Advertisement

“ಕೃತಿ’ಕತೃ ಪರಿಚಯ

06:00 AM Sep 05, 2018 | |

ತಮಿಳು ಚಿತ್ರರಂಗದಲ್ಲಿ ಪರಿಚಿತ ಹೆಸರು ಕೃತಿ ಶೆಟ್ಟಿ. ಇವರು ಅಪ್ಪಟ ಕನ್ನಡ ಪ್ರತಿಭೆ. ಮೂಲತಃ ಭರತನಾಟ್ಯ ಕಲಾವಿದೆಯಾದ ಇವರಿಗೆ ರಂಗಭೂಮಿಯ ನಂಟೂ ಇದೆ. ಖ್ಯಾತ ಸಂಗೀತ ನಿರ್ದೇಶಕ ಅನೂಪ್‌ ಸೀಳಿನ್‌ ಕೃತಿ ಅವರ ಪತಿ. ಈ ದಂಪತಿಗೆ “ಆಲಾಪನ’ ಎಂಬ ಪುಟ್ಟ ಮಗಳಿದ್ದಾಳೆ. ಸುನೀಲ್‌ ಕುಮಾರ್‌ ದೇಸಾಯಿಯವರ “ಸರಿಗಮಪ’ ಚಿತ್ರಕ್ಕಾಗಿ ಮೊದಲ ಬಾರಿ ಕ್ಯಾಮೆರಾ ಮುಂದೆ ನಿಂತ ಕೃತಿ, ಬಳಿಕ ತಮಿಳಿನ 7 ಚಿತ್ರಗಳಲ್ಲಿ ನಟಿಸಿದ್ದಾರೆ. ಇವರ ಅಭಿನಯದ “ಸಾಗಕ್ಕಲ್‌’ ಚಿತ್ರ 2 ರಾಷ್ಟ್ರಪ್ರಶಸ್ತಿಗಳನ್ನು ಪಡೆದಿದೆ. “ಸ್ನೇಹವಿನ್‌ ಕಾದಲಾರ್ಗಲ್‌’ ಎಂಬ ಮಹಿಳಾ ಪ್ರದಾನ ಚಿತ್ರದಲ್ಲಿ ಮುಖ್ಯಪಾತ್ರ ಮಾಡಿ ಸೈ ಎನಿಸಿಕೊಂಡಿದ್ದಾರೆ… 

Advertisement

ನೃತ್ಯ, ನಾಟಕ, ಸಿನಿಮಾ ಹೀಗೆ ಬಹುತೇಕ ಪ್ರಕಾರಗಳಲ್ಲಿ ತೊಡಗಿಕೊಂಡಿದ್ದೀರಿ? ಕಲೆಯಲ್ಲಿ ಇಷ್ಟು ಆಸಕ್ತಿ ಹೇಗೆ ಬಂತು? 
ಕಲೆಯಲ್ಲಿ ನನಗಿರುವ ಆಸಕ್ತಿಗೆ, ನನ್ನೆಲ್ಲಾ ಕಲಿಕೆಗೆ ಅಮ್ಮನದೇ ಒತ್ತಾಸೆ. ಅಮ್ಮನಿಗೆ ನೃತ್ಯದಲ್ಲಿ ಬಹಳ ಆಸಕ್ತಿ ಇತ್ತಂತೆ. ಆದರೆ ಅವರ ಸಮಯದಲ್ಲಿ ಹೆಣ್ಣು ಮಕ್ಕಳಿಗೆ ಅಷ್ಟಲ್ಲಾ ಉತ್ತೇಜನ ಇರಲಿಲ್ಲ. ಹೀಗಾಗಿ ಅವರಿಗೆ ಕಲಿಯಲು ಸಾಧ್ಯವಾಗಲಿಲ್ಲ. ತನ್ನಿಂದ ಸಾಧ್ಯವಾಗದ್ದನ್ನು ಮಕ್ಕಳು ಸಾಧಿಸಲಿ ಎಂದು ನನಗೆ ಮತ್ತು ನನ್ನ ತಮ್ಮನಿಗೆ ನೃತ್ಯ ಕಲಿಯಲು ಕಳಿಸಿದರು. ನಾನು ಭರತನಾಟ್ಯ ಕಲಿತೆ, ನನ್ನ ತಮ್ಮ ಕಥಕ್‌ ಕಲಿತ. ನಾನು ಒಂದನೇ ತರಗತಿಯಲ್ಲಿದ್ದಾಗಿನಿಂದ ಭರತನಾಟ್ಯ ಕಲಿಯುತ್ತಿದ್ದೇನೆ. ನಾನು ನಂತರ ಮೋಹಿನಿ ಅಟ್ಟಂಅನ್ನೂ ಕಲಿತೆ. ಬಿಬಿಎಂ ವ್ಯಾಸಂಗದ ಬಳಿಕ ಮೈಸೂರು ವಿವಿಯಲ್ಲಿ ಎಂಎ ನೃತ್ಯ ಓದಿದೆ. ನಂತರ ಸಮಷ್ಠಿ ರಂಗ ಶಾಲೆಯಲ್ಲಿ ರಂಗಭೂಮಿಯಲ್ಲಿ ಡಿಪ್ಲೊಮಾವನ್ನೂ ಪಡೆದೆ. ಹೀಗಾಗಿ ಚಿಕ್ಕಂದಿನಿಂದಲೇ ಕಲೆಯಲ್ಲಿ ಆಸಕ್ತಿ ಬೆಳೆದು ಬಂತು.

ಸಿನಿಮಾಕ್ಕೆ ಮೊದಲು ಬಣ್ಣ ಹಚ್ಚಿದ್ದು ಯಾವಾಗ? 
ನಟಿಯಾಗಬೇಕೆಂಬ ಯೋಚನೆಯೂ ನನಗೆ ಇರಲಿಲ್ಲ. ನನಗೆ ಬಾಲ್ಯದಲ್ಲಿ ಅಸಕ್ತಿ ಇದ್ದದ್ದು ಚಿತ್ರಕಲೆಯಲ್ಲಿ. ಚಿತ್ರಕಲಾ ಪರಿಷತ್‌ನಲ್ಲಿ ಪದವಿ ಪಡೆಯಬೇಕು ಅಂತಿದ್ದೆ. ಆದರೆ ಅಲ್ಲಿಗೆ ಹೋಗಲಿಲ್ಲ. ನನ್ನ ನೃತ್ಯ ಪ್ರದರ್ಶನ ನೋಡಿದ್ದ ಸಿನಿಮಾ ನಿರ್ದೇಶಕ ಜಯತೀರ್ಥ, ಸಮಷ್ಠಿಯಲ್ಲಿ ರಂಗಭೂಮಿ ಶಿಕ್ಷಣ ಪಡೆದುಕೊಳ್ಳಲು ಸಲಹೆ ನೀಡಿದರು. ಅಲ್ಲಿ ಕಲಿಯುತ್ತಿದ್ದ ವೇಳೆ ಕಸಿನ್‌ ಒಬ್ಬರು, ಸುನಿಲ್‌ ಕುಮಾರ್‌ ದೇಸಾಯಿ ಅವರ “ಸರಿಗಮಪ ‌ ಸಿನಿಮಾದ ಆಡಿಷನ್‌ನಲ್ಲಿ ಪಾಲ್ಗೊಳ್ಳಲು ಹೇಳಿದರು. ಆ ಚಿತ್ರ ರಿಲೀಸ್‌ ಆಗಲಿಲ್ಲ. ನಾನು ಮತ್ತೆ ಸಿನಿಮಾ ಪ್ರಯತ್ನಿಸಲೂ ಇಲ್ಲ. ಆದರೆ ನನಗೆ ತಮಿಳು ಚಿತ್ರರಂಗದಿಂದ ಅವಕಾಶ ಬಂದವು. ಒಳ್ಳೆಯ ಅವಕಾಶವೆಂದು ತೋರಿದ್ದರಿಂದ ಒಪ್ಪಿಕೊಂಡೆ.

 ಅನೂಪ್‌ ಮತ್ತು ನಿಮ್ಮದು ಎಷ್ಟು ವರ್ಷಗಳ ಗೆಳೆತನ? ನಿಮ್ಮಿಬ್ಬರ ಪರಿಚಯ ಆದದ್ದು ಹೇಗೆ? 
ಅನೂಪ್‌, ಹಂಸಲೇಖ ಅವರ ಸಂಗೀತ ತಂಡದಲ್ಲಿ ಕೆಲಸ ಮಾಡುತ್ತಿದ್ದರು. ಹಂಸಲೇಖ ಅವರು ಜಾನಪದ ಸಂಗೀತ ನೃತ್ಯಗಳನ್ನು ಪ್ರಚುರಪಡಿಸಲೆಂದೇ “ಋತುಗಳ ಹಬ್ಬ’ ಎಂಬ ಕಾರ್ಯಕ್ರಮ ರೂಪಿಸಿದ್ದರು. ನಮ್ಮ ನೃತ್ಯ ತಂಡ ಕೂಡ ಅವರ ಜೊತೆ ಭಾಗಿಯಾಗಿತ್ತು. ಆಗ ನನಗೆ ಅನೂಪ್‌ ಪರಿಚಯವಾಗಿದ್ದು. ಅನೂಪ್‌ ಸದಾ ಗಂಭೀರವಾಗಿ ಇರುತ್ತಿದ್ದರು. ಇದೇನಪ್ಪಾ ಈ ಮನುಷ್ಯ ಇಷ್ಟು ಸೀರಿಯಸ್‌ ಆಗಿರ್ತಾರೆ ಎಂದು ಮನಸ್ಸಿನಲ್ಲೇ ಅಂದುಕೊಳ್ಳುತ್ತಿದ್ದೆ. ಸ್ವಲ್ಪ ದಿನಗಳ ಬಳಿಕ ಒಳ್ಳೆಯ ಸ್ನೇಹಿತರಾದೆವು. ಇಬ್ಬರ ಮನೆಯೂ ಹತ್ತಿರದಲ್ಲೇ ಇತ್ತು. ಹೀಗಾಗಿ ನಮ್ಮಿಬ್ಬರ ಭೇಟಿ ಆಗಾಗ ಆಗುತ್ತಿತ್ತು. ಮದುವೆಗೂ ಮುಂಚೆ ಸುಮಾರು 8 ವರ್ಷಗಳ ಸ್ನೇಹ ನಮ್ಮದು. ಬರೀ ಸ್ನೇಹಿತರಾಗಿದ್ದರಿಂದ ದಿನಾ ಫೋನ್‌ ಮಾಡಬೇಕು, ಭೇಟಿಯಾಗಬೇಕು ಎಂಬ ನಿರೀಕ್ಷೆಗಳೆಲ್ಲಾ ಇರ್ತಾ ಇರಲಿಲ್ಲ. ಹೀಗಾಗಿ ಜಗಳವೂ ಇರಲಿಲ್ಲ. ಅನೂಪ್‌ ನಮ್ಮ ಮನೆಗೂ ಬಂದು ಹೋಗಿ ಮಾಡುತ್ತಿದ್ದರು. ಅವರ ಮನೆಯಲ್ಲಿ ಅವರಿಗೆ ಮದುವೆ ಮಾಡಲು ಹುಡುಗಿ ಹುಡುಕುತ್ತಿದ್ದರು. ಆಗ ಅನೂಪ್‌, “ನಾವಿಬ್ಬರೂ ಒಳ್ಳೆ ಸ್ನೇಹಿತರು. ಮದುವೆಯಾದರೆ ಖುಷಿಯಾಗಿ ಇರಿ¤àವಿ ಅಂತನ್ನಿಸತ್ತೆ ಯೋಚನೆ ಮಾಡು’ ಅಂತ ಹೇಳಿದರು. ನನಗೂ ಸರಿ ಎನ್ನಿಸಿತು ಒಪ್ಪಿಕೊಂಡೆ. 

ಮದುವೆ ಮುಂಚಿನ ಮತ್ತು ನಂತರದ ಜೀವನಕ್ಕೆ ಏನಾದರೂ ವ್ಯತ್ಯಾಸ ಇದೆಯಾ? 
ಹೆಚ್ಚು ವ್ಯತ್ಯಾಸ ಇಲ್ಲ. ಹಾಗೆ ನೋಡಿದರೆ ಕೆರಿಯರ್‌ನಲ್ಲೂ ಏನು ವ್ಯತ್ಯಾಸ ಆಗಿಲ್ಲ. ಮದುವೆ ಬಳಿಕವೂ ನನಗೆ ಉತ್ತಮ ಸಿನಿಮಾ ಅವಕಾಶಗಳು ಸಿಕ್ಕವು. ಮದುವೆ ನಂತರ ಹೀರೋಯಿನ್‌ ಪಾತ್ರ ಸಿಗಲ್ಲ ಎಂದು ಎಲ್ಲಾ ಹೇಳುತ್ತಾರೆ. ಆದರೆ ಅದು ಖಂಡಿತಾ ಸತ್ಯವಲ್ಲ. ಅಪ್ಪ ಅಮ್ಮ ಕೊಡುತ್ತಿದ್ದ ಪ್ರೋತ್ಸಾಹವನ್ನೇ ಅನೂಪ್‌ ಕುಟುಂಬದವರೂ ಕೊಟ್ಟರು. ಮದುವೆಯಾದ ಮೇಲೂ ಉಂಡಾಡಿಗುಂಡನಂತೆ ಸುತ್ತಾಡಿಕೊಂಡೇ ಇದ್ದೆ. ಮನೆ ಬದಲಾಯಿತು ಅಷ್ಟೇ, ಜೀವನದಲ್ಲಿ ಇನ್ನೇನೂ ಬದಲಾಗಿಲ್ಲ. 

Advertisement

ಮಗಳಿಗೆ ಎಷ್ಟು ವರ್ಷ? ಅಮ್ಮನಾಗಿರುವ ಅನುಭವ ಹೇಗಿದೆ. 
ಮಗಳಿಗೆ ಈಗ 2 ವರ್ಷ. ಅವಳು ನನ್ನ ಜೀವನವನ್ನು ಸಾಕಷ್ಟು ಬದಲಿಸಿದ್ದಾಳೆ. ಅವಳಿಗೆ ನನ್ನ ಅಗತ್ಯ ಇರುವುದಕ್ಕಿಂತ ಹೆಚ್ಚಾಗಿ, ನನಗೆ ಅವಳ ಅಗತ್ಯವಿದೆ. ನಾನು ಸದಾ ಅವಳ ಜೊತೆಯೇ ಇರಬೇಕೆಂದು ಬಯಸುತ್ತೇನೆ. ಅವಳ ಬೆಳವಣಿಗೆಯ ಪ್ರತಿ ಖುಷಿಯನ್ನೂ ನಾನು ಅನುಭವಿಸಬೇಕು. ನಾನು ನೃತ್ಯ ಕ್ಲಾಸಿಗೆ ಹೋದಾಗಲೂ ಅವಳನ್ನು ಜೊತೆಯೇ ಕರೆದುಕೊಂಡು ಹೋಗುತ್ತೇನೆ. ನಾನು ತುಂಬಾ ಬ್ಯುಸಿ ಇದ್ದರೆ ಅವಳು ಅನೂಪ್‌ ಜೊತೆ ಸ್ಟುಡಿಯೋದಲ್ಲಿರುತ್ತಾಳೆ. ಒಟ್ಟಿನಲ್ಲಿ ಇಬ್ಬರಲ್ಲೊಬ್ಬರು ಅಕೆಯ ಜೊತೆ ಇರುತ್ತೇವೆ. ಅವಳೂ ಅಷ್ಟೆ, ಜಾಣ ಮರಿ. ಸ್ವಲ್ಪವೂ ರಗಳೆ ಮಾಡುವುದಿಲ್ಲ. ಜನರ ಜೊತೆ ಚೆನ್ನಾಗಿ ಹೊಂದಿಕೊಳ್ಳುತ್ತಾಳೆ. ಅವಳಿಗಾಗಿ ಸದ್ಯ ಯಾವ ಅವಕಾಶಗಳನ್ನೂ ಒಪ್ಪಿಕೊಳ್ಳುತ್ತಿಲ್ಲ.

ನಿಮಗೂ ಸಂಗೀತದಲ್ಲಿ ಆಸಕ್ತಿ ಇದೆಯಾ? ಅನೂಪ್‌ ಅವರ ಹಾಡುಗಳನ್ನು ವಿಮರ್ಶೆ ಮಾಡುತ್ತೀರಾ? 
ನೃತ್ಯಕ್ಕೆ ಎಷ್ಟು ಬೇಕು ಅಷ್ಟು ಹಾಡುಗಾರಿಕೆ ಗೊತ್ತು. ಅದು ಬಿಟ್ಟರೆ ನನಗೆ ಸಂಗೀತದ ಬಗ್ಗೆ ಹೆಚ್ಚು ತಿಳಿದಿಲ್ಲ. ಅನೂಪ್‌ ಜೊತೆಯೇ ಇರುವುದರಿಂದ ಈಗ ಯಾರಾದರೂ ಶೃತಿ ತಪ್ಪಿದರೆ, ತಾಳ ಮರೆತರೆ ಫೀಲ್‌ ಆಗುತ್ತದೆ. ಅವರು ಕಂಪೋಸ್‌ ಮಾಡುವ ಎಲ್ಲಾ ಹಾಡುಗಳನ್ನು ನನಗೆ ಒಮ್ಮೆ ಕೇಳಿಸುತ್ತಾರೆ. ಏನಾದರೂ ಸಲಹೆ ಕೊಟ್ಟರೆ ಪರಿಗಣಿಸುತ್ತಾರೆ.

ಮದುವೆಯಾದ ಬಳಿಕ ಇಬ್ಬರೂ ಒಂದೇ ವೇದಿಕೆಯಲ್ಲಿ ಕಾರ್ಯಕ್ರಮ ಕೊಟ್ಟಿದ್ದೀರಾ?
ಅನೂಪ್‌ ಅವರ ತಂಗಿ ಮದುವೆಗೆ “ವಚನ ತಾಂಬೂಲ’ ಎಂಬ ಕಾರ್ಯಕ್ರಮ ರೂಪಿಸಿದ್ದರು. ವಚನಗಳಿಗೆ ಶಾಸ್ತ್ರೀಯವಲ್ಲದ ಬೇರೆಯದ್ದೇ ಪ್ರಾಕಾರದ ಸಂಗೀತ ಸಂಯೋಜನೆ ಮಾಡಿದ್ದರು. ಕಳೆದ ವರ್ಷ ನಮ್ಮ ಮಗಳ ಮೊದಲನೇ ವರ್ಷದ ಹುಟ್ಟುಹಬ್ಬಕ್ಕೆ “ಆಲಾಪನಾ’ ಎಂಬ ಕಾರ್ಯಕ್ರಮ ಮಾಡಿದ್ದೆವು. ಆಗ ವಚನಗಳಗೆ ನಾನು ಮತ್ತು ನನ್ನ ತಮ್ಮ ನಮ್ಮ ತಂಡದೊಂದಿಗೆ ಕಥಕ್‌ ನೃತ್ಯ ಪ್ರದರ್ಶನ ನೀಡಿದ್ದೆವು. ಅನೂಪ್‌ ಹಾಡುಗಾರರ ತಂಡದಲ್ಲಿದ್ದರು. ಮದುವೆಯಾದ ಮೇಲೆ ಇದೇ ಮೊದಲ ಪ್ರದರ್ಶನನ ಒಟ್ಟಿಗೇ ನೀಡಿದ್ದು. ಈ ವರ್ಷವೂ ಸಂಗೀತ ಕಛೇರಿ ಕೊಟ್ಟೆವು. ಈ ಬಾರಿ ಸಂಗೀತ ಮಾತ್ರ ಇತ್ತು. ಅದಕ್ಕೆ ನೃತ್ಯ ಸೇರಿಸಲಿಲ್ಲ. 

ಶಾಪಿಂಗ್‌ ಎಲ್ಲಿ ಮಾಡುತ್ತೀರಾ? 
ಐ ಹೇಟ್‌ ಶಾಪಿಂಗ್‌. ನಾನು ಶಾಪಿಂಗ್‌ ಹೋಗುವುದು ಬಹಳ ಕಡಿಮೆ. ನನ್ನ ಶಾಪಿಂಗ್‌ ಮಾಡುವುದೆಲ್ಲಾ ಅನೂಪ್‌. ಬರ್ತ್‌ಡೇ, ಆ್ಯನಿವರ್ಸರಿ ಯಾವುದೇ ಕಾರ್ಯಕ್ರಮವಿದ್ದರೂ ಅವರೇ ಅಂಗಡಿಗೆ ಹೋಗಿ ನನಗೆ ಬಟ್ಟೆಗಳನ್ನು ತರುತ್ತಾರೆ. ನಾನೇ ಹೋಗಿದ್ದರೂ ಅಷ್ಟು ಚೆಂದದ ಬಟ್ಟೆ ತರುವುದಿಲ್ಲ.

ಕಲಾವಿದರಿಗೆ ಅವರದ್ದೇ ಆದ ಸ್ಟೈಲ್‌ ಸ್ಟೇಟ್‌ಮೆಂಟ್‌ ಇರುತ್ತದೆ. ನಿಮ್ಮ ಫ್ಯಾಷನ್‌ ಬಗ್ಗೆ ಹೇಳಿ? 
ನೃತ್ಯ ಕಲಾವಿದರು, ಸಿನಿಮಾ ಕಲಾವಿದರಂತೆ ನನಗೆ ನನ್ನದೇ ಆದ ಸ್ಟೈಲ್‌ ಅಂತ ಇಲ್ಲ. ನಾನು ತುಂಬಾ ಕ್ಯಾಶುವಲ್‌ ಬಟ್ಟೆಗಳನ್ನು ಹಾಕುತ್ತೀನಿ. ಮನೆಯಲ್ಲಿ ಹೆಚ್ಚಿನ ಸಲ ಅನೂಪ್‌ ಅವರ ಟೀ ಶರ್ಟ್‌ಗಳನ್ನೇ ಧರಿಸುತ್ತೇನೆ. ಅವರ ಟೀ ಶರ್ಟ್‌ಗಳು ನನಗೆ ಬಹಳ ಕಂಫ‌ರ್ಟಬಲ್‌. ನಾವಿಬ್ಬರೂ ಎಲ್ಲಾ ವಿಚಾರಗಳಲ್ಲೂ ತುಂಬಾ ಸಿಂಪಲ್‌. ಜೀವನವನ್ನು ಕಾಂಪ್ಲಿಕೇಟ್‌ ಮಾಡಿಕೊಂಡಿಲ್ಲ. ಊಟ, ಬಟ್ಟೆ ಎಲ್ಲವೂ ಸರಳವಾಗಿಯೇ ಇದೆ. 

ನಿಮ್ಮ ಅಡುಗೆ ಮನೆ ವ್ಯವಹಾರದ ಬಗ್ಗೆ ಹೇಳಿ? 
ನಾನು ನಾನ್‌ ವೆಜಿಟೇರಿಯನ್‌, ಅನೂಪ್‌ ಅವರದ್ದು ಅಪ್ಪಟ ಸಸ್ಯಹಾರಿ ಕುಟುಂಬ. ಹೀಗಾಗಿ ಮನೆಯಲ್ಲಿ ವೆಜ್‌ ಅಡುಗೆಯನ್ನೇ ಮಾಡುವುದು. ಮನೆಯಲ್ಲೇ ಸ್ಟುಡಿಯೋ ಇರುವುದರಿಂದ ಜನರ ಓಡಾಟ ಇರುತ್ತೆ. ಈ ಕಾರಣಕ್ಕೆ ಕೆಲವೊಮ್ಮೆ ಹೆಚ್ಚು ಅಡುಗೆ ಮಾಡಬೇಕಾಗುತ್ತದೆ. ಆಗೆಲ್ಲಾ ಚಪಾತಿ, ಗೊಜ್ಜು ಅಂಥದ್ದನ್ನು ಹೆಚ್ಚಿಗೆ ಮಾಡಿಡುತ್ತೇನೆ. ಅನೂಪ್‌ಗೆ ನಮ್ಮ ಊರಿನಲ್ಲಿ ಮಾಡುವ ಸೌತೆಕಾಯಿ ಹುಳಿ ಎಂದರೆ ತುಂಬಾ ಇಷ್ಟ. ದಾಲ್‌ ಫ್ರೈ, ಜೀರಾ ರೈಸ್‌ ಕೂಡ ಖುಷಿಯಿಂದ ತಿನ್ನುತ್ತಾರೆ. ಹೊಸ ಅಡುಗೆ ಮಾಡುವುದೆಂದರೆ ತುಂಬಾ ಇಷ್ಟ. ಅದನ್ನೆಲ್ಲಾ ಪ್ರಯೋಗ ಮಾಡುವುದು ಅನೂಪ್‌ ಮೇಲೆಯೇ. ಊಟಕ್ಕೆ ಬೇರೆ ಯಾರಾದರೂ ಬರುವವರಿದ್ದರೆ ಅನೂಪ್‌ ಮೊದಲೇ ಹೇಳಿಬಿಡುತ್ತಾರೆ: “ಇವತ್ತು ಅಡುಗೆಯಲ್ಲಿ ಏನೂ ಪ್ರಯೋಗ ಮಾಡಬೇಡ, ಯಾವಾಗಲೂ ಮಾಡುವ ಅಡುಗೆಯನ್ನೇ ಮಾಡು’ ಅಂತ. ಇಲ್ಲಿಯ ತನಕ ನನ್ನ ಪ್ರಯೋಗ ಕೆಟ್ಟಿದ್ದು ಅಪರೂಪವೇ ಆದರೂ ಅವರಿಗೆ ಆತಂಕ.

ನಿಮ್ಮಿಬ್ಬರ ನಡುವಿನ ಮುಖ್ಯ ವ್ಯತ್ಯಾಸವೇನು?
ನಾನು ಒಂದು ಪ್ರಶ್ನೆಗೆ 10 ಉತ್ತರ ಕೊಡುತ್ತೀನಿ. ಅವರು ಒಂದೇ ಪದದಲ್ಲಿ ಉತ್ತರ ಕೊಟ್ಟು ಸುಮ್ಮನಾಗುತ್ತಾರೆ ಅದೇ ಮುಖ್ಯ ವ್ಯತ್ಯಾಸ. ಅವರನ್ನು ಯಾರೇ ಮೊದಲ ಬಾರಿ ನೋಡಿದರೂ ಅವರಿಗೆ ಅನ್ನಿಸುವುದು ಅನೂಪ್‌ ತುಂಬಾ ಗಂಭೀರ ಸ್ವಭಾವದವರು ಅಂತ. ಅದು ಹೌದು. ಆದರೆ ಒಮ್ಮೆ ಅವರಿಗೆ ಯಾರಾದರೂ ಆತ್ಮೀಯರಾದರೆ ಅವರನ್ನು ತುಂಬಾ ಪ್ರೀತಿಯಿಂದ ಕಾಣುತ್ತಾರೆ. ತುಂಬಾ ಸ್ವೀಟ್‌ ವ್ಯಕ್ತಿ ಅವರು. 

-ಚೇತನ ಜೆ.ಕೆ. 

Advertisement

Udayavani is now on Telegram. Click here to join our channel and stay updated with the latest news.

Next