Advertisement

ಸಿಇಒ ಹುಡುಕಾಟದಲ್ಲಿ ಕೆಎಸ್‌ಸಿಎ: ಸಂದರ್ಶನ ಆರಂಭ

12:28 PM Aug 18, 2017 | |

ಬೆಂಗಳೂರು: ಕೆಲ ದಿನಗಳ ಹಿಂದಷ್ಟೇ ಭಾರತ ಹಾಕಿ ದಿಗ್ಗಜ ಎಂ.ಪಿ.ಗಣೇಶ್‌ ಅವರಿಂದ ತೆರವಾದ ಕೆಎಸ್‌ಸಿಎ (ರಾಜ್ಯ ಕ್ರಿಕೆಟ್‌ ಸಂಸ್ಥೆ) ಮುಖ್ಯ ಕಾರ್ಯನಿರ್ವಹಣಾಧಿಕಾರಿ (ಸಿಇಒ) ಹುದ್ದೆಗೆ ಗುರುವಾರದಿಂದ ಸಂದರ್ಶನ ಪ್ರಕ್ರಿಯೆ ಆರಂಭವಾಗಿದೆ. ಈ ವಿಷಯವನ್ನು ಕೆಎಸ್‌ಸಿಎ ಉನ್ನತ ಮೂಲಗಳು ಉದಯವಾಣಿಗೆ ಖಚಿತಪಡಿಸಿವೆ. ಮುಂದಿನ ನಾಲ್ಕರಿಂದ ಐದು ದಿನದ ಒಳಗಾಗಿ ಹೊಸ ಸಿಇಒ ಹೆಸರು ಅಧಿಕೃತವಾಗಿ ಪ್ರಕಟಗೊಳ್ಳಲಿದೆ ಎನ್ನಲಾಗಿದೆ.

Advertisement

ಗುರುವಾರ ಬೆಳಗ್ಗೆಯಿಂದಲೇ ಸಂದರ್ಶನ ಆರಂಭ: ಜೂನ್‌ 1ಕ್ಕೆ ಎಂ.ಪಿ.ಗಣೇಶ್‌ ಸಿಇಓ ಹುದ್ಧೆಗೆ ರಾಜೀನಾಮೆ ನೀಡಿದ್ದರು. ಬಳಿಕ ಅವರು ಹಾಕಿ ಇಂಡಿಯಾ ಅಕಾಡೆಮಿಗೆ ಮುಖ್ಯ ಕಾರ್ಯನಿರ್ವಹಣಾಧಿಕಾರಿಯಾಗಿ ಸೇರಿಕೊಂಡಿದ್ದರು. ಸದ್ಯ ಎರಡೂವರೆ ತಿಂಗಳ ಬಳಿಕ ಕೆಎಸ್‌ಸಿಎ ಹೊಸ ಸಿಇಒ ನೇಮಕ ಪ್ರಕ್ರಿಯೆಗೆ ಚಾಲನೆ ನೀಡಿದೆ. ಇದಕ್ಕಾಗಿ ಆಸಕ್ತರಿಂದ ಅರ್ಜಿ ಆಹ್ವಾನಿಸಿತ್ತು. ಸದ್ಯ ಸಂದರ್ಶನ ಆರಂಭವಾಗಿದೆ. ಗುರುವಾರ ಬೆಳಗ್ಗೆ ಒಂದಷ್ಟು ಮಂದಿ ಸಂದರ್ಶನ ಎದುರಿಸಿದ್ದಾರೆ. ಇವರಲ್ಲಿ ಕೆಲವರು ಕ್ರೀಡಾ ಕ್ಷೇತ್ರದಲ್ಲಿ ಸಾಧನೆ ಮಾಡಿದವರು. ಇನ್ನೂ ಕೆಲವರು ಖಾಸಗಿ ಕ್ಷೇತ್ರದಲ್ಲಿ
ಆಡಳಿತ ನಿರ್ವಹಿಸಿದವರು ಎನ್ನಲಾಗಿದೆ. 

ಲೋಧಾ ಶಿಫಾರಸಿಗೂ ಹಲವು ವರ್ಷ ಮುನ್ನವೇ ಸಿಇಒ ನೇಮಕ
ಬಿಸಿಸಿಐ (ಭಾರತೀಯ ಕ್ರಿಕೆಟ್‌ ನಿಯಂತ್ರಣ ಮಂಡಳಿ)ನಲ್ಲಿ ಪಾರದರ್ಶಕ ಆಡಳಿತ ತರುವ ನಿಟ್ಟಿನಲ್ಲಿ ನಿವೃತ್ತ ನ್ಯಾಯಮೂರ್ತಿ ಲೋಧಾ ಒಳಗೊಂಡ ಸಮಿತಿ ಹಲವು ಶಿಫಾರಸು ಮಾಡಿತ್ತು. ಇದರಲ್ಲಿ ಬಿಸಿಸಿಐ ಸೇರಿದಂತೆ ರಾಜ್ಯ ಕ್ರಿಕೆಟ್‌ ಸಂಸ್ಥೆಗಳಿಗೆ ಸಿಇಒ ನೇಮಕ ಕೂಡ ಪ್ರಮುಖವಾದದ್ದು. ಆದರೆ ಇಲ್ಲಿ ಗಮನಿಸಬೇಕಾದ ಪ್ರಮುಖ ಅಂಶವೆನೆಂದರೆ ಲೋಧಾ ಸಮಿತಿ ಶಿಫಾರಸಿಗೂ 15 ವರ್ಷಕ್ಕೂ ಮೊದಲೇ ಕರ್ನಾಟಕ ರಾಜ್ಯ ಕ್ರಿಕೆಟ್‌ ಸಂಸ್ಥೆ (ಕೆಎಸ್‌ಸಿಎ) ಸಿಇಒ ನೇಮಕ ಮಾಡಿಕೊಂಡಿತ್ತು. ಈ ಮೂಲಕ ಆಡಳಿತದಲ್ಲಿ ಪಾರದರ್ಶಕತೆ ತರುವ ಪ್ರಮಾಣಿಕ ಪ್ರಯತ್ನವನ್ನು ಅಂದೇ ನಡೆಸಿತ್ತು. 2005-2006ರಿಂದ ಎಂ.ಪಿ.ಗಣೇಶ್‌ ಕೆಎಸ್‌ಸಿಎ ಸಿಇಒ ಆಗಿ ಕೆಲಸ ನಿರ್ವಹಿಸಿದ್ದರು. ಇವರು ಸುದೀರ್ಘ‌ 8 ವರ್ಷ ಕೆಲಸ ಮಾಡಿದ್ದರು. ಕೆಎಸ್‌ಸಿಎಗೆ ಅತೀ ಹೆಚ್ಚು ವರ್ಷ ಸೇವೆ ಮಾಡಿದ ಹೆಗ್ಗಳಿಕೆ ಎಂ.ಪಿ.ಗಣೇಶ್‌ರವರದ್ದು. 2016ರಲ್ಲಿ ಸರ್ವೋಚ್ಚ ನ್ಯಾಯಾಲಯದ ಆದೇಶದ ನಂತರ ಬಿಸಿಸಿಐ ಅನಿವಾರ್ಯವಾಗಿ ರಾಹುಲ್‌ ಜೊಹ್ರಿಯನ್ನು ಸಿಇಒ ಆಗಿ ನೇಮಿಸಿಕೊಂಡಿತ್ತು. ಬಿಸಿಸಿಐಗೆ ಹೋಲಿಸಿದರೆ ರಾಜ್ಯ ಕ್ರಿಕೆಟ್‌ ಸಂಸ್ಥೆ ಹಲವು ವರ್ಷ ಮುಂದಿದೆ ಎನ್ನಬಹುದು. ದೇಶದ ವಿವಿಧ ರಾಜ್ಯಗಳ ಕ್ರಿಕೆಟ್‌ ಸಂಸ್ಥೆಯಲ್ಲಿ ಈಗಲೂ ಸಿಇಒ ಇಲ್ಲ ಎನ್ನುವುದನ್ನು ಇಲ್ಲಿ ಗಮನಿಸಬಹುದು.

ಸಂದರ್ಶನದಲ್ಲಿ ಭಾಗಿಯಾದವರ ಹೆಸರು ಬಹಿರಂಗಪಡಿಸಲ್ಲ
ಸಂದರ್ಶನ ಪೂರ್ಣವಾಗಿ ನಡೆದ ಬಳಿಕ ಕೆಎಸ್‌ಸಿಎ ಆಡಳಿತ ಮಂಡಳಿ ಹೊಸ ಸಿಇಒ ನೇಮಕವನ್ನು ಅಂತಿಮಗೊಳಿಸಲಿದೆ. ಈ ಬಗ್ಗೆ ಕೆಎಸ್‌ಸಿಎನ ಹೆಸರು ಹೇಳಲಿಚ್ಛಿಸದ ಅಧಿಕಾರಿಯೊಬ್ಬರು ಪ್ರತಿಕ್ರಿಯಿಸಿದ್ದಾರೆ. 

ಅವರು ಹೇಳಿದ್ದು ಇಷ್ಟು: ಎಂ.ಪಿ.ಗಣೇಶ್‌ರಿಂದ ತೆರವಾದ ಸ್ಥಾನ ತುಂಬುವುದು ಕಷ್ಟ. ಅವರ ಆಡಳಿತ ಕಾಲದಲ್ಲಿ ರಾಜ್ಯ ಕ್ರಿಕೆಟ್‌ ಸಂಸ್ಥೆಯಲ್ಲಿ ಸಬ್‌ ಏರ್‌, ಸೋಲಾರ್‌ ಸೇರಿದಂತೆ ಅನೇಕ ಯೋಜನೆಗಳನ್ನು ಯಶಸ್ವಿಯಾಗಿ ಜಾರಿಗೊಳಿಸಿದ್ದೇವೆ. ಅಂತಹ ಮತ್ತೋರ್ವ ಅಧಿಕಾರಿಯ ಹುಡುಕಾಟದಲ್ಲಿದ್ದೇವೆ. ಕ್ರೀಡಾ ಕ್ಷೇತ್ರದಲ್ಲಿ ಸಾಧನೆ ಮಾಡಿದ ಅನುಭವಿಗಳಿಗೆ ಮೊದಲ ಆದ್ಯತೆ ಇದೆ. ಈಗ ತಾನೇ ಸಂದರ್ಶನ ಶುರುವಾಗಿದೆ. ಒಂದಷ್ಟು ಮಂದಿ ಸಂದರ್ಶನಕ್ಕೆ ಹಾಜರಾಗಿದ್ದಾರೆ. ಅವರನ್ನು ಸಂದರ್ಶನ ನಡೆಸಿದ್ದೇವೆ. ಮುಂದಿನ 4-5 ದಿನದ ಒಳಗಾಗಿ ಹೊಸ ಸಿಇಒ ನೇಮಕ ಮಾಡಲಿದ್ದೇವೆ. ಸದ್ಯ ಸಂದರ್ಶನಕ್ಕೆ ಬಂದವರ ಹೆಸರನ್ನು ಬಹಿರಂಗಪಡಿಸಲು ಸಾಧ್ಯವಿಲ್ಲ ಎಂದು ತಿಳಿಸಿದರು. 

Advertisement

ಹೇಮಂತ್‌ ಸಂಪಾಜೆ

Advertisement

Udayavani is now on Telegram. Click here to join our channel and stay updated with the latest news.

Next