ಶಿವಮೊಗ್ಗ: ಸಿ.ಎಂ.ಇಬ್ರಾಹಿಂ ಬಿಜೆಪಿಗೆ ಬರುತ್ತೇನೆ ಎಂದರೆ ಯಾವುದೇ ಕಾರಣಕ್ಕೂ ಸೇರಿಸಿಕೊಳ್ಳುವುದಿಲ್ಲ ಎಂದು ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್.ಈಶ್ವರಪ್ಪ ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿ, ನಮ್ಮ ಪಕ್ಷದೊಳಗೆ ಅವರ ಹೆಜ್ಜೆಯ ಧೂಳು ಕೂಡ ತಗೋಳಲ್ಲ. ಸಿ.ಎಂ.ಇಬ್ರಾಹಿಂ ಏನು ಎಂಬುದು ಗೊತ್ತಿದೆ. ಅವರು ಎಷ್ಟರ ಮಟ್ಟಿಗೆ ಅನ್ಯಾಯ ಮಾಡಿದ್ದಾರೆ ಅನ್ನೋದು ಗೊತ್ತು. ಅವರನ್ನು ಮಂತ್ರಿಮಂಡಲದಿಂದ ತೆಗೆಯುವವರೆಗೆ ಬಿಜೆಪಿ ಹೋರಾಟ ಮಾಡಿತ್ತು. ಬಿಜೆಪಿಯ ಒತ್ತಾಯದಿಂದಲೇ ಅವರನ್ನು ಕಿತ್ತೆಸೆಯಲಾಗಿತ್ತು ಎಂದರು.
ಭದ್ರಾವತಿಯಲ್ಲಿ ಅವರ ಅಣ್ಣ-ತಮ್ಮಂದಿರು ಏನೇನು ಅನ್ಯಾಯ ಮಾಡಿದ್ದಾರೆ ಎಂಬುದು ಜಿಲ್ಲೆಯ-ರಾಜ್ಯದ ಜನರಿಗೆ ಗೊತ್ತಿದೆ. ಹೀಗಾಗಿ, ಅವರನ್ನು ಬಿಜೆಪಿಗೆ ಸೇರಿಸಿಕೊಳ್ಳುವ ಪ್ರಶ್ನೆಯೇ ಇಲ್ಲ. ಅಲ್ಲದೇ ಇದುವರೆಗೂ ಅವರೂ ಸಹ ಬಿಜೆಪಿಗೆ ಸೇರುವ ಮಾತನಾಡಿಲ್ಲ. ಮಾಧ್ಯಮದವರು ನೀವು ಕೇಳಿದ್ದಕ್ಕೆ ಹೇಳುತ್ತಿದ್ದೇನೆ ಎಂದರು.
ಸೂಕ್ತ ನಿರ್ಣಯ ಕೈಗೊಳ್ಳಲಿ :
ಉಡುಪಿ, ಭದ್ರಾವತಿ ಸೇರಿ ಕೆಲವು ಕಾಲೇಜುಗಳಲ್ಲಿ ನಡೆಯುತ್ತಿರುವ ಹಿಜಾಬ್ ವಿವಾದಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡಿದ ಸಚಿವ ಈಶ್ವರಪ್ಪ, ರಾಜ್ಯದಲ್ಲಿ ಹಿಂದೂ-ಮುಸ್ಲಿಂ ಬಾಂಧವರು ಅಣ್ಣ-ತಮ್ಮಂದಿರಂತೆ ಒಟ್ಟಾಗಿ ಬದುಕುತ್ತಿರುವ ಸಂದರ್ಭದಲ್ಲಿ ಕಾನೂನು ಸುವ್ಯವಸ್ಥೆಗೆ ಧಕ್ಕೆ ತರಲು ಗೊಂದಲ ಉಂಟು ಮಾಡುವ ಪ್ರಯತ್ನ ನಡೆಯುತ್ತಿದೆ. ಆದ್ದರಿಂದ ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಆಯಾ ಶಾಲೆ- ಕಾಲೇಜುಗಳ ಆಡಳಿತ ಮಂಡಳಿಗಳು ಸೂಕ್ತ ನಿರ್ಧಾರ ಕೈಗೊಂಡು ತಮ್ಮ ಕರ್ತವ್ಯ ನಿರ್ವಹಿಸಬೇಕು ಎಂದರು.