ಕೆ.ಆರ್.ಪುರ: ಇತಿಹಾಸ ಪ್ರಸಿದ್ಧ ಕೃಷ್ಣರಾಜಪುರ ಸಂತೆಯಲ್ಲಿ ಉತ್ಪತ್ತಿಯಾಗುವ ತ್ಯಾಜ್ಯವನ್ನು ಸಮರ್ಪಕವಾಗಿ ವಿಲೇವಾರಿ ಮಾಡದೆ ಇರುವುದರಿಂದ ಸಂತೆ ಸಂಪೂರ್ಣ ತಿಪ್ಪೆಯಂತಾಗಿದೆ. ಹೀಗಾಗಿ ಜನರು ಮೂಗು ಮುಚ್ಚಿಕೊಂಡು ಓಡಾಡುವ ಸ್ಥಿತಿ ನಿರ್ಮಾಣವಾಗಿದೆ.
ದೇವಸಂದ್ರ ವಾರ್ಡ್‌ನ ಕೃಷ್ಣರಾಜಪುರ ಮಾರುಕಟ್ಟೆಯಲ್ಲಿ ರೈತರು, ವ್ಯಾಪಾರಿಗಳು ನಿತ್ಯ ಸೊಪ್ಪು ತರಕಾರಿ ಮಾರಾಟ ಮಾಡುತ್ತಾರೆ. ಮಂಗಳವಾರ ವ್ಯಾಪಾರ ವಹಿವಾಟಿನ ಭರಟೆ ಭರ್ಜರಿಯಾಗಿ ನಡೆಯುತ್ತದೆ. ಸುತ್ತಮುತ್ತ ಪ್ರದೇಶಗಳಿಂದ ಹೆಚ್ಚಿನ ಸಂಖ್ಯೆಯಲ್ಲಿ ಗ್ರಾಹಕರು ಈ ಸಂತೆಗೆ ಬರುತ್ತಾರೆ. ಹೀಗಾಗಿ ಇಲ್ಲಿ ನಿತ್ಯವೂ ಹೆಚ್ಚಿನ ಪ್ರಮಾಣದಲ್ಲಿ ತ್ಯಾಜ್ಯ ಉತ್ಪತ್ತಿಯಾಗುತ್ತದೆ. ಟನ್‌ಗಟ್ಟಲೆ ಕಸ ರಾಶಿ ಬಿದ್ದಿರುತ್ತದೆ. ಆದರೆ, ಬಿಬಿಎಂಪಿ ಮಾತ್ರ ಕಸ ತೆರವಿಗೆ ಸೂಕ್ತ ಕ್ರಮ ಕೈಗೊಳ್ಳುತ್ತಿಲ್ಲ.
ಹಲವು ತಿಂಗಳಿಂದ ರಾಶಿ ಬಿದ್ದಿರುವ ಕಸ ತೆರವಾಗದೇ ಉಳಿದಿದ್ದು, ಮಳೆಗೆ ಕೊಳೆಯಲಾರಂಭಿಸಿದೆ. ಹೀಗಾಗಿ ಸ್ಥಳೀಯರಿಗೆ ತೀವ್ರ ಸಮಸ್ಯೆ ಎದುರಾಗಿದೆ. ಈ ನಡುವೆ ಇದೇ ಕಸದ ರಾಶಿಯಲ್ಲಿ ಹೋಟೆಲ್‌ಗಳು ಅಳಿದುಳಿದ ಆಹಾರ ಪದಾರ್ಥಗಳನ್ನು ಇಲ್ಲಿಯೇ ತಂದು ಹಾಕುತ್ತಿರುವುದರಿಂದ ಶ್ವಾನಗಳ ಸಂತತಿಯೂ ಹೆಚ್ಚಾಗುತ್ತಿವೆ. ಹೀಗಾಗಿ ನಾಗರಿಕರಿಗೆ ಶ್ವಾನ ಕಾಟ ಆರಂಭವಾಗಿದೆ. ಬಿಬಿಎಂಪಿ ಈ ಕೂಡಲೇ ಕ್ರಮ ಕೈಗೊಳ್ಳಬೇಕು ಎಂದು ಸ್ಥಳೀಯರು ಆಗ್ರಹಿಸಿದ್ದಾರೆ.
ಕೆ.ಆರ್.ಪುರದ ಸಂತೆಯಿಂದ ಕೂಗಳತೆ ದೂರದಲ್ಲೇ ಬಿಬಿಎಂಪಿ ಕಚೇರಿ ಇದೆ. ಇಲ್ಲಿನ ಕಸದ ಸಮಸ್ಯೆ ಪಾಲಿಕೆಗೂ ಗೊತ್ತು. ದೂರು ನೀಡಿದರು ಕ್ರಮ ಕೈಗೊಳ್ಳುತ್ತಿಲ್ಲ.
-ಸುನೀಲ್, ಕೆಆರ್‌ಪುರ ನಿವಾಸಿ