ಉಡುಪಿ: ಪ್ರಯಾಣಿಕರ ಅನುಕೂಲಕ್ಕಾಗಿ ಬನ್ನಂಜೆಯಲ್ಲಿ ನೂತನವಾಗಿ ನಿರ್ಮಿಸಲಾಗಿರುವ ಡಾ| ವಿ.ಎಸ್. ಆಚಾರ್ಯ ಕೆಎಸ್ಸಾರ್ಟಿಸಿ ಬಸ್ ನಿಲ್ದಾಣದಿಂದ ಉಡುಪಿ ನಗರ, ಜಿಲ್ಲೆ, ಅಂತರ್ ಜಿಲ್ಲೆ ಮತ್ತು ಅಂತಾರಾಜ್ಯ ವ್ಯಾಪ್ತಿಯ ಸ್ಥಳಗಳಿಗೆ ನಿಗಮದ ಎಲ್ಲ ಸಾರಿಗೆಗಳ ಕಾರ್ಯಾಚರಣೆಯನ್ನು ಮಾಡಲಾಗುತ್ತಿದೆ.
ಈಗಾಗಲೇ ಅಂಗಡಿ-ಮುಂಗಟ್ಟುಗಳಿಗೆ ಟೆಂಡರ್ ಪ್ರಕ್ರಿಯೆ ಮುಗಿದಿದ್ದು, 8 ಅಂಗಡಿಗಳು ಕಾರ್ಯಾರಂಭ ಮಾಡಲಿವೆ. ಹೊಟೇಲ್, ಸಿನೇಮಾ ಮಲ್ಟಿಸ್ಕ್ರೀನ್ ಚಿತ್ರಮಂದಿರ ಆರಂಭಕ್ಕೆ ಇನ್ನಷ್ಟೇ ಟೆಂಡರ್ ತೆರೆಯಬೇಕಿದೆ. ಮುಂದಿನ ವಾರ ಇದಕ್ಕೆ ಟೆಂಡರ್ ಕರೆಯುವ ಸಾಧ್ಯತೆಗಳಿವೆ.
ಸುಸಜ್ಜಿತ ತಂಗುದಾಣ 2.50 ಎಕರೆ ಪ್ರದೇಶದಲ್ಲಿ ಸುಮಾರು 30 ಕೋ. ರೂ. ವೆಚ್ಚದಲ್ಲಿ ಈ ಕಟ್ಟಡ ನಿರ್ಮಾಣಗೊಂಡಿದೆ. ಅಂಗಡಿಗಳು, ಶೌಚಾಲಯ, ಪುರುಷರು ಮತ್ತು ಮಹಿಳೆಯರಿಗೆ ಪ್ರತ್ಯೇಕ ವಿಶ್ರಾಂತಿ ಕೊಠಡಿಗಳು, ನೋಂದಣಿ ಕೇಂದ್ರಗಳು ಇರಲಿವೆ. ಕಟ್ಟಡದ ಒಳಗೆ ಎಸ್ಕಲೇಟರ್ ಹಾಗೂ ಲಿಫ್ಟ್ ವ್ಯವಸ್ಥೆ, ಮೆಟ್ಟಿಲು ಇರಲಿದೆ. ಕರಾವಳಿಯಲ್ಲಿ ಎಸ್ಕಲೇಟರ್ ವ್ಯವಸ್ಥೆ ಹೊಂದಿರುವ ಮೊದಲ ಬಸ್ ತಂಗುದಾಣ ಇದಾಗಿದೆ. ಮಹಿಳಾ ಪ್ರಯಾಣಿಕರಿಗಾಗಿ ಪ್ರತ್ಯೇಕ ವಿಶ್ರಾಂತಿ ಕೊಠಡಿ ಹಾಗೂ ಬೇಬಿ ಕೇರ್ ವ್ಯವಸ್ಥೆ ಕಲ್ಪಿಸಲಾಗಿದೆ. ವಿಐಪಿ ಲಾಂಚ್, ರಿಸರ್ವೇಶನ್ ಕೌಂಟರ್, ಪಿಸಿ ಕೊಠಡಿಗಳನ್ನೂ ಮಾಡಲಾಗಿದೆ.
ಸಿಬಂದಿ ನೇಮಕ ಶೀಘ್ರ ನೂತನ ಬಸ್ ತಂಗುದಾಣದಲ್ಲಿ ಸಿಬಂದಿ ಕೊರತೆ ಇದ್ದು, ಶೀಘ್ರದಲ್ಲಿ ನೇಮಕಾತಿ ಆಗಲಿದೆ ಎನ್ನುತ್ತಾರೆ ಅಧಿಕಾರಿಗಳು. ನಿರ್ವಹಣೆ ಹಾಗೂ ಭದ್ರತೆಗೆ ಹೋಂ ಗಾರ್ಡ್‌ಗಳನ್ನು ಕೂಡ ನಿಯೋಜಿಸಲು ಉದ್ದೇಶಿಸಲಾಗಿದೆ. ಈಗಾಗಲೇ ನಗರಸಭೆ ಕಟ್ಟಡದಲ್ಲಿರುವ ಕೆಎಸ್ಸಾರ್ಟಿಸಿ ಬಸ್ ತಂಗುದಾಣವೂ ಕಾರ್ಯಾರಂಭ ಮಾಡುತ್ತಿದೆ. ಇದನ್ನು ತೆಗೆದ ಬಳಿಕ ಇಲ್ಲಿನ ಸಿಬಂದಿ ಬನ್ನಂಜೆಯಲ್ಲಿ ಕರ್ತವ್ಯ ನಿರ್ವಹಿಸಲಿದ್ದಾರೆ. ಆದರೆ ಈ ಪ್ರಕ್ರಿಯೆಗೆ ಮತ್ತಷ್ಟು ಸಮಯಾವಕಾಶ ತಗಲಲಿದೆ ಎನ್ನುತ್ತಾರೆ ಅಧಿಕಾರಿಗಳು.
ಡಿವೈಡರ್ ಸಮಸ್ಯೆ: ಹೆದ್ದಾರಿ ಇಲಾಖೆಗೆ ಪತ್ರ
ನೂತನ ಬಸ್ ತಂಗುದಾಣಕ್ಕೆ ಈಗ ಎಲ್ಲ ಬಸ್‌ಗಳೂ ಬಂದು ನೋಂದಣಿ ಮಾಡಿಕೊಂಡು ಆಯಾ ಊರುಗಳಿಗೆ ತೆರಳುತ್ತಿವೆ. ಆದರೆ ವೋಲ್ವೋ ಬಸ್‌ಗಳು ಮಾತ್ರಬರುತ್ತಿಲ್ಲ. ಇದಕ್ಕೆ ಕಾರಣ ಕಿರಿದಾದ ಸರ್ಕಲ್ ವ್ಯವಸ್ಥೆ. ಬನ್ನಂಜೆ ಬಳಿ ಇರುವ ಸರ್ಕಲ್ ಮೂಲಕ ತಿರುವು ಪಡೆಯಲು ಸಮಸ್ಯೆಯಾಗುತ್ತಿದೆ. ಬೈಪಾಸ್ ಮೂಲಕವೂ ತಿರುವು ಪಡೆಯುವುದು ಸುಲಭವಲ್ಲ. ಈ ಸಮಸ್ಯೆ ನಿವಾರಿಸಿ ಸರ್ಕಲ್ ವಿಸ್ತರಣೆ ಮಾಡುವುದು ಅಥವಾ ಡಿವೈಡರ್ ತೆರವುಗಳಿಸಿ ಬಸ್ ಸಂಚಾರಕ್ಕೆ ಸುಗಮ ವ್ಯವಸ್ಥೆ ಕಲ್ಪಿಸುವ ಬಗ್ಗೆ ಕೆಎಸ್ಸಾರ್ಟಿಸಿಯಿಂದ ಹೆದ್ದಾರಿ ಇಲಾಖೆಗೆ ಪತ್ರ ಬರೆಯಲಾಗಿದೆ.
ಹಲವು ಸೌಲಭ್ಯ: ಬನ್ನಂಜೆಯಲ್ಲಿ ನೂತನ ಕೆಎಸ್ಸಾರ್ಟಿಸಿ ಬಸ್‌ತಂಗುದಾಣದಲ್ಲಿ ಎಲ್ಲ ಬಸ್‌ಗಳು ಬಂದು ನೋಂದಣಿ ಮಾಡಿಸಿಕೊಳ್ಳುತ್ತಿವೆ. ಸಿಬಂದಿ ನೇಮಕವೂ ಶೀಘ್ರದಲ್ಲಿ ನಡೆಯಲಿದೆ. –
ರಾಜೇಶ್, ಕ.ರಾ.ರ.ಸಾ.ಸಂ. ವಿಭಾಗೀಯ ನಿಯಂತ್ರಣಾಧಿಕಾರಿ, ಮಂಗಳೂರು