ಮಲ್ಪೆ: ಭಗವಂತ ಭಕ್ತರಿಗೆ ಬೇರೆ ಬೇರೆ ರೂಪದಿಂದ ಅನುಗ್ರಹ ಮಾಡುತ್ತಾನೆ. ಆದರಲ್ಲೂ ಕಲಿಯುಗದ ಜನರ ಸಾಧನೆ, ಸಿದ್ಧಿಗೆ ತೊಂದರೆ ಇದ್ದಲ್ಲಿ ಅದನ್ನು ಪರಿಪಾಲನೆ ಮಾಡಲು ಭಗವಂತನು ಕೃಷ್ಣ ರೂಪದಿಂದಲೇ ಅನುಗ್ರಹ ನೀಡುತ್ತಾನೆ. ಈ ನಿಟ್ಟಿನಲ್ಲಿ ಕೃಷ್ಣನ ಉಪಾಸನೆ ಮುಖ್ಯವಾದುದು ಎಂದು ಉಡುಪಿ ಪುತ್ತಿಗೆ ಮಠದ ಶ್ರೀ ಸುಗುಣೇಂದ್ರತೀರ್ಥ ಶ್ರೀಪಾದರು ನುಡಿದರು.
ಶುಕ್ರವಾರ ಆದಿವುಡುಪಿ ಕಂಗೂರು ಮಠ ಶ್ರೀ ಗೋಪಿನಾಥ ದೇವರ ಬ್ರಹ್ಮಕಲಶೋತ್ಸವದ ಪ್ರಯುಕ್ತ ಧಾರ್ಮಿಕ ಸಭೆಯನ್ನು ಉದ್ಘಾಟಿಸಿ, ಆಶೀರ್ವಚನ ನೀಡಿದರು.
ಸುಬ್ರಹ್ಮಣ್ಯ ಮಠದ ಶ್ರೀ ವಿದ್ಯಾಪ್ರಸನ್ನತೀರ್ಥ ಶ್ರೀಪಾದರು ಆಶೀರ್ವಚನ ನೀಡಿದರು. ಬಾಳಗಾರು ಮಠದ ಶ್ರೀ ರಘುಭೂಷಣತೀರ್ಥ ಶ್ರೀಪಾದರು ಅಧ್ಯಕ್ಷತೆ ವಹಿಸಿದ್ದರು. ಕರ್ಣಾಟಕ ಬ್ಯಾಂಕ್‌ನ ಉಡುಪಿ ಪ್ರಾದೇಶಿಕ ಕಚೇರಿಯ ಸಹಾಯಕ ಮಹಾಪ್ರಬಂಧಕ ಬಿ. ಗೋಪಾಲಕೃಷ್ಣ ಸಾಮಗ, ಸಾಯಿರಾಧಾ ಗ್ರೂಪ್‌ನ ಮನೋಹರ್ ಶೆಟ್ಟಿ, ಡಾ| ಹರಿಪ್ರಸಾದ್ ಐತಾಳ್ ಮೂಡುಬೆಟ್ಟು, ದಿವಾಕರ ಶೆಟ್ಟಿ ತೋಟದ ಮನೆ, ಉದ್ಯಮಿ ಉಡುಪಿ ವಿಶ್ವನಾಥ ಶೆಣೈ, ಉಡುಪಿ ತಾಲೂಕು ಬ್ರಾಹ್ಮಣ ಮಹಾಸಭಾದ ಅಧ್ಯಕ್ಷ ಮಂಜುನಾಥ ಉಪಾಧ್ಯ, ವಿಶ್ವಹಿಂದು ಪರಿಷತ್ತಿನ ಎಂ. ಬಿ. ಪುರಾಣಿಕ್, ಕೊಡಂಕೂರು ನಗರಸಭಾ ಸದಸ್ಯೆ ಸಂಪಾವತಿ ಮುಖ್ಯ ಅತಿಥಿಗಳಾಗಿದ್ದರು.
ಭಾಸ್ಕರ ಭಟ್ ಅಗ್ರಹಾರ ಸ್ವಾಗತಿಸಿದರು, ಕೊಂಡಕೂರು ದೇವರಾಜ್ ಭಟ್ ಕಾರ್ಯಕ್ರಮ ನಿರೂಪಿಸಿದರು. ವಿದ್ಯಾಧರ್ ಪುರಾಣಿಕ್ ವಂದಿಸಿದರು.
ಆದಿಕೃಷ್ಣನಿಂದ- ಆದಿವುಡುಪಿ
ಶ್ರೀ ಕೃಷ್ಣ ಮಠದಲ್ಲಿ ಕೃಷ್ಣನ ಜತೆ ಪೂಜಿಸಲ್ಪಡುತ್ತಿದ್ದ ಎಣ್ಣೆ ಕೃಷ್ಣ ಇಂದು ಶಾಶ್ವತವಾಗಿ ಕಂಗೂರು ಮಠದಲ್ಲಿ ಪ್ರತಿಷ್ಠಾಪಿತಗೊಂಡದ್ದು ಐತಿಹಾಸಿಕ ಘಟನೆಗೆ ಸಾಕ್ಷಿಯಾಗಿದೆ. ಇದುವರೆಗೆ ಈ ಪ್ರದೇಶಕ್ಕೆ ಆದಿವುಡುಪಿ ಎಂದು ಹೆಸರಿತ್ತು. ಆದರೆ ಆದಿವುಡುಪಿಯಲ್ಲಿ ಕೃಷ್ಣ ಎಲ್ಲಿದ್ದಾನೆ ಎಂಬ ಪ್ರಶ್ನೆ ಬರುತ್ತಿತ್ತು. ಇದೀಗ ಉಡುಪಿಯ ಕೃಷ್ಣ, ಆದಿವುಡುಪಿಯ ಕೃಷ್ಣ ಎರಡೂ ಇರುವುದರಿಂದ ಇಲ್ಲಿ ಆದಿವುಡುಪಿ ಎಂಬ ಹೆಸರು ಸಾರ್ಥಕವಾಯಿತು. ಆದಿವುಡುಪಿಯ ಕೃಷ್ಣ ಉಡುಪಿಯ ಕೃಷ್ಣನಿಗಿಂತಲೂ ಪ್ರಾಚೀನ. ಹಾಗಾಗಿ ಇಲ್ಲಿ ಆದಿಕೃಷ್ಣನೂ ಆಗಿದ್ದಾನೆ ಎಂದು ಸುಗುಣೇಂದ್ರ ಶ್ರೀಗಳು ಹೇಳಿದರು.