ಮುಂಬಯಿ: ನಟಿ ಕೃತಿ ಸನೋನ್ ಇಂದು ಬಿಟೌನ್ ಸೇರಿದಂತೆ ಇತರ ಸಿನಿಮಾರಂಗದಲ್ಲೂ ಬಹುಬೇಡಿಕೆಯ ನಟಿಯಾಗಿದ್ದಾರೆ. ಇತ್ತೀಚೆಗೆ ʼಮಿಮಿʼ ಚಿತ್ರದ ನಟನೆಗಾಗಿ ರಾಷ್ಟ್ರ ಪ್ರಶಸ್ತಿಯನ್ನು ಪಡೆದುಕೊಂಡಿದ್ದಾರೆ.
ಇಂದು ಖ್ಯಾತ ನಟಿಯರಲ್ಲಿ ಒಬ್ಬರಾಗಿರುವ ಕೃತಿ ಸಂದರ್ಶನವೊಂದರಲ್ಲಿ ಚಿತ್ರರಂಗಕ್ಕೆ ಬಂದ ಆರಂಭಿಕ ದಿನಗಳ ಬಗ್ಗೆ ಮಾತನಾಡಿದ್ದಾರೆ.
“ಕರ್ಲಿ ಟೇಲ್ಸ್” ಜೊತೆಗಿನ ಸಂದರ್ಶನದಲ್ಲಿ ಮಾತನಾಡಿರುವ ಅವರು, “ನಾನು ಆಗಷ್ಟೇ ಮುಂಬಯಿಗೆ ಶಿಫ್ಟ್ ಆಗಿದ್ದೆ. ಈ ವೇಳೆ ನಾನು ಜಿಮ್ಯಾಟ್ ಪರೀಕ್ಷೆಗೆ ತಯಾರಿಯನ್ನು ನಡೆಸುತ್ತಿರುವ ಜೊತೆಗೆ ಸಿನಿಮಾ ರಂಗಕ್ಕೆ ಎಂಟ್ರಿ ಆಗಲು ಪ್ರಯತ್ನಿಸುತ್ತಿದ್ದೆ. ಇದರೊಂದಿಗೆ ಮಾಡೆಲಿಂಗ್ ಕೂಡ ಮಾಡುತ್ತಿದ್ದೆ. ನನಗೆ ನನ್ನ ಮೊದಲ ತೆಲುಗು ಚಿತ್ರ (ಮಹೇಶ್ ಬಾಬು ಅವರ 1: ನೆನೊಕ್ಕಡಿನ್) ನಲ್ಲಿ ನಟಿಸುವ ಅವಕಾಶ ಒದಗಿಬಂತು. ಈ ವೇಳೆ ಹಿಂದಿಯ ʼ ಹೀರೋಪಂತಿʼ ಯಲ್ಲೂ ನಟಿಸುವ ಅವಕಾಶ ಸಿಕ್ಕಿತ್ತು. ʼಹೀರೋಪಂತಿʼ ಶುರುವಾಗಲು ತಡವಿತ್ತು. ಎರಡು ತಿಂಗಳ ಬಳಿಕ ತೆಲುಗು ಚಿತ್ರದ ಎರಡನೇ ಶೆಡ್ಯೂಲ್ ಪ್ರಾರಂಭವಾಗಬೇಕಿತ್ತು. ಸಿನಿಮಾ ರಂಗಕ್ಕೆ ಬರುವ ವೇಳೆ ನನ್ನ ಮೊದಲ ರ‍್ಯಾಂಪ್ ವಾಕ್ ಸಮಯದಲ್ಲಾದ ಘಟನೆಯನ್ನು ನಾನು ಯಾವತ್ತೂ ಮರೆಯಲ್ಲ” ಎಂದು ಹೇಳಿದ್ದಾರೆ.
ಇದನ್ನೂ ಓದಿ: Rana Daggubati: ʼಜೈ ಭೀಮ್ʼಗೆ ಸಿಗದ ರಾಷ್ಟ್ರ ಪ್ರಶಸ್ತಿ; ವಿವಾದಕ್ಕೆ ರಾಣಾ ಪ್ರತಿಕ್ರಿಯೆ
“ಸಂಯೋಜಕಿ ಆಗಿದ್ದವರು ನಾನು ರ‍್ಯಾಂಪ್ ನಲ್ಲಿ ನಡೆಯುವಾಗ ತಪ್ಪು ಮಾಡಿದೆ ಎನ್ನುವ ಕಾರಣಕ್ಕೆ ಅವರು ನನ್ನ ಮೇಲೆ ರೇಗಾಡಿದ್ದರು. ಅದೊಂದು ಫಾರ್ಮ್‌ಹೌಸ್ ಆಗಿತ್ತು. ನಾನು ನಡೆಯುವಾಗ ಹುಲ್ಲಿಗೆ ಹಿಮ್ಮಡಿ ಸಿಕ್ಕಿಕೊಂಡಿತ್ತು. ನಾನು ಮೊದಲ ಬಾರಿ ರ‍್ಯಾಂಪ್ ನಲ್ಲಿ ನಡೆಯುತ್ತಿದ್ದೇನೆ ಎನ್ನುವುದನ್ನೂ ನೋಡದೆ ಸಂಯೋಜಕಿ 50 ಜನರ ಮುಂದೆ ನನ್ನ ಮೇಲೆ ರೇಗಾಡಿ ಅವಮಾನ ಮಾಡಿದರು. ಬಹಳ ಅಸಭ್ಯವಾಗಿ ವರ್ತಿಸಿದರು. ಆ ವೇಳೆ ನಾನು ಅತ್ತಿದ್ದೆ. ನಾನು ಅವರೊಂದಿಗೆ ಮತ್ತೆ ಯಾವತ್ತೂ ಕೆಲಸ ಮಾಡಿಲ್ಲ” ಎಂದು ಕರಾಳ ಘಟನೆ ಬಗ್ಗೆ ನಟಿ ಹೇಳಿದರು.
ಇತ್ತೀಚೆಗೆ ಕೃತಿ ʼಆದಿಪುರುಷ್ʼ ಸಿನಿಮಾದಲ್ಲಿ ಕಾಣಿಸಿಕೊಂಡಿದ್ದರು. ಮುಂದೆ ʼಗಣಪತ್, ʼಹೀರೋಪಂತಿ 2ʼ ಮತ್ತು ದೋ ಪಟ್ಟಿʼ ಸಿನಿಮಾದಲ್ಲಿ ಕಾಣಿಸಿಕೊಳ್ಳಲಿದ್ದಾರೆ.