Advertisement

ರಾಜ್ಯೋತ್ಸವಕ್ಕೆ ದಿವ್ಯಾಂಗ ವಿದ್ಯಾರ್ಥಿಗಳಿಗೆ ಕ್ಷೀರಭಾಗ್ಯ

09:24 AM Oct 12, 2018 | |

ಬೆಂಗಳೂರು: ರಾಜ್ಯದ ವಿವಿಧ ವಿಕಲಚೇತನರ ಸೇವಾ ಸಂಸ್ಥೆಗಳಲ್ಲಿ ಅಭ್ಯಾಸ ಮಾಡುತ್ತಿರುವ ಸರಿಸುಮಾರು ಹತ್ತು ಸಾವಿರಕ್ಕೂ ಅಧಿಕ ವಿದ್ಯಾರ್ಥಿಗಳಿಗೆ ಕನ್ನಡ ರಾಜ್ಯೋತ್ಸವಕ್ಕೆ ರಾಜ್ಯ ಸರ್ಕಾರ ಸಿಹಿ ಸುದ್ದಿ ನೀಡಿದೆ. ವಿಕಲಚೇತನ ವಿದ್ಯಾರ್ಥಿಗಳು ನ.1ರಿಂದ ಕ್ಷೀರಭಾಗ್ಯ ಯೋಜನಾ ವ್ಯಾಪ್ತಿಗೆ ಬರಲಿದ್ದಾರೆ.

Advertisement

ಸರ್ಕಾರದಿಂದ ಮಾನ್ಯತೆ ಪಡೆದ ವಿಕಲಚೇತನರ ಸೇವಾ ಸಂಸ್ಥೆಗಳ ವಿದ್ಯಾರ್ಥಿಗಳಿಗೆ ಬೆಳಗ್ಗೆ ಹಾಲು (ಕ್ಷೀರ)  ಹಾಗೂ ಮಧ್ಯಾಹ್ನ ಬಿಸಿಯೂಟ ನೀಡಲು ರಾಜ್ಯ ಸರ್ಕಾರ ಯೋಜನೆ ಸಿದ್ಧಪಡಿಸಿತ್ತು. ರಾಜ್ಯ ಸರ್ಕಾರದಿಂದ ಮಧ್ಯಾಹ್ನದ ಬಿಸಿಯೂಟ ನೀಡಲು ತಾಂತ್ರಿಕ ತೊಂದರೆಯಿರುವ ಕಾರಣ ಕ್ಷೀರಭಾಗ್ಯ ಮಾತ್ರ ನೀಡಲು ನಿರ್ಧರಿಸಿದೆ. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯಲ್ಲಿರುವ ವಿಕಲಚೇತನರ ಮತ್ತು ಹಿರಿಯ ನಾಗರಿಕರ ಸಬಲೀಕರಣ ಇಲಾಖೆಯಿಂದ ಮಾನ್ಯತೆ ಪಡೆದಿರುವ ಅರ್ಹ ವಿಕಲಚೇತನರ ಸೇವಾ ಸಂಸ್ಥೆಯ ವಿದ್ಯಾರ್ಥಿಗಳಿಗೆ ನ.1ರಿಂದಲೇ ಬೆಳಗ್ಗೆ ಹಾಲು ದೊರೆಯಲಿದೆ ಎಂದು ಸರ್ಕಾರ ಅಧಿಕೃತ ಆದೇಶ ಹೊರಡಿಸಿದೆ.

ರಾಜ್ಯದಲ್ಲಿ 153 ವಿಕಲಚೇತನರ ಸೇವಾ ಸಂಸ್ಥೆಯಲ್ಲಿ ಸರಿ ಸುಮಾರು 10,560 ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ. ಈ ಎಲ್ಲ ವಿದ್ಯಾರ್ಥಿಗಳಿಗೂ ಕ್ಷೀರಭಾಗ್ಯ ಒದಗಿಸಲು ತಯಾರಿ ನಡೆದಿದೆ. ಇದಕ್ಕಾಗಿ ಅಧಿಕೃತ ಮಾಹಿತಿ ಪಡೆಯಲಾಗುತ್ತಿದೆ. ಜಿಲ್ಲಾವಾರು ಮಾಹಿತಿ ಸಂಗ್ರಹ ಅಕ್ಟೋಬರ್‌ ಮೂರನೇ ವಾರದೊಳಗೆ ಪೂರ್ಣಗೊಳ್ಳಲಿದೆ. ನಂತರ, ಮಧ್ಯಾಹ್ನದ ಬಿಸಿಯೂಟ ವಿಭಾಗದ ಜಿಲ್ಲಾಮಟ್ಟದ ಅಧಿಕಾರಿಗಳ ಮೂಲಕ ವಿಕಲಚೇತನರ ಸೇವಾ ಸಂಸ್ಥೆಗೆ ಹಾಲು ವಿತರಿಸಲಾಗುತ್ತದೆ ಎಂದು ಹಿರಿಯ ಅಧಿಕಾರಿಯೊಬ್ಬರು ಮಾಹಿತಿ ನೀಡಿದರು.

ವಿಕಲಚೇತನ ಮಕ್ಕಳಿಗೆ ಕ್ಷೀರಭಾಗ್ಯ ಒದಗಿಸಲು ವಾರ್ಷಿಕ 92 ಲಕ್ಷ ರೂ.ಅನುದಾನ ಕೋರಿ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದ್ದೇವೆ. ಸರ್ಕಾರದಿಂದ ಒಪ್ಪಿಗೆಯೂ ಸಿಕ್ಕಿದೆ. ಕರ್ನಾಟಕ ಹಾಲು ಒಕ್ಕೂಟದವರು (ಕೆಎಂಎಫ್) ಎಲ್ಲ ರೀತಿಯ ಪೌಷ್ಟಿಕಾಂಶಯುಕ್ತ ಹಾಲಿನ ಪುಡಿ ಒದಗಿಸುತ್ತಾರೆ. ಅದರಲ್ಲಿ ಪ್ರತಿ 18 ಗ್ರಾಮ್‌ ಹಾಲಿನ ಪುಡಿಯಲ್ಲಿ 180 ಎಂಎಲ್‌ ಹಾಲನ್ನು ಸಿದ್ಧಪಡಿಸಿ ಮಕ್ಕಳಿಗೆ ಹಂಚುತ್ತೇವೆ. ಸದ್ಯ ಸರ್ಕಾರಿ ಶಾಲೆಯ ವಿದ್ಯಾರ್ಥಿಗಳಿಗೆ ಎಷ್ಟು ಪ್ರಮಾಣದ ಹಾಲು ನೀಡುತ್ತಿದ್ದೇವೋ ಅಷ್ಟೇ ಪ್ರಮಾಣದ ಹಾಲನ್ನು ವಿಕಲಚೇತನ ವಿದ್ಯಾರ್ಥಿಗಳಿಗೂ ವಿತರಿಸಲಿದ್ದೇವೆ ಎಂದು ವಿವರಿಸಿದರು.

ರಾಜ್ಯದಿಂದ ಬಿಸಿಯೂಟ ವ್ಯವಸ್ಥೆಯಿಲ್ಲ:
ರಾಜ್ಯದ 153 ಸೇವಾ ಸಂಸ್ಥೆಗಳಲ್ಲಿರುವ ವಿಕಲಚೇತನ ವಿದ್ಯಾರ್ಥಿಗಳಿಗೆ ಬಿಸಿಯೂಟದ ಜತೆಗೆ ಹಾಲು ನೀಡಲು ರಾಜ್ಯ ಸರ್ಕಾರ ಎಲ್ಲ ರೀತಿಯ ಸಿದ್ಧತೆ ಮಾಡಿಕೊಂಡಿತ್ತು. ಆದರೆ, ಬಿಸಿಯೂಟಕ್ಕಾಗಿ ಸೇವಾ ಸಂಸ್ಥೆಗಳು ಕೇಂದ್ರ ಸರ್ಕಾರದಿಂದ ಈಗಾಗಲೇ ಅನುದಾನ ಪಡೆಯುತ್ತಿರುವುದರಿಂದ ರಾಜ್ಯ ಸರ್ಕಾರ ಅದೇ ಉದ್ದೇಶಕ್ಕೆ ಅನುದಾನ ನೀಡಲು ಸಾಧ್ಯವಿಲ್ಲ ಎಂದು ಮಧ್ಯಾಹ್ನದ ಬಿಸಿಯೂಟ ವಿಭಾಗದ ಅಧಿಕಾರಿ ಸ್ಪಷ್ಟಪಡಿಸಿದರು.

Advertisement

ಒಕ್ಕೂಟದ ಬೇಡಿಕೆ :
ವಿಕಲಚೇತನರ ಮತ್ತು ಹಿರಿಯ ನಾಗರಿಕರ ಸಬಲೀಕರಣ ಇಲಾಖೆಯನ್ನು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯಿಂದ ಬೇರ್ಪಡಿಸಿ ಸ್ವತಂತ್ರ ಇಲಾಖೆ ಮಾಡಿ, ಪ್ರತ್ಯೇಕ ಬಜೆಟ್‌ ಮೀಸಲಿಡಬೇಕು. ವಿಕಲಚೇತನರ ಅಭಿವೃದ್ಧಿ ನಿಗಮ ಸ್ಥಾಪಿಸಿ, ವಿಕಲಚೇತನರು ಮತ್ತು ಬುದ್ಧಿಮಾಂದ್ಯರ ವಿಶೇಷ ಶಾಲೆಗಳಲ್ಲಿ ಕಾರ್ಯ ನಿರ್ವಹಿಸುವ ಶಿಕ್ಷಕರಿಗೆ ಸರ್ಕಾರಿ ಪ್ರಾಥಮಿಕ ಮತ್ತು ಪ್ರೌಢಶಾಲೆಗಳಲ್ಲಿ ದೊರೆಯುವ ಸೌಲಭ್ಯ, ಸೇವಾ ಭದ್ರತೆ ಒದಗಿಸಬೇಕು. ಮಕ್ಕಳಿಗೆ ಮಧ್ಯಾಹ್ನದ ಬಿಸಿಯೂಟದ ಜತೆಗೆ ಕ್ಷೀರ ಭಾಗ್ಯ ನೀಡಬೇಕು ಎಂದು ರಾಜ್ಯ ವಿಕಲಚೇತನರ ಸೇವಾ ಸಂಸ್ಥೆಗಳ ಒಕ್ಕೂಟದಿಂದ ಇತ್ತೀಚೆಗೆ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿಯವರಿಗೆ ಮನವಿ ಸಲ್ಲಿಸಲಾಗಿತ್ತು. ಅವರೂ ಭರವಸೆ ನೀಡಿದ್ದರು.

ರಾಜ್ಯ ವಿಕಲಚೇತನರ ಸೇವಾ ಸಂಸ್ಥೆಗಳ ವಿದ್ಯಾರ್ಥಿಗಳಿಗೆ ಕ್ಷೀರಭಾಗ್ಯ ನೀಡಲು ಸರ್ಕಾರ ಅಧಿಕೃತ ಆದೇಶ ಹೊರಡಿಸಿದೆ. ಜಿಲ್ಲಾಮಟ್ಟದಲ್ಲಿ ಮಾಹಿತಿ ಸಂಗ್ರಹ ಮಾಡುತ್ತಿದ್ದೇವೆ. ಹೆಚ್ಚುವರಿ ಅನುದಾನಕ್ಕೆ ಸಲ್ಲಿಸಿದ್ದ ಪ್ರಸ್ತಾವನೆಗೆ ಸರ್ಕಾರ ಒಪ್ಪಿಗೆ ಸೂಚಿಸಿದೆ. ನ.1ರಿಂದ ಕ್ಷೀರಭಾಗ್ಯ ವಿಕಲಚೇತನ ವಿದ್ಯಾರ್ಥಿಗಳಿಗೆ ಸಿಗಲಿದೆ.
– ಎಂ.ಆರ್‌.ಮಾರುತಿ, ಸಹ ನಿರ್ದೇಶಕ, ಮಧ್ಯಾಹ್ನ ಬಿಸಿಯೂಟ ಯೋಜನೆ.

– ರಾಜು ಖಾರ್ವಿ ಕೊಡೇರಿ

Advertisement

Udayavani is now on Telegram. Click here to join our channel and stay updated with the latest news.

Next