Advertisement

‘ಮಲೆನಾಡು ಹೆದ್ದಾರಿ’ಗೆ ಬೇಕು ಕೆಎಸ್‌ಆರ್‌ಟಿಸಿ ಬಸ್‌ : ಕಾಸರಗೋಡು-ಕರ್ನಾಟಕ ಗಡಿ

10:52 AM Jul 21, 2022 | Team Udayavani |

ಉಳ್ಳಾಲ: ರಾಷ್ಟ್ರೀಯ ಹೆದ್ದಾರಿ 66ಕ್ಕೆ ಪರ್ಯಾಯವಾಗಿ ಕೇರಳದ ಅತ್ಯಂತ ಮಹತ್ವದ ಯೋಜನೆ “ಮಲೆನಾಡು ಹೆದ್ದಾರಿ’ ರಾಜ್ಯ ಹೆದ್ದಾರಿ “ದ್ವಿಪಥ ರಸ್ತೆ’ ಕಾಮಗಾರಿ ಭರದಿಂದ ಸಾಗುತ್ತಿದೆ. ಕರ್ನಾಟಕ ಗಡಿಭಾಗವಾಗಿರುವ ಉಳ್ಳಾಲ ತಾಲೂಕಿನ ಕೈರಂಗಳ ಗ್ರಾಮದ ನಂದಪಡ್ಪುವಿನಿಂದ- ತಿರುವನಂತಪುರ ಜಿಲ್ಲೆಯ ಪರಸ್ಸಾಲದವರೆಗೆ ನಿರ್ಮಾಣವಾಗಲಿರುವ ಈ ರಸ್ತೆ ಕಾಮಗಾರಿ ಪ್ರಸ್ತುತ ಕಾಸರಗೋಡಿನ ಪೈವಳಿಕೆ ಗ್ರಾಮದ ಚೇವಾರುವರೆಗೆ ಕಾಮಗಾರಿ ಪೂರ್ಣಗೊಂಡಿದೆ.

Advertisement

ಚೇವಾರಿನಿಂದ ಕಾಸರಗೋಡು ಜಿಲ್ಲೆಯ ಮುಳ್ಳೇರಿಯ ಮಾರ್ಗವಾಗಿ ಕಣ್ಣೂರು ಜಿಲ್ಲೆಯನ್ನು ಸಂಪರ್ಕಿಸಲಿದೆ. ಕಾಸರಗೋಡು ಜಿಲ್ಲೆಯಲ್ಲಿ ಕಾಮಗಾರಿ ಅಂತಿಮ ಹಂತದಲ್ಲಿರುವುದರಿಂದ “ಮಲೆನಾಡು ಹೈವೆ’ಯಲ್ಲಿ ಕಾಸರಗೋಡಿನಿಂದ – ಮಂಗಳೂರು ಸಂಪರ್ಕಿಸಲು ನೇರವಾಗಿ ಕೆಎಸ್‌ಆರ್‌ಟಿಸಿ ಬಸ್‌ ಸಂಚಾರ ಆರಂಭಿಸಬೇಕು ಎಂದು ಎರಡೂ ಜಿಲ್ಲೆಗಳ ಜನರ ಬೇಡಿಕೆ ಇಟ್ಟಿದ್ದು, ದ.ಕ. ಜಿಲ್ಲೆಯ ಮತ್ತು ಕಾಸರಗೋಡಿನ ಜನಪ್ರತಿನಿಧಿಗಳಿಗೆ ಮನವಿ ಮಾಡಿದ್ದಾರೆ.

ದ. ಕ.ಜಿಲ್ಲೆಗೆ ಕಾಸರಗೋಡು ಜಿಲ್ಲೆಯೊಂದಿಗೆ ಆರೋಗ್ಯ, ಶಿಕ್ಷಣ, ಉದ್ಯಮ ಸಹಿತ ಔದ್ಯೋಗಿಕವಾಗಿ ನಿಕಟ ಸಂಪರ್ಕವಿದೆ. ಇಲ್ಲಿನ ಜನರು ಮತ್ತು ಮಂಗಳೂರಿನ ಜನತೆ ದೈನಂದಿನ ಕಾರ್ಯಗಳಿಗೆ ರೈಲು ಮತ್ತು ರಾಷ್ಟ್ರೀಯ ಹೆದ್ದಾರಿ 66ರ ಮೂಲಕ ನಿತ್ಯ ಸಂಚಾರ ನಡೆಸುತ್ತಾರೆ. ಈ ವ್ಯಾಪ್ತಿಯ ಶೇ. 90ರಷ್ಟು ಜನ ದೈನಂದಿನ ಚಟುವಟಿಕೆಗೆ ಬಸ್‌ಗಳನ್ನು ಆಶ್ರಯಿಸುತ್ತಿದ್ದಾರೆ. ಒಳಪ್ರದೇಶಗಳ ಜನರು ಒಳರಸ್ತೆಯಲ್ಲಿ ಸಂಚರಿಸುವ ಬಸ್‌ಗಳನ್ನು ಹಿಡಿದು ಹೆದ್ದಾರಿಗೆ ಆಗಮಿಸಿ ಬಳಿಕ ಕೆಎಸ್‌ ಆರ್‌ಟಿಸಿ ಬಸ್‌ನಲ್ಲಿ ಮಂಗಳೂರು ತಲುಪಬೇಕಾದರೆ ಸಮಯ ವ್ಯರ್ಥದೊಂದಿಗೆ ಹೆಚ್ಚು ಹಣವನ್ನು ವ್ಯಯಿಸಬೇಕಾಗುತ್ತದೆ.

ಹಾಗಾಗಿ ಈಗ ನಿರ್ಮಾಣಗೊಂಡಿರುವ ರಾಜ್ಯ ಹೆದ್ದಾರಿಯಲ್ಲಿ ಕೆಎಸ್‌ಆರ್‌ಟಿಸಿ ನೇರ ಸಂಚಾರ ಆರಂಭಿಸಿದರೆ, ಒಳಪ್ರದೇಶದ ಜನರು ಶ್ರೀಘ್ರ ಮಂಗಳೂರು ತಲುಪಲು ಸಾಧ್ಯವಿದೆ.

ಏನಿದು ಮಲೆನಾಡು ಹೆದ್ದಾರಿ

Advertisement

ನಂದಪಡ್ಪುವಿನಿಂದ ತಿರುವನಂತಪುರ ಜಿಲ್ಲೆಯ ಪರಸ್ಸಾಲದವರೆಗೆ ಸುಮಾರು 1,332.16 ಕಿ.ಮೀ. ಉದ್ದವನ್ನು ಹೊಂದಿರುವ ಕೇರಳದ 13 ಜಿಲ್ಲೆಗಳನ್ನು ಸಂಪರ್ಕಿಸುವ ಈ ರಸ್ತೆ ” ಕೇರಳದ ಸ್ಪೈಸೀ ಮಾರ್ಗ’ ಎಂದು ಕರೆಯಲಾಗುತ್ತದೆ. 1,500 ಕೋ.ರೂ. ಯೋಜನೆ ವೆಚ್ಚ ಅಂದಾಜಿಸಲಾಗಿದ್ದು, 2009ರಲ್ಲಿ ಅನು ಮೋದನೆ ದೊರೆತು 3 – 4 ವರ್ಷಗಳಿಂದ ಕಾಮಗಾರಿ ನಡೆಯುತ್ತಿದೆ. ಪ್ರಥಮ ಹಂತದ ಕಾಮಗಾರಿ ಕಾಸರಗೋಡು-ಕರ್ನಾಟಕ ಗಡಿಭಾಗವಾಗಿರುವ ನಂದರಪಡ್ಪುವಿನಿಂದ ಪಾಲಕ್ಕಾಡ್‌ವರೆಗೆ, ಎರಡನೇ ಹಂತದಲ್ಲಿ ಗುಡ್ಡಗಾಡು ಪ್ರದೇಶವನ್ನು ಹೊಂದಿದೆ.

ಆರೋಗ್ಯ – ಶಿಕ್ಷಣ ಕೇಂದ್ರಗಳಿಗೆ ನೇರ ಸಂಪರ್ಕ

ಕೈರಂಗಳ ಗ್ರಾಮ ಮತ್ತು ವರ್ಕಾಡಿ ಗ್ರಾಮದ ಗಡಿಭಾಗವಾಗಿರುವ ನಂದರಪಡ್ಪುವಿನಿಂದ – ನಚ್ಚಪದವು – ಮೂರುಗೋಳಿ – ಪುರುಷಂಕೋಡಿ- ಪಾವಳ – ಸುಂಕದಕಟ್ಟೆ – ಮೊರತ್ತನೆ ಜಂಕ್ಷನ್‌, ಮೀಂಜ ಪಂಚಾಯತ್‌ ವ್ಯಾಪ್ತಿಯ ಬಟ್ಟಪದವು, ಮೀಯಪದವು, ಬೇರಿಕೆ, ಕಲಾಯಿ, ಪೈವಳಿಕೆ ಪಂಚಾಯತ್‌ – ಪಾಯಿಕಟ್ಟೆ, ಪೈಯೊಳಿಕೆ ನಗರ ಚೇವಾರು ಪೆರ್ಮುದೆವರೆಗೆ ಕಾಮಗಾರಿ ಮುಗಿದಿದೆ.

ಪುತ್ತಿಗೆ ಪಂಚಾಯತ್‌ನ ಕಟ್ಟತಡ್ಕ, ಅಂಗಡಿಮೊಗರು, ಸೀತಾಂಗೋಳಿ, ಬದಿಯಡ್ಕ ಪಂಚಾಯತ್‌ನ ಬೇಳ – ಬದಿಯಡ್ಕ, ಮುಳ್ಳೇರಿಯವರೆಗಿನ ಕಾಮಗಾರಿಗೆ ಟೆಂಡರ್‌ ಕಾರ್ಯ ಮುಗಿದು ಕಾಮಗಾರಿ ಆರಂಭವಾಗಲಿದೆ. ಕಾಸರಗೋಡು ಜಿಲ್ಲೆಯ ಈ ಪ್ರದೇಶದ ಜನರಿಗೆ ಕರ್ನಾಟಕದ ಗಡಿ ಭಾಗವಾಗಿರುವ ಕೃಷಿ ವಿಜ್ಞಾನ ಕೇಂದ್ರ ವರ್ಕಾಡಿ, ಸರಕಾರಿ ಪ್ರಥಮ ದರ್ಜೆ ಕಾಲೇಜು ಮುಡಿಪು, ಇನ್ಫೋಸಿಸ್‌, ಮಂಗಳೂರು ವಿ.ವಿ., ದೇರಳಕಟ್ಟೆಯ ವೈದ್ಯಕೀಯ ಆಸ್ಪತ್ರೆ, ಕಾಲೇಜುಗಳು, ಎಂಜಿನಿಯರಿಂಗ್‌ ಕಾಲೇಜುಗಳ ಸಂಪರ್ಕದೊಂದಿಗೆ ಮಂಗಳೂರು ನಗರವನ್ನು ಸಂಪರ್ಕಿಸಲು ಸುಲಭ ಸಾಧ್ಯವಾಗುತ್ತದೆ. ಕೋಟ್ಯಂತರ ರೂ. ಖರ್ಚು ಮಾಡಿ ನಿರ್ಮಾಣಗೊಳ್ಳಲಿರುವ ರಾಜ್ಯ ಹೆದ್ದಾರಿಯಲ್ಲಿ ಎರಡೂ ರಾಜ್ಯಗಳನ್ನು ಸಂಪರ್ಕಿಸುವ ಬಸ್‌ ಸಂಚಾರ ಆರಂಭಗೊಂಡರೆ ರಾಜ್ಯ ಹೆದ್ದಾರಿಗೂ ಮೌಲ್ಯ ಹೆಚ್ಚಿದಂತಾಗುತ್ತದೆ. ಕೇರಳದ ಗ್ರಾಮೀಣ ಜನರಿಗೆ ಇದರಿಂದ ಪ್ರಯೋಜನವಾಗಲಿದೆ ಎನ್ನುತ್ತಾರೆ ಈ ಭಾಗದ ಜನರು.

200 ಮೀಟರ್‌ ರಸ್ತೆ ಅಭಿವೃದ್ಧಿಯಾಗಬೇಕಾಗಿದೆ

ಕೈರಂಗಳ ಗ್ರಾಮದ ನಂದಪಡ್ಪುವಿನಿಂದ ಮುಡಿಪು ಸಂಪರ್ಕಿಸುವ ಮುಖ್ಯ ರಸ್ತೆವರೆಗೆ 200 ಮೀಟರ ರಸ್ತೆ ಅಭಿವೃದ್ಧಿಯಾಗಬೇಕಾಗಿದೆ. ಕೇರಳ ಭಾಗದಿಂದ ನಂದರಪಡ್ಪುವರೆಗೆ ದ್ವಿಫಥ ರಸ್ತೆ ಸುಂದರವಾಗಿ ನಿರ್ಮಾಣವಾಗಿದ್ದು, 200 ಮೀಟರ್‌ನಷ್ಟು ಮುಡಿಪು ಸಂಪರ್ಕಿಸುವ ರಸ್ತೆ ಸಂಪೂರ್ಣ ಹಾಳಾಗಿದ್ದು, ಜನಪ್ರತಿನಿಧಿಗಳು ಕ್ರಮ ಕೈಗೊಳ್ಳಬೇಕಾಗಿದೆ.

ಗ್ರಾಮಾಂತರದ ಜನರಿಗೆ ಸಹಕಾರಿ: ಮಲೆನಾಡು ಹೆದ್ದಾರಿಯಲ್ಲಿ ಕೆಎಸ್‌ಆರ್‌ಟಿಸಿ ಬಸ್‌ ಸಂಚಾರ ನಡೆಸಿದರೆ, ಗಡಿನಾಡು ಪ್ರದೇಶದ ಕನ್ನಡಿಗರಿಗೆ ಸಹಕಾರಿಯಾಗಲಿದೆ. ಕಾಸರಗೋಡು – ನಂದರಪಡ್ಪು ಮಾರ್ಗವಾಗಿ ಸರಕಾರಿ ಬಸ್‌ ಸಂಚಾರಕ್ಕೆ ಮನವಿ ಬಂದಿದ್ದು, ಸಾರಿಗೆ ಇಲಾಖೆಯೊಂದಿಗೆ ಚರ್ಚಿಸಿ ಕ್ರಮ ಕೈಗೊಳ್ಳಲಾಗುವುದು. ಈಗಾಗಲೇ ರಾಷ್ಟೀಯ ಹೆದ್ದಾರಿ 66ರ ಕಾಸರಗೋಡು ತೊಕ್ಕೊಟ್ಟು ಮಾರ್ಗವಾಗಿ ಬಿ.ಸಿ.ರೋಡ್‌ಗೆ ಸರಕಾರಿ ಬಸ್‌ ಸೇವೆಯಿದ್ದು, ಈ ಭಾಗದಲ್ಲಿ ಬಸ್‌ ಸಂಚಾರ ಆರಂಭವಾದರೆ ಉಳ್ಳಾಲ ತಾಲೂಕಿನ ಶೈಕ್ಷಣಿಕ ಮತ್ತು ಆರೋಗ್ಯ ಕೇಂದ್ರಕ್ಕೆ ಕೇರಳದ ಗ್ರಾಮಾಂತರದ ಜನರಿಗೆ ತಲುಪಲು ಸಹಕಾರಿಯಾಗಲಿದೆ. – ಯು.ಟಿ. ಖಾದರ್‌, ಶಾಸಕರು, ಮಂಗಳೂರು ವಿಧಾನಸಭಾ ಕ್ಷೇತ್ರ

ಅಭಿವೃದ್ಧಿಗೂ ಪೂರಕ: ಕೈರಂಗಳ ಗ್ರಾಮದ ನಂದಪಡ್ಪುವಿನಿಂದ -ಕಾಸರಗೋಡು ಜಿಲ್ಲೆಯ ವಿದ್ಯಾನಗರದ ವರೆಗೆ ಮಲೆನಾಡು ಹೆದ್ದಾರಿಯಲ್ಲಿ ಬಸ್‌ ಸಂಚಾರ ಆರಂಬಿಸಿದರೆ ಕೇರಳದ ಒಳಪ್ರದೇಶದ ಜನರಿಗೆ ಮುಡಿಪು, ದೇರಳಕಟ್ಟೆ ಸಹಿತ ಮಂಗಳೂರಿನ ಶಿಕ್ಷಣ, ಆರೋಗ್ಯ ಮತ್ತು ಉದ್ಯೋಗ ಕೇಂದ್ರಗಳಿಗೆ ಸಂಪರ್ಕಿಸಲು ಸಹಕಾರಿಯಾಗಲಿದ್ದು, ಕೇರಳದ ಗಡಿಭಾಗ ಅಭಿವೃದ್ಧಿಯೊಂದಿಗೆ, ಉಳ್ಳಾಲ ತಾಲೂಕು ಅಭಿವೃದ್ಧಿಗೂ ಪೂರಕವಾಗಲಿದೆ. – ಅಝೀಝ್ ಕಲ್ಲೂರು, ಸಾಮಾಜಿಕ ಕಾರ್ಯಕರ್ತ

Advertisement

Udayavani is now on Telegram. Click here to join our channel and stay updated with the latest news.

Next