ಮಂಗಳೂರು: ಮಂಗಳೂರಿನಲ್ಲಿ ಕರ್ನಾಟಕ ಕ್ರಿಕೆಟ್ ಅಸೋಸಿಯೇಶನ್‌ನಿಂದ ಸ್ಟೇಡಿಯಂ ನಿರ್ಮಾಣಕ್ಕೆ ಜಾಗ ಹುಡುಕಾಟ ಅಂತಿಮಗೊಂಡಿದೆ. ಶೀಘ್ರ ಖರೀದಿ ಪ್ರಕ್ರಿಯೆ ನಡೆಯಲಿದೆ ಎಂದು ಕೆಎಸ್‌ಸಿಎ ಅಧ್ಯಕ್ಷ ರಘುರಾಮ್ ಭಟ್ ಹೇಳಿದರು.
ನಗರದಲ್ಲಿ ಮಂಗಳವಾರ ಕೆಎಸ್‌ಸಿಎ ಮಂಗಳೂರು ವಲಯ (ಕೊಡಗು, ಮಂಗಳೂರು, ಉಡುಪಿ ಸೇರಿದಂತೆ) 2023-24ನೇ ಸಾಲಿನ ಪ್ರಶಸ್ತಿ ವಿತರಣ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಮಾತನಾಡಿದರು. ಕ್ರಿಕೆಟ್‌ನಲ್ಲಿ ನಮ್ಮ ರಾಜ್ಯ ಪ್ರತಿಭಾವಂತರ ಆಗರ ಎನ್ನುವುದಕ್ಕೆ ನಮ್ಮ ಅಂಡರ್ 14, 19, ಬಾಲಕ ಬಾಲಕಿಯರು, ಅಂಡರ್-23 ಯುವಕರು ರಾಷ್ಟ್ರಮಟ್ಟದಲ್ಲಿ ಚಾಂಪಿಯನ್ ಆಗಿರುವುದು ನಿದರ್ಶನ. ನಮ್ಮ ಪ್ರತಿಭಾವಂತರಿಗೆ ಪ್ರೋತ್ಸಾಹ ಸಿಗಬೇಕಾದರೆ ಸೌಲಭ್ಯ ಗಳು ಬೇಕು, ಅದಕ್ಕಾಗಿ ಪುತ್ತೂರಿನಲ್ಲಿ ಈಗಾಗಲೇ ಒಂದು ಜಾಗ ಅಂತಿಮಗೊಂಡಿದೆ, ಮಂಗಳೂರಿನಲ್ಲೂ ಜಾಗ ಗುರುತಿಸಲಾಗಿದ್ದು, ಡಿಸಿ ಜತೆ ಸಭೆ ನಡೆಸಲಾಗಿದೆ ಎಂದರು.
ಜಿಲ್ಲಾಧಿಕಾರಿ ಮುಲ್ಲೆ„ ಮುಗಿಲನ್ ಮುಖ್ಯ ಅತಿಥಿಯಾಗಿ ಮಾತನಾಡಿ, ಇಂದು ದೇಶದೆಲ್ಲೆಡೆ ಐಪಿಎಲ್‌ನಿಂದಾಗಿ ಕ್ರಿಕೆಟ್ ಪ್ರತಿಭೆಗೆ ಅವಕಾಶ ಸಿಗುವಂತಾಗಿದೆ. ಇದರಲ್ಲಿ ಮಂಗಳೂರಿನ ಪ್ರತಿಭೆಗಳೂ ಮಿಂಚುವಂತಾಗಲಿ ಎಂದು ಆಶಿಸಿ, ಜಿಲ್ಲೆಯಲ್ಲಿ ಕ್ರಿಕೆಟ್ ಸೌಲಭ್ಯ ಉತ್ತಮಗೊಳ್ಳುವುದಕ್ಕೆ ಎಲ್ಲ ನೆರವು ನೀಡಲಾಗುವುದು ಎಂದರು.
ಮಂಗಳೂರು ವಲಯದ ಪ್ರಭಾರಿ ಡಿ.ಟಿ. ಕುಮಾರ್ ಅವರು ಮಾತನಾಡಿ, ರಾಜ್ಯದಿಂದ ಭಾರತ ತಂಡಕ್ಕೆ ಕೆ.ಎಲ್. ರಾಹುಲ್ ಬಳಿಕ ಯಾರೂ ಆಯ್ಕೆಯಾಗದಿರುವುದು ಗಮ ನಾರ್ಹ ವಿಚಾರ. ನಮ್ಮಲ್ಲಿ ಪ್ರತಿಭೆಗೆ ಕೊರತೆ ಯಿಲ್ಲ, ಆದರೆ ಸೂಕ್ತ ಮೂಲಸೌಕರ್ಯ ಒದಗಿಸುವ ಸವಾಲು ಮುಂದಿದೆ ಎಂದರು.
ಕೆಎಸ್‌ಸಿಎ ಮಂಗಳೂರು ವಲಯ ಅಧ್ಯಕ್ಷ ಮನೋಹರ್ ಅಮೀನ್ ಸ್ವಾಗತಿಸಿದರು, ಕೆಎಸ್‌ಸಿಎ ಸಂಚಾಲಕ ರತನ್ ಕುಮಾರ್, ಕೆಎಸ್‌ಸಿಎ ಸದಸ್ಯ ಮಂಜುನಾಥ್ ರಾಜು ಉಪಸ್ಥಿತರಿದ್ದರು.