ಗಜೇಂದ್ರಗಡ: ಲೋಕಸಭೆ ಚುನಾವಣೆ ಮತದಾನ ಸಂದರ್ಭದಲ್ಲಿ ಅಹಿತಕರ ಘಟನೆ ನಡೆಯದಂತೆ ಹಾಗೂ ಮತದಾನ ಮುಕ್ತ-ನಿರ್ಭೀತವಾಗಿ ನಡೆಯಲು ಪಟ್ಟಣದಲ್ಲಿ ರಾಜ್ಯ ಶಸಸ್ತ್ರ ಮೀಸಲು ಪಡೆ ಪೊಲೀಸರು ರವಿವಾರ ಪಥ ಸಂಚಲನ ನಡೆಸಿದರು.
ಕೆಎಸ್‌ಆರ್‌ಪಿ ಮೀಸಲು ಪಡೆಯ ಎರಡು ವ್ಯಾನ್, ಗ್ರಹ ರಕ್ಷಕದಳ ಸೇರಿದಂತೆ ಪೊಲೀಸ್ ಸಿಬ್ಬಂದಿ ಪಿಎಸ್‌ಐ ಆರ್.ವೈ. ಜಲಗೇರಿ ನೇತೃತ್ವದಲ್ಲಿ ಕಾಲಕಾಲೇಶ್ವರ ವೃತ್ತದಿಂದ ಆರಂಭವಾದ ಪಥ ಸಂಚಲನ ಜೋಡು ರಸ್ತೆಯಲ್ಲಿ ಸಂಚರಿಸಿದರು.
ಲೋಕಸಭೆ ಮತದಾನಕ್ಕೆ ಪೂರ್ವ ಸಿದ್ಧತೆಗಳು ಭರದಿಂದ ಸಾಗಿದ್ದು, ಪಟ್ಟಣ ಸೇರಿದಂತೆ ಸುತ್ತಲಿನ ಗ್ರಾಮಸ್ಥರಿಗೆ ಎಲೆಕ್ಟ್ರಾನಿಕ್ ಮತಯಂತ್ರಗಳ ಬಳಕೆ ಕುರಿತು ಚುನಾವಣೆ ಅಧಿಕಾರಿಗಳು ಜಾಗೃತಿ ಮೂಡಿಸುವ ಪ್ರಾತ್ಯಕ್ಷಿಕೆ ಮಾಡಿದ್ದಾರೆ. ಜೊತೆಗೆ ಪೊಲೀಸರು ಸಭೆ ನಡೆಸಿ ಶಾಂತಿಯುತ ಮತದಾನಕ್ಕೆ ಕೋರಿದ್ದಾರೆ. ಚುನಾವಣೆ ಪ್ರಯುಕ್ತ ಸ್ಥಳೀಯ ಪೊಲೀಸ್ ಠಾಣೆ ಪಿಎಸ್‌ಐ ಆರ್.ವೈ. ಜಲಗೇರಿ ಮತ್ತು ಸಿಬಂದಿ ಪಟ್ಟಣ ಹಾಗೂ ಸುತ್ತಲಿನ ಗ್ರಾಮಗಳಲ್ಲಿ ಸಭೆ ನಡೆಸಿ, ಚುನಾವಣೆ ಸಂದರ್ಭದಲ್ಲಿ ಜನತೆ ಕರ್ತವ್ಯ, ನೀತಿ ಸಂಹಿತೆ ಬಗ್ಗೆ ಜನತೆಗೆ ತಿಳಿವಳಿಕೆ ಮೂಡಿಸಿದ್ದಾರೆ.
Advertisement
ಜಿಲ್ಲೆಯಲ್ಲಿ ಹೆಚ್ಚು ಅತೀ ಸೂಕ್ಷ್ಮ ಮತಕೇಂದ್ರ ಹೊಂದಿರುವ ಪಟ್ಟಣದಲ್ಲಿ ಶಾಂತಿ, ಸುವ್ಯವಸ್ಥೆ ಕಾಪಾಡುವ ಜೊತೆಗೆ ನ್ಯಾಯಯುತ ಮತದಾನ ನಡೆಯುವ ಉದ್ದೇಶದಿಂದ ಪೊಲೀಸ್ ಇಲಾಖೆ ಹೆಚ್ಚು ಭದ್ರತೆ ಕಲ್ಪಿಸಲು ಮುಂದಾಗಿದೆ. ಈ ಹಿನ್ನೆಲೆಯಲ್ಲಿ ಮೀಸಲು ಪಡೆ ತುಕಡಿ ಪೊಲೀಸರು ಸಂಚರಿಸಿದರು.