ಶಿವಮೊಗ್ಗ : ರಾಹುಲ್ ಗಾಂಧಿ ಕಾಲಿಟ್ಟ ಕಡೆಯಲೆಲ್ಲ ಕಾಂಗ್ರೆಸ್ ಸೋಲುವುದು ಖಚಿತ ಎಂದು ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್. ಈಶ್ವರಪ್ಪ ಟೀಕಿಸಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬೆಳಗಾವಿ ಲೋಕಸಭೆ ಚುನಾವಣೆ ಸೇರಿದಂತೆ ಮಸ್ಕಿ ಮತ್ತು ಬಸವಕಲ್ಯಾಣ ವಿಧಾನಸಭಾ ಚುನಾವಣೆಗೆ ಬಿಜೆಪಿ ಎಲ್ಲ ರೀತಿಯ ಸಿದ್ಧತೆ ನಡೆಸಿದ್ದು, 3 ಕ್ಷೇತ್ರದಲ್ಲೂ ಜಯ ಖಚಿತ. ರಾಹುಲ್ ಗಾಂಧಿ ಕರ್ನಾಟಕಕ್ಕೆ ಕಾಲಿಟ್ಟರು. ಇಲ್ಲಿ ಕಾಂಗ್ರೆಸ್ ಸೋತು ಹೋಯಿತು. ಹಾಗೆಯೇ ಅವರು ಎಲ್ಲೆಲ್ಲಿ ಹೋಗುತ್ತಾರೋ ಅಲ್ಲೆಲ್ಲ ಕಾಂಗ್ರೆಸ್ ಸೋಲುವುದು ಖಚಿತವಾಗಿದೆ. ಅವರ ಕ್ಷೇತ್ರ ಉತ್ತರಪ್ರದೇಶ ಬಿಟ್ಟು ಕೇರಳಕ್ಕೆ ಏಕೆ ಹೋದರೊ ಗೊತ್ತಿಲ್ಲ. ಅವರ ಇಡೀ ಕುಟುಂಬವೇ ಉತ್ತರ ಪ್ರದೇಶದಲ್ಲಿ ನಿಂತು ಗೆಲ್ಲುತ್ತಿತ್ತು. ಆದರೆ ಕಳೆದ ಚುನಾವಣೆಯಲ್ಲಿ ಬೇರೆ ಬೇರೆ ರಾಜ್ಯಗಳತ್ತ ಏಕೆ ಮುಖ ಮಾಡುತ್ತಿದ್ದಾರೋ ತಿಳಿಯುತ್ತಿಲ್ಲ. ತುಂಬಾ ಕಡೆ ರಾಹುಲ್ ಗಾಂಧಿ ಬಂದು ಹೋಗಿದ್ದಾರೆ. ಆದರೆ ಸೋಲು ಖಚಿತವಾಗಿದೆ.
ಸಿದ್ದರಾಮಯ್ಯ ಸ್ಪ ರ್ಧಿಸಿದ್ದ ಚಾಮುಂಡೇಶ್ವರಿ ಕ್ಷೇತ್ರಕ್ಕೂ ಅವರು ಬಂದಿದ್ದರು. ಅಲ್ಲಿಯೂ ಕೂಡ ಸಿದ್ದರಾಮಯ್ಯ ಸೋತರು, ರಾಹುಲ್ ಗಾಂಧಿ ಸಿಂಹ ಎಂದು ಕಾಂಗ್ರೆಸ್‌ನವರು ಹೇಳುತ್ತಿದ್ದಾರೆ. ಆದರೆ ಅವರು ಸಿಂಹವೋ, ನರಿಯೋ, ಇಲಿಯೋ ಎಂದು ಚುನಾವಣೆ ಫಲಿತಾಂಶ ಬಂದ ನಂತರ ಗೊತ್ತಾಗುತ್ತದೆ ಎಂದರು.
ಕೋವಿಡ್ ನಿಯಂತ್ರಣಕ್ಕೆ ಬದ್ಧ: ಕೋವಿಡ್ ನಿಯಂತ್ರಣಕ್ಕೆ ಸರ್ಕಾರ ಎಲ್ಲ ರೀತಿಯ ಕ್ರಮ ಕೈಗೊಳ್ಳುತ್ತಿದೆ. ರಾಜ್ಯ ಸರ್ಕಾರ ಮತ್ತು ಕೇಂದ್ರ ಸರ್ಕಾರದ ವಿಶೇಷ ನೆರವಿನಿಂದ ಜಿಲ್ಲೆಯಲ್ಲಿ ಲಸಿಕೆ ಹಾಕುವ ಕಾರ್ಯಕ್ರಮ ಯಶಸ್ವಿಯಾಗಿ ಸಾಗುತ್ತಿದೆ. ಈಗಾಗಲೇ 1.66 ಲಕ್ಷ ಲಸಿಕೆ ಹಾಕಲಾಗಿದೆ. ಜಿಲ್ಲೆಯಲ್ಲಿ ಇನ್ನು ಸುಮಾರು 5 ಲಕ್ಷ ಲಸಿಕೆಗಳು ಬೇಕಾಗಬಹುದು. ಈ ಹಿನ್ನೆಲೆಯಲ್ಲಿ ನಾಳೆ ಅಥವಾ ನಾಡಿದ್ದು ಜಿಲ್ಲಾ ಧಿಕಾರಿಗಳ ಕಚೇರಿಯಲ್ಲಿ ವಿಶೇಷ ಕೋವಿಡ್ ಸಭೆ ನಡೆಸಲಾಗುವುದು. ಒಟ್ಟಾರೆ ಕೋವಿಡ್ ನಿಯಂತ್ರಣಕ್ಕೆ ಸರ್ಕಾರ ಬದ್ಧವಾಗಿದೆ ಎಂದರು.
ಇದೇ ಸಂದರ್ಭದಲ್ಲಿ ಕೋವಿಡ್ ಲಸಿಕೆಯನ್ನು 2ನೇ ಬಾರಿ ಪಡೆದ ಅವರು, ಲಸಿಕೆಯನ್ನು ಪಡೆದಿದ್ದರಿಂದ ಯಾವ ರೀತಿಯ ಅಡ್ಡಪರಿಣಾಮವೂ ಆಗಿಲ್ಲ. ಆರೋಗ್ಯದಲ್ಲಿ ಯಾವ ವ್ಯತಿರಿಕ್ತ ಬದಲಾವಣೆಯೂ ಆಗಿಲ್ಲ. ಆದ್ದರಿಂದ ಸಾರ್ವಜನಿಕರು ಲಸಿಕೆ ಪಡೆಯುವ ಮೂಲಕ ಸುರಕ್ಷಿತವಾಗಿ ಇರಬೇಕು ಎಂದು ಮನವಿ ಮಾಡಿದರು.