ಕೆ.ಆರ್.ಪುರ: ನುರಿತ ವೈದ್ಯರ ಅಭಾವ, ಮೂಲ ಸೌಲಭ್ಯಗಳು ಇಲ್ಲದಿರುವುದು, ಮೇಲ್ದರ್ಜೆಗೇರುವ ಭರವಸೆ ಈಡೇರದಿರುವುದೂ ಸೇರಿದಂತೆ ಹಲವು ಸಮಸ್ಯೆಗಳನ್ನು ಹೊದ್ದು ಮಲಗಿರುವ ಕೆ.ಆರ್.ಪುರದ ಸಾರ್ವಜನಿಕ ಆಸ್ಪತ್ರೆಗೆ ತುರ್ತು ಚಿಕಿತ್ಸೆ ಅಗತ್ಯವಿದೆ.
14 ಲಕ್ಷಕ್ಕೂ ಅಧಿಕ ಜನಸಂಖ್ಯೆ ಹೊಂದಿರುವ ಬೆಂಗಳೂರಿನ ಪೂರ್ವ ತಾಲೂಕಿನ ಅತಿ ದೊಡ್ಡ ಆಸ್ಪತ್ರೆ ಇದಾಗಿದ್ದು, ಪ್ರತಿ ದಿನ 500ರಿಂದ 600 ರೋಗಿಗಳು ಸಾರ್ವಜನಿಕ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಾರೆ. ಆದರೆ, ಕಣ್ಣು, ಕಿವಿ, ಚರ್ಮ ರೋಗ, ಮೂಳೆ, ದಂತ ಚಿಕಿತ್ಸೆ ಸೇರಿ ಯಾವುದೇ ವಿಭಾಗದಲ್ಲೂ ತಜ್ಞ ವೈದ್ಯರಿಲ್ಲ. ಹೀಗಾಗಿ, ವಿಭಾಗೀಯ ವೈದ್ಯರ ಮೇಲೆ ಒತ್ತಡ ಹೆಚ್ಚಾಗಿದ್ದು, ತುರ್ತು ಚಿಕಿತ್ಸೆ ಅಗತ್ಯವಿರುವ ರೋಗಿಗಳಿಗೆ, ಬೇರೆ ಆಸ್ಪತ್ರೆಗೆ ತೆರಳಲು ಶಿಫಾರಸು ಮಾಡುವ ಸ್ಥಿತಿಯಿದೆ.
ಮೊದಲೇ ಈ ಭಾಗದಲ್ಲಿ ಸಂಚಾರದಟ್ಟಣೆ ಹೆಚ್ಚು. ಹೀಗಾಗಿ ತುರ್ತು ಚಿಕಿತ್ಸೆ ಅಗತ್ಯವಿರುವ ರೋಗಿಗಳು, ಆಸ್ಪತ್ರೆಗೆ ಕರೆದೊಯ್ಯುವಾಗ ಟ್ರಾಫಿಕ್‌ನಲ್ಲಿ ಸಿಲುಕಿ ಯಾತನೆ ಅನುಭವಿಸುತ್ತಾರೆ. ಸಮಯಕ್ಕೆ ಸರಿಯಾಗಿ ಚಿಕಿತ್ಸೆ ಸಿಗದೆ ಹಲವರು ಮಾರ್ಗ ಮಧ್ಯೆಯೇ ಮೃತಪಟ್ಟ ನಿದರ್ಶನಗಳೂ ಇವೆ. ಕೆ.ಆರ್.ಪುರ ಆಸ್ಪತ್ರೆಯಲ್ಲೇ ತಜ್ಞ ವೈದ್ಯರು, ಸೌಲಭ್ಯ ಕಲ್ಪಿಸಿದರೆ ಈ ಸಮಸ್ಯೆ ಇರುವುದಿಲ್ಲ.
ರಜಾ ದಿನ ಚಿಕಿತ್ಸೆಯಿಲ್ಲ: ಸರ್ಕಾರಿ ರಜೆ ದಿನಗಳಂದು ಎಲ್ಲಾ ಸರ್ಕಾರಿ ವೈದ್ಯರು ಅರ್ಧ ದಿನ ಕಾರ್ಯನಿರ್ವಹಿಸಬೇಕು ಎಂಬ ಕಡ್ಡಾಯ ನಿಯಮವಿದೆ. ಆದರೆ, ಇಲ್ಲಿ ರಜೆ ದಿನ ವೈದ್ಯರು ಆಸ್ಪತ್ರೆಯತ್ತ ನೋಡುವುದೂ ಇಲ್ಲ. ಗರ್ಭಿಣಿಯರ ಹೆರಿಗೆ ಸಮಯದಲ್ಲಿ ಒಬ್ಬ ವೈದ್ಯೆ, ನರ್ಸ್ ಇರಲೇಬೇಕೆಂಬ ನಿಯಮ ಕೂಡ ಪಾಲನೆಯಾ ಗುತ್ತಿಲ್ಲ. ಇನ್ನೊಂದೆಡೆ ಆಸ್ಪತ್ರೆ ಆವರಣ ಖಾಸಗಿ ವಾಹನಗಳ ನಿಲ್ದಾಣವಾಗಿ ಮಾರ್ಪಟ್ಟಿದೆ.
ವಿದ್ಯುತ್ ತಂತಿಗಳು 15 ವರ್ಷ ಹಳೆಯದಾಗಿರುವ ಕಾರಣ, ಶಸ್ತ್ರಚಿಕಿತ್ಸೆ, ಡಯಾಲಿಸಿಸ್, ಸ್ಕ್ಯಾನಿಂಗ್ ಸಂದರ್ಭದಲ್ಲಿ ವಿದ್ಯುತ್ ಸಂಪರ್ಕ ಕಡಿತಗೊಂಡು ರೋಗಿಗಳು ಪರದಾಡುತ್ತಾರೆ. ಇದರೊಂದಿಗೆ ಶೌಚಾಲಯಗಳ ಕೊಳಕಾಗಿದ್ದು, ರೋಗ ಹರಡುವ ಕೇಂದ್ರಗಳಾಗಿವೆ. ಒಂದು ವರ್ಷದಿಂದ ನಿರ್ವಹಣೆ ಇಲ್ಲದೆ ನಿಂತಿರುವ ಆ್ಯಂಬುಲೆನ್ಸ್ ತುಕ್ಕುಹಿಡಿಯುತ್ತಿದೆ.
ಆಸ್ಪತ್ರೆಯಲ್ಲಿನ ಸಮಸ್ಯೆಗಳನ್ನು ಪರಿಹರಿಸುವಂತೆ ಶಾಸಕರ ಗಮನಕ್ಕೆ ತಂದಿದ್ದು, ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ. ಜನಸಂಖ್ಯೆಗೆ ಅನುಗುಣವಾಗಿ ಆಸ್ಪತ್ರೆಯನ್ನು ಮೇಲ್ದರ್ಜೆಗೇರಿಸುವ ಅಗತ್ಯವಿದೆ ಎಂದು ಆಸ್ಪತ್ರೆ ಉಸ್ತುವಾರಿ ಸಮಿತಿ ಅಧ್ಯಕ್ಷ ವಿ.ಸಿ.ರೆಡ್ಡಿ ತಿಳಿಸಿದ್ದಾರೆ. ಕೆ.ಆರ್.ಪುರ ಆಸ್ಪತ್ರೆಯನ್ನು 250 ಹಾಸಿಗೆ ಆಸ್ಪತ್ರೆಯಾಗಿ ಮೇಲ್ದರ್ಜೆಗೇರಿಸಲು ಮತ್ತು ಸಾಮಾನ್ಯ ರೋಗಿಗಳ ಚಿಕಿತ್ಸೆಗಾಗಿ 4 ನುರಿತ ತಜ್ಞ ವೈದ್ಯರನ್ನು ನೇಮಿಸುವಂತೆ ಹಿರಿಯ ಅಧಿಕಾರಿಗಳಿಗೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ತಾಲೂಕು ಆಡಳಿತ ವೈದ್ಯಾಧಿಕಾರಿ ಡಾ. ಚಂದ್ರಶೇಖರ್ ತಿಳಿಸಿದ್ದಾರೆ.
ಕೆ.ಆರ್.ಗಿರೀಶ್