Advertisement
ವಿಶ್ವವಿದ್ಯಾಲಯ ಅನುದಾನ ಆಯೋಗವು ಮೈಸೂರಿನಲ್ಲಿರುವ ರಾಜ್ಯ ಮುಕ್ತ ವಿಶ್ವವಿದ್ಯಾಲಯ (ಕೆಎಸ್‌ಒಯು)ದ ಮಾನ್ಯತೆ ರದ್ದು ಮಾಡಿದ್ದರಿಂದ 2012ರ ಮೊದಲು ಪಿಎಚ್.ಡಿಗೆ ಸೇರಿದ್ದ ನೂರಾರು ಸಂಶೋಧಕರಿಗೆ ಪಿಎಚ್.ಡಿ ಕಾರ್ಯ ಪೂರ್ಣಗೊಳಿಸಲು ಸಾಧ್ಯವಾಗಿರಲಿಲ್ಲ.
Related Articles
Advertisement
ಕನ್ನಡ ಅರ್ಥಶಾಸ್ತ್ರ, ವಾಣಿಜ್ಯ ಶಾಸ್ತ್ರ, ಶಿಕ್ಷಣ, ಇಂಗ್ಲಿಷ್, ಜೀವ ರಸಾಯನಶಾಸ್ತ್ರ, ಪತ್ರಿಕೋದ್ಯಮ, ಗ್ರಂಥಾಲಯ ಮತ್ತು ಮಾಹಿತಿ ವಿಜ್ಞಾನ ಸೇರಿದಂತೆ ಕಲಾ, ವಾಣಿಜ್ಯ ಹಾಗೂ ವಿಜ್ಞಾನ ವಿಭಾಗದ ಒಟ್ಟು 20 ವಿಷಯಗಳಲ್ಲಿ ಪಿಎಚ್.ಡಿ ಪಡೆಯಲು ಅವಕಾಶ ಇದೆ ಎಂದು ಕೆಎಸ್‌ಒಯು ಮೂಲಗಳು ತಿಳಿಸಿವೆ.
2011-12ರ ವಿದ್ಯಾರ್ಥಿಗಳಿಗೆ ಈಗ ಪರೀಕ್ಷೆ: 2011-12 ಮತ್ತು 2012-13ನೇ ಸಾಲಿನಲ್ಲಿ ದಾಖಲೆ ಪಡೆದಿರುವ ವಿದ್ಯಾರ್ಥಿಗಳಿಗೆ ವಿಶ್ವವಿದ್ಯಾಲಯದಿಂದ ಪರೀಕ್ಷೆ ನಡೆಸಿರಲಿಲ್ಲ. ಯುಜಿಸಿ ಮಾನ್ಯತೆ ನವೀಕರಿಸದೇ ಇರುವುದರಿಂದ ವಿಶ್ವವಿದ್ಯಾಲಯಕ್ಕೆ ಪರೀಕ್ಷೆ ಮಾಡಲು ಸಾಧ್ಯವಾಗಿರಲಿಲ್ಲ. 2011-12 ಹಾಗೂ 2012-13ನೇ ಸಾಲಿನಲ್ಲಿ ಕೆಎಸ್‌ಒಯು ಸೇರಿದ ಸಾವಿರಾರು ವಿದ್ಯಾರ್ಥಿಗಳಿಗೆ ಪರೀಕ್ಷೆ ಬರೆಯಲು ಸಾಧ್ಯವಾಗಿರಲಿಲ್ಲ.
ಹೀಗಾಗಿ, ವಿಶ್ವವಿದ್ಯಾಲಯವು 2011-12ನೇ ಸಾಲಿನಲ್ಲಿ ದಾಖಲಾತಿ ಪಡೆದ ಎಲ್ಲ ವಿದ್ಯಾರ್ಥಿಗಳಿಗೂ ಒಂದು ಅವಕಾಶ ಹಾಗೂ 2012-13ನೇ ಸಾಲಿನಲ್ಲಿ ದಾಖಲಾತಿ ಪಡೆದ ಎಲ್ಲ ವಿದ್ಯಾರ್ಥಿಗಳಿಗೂ ಎರಡು ಬಾರಿ ಪರೀಕ್ಷೆ ನಡೆಸಲು ನಿರ್ಧರಿಸಿದೆ. ಇದರಿಂದ ಸಾವಿರಾರು ವಿದ್ಯಾರ್ಥಿಗಳಿಗೆ ಅನುಕೂಲವಾಗಲಿದೆ ಎಂದು ವಿವಿ ಅಧಿಕಾರಿಗಳು ಮಾಹಿತಿ ನೀಡಿದರು.
ಹೈಕೋರ್ಟ್ ಮೆಟ್ಟಿಲೇರಿದ ವಿದ್ಯಾರ್ಥಿಗಳು: ಮಾನ್ಯತೆ ರದ್ದಾಗಿರುವುದರಿಂದ ಕೆಎಸ್‌ಒಯುನಲ್ಲಿ 2013-14 ಮತ್ತು 2014-15ರಲ್ಲಿ ಪದವಿ, ಸ್ನಾತಕೋತ್ತರ ಪದವಿಗೆ ದಾಖಲಾತಿ ಪಡೆದು ಪರೀಕ್ಷೆ ಬರೆದಿರುವ ಸುಮಾರು 95 ಸಾವಿರ ವಿದ್ಯಾರ್ಥಿಗಳಿಗೆ ಅನ್ಯಾಯವಾಗಿದೆ. ಮಾನ್ಯತೆ ಇಲ್ಲದೆ ಪರೀಕ್ಷೆ ನೀಡಲಾಗಿದೆ ಎಂದು ಯುಜಿಸಿ ಕೂಡ ಈ ವಿದ್ಯಾರ್ಥಿಗಳ ಪದವಿಯನ್ನು ಸಿಂಧುಗೊಳಿಸಿರಲಿಲ್ಲ.
ಹೀಗಾಗಿ, ಈ ವಿದ್ಯಾರ್ಥಿಗಳ ಪರವಾಗಿ ವಿಶ್ವವಿದ್ಯಾಲಯವು ಯುಜಿಸಿ ಅಧಿಕಾರಿಗಳ ಜತೆ ನೇರ ಸಂಪರ್ಕ ಹೊಂದಿದ್ದು, ವಿದ್ಯಾರ್ಥಿಗಳಿಗೆ ಪದವಿ ಕೊಡಿಸುವ ಎಲ್ಲ ರೀತಿಯ ಪ್ರಯತ್ನ ನಡೆಸುತ್ತಿದ್ದರೂ, ಇನ್ನೂ ಫಲ ಸಿಕ್ಕಿಲ್ಲ. ಹೀಗಾಗಿ, ಕೆಲವು ವಿದ್ಯಾರ್ಥಿಗಳು ಹೈಕೋರ್ಟ್ ಮೆಟ್ಟಿಲೇರಿದ್ದು, ವಿಶ್ವವಿದ್ಯಾಲಯ ಕೂಡ ಹೈಕೋರ್ಟ್‌ನಲ್ಲಿ ವಿದ್ಯಾರ್ಥಿಗಳ ಪರವಾಗಿ ಪ್ರಮಾಣ ಪತ್ರ ಸಲ್ಲಿಸಲು ನಿರ್ಧರಿಸಿದೆ.
ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಎಲ್ಲ ಕ್ರಮ ತೆಗೆದುಕೊಳ್ಳುತ್ತಿದ್ದೇವೆ. 2012ರ ಮೊದಲು ಪಿಎಚ್.ಡಿಗೆ ಸೇರಿದ ಅಭ್ಯರ್ಥಿಗಳಿಗೆ ಪಿಎಚ್.ಡಿ ಪೂರೈಸಲು ಅವಕಾಶ ಮಾಡಿಕೊಟ್ಟಿದ್ದೇವೆ. 95 ಸಾವಿರ ವಿದ್ಯಾರ್ಥಿಗಳ ಪರವಾಗಿಯೇ ಹೈಕೋರ್ಟ್‌ನಲ್ಲಿ ಪ್ರಮಾಣಪತ್ರ ಸಲ್ಲಿಸಲು ನಿರ್ಧರಿಸಿದ್ದೇವೆ.-ಪ್ರೊ.ಡಿ.ಶಿವಲಿಂಗಯ್ಯ, ಕುಲಪತಿ, ಕೆಎಸ್‌ಒಯು * ರಾಜು ಖಾರ್ವಿ ಕೊಡೇರಿ