ಮಧುಗಿರಿ: 2013ರಲ್ಲಿ 55 ಲಕ್ಷ ಮಕ್ಕಳಿಗಾಗಿ ಕ್ಷೀರಭಾಗ್ಯ ಯೋಜನೆ ಜಾರಿಗೊಳಿಸಿದ್ದು, ಇಂದಿಗೆ 10 ವರ್ಷ ಕಳೆದಿದೆ. ಪ್ರಸ್ತುತ 1.05 ಕೋಟಿ ಮಕ್ಕಳಿಗೆ ಕ್ಷೀರಭಾಗ್ಯ ಯೋಜನೆ ಸಹಕಾರಿಯಾಗಿದೆ. ಈ ಮೂಲಕ ಬಡವರ ಮಕ್ಕಳಿಗೆ, ಹಾಲು ಉತ್ಪಾದಕರಿಗೆ, ಒಕ್ಕೂಟಕ್ಕೆ ಆರ್ಥಿಕ ನಷ್ಟ ತಪ್ಪಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.
ಕರ್ನಾಟಕ ಸಹಕಾರ ಹಾಲು ಉತ್ಪಾದಕರ ಮಹಾಮಂಡಲ ಮತ್ತು ಜಿಲ್ಲಾ ಸಹಕಾರ ಹಾಲು ಉತ್ಪಾದಕರ ಸಂಘಗಳ ಒಕ್ಕೂಟ ಆಯೋಜಿಸಿದ್ದ ಕ್ಷೀರ ಭಾಗ್ಯ ಯೋಜನೆಯ ದಶಮಾನೋತ್ಸವ ಸಂಭ್ರಮಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ನಾಡಿನ ಮಕ್ಕಳ ಮಾನಸಿಕ ಮತ್ತು ದೈಹಿಕ ಸದೃಢತೆಗಾಗಿ ಕ್ಷೀರ ಭಾಗ್ಯ ಯೋಜನೆ ಜಾರಿಗೆ ತಂದು 54 ಲಕ್ಷಕ್ಕೂ ಅಧಿಕ ಮಕ್ಕಳು ಪೌಷ್ಟಿಕ ಆಹಾರವನ್ನು ಪ್ರತಿ ದಿನ ಸೇವಿಸುವಂತಾಗಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಅಪಾರ ಮೆಚ್ಚುಗೆ ಗಳಿಸಿದೆ ಎಂದರು.
ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಕೆಎಂಎಫ್ ಅಧ್ಯಕ್ಷ ಭೀಮಾ ನಾಯ್ಕ ಮಾತನಾಡಿ, ಹೈನುಗಾರಿಕೆ, ಒಕ್ಕೂಟ ಹಾಗೂ ಬಡವರ ಮಕ್ಕಳಿಗೆ ಹಾಲುಣಿಸಿದಂಥ ಸಿದ್ದರಾಮಯ್ಯನವರು ನಿಜಕ್ಕೂ ಹೃದಯವಂತ. ಇವರಿಗೆ ರಾಜ್ಯದ 28 ಲಕ್ಷ ಹಾಲು ಉತ್ಪಾದಕರ ಪರವಾಗಿ ಕೃತಜ್ಞತೆ ಅರ್ಪಿಸುವುದಾಗಿ ತಿಳಿಸಿದರು.
ಗೃಹ ಸಚಿವ ಜಿ.ಪರಮೇಶ್ವರ್, ಸಹಕಾರ ಸಚಿವ ಕೆ.ಎನ್ ರಾಜಣ್ಣ , ಪಶು ಸಂಗೋಪನೆ ಮತ್ತು ರೇಷ್ಮೆ ಸಚಿವ ಕೆ.ವೆಂಕಟೇಶ್, ಶಾಸಕರಾದ ರಂಗನಾಥ್, ಷಡಾಕ್ಷರಿ ಸಹಿತ ಹಲವು ಪ್ರಮುಖರು ವೇದಿಕೆಯಲ್ಲಿದ್ದರು.