Advertisement
ಪ್ರತಿಯೊಂದು ಮಗುವಿಗೂ ಅಸಾಧಾರಣ ಪ್ರತಿಭೆ ಇರುತ್ತದೆ. ಅದ್ಭುತವಾದದ್ದೇನನ್ನೋ ಸಂಶೋಧಿಸುವ ಶಕ್ತಿ ಇರುತ್ತದೆ. ಆದರೆ ನಾವದನ್ನು ನಿರ್ದಯವಾಗಿ ಹಾಳು ಮಾಡುತ್ತೇವೆ.
Related Articles
Advertisement
“ನಾನು ದೇವರ ಚಿತ್ರವನ್ನು ಬಿಡಿಸುತ್ತಿದ್ದೇನೆ ಮಿಸ್.’
ಟೀಚರ್ ಆಶ್ಚರ್ಯಚಕಿತರಾಗಿ ಕೇಳುತ್ತಾರೆ- “ಆದರೆ ಯಾರಿಗೂ ಇದುವರೆಗೆ ದೇವರು ಹೇಗಿರುತ್ತಾನೆ ಅಂತ ಗೊತ್ತಿಲ್ಲವಲ್ಲ!’
ಆ ಹುಡ್ಗಿ ಅಷ್ಟೇ ಸ್ಪಷ್ಟವಾಗಿ ಹೇಳಿದಳು- “ಇನ್ನು ಸ್ವಲ್ಪ ಹೊತ್ತಿಗೆ ಎಲ್ಲರಿಗೂ ಗೊತ್ತಾಗತ್ತೆ ಮಿಸ್.’
ತುಂಬಾ ಇಷ್ಟ ಇದು ನನಗೆ. ಇಲ್ಲಿ ಎಲ್ಲರೂ ತಿಳಿಯಬಹುದಾದ ಒಂದು ಅಂಶ ಇದೆ. ಮಕ್ಕಳು ತಮಗೆ ಏನೂ ಗೊತ್ತಿಲ್ಲವೋ ಅದರ ಹಿಂದೆ ಬೀಳುತ್ತಾರೆ. ತಪ್ಪು ಮಾಡುತ್ತಿದ್ದೇವೆ ಅಂತ ಅವರಿಗನ್ನಿಸುವುದಿಲ್ಲ. ತಪ್ಪು ಮಾಡಲು ಅವರು ಹೆದರೋದಿಲ್ಲ. ಹೌದು ತಾನೇ?
ಹಾಗಂತ ತಪ್ಪು ಮಾಡುವುದನ್ನು ನಾನು ಕ್ರಿಯೇಟವ್ ಅಂತ ಕರೆಯುತ್ತಿಲ್ಲ. ಆದರೆ ನೀವು ತಪ್ಪು ಆದರೆ ಆಗಲಿ ಬಿಡಿ ಅಂತ ಸಿದ್ಧರಾಗದಿದ್ದರೆ ನಿಮ್ಮಿಂದ ಯಾವ ಹೊಸ ಕೆಲಸವೂ ಆಗುವುದಿಲ್ಲ. ಒರಿಜಿನಲ್ ಅಂತನ್ನೋ ಯಾವುದನ್ನೂ ಮಾಡಲು ಸಾಧ್ಯವಾಗುವುದಿಲ್ಲ. ದುರದೃಷ್ಟವೆಂದರೆ ಮಕ್ಕಳು ಬೆಳೆದಂತೆ ಆ ಒಂದು ಗುಣವನ್ನು ಕಳೆದುಕೊಳ್ಳುತ್ತಾರೆ. ತಪ್ಪಾಗುತ್ತದೆ ಅಂತ ಹೆದರುತ್ತಾರೆ.
ನಾವು ನಮ್ಮ ಸುತ್ತಮುತ್ತಲಿನವರನ್ನು ನೋಡುವುದು ಹೀಗೆಯೇ. ತಪ್ಪನ್ನು ಅವಮಾನಿಸೋದು. ತಪ್ಪು ಮಾಡಿದರೆ ಖಂಡಿಸೋದು. ನಮ್ಮ ಶಿಕ್ಷಣ ವ್ಯವಸ್ಥೆಯ ಅತಿ ದೊಡ್ಡ ತಪ್ಪು ಇದೇನೇ. ತಪ್ಪು ಮಾಡಿದರೆ ನೀನು ಜೀವನದಲ್ಲಿ ಮಾಡಿದ ಕೆಟ್ಟ ಕೆಲಸ ಇದು ಅಂತ ಬಿಂಬಿಸೋದು.
ಅದರ ಪರಿಣಾಮ ನಾವು ನಮ್ಮ ಮಕ್ಕಳನ್ನು ಎಜುಕೇಟ್ ಮಾಡುತ್ತೇವೆ. ಆದರೆ ಅವರ ಕ್ರಿಯೇಟಿವಿಟಿಯನ್ನು ಕೊಲ್ಲುತ್ತೇವೆ.
ಪಿಕಾಸೋ ಒಂದು ಕಡೆ ಹೇಳಿದ್ದಾನೆ- “All children are born artists’. ಸಮಸ್ಯೆ ಏನೆಂದರೆ ಬೆಳೆದಂತೆ ಬೆಳೆದಂತೆ ಆ ಆರ್ಟಿಸ್ಟ್ ಕಾಣೆಯಾಗುತ್ತಾನೆ. ನಾವು ಕ್ರಿಯಾಶೀಲವಾಗಿ ಬೆಳೆಯುವುದಿಲ್ಲ. ಅದರ ಬದಲಾಗಿ ಕ್ರಿಯಾಶೀಲತೆಯಿಂದ ದೂರ ಹೋಗುತ್ತೇವೆ. ಡಿಗ್ರಿ ಇದ್ದೂ ಕ್ರಿಯೇಟಿವಿಟಿ ಇರಲ್ಲ. ಯಾಕೆ ಹೀಗಾಗತ್ತೆ?
ಜಗತ್ತಿನಲ್ಲಿ ಎಲ್ಲೇ ಹೋದರೂ ಶಿಕ್ಷಣ ವ್ಯವಸ್ಥೆ ಒಂದೇ ಥರ ಇರುತ್ತದೆ. ಎತ್ತರದಲ್ಲಿ ಗಣಿತ ಇರುತ್ತದೆ. ಕಲೆ ಕೊನೆಯಲ್ಲಿ ಇರುತ್ತದೆ. ಜಗತ್ತಿನ ಯಾವ ಮೂಲೆಗೆ ಹೋದರೂ ಅಷ್ಟೇ. ಇಲ್ಲಿ ಇಡೀ ದಿನ ಒಂದು ಕ್ಲಾಸಲ್ಲಿ ಕೂರಿಸಿ ಗಣಿತ ಕಲಿಸುವಂತೆ ಡಾನ್ಸ್ ಅನ್ನು ಕಲಿಸಲ್ಲ. ಯಾಕೆ? ಯಾಕಾಗಲ್ಲ? ನಾನು ಈ ಥರ ಮಾಡುವುದು ತುಂಬಾ ಮುಖ್ಯ ಅಂತಂದುಕೊಂಡಿದ್ದೇನೆ. ಗಣಿತದಷ್ಟೇ ಡಾನ್ಸ್ ಕೂಡ ಇಂಪಾರ್ಟೆಂಟ್. ಮಕ್ಕಳನ್ನು ತಮ್ಮಷ್ಟಕ್ಕೆ ಬಿಟ್ಟರೆ ಇಡೀ ದಿನ ಡಾನ್ಸ್ ಮಾಡುತ್ತಿರುತ್ತಾರೆ. ಹೌದು ತಾನೇ? ನಾವೆಲ್ಲರೂ ಮಾಡುತ್ತೇವೆ. ಹೌದಲ್ವೇ?
ಸತ್ಯ ಏನೆಂದರೆ ಮಕ್ಕಳು ಬೆಳೆದಂತೆ ನಾವು ಅವರ ತಲೆಯನ್ನು ಫೋಕಸ್ ಮಾಡುತ್ತೇವೆ. ಯಾರು ಹೆಚ್ಚು ಅಂಕ ತಗೋತಾರೆ, ಯಾರು ಗೆಲ್ಲುತ್ತಾರೆ ಅಂತೆಲ್ಲಾ ನೋಡುತ್ತೇವೆ. ಕೊನೆಗೆ ನಾವವರನ್ನು ಒಂದು ಯೂನಿವರ್ಸಿಟಿಯಲ್ಲಿ ಲೆಕ್ಚರರ್ ಆಗುವಂತೆ ಮಾಡುತ್ತೇವೆ. ಅಷ್ಟೇ ತಾನೆ? ಅವರೆಲ್ಲಾ ಟಾಪ್ ರ್‍ಯಾಂಕ್ ಪಡೆದವರು. ನಾನೂ ಅವರಲ್ಲೊಬ್ಬ. ನಾನು ಯೂನಿವರ್ಸಿಟಿ ಲೆಕ್ಚರರ್‌ಗಳನ್ನು ಇಷ್ಟಪಡುತ್ತೇನೆ. ಅದು ಬೇರೆ ವಿಷಯ. ಆದರೆ ಅಚೀವ್‌ಮೆಂಟ್ ಅಂದರೆ ಅದಷ್ಟೇ ಅಲ್ಲವಲ್ಲ.
19ನೇ ಶತಮಾನಕ್ಕಿಂತ ಮೊದಲು ಹೀಗಿರಲಿಲ್ಲ. ಹೀಗಾದದ್ದು ಇಂಡಸ್ಟ್ರಿಯಲಿಸಂನ ಅಗತ್ಯಗಳನ್ನು ಪೂರೈಸಲಿಕ್ಕೋಸ್ಕರ. ಆ ಅಗತ್ಯತೆಗಳಿಂದ ಸಬೆjಕ್ಟ್ ಎಲ್ಲಿರಬೇಕು ಅಂತ ನಿರ್ಧಾರವಾಗುತ್ತದೆ. ಈ ಕಾರಣದಿಂದಾಗಿ ತುಂಬಾ ಉಪಯೋಗಕ್ಕೆ ಬರುತ್ತವೆ ಅಂತನ್ನಿಸುವ ಸಬೆjಕ್ಟ್ಗಳು ಎತ್ತರದಲ್ಲಿರುತ್ತವೆ. ಹಾಗಾಗಿ ನೀವು ಮಗುವಿದ್ದಾಗ ಯಾವುದೋ ಒಂದು ವಿಷಯವನ್ನು ಇಷ್ಟಪಟ್ಟು ಅದರ ಬೆನ್ನು ಬಿದ್ದಿರುತ್ತೀರೋ ಅದನ್ನು ಕಲಿತರೆ ನಿಮಗೆ ಕೆಲಸ ಸಿಗುವುದಿಲ್ಲ. ಹಾಗಂತಲೇ ಬಿಂಬಿಸಲಾಗುತ್ತದೆ. ಅದು ಸರಿ ಅಂತೀರಾ? ಮ್ಯೂಸಿಕ್ ಕಲಿತರೆ ಮ್ಯೂಸಿಶಿಯನ್ ಆಗಲ್ವಾ? ಚಿತ್ರ ಬಿಡಿಸುವುದನ್ನು ಕಲಿತರೆ ಆರ್ಟಿಸ್ಟ್ ಆಗಲ್ವಾ?
ಇನ್ನೊಂದು ಮುಖ್ಯ ವಿಷಯ ಎಂದರೆ ಇಲ್ಲಿ ಎಲ್ಲಕ್ಕಿಂತ ಹೆಚ್ಚು ಕಾಣಿಸುವುದು ನಿಮ್ಮ ಶೈಕ್ಷಣಿಕ ಸಾಮರ್ಥಯ. ಇದರಿಂದ ಬುದ್ಧಿವಂತಿಕೆ ಬಗೆಗಿನ ನಮ್ಮ ಆಲೋಚನೆಯೇ ಬದಲಾಗಿಬಿಟ್ಟಿದೆ. ಜಾಸ್ತಿ ಅಂಕ ತಗೊಂಡು ಯೂನಿವರ್ಸಿಟಿ ಎಂಟ್ರೇನ್ಸ್ ಎಕ್ಸಾಮ್‌ಗಳನ್ನು ಪಾಸ್ ಮಾಡುವುದೇ ಬುದ್ಧಿವಂತಿಕೆ ಅಂತಾಗಿಬಿಟ್ಟಿದೆ. ಹೀಗಾಗಿ ಪ್ರತಿಭಾವಂತ, ಬುದ್ಧಿವಂತ, ಕ್ರಿಯಾಶೀಲ ಮಕ್ಕಳು ತಾವಂದುಕೊಂಡಿದ್ದು ತಪ್ಪು ಅಂತಂದುಕೊಂಡು ಶೈಕ್ಷಣಿಕ ಬುದ್ಧಿವಂತಿಕೆ ಹೊಂದಲು ಹೊರಡುತ್ತವೆ. ಕ್ರಿಯಾಶೀಲತೆ ಸಾಯುತ್ತದೆ.
ಇನ್ನು ಮೂವತ್ತು ವರ್ಷಗಳು ಕಳೆದರೆ ಜಗತ್ತಿನಾದ್ಯಂತ ಅತಿ ಹೆಚ್ಚು ಜನ ಪದವೀಧರರಾಗಿರುತ್ತಾರೆ. ಟೆಕ್ನಾಲಜಿ ಬೆಳೆದಿರುತ್ತದೆ. ಕೆಲಸ ಕಮ್ಮಿಯಾಗಿರುತ್ತದೆ. ಜನ ಜಾಸ್ತಿಯಾಗಿರುತ್ತಾರೆ. ಇದ್ದಕ್ಕಿದ್ದಂತೆ ಪದವಿಗಳೆಲ್ಲಾ ಅರ್ಥ ಕಳೆದುಕೊಳ್ಳುತ್ತವೆ.
ನಾನು ಕಲೀತಿದ್ದಾಗ ಡಿಗ್ರಿ ಇದ್ದರೆ ಕೆಲಸ ಸಿಗುತ್ತಿತ್ತು. ನಿಮಗೆ ಕೆಲಸ ಇಲ್ಲ ಅಂದಿದ್ದರೆ ನಿಮಗೆ ಕೆಲಸದಲ್ಲಿ ಆಸಕ್ತಿ ಇಲ್ಲ ಅಂದುಕೊಳ್ಳಬಹುದಿತ್ತಷ್ಟೇ. ಆದರೆ ಈಗ ಪದವಿಗಳಿಗೆ ಬೆಲೆಯಿಲ್ಲ. ಮಾಸ್ಟರ್ ಡಿಗ್ರಿ ಬೇಕು ಅಂತಾಯ್ತು. ಈಗೀಗ ಮಾಸ್ಟರ್ ಡಿಗ್ರಿಗೆ ಕೂಡ ಬೆಲೆ ಇಲ್ಲ. ಪಿಎಚ್‌ಡಿ ಮಾಡಬೇಕು. ಇದೆಲ್ಲಾ ನೋಡ್ತಾ ಇದ್ದರೆ ಏನನ್ನಿಸತ್ತೆ? ಬುದ್ಧಿವಂತಿಕೆ ಬಗೆಗಿನ ವ್ಯಾಖ್ಯೆ ಬದಲಾಗಬೇಕು ಅಂತನ್ನಿಸ್ತಿಲ್ವಾ?
ನಾನು ಒಂದು ಪುಸ್ತಕಕ್ಕಾಗಿ ಸುಮಾರು ಜನರ ಸಂದರ್ಶನ ನಡೆಸಿದೆ. ಹೆಸರು ಗಳಿಸಿದ ಪ್ರಖ್ಯಾತ ಕ್ರಿಯಾಶೀಲ ವ್ಯಕ್ತಿಗಳ ಸಂದರ್ಶ. ಅವರು ಹೇಗೆ ಅವರ ಪ್ರತಿಭೆಯನ್ನು ಗುರುತಿಸಿದರು ಅಂತ ಕುತೂಹಲ ಇತ್ತು ನಂಗೆ. ಅಷ್ಟು ಎತ್ತರ ಹೋಗಲು ಹೇಗೆ ಸಾಧ್ಯ ಆಯಿತು ಅನ್ನೋ ಪ್ರಶ್ನೆ. ಆ ಸಂದರ್ಶನ ಸರಣಿಯಲ್ಲಿ ನಾನು ಗಿಲಿಯನ್ ಲಿನ್ನೇ ಸಂದರ್ಶನ ಮಾಡಿದೆ. ಅದ್ಭುತ ಮಹಿಳೆ ಆಕೆ. ಜಗತøಸಿದ್ಧ ಕೊರಿಯೋಗ್ರಾಫರ್. ಅವಳ ಡಾನ್ಸ್ ಇದೆ ಅಂದ ತಕ್ಷಣ ಜನ ಮುಗಿಬೀಳುತ್ತಿದ್ದಂತಹ ಪ್ರತಿಭೆ.
ಒಂದು ದಿನ ಅವಳ ಜೊತೆ ಊಟ ಮಾಡುತ್ತಿದ್ದೆ. ನೀವು ಹೇಗೆ ಅಷ್ಟೊಂದು ದೊಡ್ಡ ಡಾನ್ಸರ್ ಆಗಿದ್ದು ಅಂತ ಕೇಳಿದೆ. ಅವಳು ಹೇಳಿದ ಕತೆ ಅದ್ಭುತ ಕತೆ.
ಗಿಲಿಯನ್ ಶಾಲೆಯಲ್ಲಿರುವಾಗ ಹೋಪ್‌ಲೆಸ್ ಸ್ಟುಡೆಂಟ್ ಆಗಿದ್ದಳು. ಒಂದು ದಿನ ಅವಳ ಸ್ಕೂಲ್‌ನಿಂದ ಅವಳ ಮನೆಗೆ ಒಂದು ಕಾಗದ ಬಂದಿತ್ತು. ಅದರ ಸಾರಾಂಶ ಇಷ್ಟೇ- ಗಿಲಿಯನ್‌ಗೆ ಲರ್ನಿಂಗ್ ಡಿಸಾರ್ಡರ್ ಇದೆ ಅಂತನ್ನಿಸುತ್ತದೆ.
ಈಗಾದ್ರೆ ಅದಕ್ಕೆ ಎಡಿಎಚ್‌ಡಿ ಅಂತ ಹೆಸರು ಕೊಡಬಹುದಿತ್ತು. ಆದರೆ ಆಗ ಎಡಿಎಚ್‌ಡಿ ಸಂಶೋಧನೆ ಆಗಿರಲಿಲ್ಲ. ಅದು ಜನರಿಗೆ ಗೊತ್ತಿರಲಿಲ್ಲ. ಇದನ್ನು ಕೇಳಿ ಅಮ್ಮ ಒಬ್ಬ ಡಾಕ್ಟರ್ ಒಬ್ಬರ ಹತ್ತಿರ ಕರೆದುಕೊಂಡು ಹೋದರು. ತಾಯು ಮಗಳು ಎರಡು ಕುರ್ಚಿಯಲ್ಲಿ ಕೂತಿದ್ದಾರೆ. ಅವರೆದುರಿಗೆ ಡಾಕ್ಟರ್ ಇದ್ದಾರೆ. ತಾಯಿ ಡಾಕ್ಟ್ರಿಗೆ ಮಗಳ ಸಮಸ್ಯೆ ಬಗ್ಗೆ ಹೇಳುತ್ತಿದ್ದಾರೆ.
ಈ ಹುಡ್ಗಿ ಬೇರೆ ಮಕ್ಕಳಿಗೆ ತೊಂದ್ರೆ ಕೊಡ್ತಾಳಂತೆ. ಹೋಂವರ್ಕ್ ಮಾಡಲ್ಲ. ಕೂತಲ್ಲಿ ಸುಮ್ಮನೆ ಕೂರಲ್ಲ. ಗಲಾಟೆ ಮಾಡ್ತಾ ಇರ್ತಾಳೆ.
ಅದನ್ನೆಲ್ಲಾ ಕೇಳಿ ಡಾಕ್ಟರ್ ಗಿಲಿಯಾನ್ ಹತ್ತಿರ, ನೋಡಮ್ಮಾ ಅಮ್ಮ ಹೇಳಿದ್ದೆಲ್ಲಾ ನೀ ಕೇಳಿದ್ದಿ. ನಾನು ಅವರ ಜೊತೆ ಪ್ರೈವೇಟಾಗಿ ಮಾತಾಡಬೇಕು. ನೀ ಇಲ್ಲೇ ಕೂತಿರು ಆಯ್ತಾ ಅಂತ ಹೇಳಿ ಅವರಿಬ್ಬರು ಆ ಕೋಣೆಯಿಂದ ಹೊರಬಂದರು. ಹಾಗೆ ಅವರು ಹೊರಗೆ ಹೋಗುವಾಗ ಡಾಕ್ಟರ್ ಅಲ್ಲಿದ್ದ ಒಂದು ರೇಡಿಯೋವನ್ನು ಆನ್ ಮಾಡಿ ಹೋಗುತ್ತಾರೆ.
ಹೊರಗೆ ಹೋದವರೇ ಡಾಕ್ಟರ್ ಅಮ್ಮನಿಗೆ ಕಿಟಕಿಯಲ್ಲಿ ಅವಳನ್ನೇ ನೋಡಿ ಅಂದರು. ಒಂದು ನಿಮಿಷದ ನಂತರ ಡಾಕ್ಟರ್ ಅಮ್ಮನಿಗೆ ಹೇಳುತ್ತಾರೆ- “ನೋಡಿ ಅವಳ ಕಾಲು ಮ್ಯೂಸಿಕ್ ತಕ್ಕಂತೆ ಕುಣಿಯುತ್ತಿದೆ. ಅವಳು ಗಲಾಟೆ ಮಾಡುತ್ತಿಲ್ಲ. ಕೂತಲ್ಲೇ ಇದ್ದಾಳೆ. ನೋಡಿ ಅಮ್ಮಾ, ನಿಮ್ಮ ಮಗಳಿಗೆ ಯಾವ ತೊಂದರೆಯೂ ಇಲ್ಲ. ಅವಳೊಬ್ಬ ಡಾನ್ಸರ್. ಅವಳನ್ನು ಡಾನ್ಸ್ ಸ್ಕೂಲಿಗೆ ಕಳಿಸಿ.’
ಅಷ್ಟು ಹೇಳಿ ಆಕೆ ಕತೆ ನಿಲ್ಲಿಸಿದಳು. ನಾನು ಕುತೂಹಲದಿಂದ ಏನಾಯ್ತು ಆಮೇಲೆ ಅಂದೆ. ಆಕೆ ಮುಂದುವರಿಸಿದಳು.
ಅಮ್ಮ ನನ್ನನ್ನು ಡಾನ್ಸ್ ಸ್ಕೂಲಿಗೆ ಕಳಿಸಿದರು. ಅಲ್ಲಿ ನಾನು ಒಳಗೆ ಹೋದಂತೆ ನನ್ನಂತೆ ಇರುವ ಅನೇಕ ಮಕ್ಕಳು ಸಿಕ್ಕಿದರು. ಅವರೂ ಅಷ್ಟೇ ಕೂತಲ್ಲಿ ಕೂರುತ್ತಿರಲಿಲ್ಲ ನಾನು ಬ್ಯಾಲೆ ಕಲಿತೆ. ಒಂದಷ್ಟು ಜನ ಟ್ಯಾಪ್ ಡಾನ್ಸ್ ಕಲಿತರು. ಕೆಲವರು ಜಾಸ್. ಹಲವರು ಕಂಟೆಂಪರರಿ.
ಈಗವಳು ಮಲ್ಟಿ ಮಿಲಿಯನೇರ್ ಡಾನ್ಸರ್. ಖುಷಿಯೂ ಇದೆ. ದುಡೂx ಇದೆ.
ನಾನು ಹೇಳ್ಳೋದಿಷ್ಟೇ. ನಾವು ಮಕ್ಕಳಿಗೆ ಎಂಥಾ ಶಿಕ್ಷಣ ಕೊಡುತ್ತಿದ್ದೇವೆ ಅಂತನ್ನುವುದನ್ನು ಯೋಚಿಸಬೇಕಾದ ಸಮಯ ಬಂದಿದೆ. ಮಕ್ಕಳ ಕ್ರಿಯೇಟಿವಿಟಿಯನ್ನು ಪ್ರೋತ್ಸಾಹಿಸಬೇಕಾಗಿದೆ. ಅವರಿಗಿಷ್ಟ ಬಂದ ವಿಷಯದಲ್ಲಿ ಅವರು ಏನನ್ನಾದರೂ ಮಾಡಲು ನಾವು ಸಹಾಯ ಮಾಡಬೇಕಾಗಿದೆ. ನಮ್ಮ ಕೆಲಸ ಅಷ್ಟೇ.
ನಮಸ್ಕಾರ!