ವಿಜಯಪುರ: ಚಾಮುಂಡಿ ಕ್ಷೇತ್ರದಲ್ಲಿ ಸೊತು ಮುಖ್ಯಮಂತ್ರಿ ಸ್ಥಾನ ಕಳೆದುಕೊಂಡರೂ ಸಿದ್ಧರಾಮಯ್ಯ ಅವರಿಗೆ ಬುದ್ಧಿ ಬಂದಿಲ್ಲ. ಕಾಂಗ್ರೆಸ್ ಯಾವ ನಾಯಕರ ಬೆಂಬಲ ಇಲ್ಲದಿದ್ದರೂ ಮತ್ತೊಮ್ಮೆ ಮುಖ್ಯಮಂತ್ರಿ ಆಗುತ್ತೇನೆ ಎಂದು ಬಾಲೀಷವಾಗಿ ಹೇಳಿಕೊಳ್ಳುತ್ತಿದ್ದಾರೆ ಎಂದು ಗ್ರಾಮೀಣಾಭಿವೃದ್ಧಿ ಪಂಚಾಯತ್ ರಾಜ್ ಸಚಿವ ಕೆ.ಎಸ್.ಈಶ್ವರಪ್ಪ ಟೀಕಾ ಪ್ರಹಾರ ನಡೆಸಿದ್ದಾರೆ.
ಗುರುವಾರ ನಗರದಲ್ಲಿ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ತತ್ವ ಸಿದ್ಧಾಂತಗಳೇ ಇಲ್ಲದ ಕಾಂಗ್ರಸ್, ಗೋವಿನ ಶಾಪದಿಂದ ಅಧಿಕಾರ ಕಳೆದುಕೊಂಡಿದೆ. ರಾಮನ ಶಾಪದಿಂದಾಗಿ ದೇಶದಲ್ಲಿ ಅಸ್ತಿತ್ವ ಇಲ್ಲದಂತಾಗಿದೆ. ಪ್ರಾದೇಶಿಕ ಪಕ್ಷಕ್ಕಿಂತ ಕನಿಷ್ಠ ಹಂತಕ್ಕೆ ಕುಸಿಯುತ್ತಿರುವ ಆ ಪಕ್ಷ ನಾಯಕ ರಾಹುಲ್ ಗಾಂಧಿ ತಾವೇನು ಮಾಡುತ್ತಿದ್ಧೇವೆ ಎಂದು ಅವರಿಗೇ ತಿಳಿಯದಂತೆ ವರ್ತಿಸುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದರು.
ದೇಶದಲ್ಲಿ ಮೀಸಲು ಸೌಲಭ್ಯ ಉಳ್ಳವರೇ ಅನುಭವಿಸುತ್ತಿದ್ದಾರೆ. ರಾಜಕೀಯ ಮೀಸಲು ಅಧಿಕಾರ ಕೂಡ ಸಿರಿವಂತರೇ ಅನುಭಸುತ್ತಿದ್ದಾರೆ. ಮೀಸಲು ಸೌಲಭ್ಯದಿಂದಲೇ ಅಪ್ಪ ಸಂಸದ, ಮಗ ಶಾಸಕ ಆಗುತ್ತಿದ್ದಾರೆ. ಕೆಲವೇ ಕೆಲವರ ಪಾಲಾಗಿರುವ ಇಂಥ ಮೀಸಲು ಆರ್ಥಿಕ ಶೋಷಿತ ಎಲ್ಲರಿಗೂ ಮೀಸಲು ಸಿಗಬೇಕಿದೆ. ಹೀಗಾಗಿ ಇದೀಗ ಮೀಸಲು ಸೌಲಭ್ಯಕ್ಕಾಗಿ ನಡೆಯುತ್ತಿರುವ ಹೋರಾಟಗಳು ಸ್ವಾಗತಾರ್ಹ ಎಂದರು.
ಇದನ್ನೂ ಓದಿ:ಬಹಿರಂಗ ಟೀಕೆ ಸಲ್ಲದು, ಪಕ್ಷದ ವೇದಿಕೆಯಲ್ಲಿ ಚರ್ಚಿಸಲಿ : ಯತ್ನಾಳಗೆ ಈಶ್ವರಪ್ಪ ಕಿವಿಮಾತು
ರಾಜ್ಯದಲ್ಲಿ ಯಡಿಯೂರಪ್ಪ ಸರ್ಕಾರದಲ್ಲಿ ಯಾವ ಗೊಂದಲಗಳೂ ಇಲ್ಲ ಎಂದ ಸಚಿವ ಈಶ್ವರಪ್ಪ, ಎಲ್ಲ ಇಲಾಖೆಗಳೂ ಸರ್ಕಾರದ ಯೋಜನೆಗಳನ್ನು ಅರ್ಹ ಫಲಾನುಭವಿಗಳಿಗೆ ತಲುಪಿಸುವ ಉತ್ತಮ ಕೆಲಸ ಮಾಡುತ್ತಿದೆ ಎಂದರು.
ದೇಶದ್ರೋಹಿ ಮುಸ್ಲಿಂ ಲೀಗ್, ದೇಶವನ್ನು ದಿವಾಳಿ ಮಾಡಿದ ಕಾಂಗ್ರೆಸ್ ಪಕ್ಷದೊಂದಿಗೆ ಬಿಜೆಪಿ ಎಂದಿಗೂ, ಯಾವ ಕಾರಣಕ್ಕೂ ಮೈತ್ರಿ ಮಾಡಿಕೊಳ್ಳಲು ಸಾಧ್ಯವಿಲ್ಲ ಎಂದರು.