ಕೃತಿ ಖರಬಂದ ಬಾಲಿವುಡ್‌ನಲ್ಲೇ ನೆಲೆಗೊಳ್ಳುವ ಸಾಧ್ಯತೆ ಕಾಣುತ್ತಿದೆ. ಏಕೆಂದರೆ, ಕೃತಿ ಮತ್ತೂಂದು ಹಿಂದಿ ಚಿತ್ರದಲ್ಲಿ ಸದ್ದಿಲ್ಲದೆ ನಟಿಸುತ್ತಿದ್ದಾರೆ. ಈ ಬಾರಿ ಅವರು ನಾಯಕಿಯಾಗಿರುವುದು ಯಾರಿಗೆ ಗೊತ್ತಾ? ಬಾಬ್ಬಿ ಡಿಯೋಲ್‌ಗೆ. ಧರ್ಮೇಂದ್ರ ತಮ್ಮ ಮಕ್ಕಳಾದ ಸನ್ನಿ ಡಿಯೋಲ್ ಮತ್ತು ಬಾಬ್ಬಿ ಡಿಯೋಲ್ ಜೊತೆಗೆ ನಟಿಸುತ್ತಿರುವ “ಯಮ್ಲಾ ಪಗ್ಲ ದಿವಾನಾ ಫಿರ್ ಸೇ’ ಚಿತ್ರದಲ್ಲಿ ಬಾಬ್ಬಿ ಡಿಯೋಲ್‌ಗೆ ಕೃತಿ ನಾಯಕಿಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ.
ಕೃತಿ ಹಿಂದಿ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟಿದ್ದು, “ರಾಝ್ – ರೀಬೂಟ್’ ಎಂಬ ಚಿತ್ರದಿಂದ. ಆ ಚಿತ್ರ ಕಳೆದ ವರ್ಷ ಬಿಡುಗಡೆಯಾಗಿತ್ತು. ಚಿತ್ರ ದೊಡ್ಡ ಹಿಟ್ ಅಲ್ಲದಿದ್ದರೂ, ಕೃತಿಗೆ ಬಾಲಿವುಡ್‌ನಲ್ಲೇನೂ ಅವಕಾಶಗಳ ಕೊರತೆಯಾಗಲಿಲ್ಲ. “ರಾಝ್ – ರೀಬೂಟ್’ ಚಿತ್ರದ ನಂತರ ಅವರು “ಅತಿಥಿ ಇನ್ ಲಂಡನ್’ ಎಂಬ ಚಿತ್ರದಲ್ಲಿ ನಟಿಸಿದರು. ಅದಾದ ಮೇಲೆ “ಶಾದಿ ಮೇ ಜರೂರ್ ಆನಾ’ ಎಂಬ ಇನ್ನೊಂದು ಚಿತ್ರದಲ್ಲಿ ನಾಯಕಿಯಾಗಿ ಕಾಣಿಸಿಕೊಂಡರು.
ನಿಜ ಹೇಳಬೇಕೆಂದರೆ, ಕೃತಿ ಅಭಿನಯದ ಮೂರೂ ಚಿತ್ರಗಳು ದೊಡ್ಡ ಹಿಟ್ ಏನೂ ಅಲ್ಲ. ಆದರೆ, ಅದರಿಂದ ಅವರೇನೂ ಅವಕಾಶ ವಂಚಿತರಾಗಿಲ್ಲ ಮತ್ತು ಒಂದಲ್ಲ ಒಂದು ಅವಕಾಶಗಳು ಅವರನ್ನು ಹುಡುಕಿಕೊಂಡು ಬರುತ್ತಲೇ ಇದೆ. ಆ ಪಟ್ಟಿಗೆ ಹೊಸ ಸೇರ್ಪಡೆ “ಯಮ್ಲಾ ಪಗ್ಲ ದಿವಾನಾ ಫಿರ್ ಸೇ’. “ಯಮ್ಲಾ ಪಗ್ಲ ದಿವಾನಾ ಫಿರ್ ಸೇ’ ಚಿತ್ರವನ್ನು ಧರ್ಮೇಂದ್ರ ಅವರ ವಿಜೇತಾ ಫಿಲಮ್ಸ್ ಸಂಸ್ಥೆಯು ನಿರ್ಮಿಸಿದರೆ, ನವನಿಯಾತ್ ಸಿಂಗ್ ಎನ್ನುವವರು ಚಿತ್ರವನ್ನು ನಿರ್ದೇಶಿಸುತ್ತಿದ್ದಾರೆ.
ಧರ್ಮೇಂದ್ರ ತಮ್ಮ ಮಕ್ಕಳಾದ ಸನ್ನಿ ಡಿಯೋಲ್ ಮತ್ತು ಬಾಬ್ಬಿ ಡಿಯೋಲ್ ಜೊತೆಗೆ ನಟಿಸುತ್ತಿದ್ದಾರೆ ಎನ್ನುವುದು ಬಿಟ್ಟರೆ, ಮಿಕ್ಕಂತೆ ಮೊದಲ ಭಾಗಕ್ಕೂ, ಈ ಭಾಗಕ್ಕೂ ಯಾವುದೇ ರೀತಿಯ ಸಂಬಂಧವಿಲ್ಲ. ಚಿತ್ರದಲ್ಲಿ ಬಾಬ್ಬಿ ಡಿಯೋಲ್‌ಗೆ ಕೃತಿ ನಾಯಕಿಯಾಗಿ ಅಭಿನಯಿಸುತ್ತಿದ್ದು, ಜೊತೆಗೆ ಕಾಜಲ್ ಅಗರವಾಲ್, ಬಿನ್ನು ಧಿಲ್ಲೋನ್ ಮುಂತಾದವರು ನಟಿಸುತ್ತಿದ್ದಾರೆ. ಈಗಾಗಲೇ ಆಗಸ್ಟ್‌ನಿಂದಲೇ ಚಿತ್ರದ ಚಿತ್ರೀಕರಣ ಶುರುವಾಗಿದ್ದು, 2018ರ ಏಪ್ರಿಲ್ ಹೊತ್ತಿಗೆ ಚಿತ್ರ ಬಿಡುಗಡೆಯಾಗುವ ಸಾಧ್ಯತೆ ಇದೆ.