ಉಡುಪಿ : ಪರ್ಯಾಯೋತ್ಸವವನ್ನು ಸರಳ ಹಾಗೂ ಸುರಕ್ಷಿತವಾಗಿ ನಡೆಸುವ ಬಗ್ಗೆ ಜಿಲ್ಲಾಮಟ್ಟದ ಅಧಿಕಾರಿಗಳೊಂದಿಗೆ ಪರ್ಯಾಯೋತ್ಸವ ಸಮಿತಿಯ ಕಾರ್ಯಾಧ್ಯಕ್ಷ ಶಾಸಕ ರಘುಪತಿ ಭಟ್ ನೇತೃತ್ವದ ಪರ್ಯಾಯೋತ್ಸವ ಸಮಿತಿ ಸಭೆ ನಡೆಯಿತು.
ಕೋವಿಡ್-19 ವ್ಯಾಪಕವಾಗಿ ಹರಡುತ್ತಿರುವುದರಿಂದ ಪರ್ಯಾಯೋತ್ಸವವನ್ನು ಸರಳವಾಗಿ ನಡೆಸುವ ಬಗ್ಗೆ ಸಭೆಯಲ್ಲಿ ತೀರ್ಮಾನಿಸಲಾಗಿದೆ.
ಪರ್ಯಾಯಕ್ಕೆ ಸಜ್ಜುಗೊಂಡ ಎಲ್ಲ ಟ್ಯಾಬ್ಲೊಗಳನ್ನು ರದ್ದುಪಡಿಸಿ ಸಂಪ್ರದಾಯಕ್ಕೆ ಒತ್ತುಕೊಟ್ಟು ಪರ್ಯಾಯ ನಡೆಸುವುದಾಗಿ ತೀರ್ಮಾನಿಸಲಾಗಿದೆ. ಭಕ್ತರು, ಸಾರ್ವಜನಿಕರು ದೂರದರ್ಶನ ಹಾಗೂ ಆನ್‌ಲೈನ್ ವ್ಯವಸ್ಥೆಯಲ್ಲಿ ಲೈವ್ ಇರುವುದರಿಂದ ಮನೆಯಿಂದಲೇ ಲೈವ್ ಮೂಲಕ ಪರ್ಯಾಯೋತ್ಸವವನ್ನು ವೀಕ್ಷಣೆಗೆ ಮನವಿ ಮಾಡಲಾಗಿದೆ.
ಜಿಲ್ಲಾಧಿಕಾರಿ ಕೂರ್ಮಾ ರಾವ್ ಎಂ., ಜಿ.ಪಂ.ಸಿಇಒ ಡಾ|ವೈ.ನವೀನ್ ಭಟ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎನ್.ವಿಷ್ಣುವರ್ಧನ್, ಅಪರ ಜಿಲ್ಲಾಧಿಕಾರಿ ಸದಾಶಿವ ಪ್ರಭು ಹಾಗೂ ಪರ್ಯಾಯೋತ್ಸವ ಸಮಿತಿಯ ಪ್ರಧಾನ ಕಾರ್ಯದರ್ಶಿ ವಿಷ್ಣು ಪ್ರಸಾದ್ ಪಾಡಿಗಾರ್ ಮತ್ತು ಸದಸ್ಯರು ಉಪಸ್ಥಿತರಿದ್ದರು.
ಕೊರೊನಾ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಸಾಂಪ್ರದಾಯಕ್ಕೆ ಒತ್ತು ನೀಡಿ ಸರಳ ರೀತಿಯಲ್ಲಿ ಪರ್ಯಾಯೋತ್ಸವ ನಡೆಸಲು ತೀರ್ಮಾನಿಸಿದ್ದೇವೆ. ಮುಂದಿನ ದಿನಗಳಲ್ಲಿ ಭಕ್ತರಿಗೆ ದರ್ಶನಕ್ಕೆ ಎಲ್ಲ ರೀತಿಯ ವ್ಯವಸ್ಥೆ ಮಾಡಲಾಗುವುದು.
-ಕೆ.ರಘುಪತಿ ಭಟ್, ಪರ್ಯಾಯೋತ್ಸವ ಸಮಿತಿಯ ಕಾರ್ಯಾಧ್ಯಕ್ಷ