Advertisement

ಕೃಷ್ಣಮೃಗಗಳಿಗೂ ತಟ್ಟಿದ ಬರಗಾಲದ ಬಿಸಿ

03:45 AM Mar 06, 2017 | Team Udayavani |

ಹಾವೇರಿ: ಸಮರ್ಪಕ ಮಳೆಯಿಲ್ಲದೇ ಉಂಟಾಗಿರುವ ಬರಗಾಲದ ಬಿಸಿ ರಾಜ್ಯದ ಪ್ರಮುಖ ವನ್ಯಜೀವಿ ಧಾಮಗಳಲ್ಲೊಂದಾದ ರಾಣಿಬೆನ್ನೂರಿನ ಕೃಷ್ಣಮೃಗಧಾಮಕ್ಕೂ ತಟ್ಟಿದ್ದು, ಕೃಷ್ಣಮೃಗಗಳೂ ಕುಡಿವ ನೀರು, ಮೇವಿಗಾಗಿ ಪರಿತಪಿಸುವಂತಾಗಿದೆ.

Advertisement

ದಿನದಿಂದ ದಿನಕ್ಕೆ ಬಿಸಿಲಿನ ತಾಪಮಾನ ಹೆಚ್ಚಾಗುತ್ತಿದ್ದರೆ, ಇನ್ನೊಂದೆಡೆ ಕುಡಿವ ನೀರಿನ ಸಮಸ್ಯೆ ಎಲ್ಲ ಜೀವಸಂಕುಲಗಳಿಗೂ ಎದುರಾಗುತ್ತಿದೆ. ಕೃಷ್ಣಮೃಗಧಾಮದ ಕೆರೆ, ಹೊಂಡಗಳೆಲ್ಲ ಒಣಗಿ ಹೋಗಿವೆ.

ಸುಮಾರು 8,000ಕ್ಕೂ ಹೆಚ್ಚು ಕೃಷ್ಣಮೃಗಗಳು ಇಲ್ಲಿದ್ದು, ಈ ಧಾಮವು 11,900 ಹೆಕ್ಟೇರ್‌ ಪ್ರದೇಶದಲ್ಲಿದೆ. ಪ್ರಾಣಿಗಳ ನೀರಿನ ದಾಹ ತೀರಿಸಲು ಸಾಕಷ್ಟು ಕೆರೆ, ಹೊಂಡಗಳಿವೆ. ಆದರೆ ಈ ವರ್ಷ ಅವುಗಳೆಲ್ಲ ಬತ್ತಿರುವುದರಿಂದ ಸಮಸ್ಯೆ ಎದುರಾಗಿದೆ. ಇನ್ನೊಂದೆಡೆ, ಪ್ರಾಣಿಗಳಿಗೆ ಬೇಕಾದ ಹಸಿರು ಮೇವು ನೀಡುವ ಮರಗಳ ಸಂಖ್ಯೆಯೂ ವಿರಳವಾಗಿದೆ. ಇಲ್ಲಿ ಶೇ. 60ರಷ್ಟು ಅಕೇಶಿಯಾ, ನೀಲಗಿರಿ ಮರಗಳೇ ಇವೆ. ಹೀಗಾಗಿ ಒಣಗಿದ ಹುಲ್ಲು, ಸೊಪ್ಪು ತಿಂದೇ ಬದುಕಬೇಕಾದ ಅನಿವಾರ್ಯತೆ ಇಲ್ಲಿದೆ.

ಧಾಮ ಬಿಟ್ಟರೆ ಬೇಟೆಗೆ ಗುರಿ
ಧಾಮದಲ್ಲಿ ಸಾಕಷ್ಟು ನೀರು, ಆಹಾರವಿಲ್ಲದೆ ಬಹುತೇಕ ಕೃಷ್ಣಮೃಗಗಳು ಪಕ್ಕದ ಹೊಲಗಳಿಗೆ ಹೋಗುವುದು ಸಾಮಾನ್ಯ. ರೈತರ ಕಣ್ಣು ತಪ್ಪಿಸಿ ಒಂದಿಷ್ಟು ಮೇವು ತಿಂದು, ನೀರು ಕುಡಿಯುತ್ತಿದ್ದವುಗಳನ್ನು ಈ ಬಾರಿ ಒಣಗಿದ ಜಮೀನುಗಳು ಸ್ವಾಗತಿಸುತ್ತಿವೆ. ಅಲ್ಲದೆ, ಬೇಟೆಗಾರರ ಗುರಿಗೂ ಬಲಿಯಾಗುವ ಸಾಧ್ಯತೆಯೇ ಹೆಚ್ಚಾಗಿದೆ.

ಟ್ಯಾಂಕರ್‌ ನೀರು:
ಅರಣ್ಯ ಇಲಾಖೆ ಟ್ಯಾಂಕರ್‌ಗಳಿಂದ ನೀರು ತಂದು ಕೃಷ್ಣಮೃಗಗಳ ದಾಹ ತೀರಿಸುವ ಕೆಲಸ ಮಾಡುತ್ತಿದೆ. ಕೃಷ್ಣಮೃಗಗಳಿಗೆ ನೀರು ಕುಡಿಸುವ ವ್ಯವಸ್ಥೆ ಮಾಡುವುದಕ್ಕಾಗಿಯೇ ಇಲಾಖೆ ಧಾಮದಲ್ಲಿ ಅಲ್ಲಲ್ಲಿ ಸಿಮೆಂಟ್‌ ತೊಟ್ಟಿಗಳನ್ನು ನಿರ್ಮಿಸಿದ್ದು, ಟ್ಯಾಂಕರ್‌ನಿಂದ ನೀರು ತಂದು ತುಂಬಿಸುವ ಕೆಲಸ ಮಾಡುತ್ತಿದೆ. ಆದರೆ ಸಾವಿರಾರು ಸಂಖ್ಯೆಯಲ್ಲಿರುವ ಕೃಷ್ಣಮೃಗಗಳಿಗೆ ಇಲಾಖೆ ಪೂರೈಸುವ ನೀರು ಸಾಕಾಗದು. ಸರ್ಕಾರ ಕೃಷ್ಣಮೃಗಧಾಮ ಹಾಗೂ ರಾಜ್ಯದ ಇತರ ವನ್ಯಜೀವಿಧಾಮಗಳಲ್ಲಿ ಪ್ರಾಣಿಗಳಿಗೆ ಸಾಕಷ್ಟು ನೀರು, ಆಹಾರ ಲಭ್ಯವಾಗುವಂತೆ ಮಾಡಲು ಹೆಚ್ಚಿನ ಅನುದಾನ ನೀಡಬೇಕಿದೆ.

Advertisement

ಬೇಸಿಗೆಯಲ್ಲಿ ಕೃಷ್ಣಮೃಗ ಧಾಮದಲ್ಲಿ ಪ್ರಾಣಿಗಳಿಗೆ ನೀರು, ಆಹಾರ ಸರಿಯಾಗಿ ಸಿಗುತ್ತಿಲ್ಲ. ಹೊರಗಡೆ ಇರುವ ಜಮೀನುಗಳಲ್ಲೂ ಸಹ ನೀರಿಲ್ಲದೆ ಯಾವ ಬೆಳೆಯೂ ಇಲ್ಲ. ಎಲ್ಲವೂ ಒಣಗಿದೆ. ಧಾಮದಿಂದ ಹೊರ ಹೋಗುವ ಕೃಷ್ಣಮೃಗಗಳಿಗೆ ಬೇಟೆಗಾರರ ಕಣ್ತಪ್ಪಿಸಿ ಧಾಮಕ್ಕೆ ಮರಳುವುದೇ ದೊಡ್ಡ ಸಾಹಸದ ಕೆಲಸ. ಇಲಾಖೆ ಧಾಮದಲ್ಲಿಯೇ ಪ್ರಾಣಿಗಳಿಗೆ ಯಥೇತ್ಛ ನೀರು, ಆಹಾರ ಸಿಗುವ ವ್ಯವಸ್ಥೆ ಮಾಡಬೇಕು.
– ಮಂಜುನಾಥ ಮಠದ, ಪ್ರಾಣಿ ಪ್ರಿಯ

ವನ್ಯಧಾಮದಲ್ಲಿರುವ ನೀರಿನ ಮೂಲಗಳೆಲ್ಲ ಒಣಗಿದ್ದರಿಂದ ಕೃಷ್ಣಮೃಗಗಳಿಗೆ ಕುಡಿಯಲು ನೀರು ಸಿಗುತ್ತಿಲ್ಲ. ಧಾಮದಲ್ಲಿ ತೊಟ್ಟಿಗಳನ್ನು ನಿರ್ಮಿಸಿ ಟ್ಯಾಂಕರ್‌ನಿಂದ ನೀರು ತಂದು ತೊಟ್ಟಿಗಳನ್ನು ತುಂಬಿಸಲಾಗುತ್ತಿದೆ. ದಿನಕ್ಕೆರಡು ಬಾರಿ ತುಂಬಿಸುತ್ತಿದ್ದೇವೆ. ಹಸಿರು ಹುಲ್ಲು ಬೆಳೆಸಲಾಗುತ್ತಿದ್ದು, ಕೃಷ್ಣಮೃಗಗಳಿಗೆ ನೀರು, ಮೇವು ಪೂರೈಸಲು ಕ್ರಮ ಕೈಗೊಳ್ಳಲಾಗುತ್ತಿದೆ.
-ಎ.ಬಿ. ಕಲ್ಲೂರ,
ಡಿಎಫ್‌ಒ, ವನ್ಯಜೀವಿ ವಿಭಾಗ, ರಾಣಿಬೆನ್ನೂರು

– ಎಚ್‌.ಕೆ. ನಟರಾಜ

Advertisement

Udayavani is now on Telegram. Click here to join our channel and stay updated with the latest news.

Next