ಬಹ್ರೈನ್: ಇಲ್ಲಿನ ರಾಜ್ಯ ಪ್ರಶಸ್ತಿ ವಿಜೇತ ಕನ್ನಡ ಸಂಘ ಬಹ್ರೈನ್ “ಕೆಎಸ್‌ಬಿ ಚಾಂಪಿಯನ್ಸ್ ಟ್ರೋಫಿ 2024′ ಎನ್ನುವ ಮೃದು ಚೆಂಡಿನ ಹೊನಲು ಬೆಳಕಿನ ಕ್ರಿಕೆಟ್ ಪಂದ್ಯಾಟವನ್ನು ಇಂಡಿಯನ್ ಕ್ಲಬ್‌ನ ಕ್ರೀಡಾಂಗಣದಲ್ಲಿ ಆಯೋಜಿಸಿದ್ದು ಇದರ ಉದ್ಘಾಟನೆಯು ಇತ್ತೀಚೆಗೆ ಜರುಗಿತು.
ನಿಗದಿತ ಓವರ್‌ಗಳ ಪಂದ್ಯಾಟದಲ್ಲಿ ವನಿತೆಯರ ಹಾಗೂ ಪುರುಷರ 50ಕ್ಕೂ ಹೆಚ್ಚು ತಂಡಗಳು ಪಾಲ್ಗೊಳ್ಳುತ್ತಿದ್ದು ಈ ಪಂದ್ಯಾಟವು ಸುಮಾರು ಮೂರು ವಾರಗಳ ಕಾಲ ದ್ವೀಪದ ಕ್ರಿಕೆಟ್ ಪ್ರೇಮಿಗಳನ್ನು ರಂಜಿಸಲಿದೆ.
ಈ ಪಂದ್ಯಾಟದ ಅಂತಿಮ ಹಂತದ ಪಂದ್ಯವನ್ನು ವೀಕ್ಷಿಸಲು ಹಾಗೂ ಸಮಾರೋಪ ಸಮಾರಂಭದಲ್ಲಿ ಪಾಲ್ಗೊಳ್ಳಲು ಭಾರತೀಯ ಕ್ರಿಕೆಟ್ ತಂಡದ ಮಾಜಿ ಆಟಗಾರ, ವೇಗದ ಎಸೆತಗಾರ ಹಾಗೂ ಪ್ರಸಕ್ತ ಐಸಿಸಿ ಪಂದ್ಯಾಟಗಳ ತೀರ್ಪುಗಾರರಾಗಿ ಕಾರ್ಯನಿರ್ವಹಿಸುತ್ತಿರುವ ಜಾವಗಲ್ ಶ್ರೀನಾಥ್ ಅವರು ಮುಖ್ಯ ಅತಿಥಿಯಾಗಿ ಭಾಗವಹಿಸಲಿದ್ದಾರೆ. ಅದೇ ದಿನ ಜಾವಗಲ್ ಶ್ರೀನಾಥ್ ಅವರಿಗೆ ಕನ್ನಡ ಭವನದ ಸಭಾಂಗಣದಲ್ಲಿ ಅಭಿನಂದನ ಸಮಾರಂಭವೊಂದನ್ನು ಆಯೋಜಿಸಿದ್ದು ಇಲ್ಲಿನ ಭಾರತೀಯ ದೂತಾವಾಸದ ರಾಯಭಾರಿಗಳಾದ ವಿನೋದ್ ಕೆ .ಜಾಕೋಬ್ ಈ ಅಭಿನಂದನ ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳಲಿದ್ದಾರೆ.
ಮೂರು ವಾರಗಳ ಕಾಲ ಜರುಗಲಿರುವ ಲೀಗ್ ಹಂತದ ಪಂದ್ಯಾಟ ವನಿತೆಯರ ಹಾಗೂ ಪುರುಷರ ಫೈನಲ್‌ನಲ್ಲಿ ವಿಜೇತರಾದವರಿಗೆ ಜಾವಗಲ್ ಶ್ರೀನಾಥ್‌ರವರು ಬಹುಮಾನಗಳನ್ನು ವಿತರಿಸಲಿರುವರು. ಪಂದ್ಯಾಟದ ಸಮಾರೋಪ ಸಮಾರಂಭದ ಅಂಗವಾಗಿ ವರ್ಣರಂಜಿತ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದ್ದು ದ್ವೀಪದ ನೂರಾರು ಕ್ರಿಕೆಟ್ ಪ್ರೇಮಿಗಳು ಈ ಸಮಾರಂಭಕ್ಕೆ ಸಾಕ್ಷಿಯಾಗಲಿದ್ದಾರೆ.
ಪಂದ್ಯಾವಳಿಯ ಉದ್ಘಾಟನ ಸಮಾರಂಭದಲ್ಲಿ ಕನ್ನಡ ಸಂಘದ ಪ್ರಭಾರ ಅಧ್ಯಕ್ಷರಾದ ಮಹೇಶ್ ಕುಮಾರ್ ಹಾಗೂ ಇಲ್ಲಿನ ವಿವಿಧ ಸಂಘಟನೆಗಳ ಪದಾಧಿಕಾರಿಗಳು ಉಪಸ್ಥಿತರಿದ್ದು ಪಂದ್ಯಾಟಕ್ಕೆ ಶುಭ ಹಾರೈಸಿದರು. ಕನ್ನಡ ಸಂಘದ ಪ್ರಧಾನ ಕಾರ್ಯದರ್ಶಿ ರಾಮಪ್ರಸಾದ್ ಅಮ್ಮೆನಡ್ಕ ನೆರೆದವರನ್ನು ಸ್ವಾಗತಿಸಿ ವಂದಿಸಿದರು. ಕ್ರೀಡಾ ಕಾರ್ಯದರ್ಶಿ ಜೋನ್ ದೀಪಕ್ ಅವರ ನೇತೃತ್ವದಲ್ಲಿ ಜರುಗಲಿರುವ ಈ ಪಂದ್ಯಾಟದ ಪ್ರಧಾನ ಸಂಯೋಜಕರಾಗಿ ಡಿ.ರಮೇಶ್ ಅವರು ಕಾರ್ಯನಿರ್ವಹಿಸುತ್ತಿದ್ದಾರೆ.
ವರದಿ: ಕಮಲಾಕ್ಷ ಅಮೀನ್