ಬೆಂಗಳೂರು: ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯದಿಂದ (ಕೆಎಸ್‌ಒಯು) ಪದವಿ ಪಡೆದ ಲಕ್ಷಾಂತರ ಪದವೀಧರರಿಗೆ ನ್ಯಾಯಕೊಡಿಸುವಲ್ಲಿ ರಾಜ್ಯ ಸರ್ಕಾರ ನಿರ್ಲಕ್ಷ್ಯ ತೋರಿರುವುದು ದುರಂತ ಎಂದು ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯದ ಕುಲಾಧಿಪತಿ ಪ್ರೊ.ಎನ್.ಆರ್.ಶೆಟ್ಟಿ ಕಳವಳ ವ್ಯಕ್ತಪಡಿಸಿದರು.
ಬೆಂಗಳೂರು ವಿಶ್ವವಿದ್ಯಾಲಯದ ಅಂಚೆತೆರಪು ಮತ್ತು ದೂರಶಿಕ್ಷಣ ನಿರ್ದೇಶನಾಲಯ ಶುಕ್ರವಾರ ಸೆಂಟ್ರಲ್ ಕಾಲೇಜು ಆವರಣದ ಜ್ಞಾನಜ್ಯೋತಿ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ದೂರಶಿಕ್ಷಣ ಕುರಿತು ಅರಿವು ಮೂಡಿಸುವ ಸಿಡಿ ಬಿಡುಗಡೆ ಮಾಡಿ ಮಾತನಾಡಿದರು.
ಹಲವು ಕಾರಣಗಳಿಗಾಗಿ ವಿಶ್ವವಿದ್ಯಾಲಯ ಅನುದಾನ ಆಯೋಗವು ಕೆಎಸ್‌ಒಯು ಮಾನ್ಯತೆ ರದ್ದು ಮಾಡಿದೆ. ಇದರಿಂದ ಲಕ್ಷಾಂತರ ವಿದ್ಯಾರ್ಥಿಗಳಿಗೆ ಅನ್ಯಾಯವಾಗಿದೆ. ಕೆಎಸ್‌ಒಯುನಲ್ಲಿ ಪದವಿ ಪಡೆದ ಅಭ್ಯರ್ಥಿಗಳ ಪ್ರಮಾಣ ಪತ್ರವನ್ನು ಉದ್ಯೋಗವಕಾಶಗಳಲ್ಲಿ ಪರಿಗಣಿಸದೇ ಇರುವುದು ಸರಿಯಲ್ಲ. ಕೆಎಸ್‌ಒಯು ಮಾನ್ಯತೆ ರದ್ದಾಗಿರುವುದನ್ನು ರಾಜ್ಯ ಸರ್ಕಾರ ಗಂಭೀರವಾಗಿ ಪರಿಗಣಿಸಿಲ್ಲ. ಹೈಕೋರ್ಟ್ ಸಹ ಸೂಕ್ತವಾದ ನಿರ್ದೇಶನ ನೀಡಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
ನಿತ್ಯ ಕಾಲೇಜಿಗೆ ಹೋಗಿ ಪದವಿ ಪಡೆಯಲು ಸಾಧ್ಯವಿಲ್ಲದ ಆರ್ಥಿಕವಾಗಿ ಹಿಂದುಳಿದವರಲ್ಲಿ ಬಹುತೇಕರು ದೂರ ಶಿಕ್ಷಣದ ಮೂಲಕ ಕೋರ್ಸ್‌ಗಳ ಆಯ್ಕೆ ಮಾಡಿಕೊಂಡು ವ್ಯಾಸಂಗ ಮಾಡುತ್ತಾರೆ. ಕೆಎಸ್‌ಒಯುನಿಂದ ವಿಶ್ವವಿದ್ಯಾಲಯ ಧನ ಸಹಾಯ ಆಯೋಗದ ನಿಯಮ ಉಲ್ಲಂಘನೆಯಾಗಿದೆ. ಪದವೀಧರರ ಭವಿಷ್ಯದ ದೃಷ್ಟಿಯಿಂದ ಸರ್ಕಾರ ಸಮಸ್ಯೆಗೆ ಪರಿಹಾರ ನೀಡಬೇಕು. ಎಲ್ಲಾ ಅಭ್ಯರ್ಥಿಗಳ ಪದವಿ ಮಾನ್ಯ ಮಾಡಬೇಕಿದೆ ಎಂದರು.
ಪ್ರೊ.ಬಿ.ಸಿ.ಮೈಲಾರಪ್ಪ ಅವರನ್ನು ಸಾಕಷ್ಟು ವರ್ಷಗಳಿಂದ ಬಲ್ಲವನಾಗಿದ್ದೇನೆ. ಕೆಎಸ್‌ಒಯು ಕುಲಪತಿ ನೇಮಕಾತಿ ಪಟ್ಟಿಯಲ್ಲಿ ಇವರ ಹೆಸರು ಇತ್ತು. ಕೊನೆ ಕ್ಷಣದಲ್ಲಿ ಬಿಟ್ಟು ಹೋಗಿದೆ. ವಿದ್ಯಾರ್ಥಿಗಳಿಗೆ ದೂರಶಿಕ್ಷಣದ ಅರಿವು ಮೂಡಿಸಲು ಹೊಸ ಅಭಿಯಾನದ ಈ ಕಾರ್ಯಕ್ರಮ ಶ್ಲಾಘನೀಯ ಎಂದು ಹೇಳಿದರು.
ಕರ್ನಾಟಕ ಲೋಕಸೇವಾ ಆಯೋಗದ ಅಧ್ಯಕ್ಷ ಟಿ.ಶ್ಯಾಮ್‌ಭಟ್ ಮಾತನಾಡಿ, ಕೆಎಸ್‌ಒಯು ಮಾನ್ಯತೆ ಕಳೆದುಕೊಂಡ ವರ್ಷದಲ್ಲಿ ಪದವಿ ಪಡೆದ ಅಭ್ಯರ್ಥಿಗಳ ಅಂಕಪಟ್ಟಿಯನ್ನು ಸರ್ಕಾರಿ ಉದ್ಯೋಗಕ್ಕೆ ಪರಿಗಣಿಸಲು ಸಾಧ್ಯವಿಲ್ಲ. ಆದರೆ, ಬೆಂವಿವಿ ಅಂಕಪಟ್ಟಿಯನ್ನು ನಾವು ಪರಿಗಣಿಸುತ್ತೇವೆ. ರೆಗ್ಯೂಲರ್ ವಿದ್ಯಾರ್ಥಿಗಳಿಂತ ದೂರಶಿಕ್ಷಣದ ಮೂಲಕ ಶಿಕ್ಷಣ ಪಡೆದವರೇ ಉತ್ತಮವಾಗಿ ಪ್ರಗತಿ ಕಾಣುತ್ತಿದ್ದಾರೆ ಎಂದರು.
ಬೆಂವಿವಿ ಅಂಚೆ ತೆರಪು ಮತ್ತು ದೂರಶಿಕ್ಷಣ ನಿರ್ದೇಶನಾಲಯದ ನಿರ್ದೇಶಕ ಪ್ರೊ.ಬಿ.ಸಿ.ಮೈಲಾರಪ್ಪ ಮಾತನಾಡಿ, ದೂರ ಶಿಕ್ಷಣದಲ್ಲಿ ಪದವಿ ಪಡೆಯುವ ವಿದ್ಯಾರ್ಥಿಗಳ ಕಷ್ಟವನ್ನು ಅರಿತಿದ್ದೇನೆ. ಉನ್ನತ ಶಿಕ್ಷಣ ಎಲ್ಲರಿಗೂ ಸಿಗುವಂತಾಗಬೇಕೆಂಬ ಉದ್ದೇಶದಿಂದ ಈ ವಿನೂತನ ಸಿಡಿ ಹೊರ ತಂದಿದ್ದೇವೆ ಎಂದರು. ಬೆಂವಿವಿ ಮೌಲ್ಯಮಾಪನ ಕುಲಸಚಿವ ಸಿ.ಶಿವರಾಜು, ಸಿಂಡಿಕೇಟ್ ಸದಸ್ಯರಾದ ರವಿ, ಮಂಜುನಾಥ್, ವಿಜಯಸಿಂಹ ಮೊದಲಾದವರು ಇದ್ದರು.