ಬೆಂಗಳೂರು: ಸೋಮವಾರ ಮಹಾರಾಜ ಟಿ20 ಕೂಟಕ್ಕೆ ಪದಾರ್ಪಣೆ ಮಾಡಿದ್ದ ಮಂಗಳೂರು ಡ್ರ್ಯಾಗನ್ಸ್, ಮಂಗಳವಾರ ಮೈಸೂರು ವಾರಿಯರ್ಸ್ ವಿರುದ್ಧ ರೋಚಕ ಜಯ ಗಳಿಸಿತು. ಬೃಹತ್ ಮೊತ್ತ ದಾಖಲಾದ ಈ ಪಂದ್ಯದಲ್ಲಿ ಇತ್ತಂಡಗಳೂ ಗೆಲುವಿಗಾಗಿ ಪ್ರಬಲ ಪೈಪೋಟಿ ನಡೆಸಿದವು.
ಮೊದಲು ಬ್ಯಾಟ್ ಮಾಡಿದ ಕರುಣ್ ನಾಯರ್ ನಾಯಕತ್ವದ ಮೈಸೂರು ವಾರಿಯರ್ಸ್, 20 ಓವರ್‌ಗಳಲ್ಲಿ 5 ವಿಕೆಟ್ ನಷ್ಟಕ್ಕೆ 201 ರನ್ ಗಳಿಸಿತು. ಇದನ್ನು ಬೆನ್ನತ್ತಿದ ಮಂಗಳೂರು ಡ್ರ್ಯಾಗನ್ಸ್ ಕೇವಲ 18.5 ಓವರ್‌ಗಳಲ್ಲಿ ಸರಿಯಾಗಿ 5 ವಿಕೆಟ್‌ಗಳ ನಷ್ಟಕ್ಕೆ 202 ರನ್ ಗಳಿಸಿ ಜಯಭೇರಿ ಬಾರಿಸಿತು.
ಮೈಸೂರು ಪರ ನಾಯಕ ಕರುಣ್ ಸ್ಫೋಟಕ ಬ್ಯಾಟಿಂಗ್ ನಡೆಸಿದರು. 39 ಎಸೆತ ಎದುರಿಸಿದ ಅವರು 9 ಬೌಂಡರಿ, 2 ಸಿಕ್ಸರ್ ಸಹಿತ 77 ರನ್ ಗಳಿಸಿದರು. ಇವರಿಗೆ ಕೋದಂಡ ಕಾರ್ತಿಕ್ (29), ರಾಹುಲ್ ರಾವತ್ (24) ನೆರವು ನೀಡಿದರು. ಕೊನೆಯ ಹಂತದಲ್ಲಿ ಕೇವಲ 10 ಎಸೆತಗಳಲ್ಲಿ ಮನೋಜ್ ಭಾಂಡಗೆ 26 ರನ್ ಹೊಡೆದರು.
ಈ ಬೃಹತ್ ಮೊತ್ತವನ್ನು ಮಂಗಳೂರು ಸುಲಭವಾಗಿ ಮೀರಿ ನಿಂತಿತು. ಬಿ.ಆರ್. ಶರತ್ 61 ಎಸೆತಗಳಲ್ಲಿ 9 ಬೌಂಡರಿ, 5 ಸಿಕ್ಸರ್ ಸಹಿತ 111 ರನ್ ಸಿಡಿಸಿದರು. ಅವರ ಬ್ಯಾಟಿಂಗ್ ತೀವ್ರತೆ ಹೇಗಿತ್ತೆಂದರೆ ಇಡೀ ಮೈದಾನದ ತುಂಬೆಲ್ಲ ಚೆಂಡು ಹರಿದಾಡಿತು. ಕಡೆಗೂ ಇವರನ್ನು ಔಟ್ ಮಾಡಲು ಆಗಲಿಲ್ಲ. ಇನ್ನೊಂದು ಕಡೆ ಆರಂಭಿಕ ರೋಹನ್ ಪಾಟೀಲ್ 27 ಎಸೆತಗಳಲ್ಲಿ 54 ರನ್ ಗಳಿಸಿದರು. ಇದರಲ್ಲಿ 5 ಬೌಂಡರಿ, 3 ಸಿಕ್ಸರ್‌ಗಳು ಸೇರಿದ್ದವು. ಮೈಸೂರು ಪರ ಎಂ. ವೆಂಕಟೇಶ್, ಜೆ. ಸುಚಿತ್ ತಲಾ 2 ವಿಕೆಟ್ ಪಡೆದರು.
ಸಂಕ್ಷಿಪ್ತ ಸ್ಕೋರ್
ಮೈಸೂರು ವಾರಿಯರ್ಸ್ 20 ಓವರ್‌ಗಳಲ್ಲಿ 5 ವಿಕೆಟಿಗೆ 201 (ಕರುಣ್ ನಾಯರ್ 77, ಕೋದಂಡ ಕಾರ್ತಿಕ್ 29). ಮಂಗಳೂರು 18.5 ಓವರ್‌ಗಳಲ್ಲಿ 5 ವಿಕೆಟಿಗೆ 202 (ಬಿ.ಆರ್.ಶರತ್ 111, ರೋಹನ್ ಪಾಟೀಲ್ 54, ಎಂ.ವೆಂಕಟೇಶ್ 36ಕ್ಕೆ 2).