್ನು ಶೇ. 20ರಷ್ಟು ಮಾತ್ರ ಹೆಚ್ಚಿಸಿದ್ದಾರೆ. ಹೊರತುಪಡಿಸಿ ಕೆಲವೊಂದು ಬಸ್‌ ಮಾಲಕರು ಮೂರು ಪಟ್ಟು ದರ ವಿಧಿಸುತ್ತಿದ್ದಾರೆ ಎನ್ನುತ್ತಾರೆ.

ನ. 11ಕ್ಕೆ ಹೆಚ್ಚಿನ ಡಿಮ್ಯಾಂಡ್‌
ದೂರದ ಪ್ರದೇಶಗಳಿಂದ ಹಬ್ಬಕ್ಕೆಂದು ಊರುಗಳಿಗೆ ಬರುವ ಮಂದಿ ಈಗಾಗಲೇ ಬಸ್‌ ಸೀಟುಗಳನ್ನು ಮುಂಗಡ ಕಾಯ್ದಿರಿಸಿದ್ದು, ನ. 11ರಂದು ಮಂಗಳೂರು, ಪುತ್ತೂರು ವಿಭಾಗಗಳಲ್ಲಿ ಹೆಚ್ಚಿನ ರಶ್‌ ಇದೆ. ಏಕೆಂದರೆ ಹಬ್ಬಗಳನ್ನು ಮುಗಿಸಿ ಅನೇಕ ಮಂದಿ ನ. 11ರಂದು ಪ್ರಯಾಣಿಸುತ್ತಿದ್ದು, ಸ್ವಲ್ಪ ಮಟ್ಟಿನ ಒತ್ತಡವಿದೆ ಎನ್ನುತ್ತಾರೆ ಕೆಎಸ್‌ಆರ್‌ಟಿಸಿ ಅಧಿಕಾರಿಗಳು.

ಹೆಚ್ಚುವರಿ ಬಸ್‌
ಖಾಸಗಿ ಬಸ್‌ಗಳಲ್ಲಿ ಹಬ್ಬದ ಸಮಯ ಹೆಚ್ಚಿನ ದರ ವಿಧಿಸಿದ್ದು, ಇದಕ್ಕೆ ಸಾರಿಗೆ ಇಲಾಖೆಯಿಂದ ಕಡಿವಾಣ ಹಾಕಲು ಸಾಧ್ಯವಿಲ್ಲ. ಆದರೆ, ಈ ಬಾರಿ ಜಿಲ್ಲೆಯ ಅನೇಕ ಕಡೆಗಳಿಂದ ಹೆಚ್ಚುವರಿ ಬಸ್‌ಗಳನ್ನು ಕಾರ್ಯಾಚರಣೆ ಮಾಡುತ್ತಿದ್ದೇವೆ. ಅದರಲ್ಲಿಯೂ ಲಕ್ಸುರಿ ಬಸ್‌ಗಳಿಗೆ ಆದ್ಯತೆ ನೀಡುತ್ತಿದ್ದೇವೆ. ಹೆಚ್ಚುವರಿ ಬಸ್‌ಗಳಿಗೆ ಕೇವಲ ಶೇ.5ರಿಂದ ಶೇ.10ರಷ್ಟು ಮಾತ್ರ ಏರಿಕೆ ಮಾಡಿದ್ದೇವೆ.
– ಡಿ.ಸಿ. ತಮ್ಮಣ್ಣ,
ರಾಜ್ಯ ಸಾರಿಗೆ ಸಚಿವ 

ನವೀನ್‌ ಭಟ್‌ ಇಳಂತಿಲ

Advertisement

Udayavani is now on Telegram. Click here to join our channel and stay updated with the latest news.

Next