Advertisement

ಕಣ್ಮನ ರಂಜಿಸಿದ ಕೃಷ್ಣಲೀಲೆ   –ಕಂಸವಧೆ

01:00 PM Oct 26, 2018 | Team Udayavani |

ಯಕ್ಷ ಕಲಾಭಿಮಾನಿ ಬಳಗ ಟೌನ್‌ ಹಾಲ್‌ ಉಡುಪಿ ಇವರ ಆಶ್ರಯದಲ್ಲಿ ಉಡುಪಿಯ ಟೌನ್‌ಹಾಲ್‌ನಲ್ಲಿ ಪ್ರದರ್ಶನಗೊಂಡ “ಕೃಷ್ಣಲೀಲೆ-ಕಂಸವಧೆ’ ಅಖ್ಯಾನ ಜನ ಮನ ರಂಜಿಸಿತು.

Advertisement

ಕೃಷ್ಣಲೀಲೆ ಪ್ರಸಂಗ ರಾಮಕೃಷ್ಣ ಹೆಗಡೆ ಹಿಲ್ಲೂರು ಇವರ ಕಂಠಸಿರಿಯಲ್ಲಿ ಉತ್ತಮವಾಗಿ ಪ್ರದರ್ಶನಗೊಂಡಿತು. ಬಾಲಕೃಷ್ಣನಾಗಿ ಬಾಲ ಪ್ರತಿಭೆ ಸ್ವಸ್ತಿಶ್ರೀಯವರ ಅಭಿನಯ ಉತ್ತಮವಾಗಿತ್ತು. ಯಶೋಧ ಪಾತ್ರಕ್ಕೆ ಜೀವ ತುಂಬಿದವರು ಅರಳು ಪ್ರತಿಭೆ ಸುಧೀರ್‌ ಉಪ್ಪೂರ. ಮಾಯಾ ಪೂತನಿಯಾಗಿ ನಿಲ್ಕೋಡುರವರ ಭಾವಾಭಿನಯ ಮನಸಿನಲ್ಲಿ ಉಳಿಯುವಂತಿತ್ತು. ಮುಂದೆ ಕೃಷ್ಣನ ಪಾತ್ರ ಮಾಡಿದವರು ಕಡಬಾಳ ಉದಯ ಹೆಗಡೆಯವರ ನಾಟ್ಯಾಭಿನಯ ಮನಸೂರೆಗೊಂಡಿತ್ತು. ವಿಜಯನ ಪಾತ್ರದಲ್ಲಿ ಕಾಸರಕೋಡು ಶ್ರೀಧರ ಭಟ್‌ ಹಾಸ್ಯದ ಹೊನಲನ್ನು ಹರಿಸಿದರು.

ಗೋಪಿಕಾ ಸ್ತ್ರೀಯರಾಗಿ ನಿಲ್ಕೋಡು ಬೀಜಮಕ್ಕಿ ಇವರ ನಾಟ್ಯ- ಮಾತು ಹಿತಮಿತವಾಗಿತ್ತು. ಶಕಟಾ ಧೇನುಕರ ಪಾತ್ರ ತಕ್ಕಮಟ್ಟಿಗೆ ಯಶಸ್ಸು ಕಂಡಿತು. ನಂತರ ಪ್ರದರ್ಶಗೊಂಡ ಕಂಸವಧೆ ಪ್ರಸಂಗವು ಅದ್ಭುತವಾಗಿ ಮೂಡಿ ಬಂತು. ಜನ್ಸಾಲೆ ಭಾಗವತರ ಏರು ಶೃತಿಯಲ್ಲಿ ಹಾಡಲ್ಪಟ್ಟ ಪದ್ಯಗಳು ಮಂತ್ರ ಮುಗ್ಧಗೊಳಿಸಿತು. ಕಂಸನಾಗಿ ಮೆರೆದ ಕೊಂಡದಕುಳಿ ರಾಮಚಂದ್ರ ಹೆಗಡೆಯವರ ನಾಟ್ಯ ಹಾಗೂ ಮಾತುಗಾರಿಕೆ ಅದ್ಭುತವಾಗಿತ್ತು. ಏನ ಮಾಡಲೀ ನಾನು… ನೆತ್ತಿಗೆ ತೈಲವ ಒತ್ತುತ್ತಾ… ಉರಿಯುವುದೊಂದೇ ದೀಪವು… ಮುಂತಾದ ಪದ್ಯಗಳಿಗೆ ಅವರ ಭಾವಾಭಿನಯ ವರ್ಣಿಸಲಸದಳ. 

ಕಂಸನು ಅಂತ್ಯಕಾಲದಲ್ಲಿ ಕಾಣುವ ದುಃಸ್ವಪ್ನ, ದುಗುಡ, ಭಯವನ್ನು ಅದ್ಭುತ ಅಭಿನಯದ ಮೂಲಕ ಅಭಿವ್ಯಕ್ತಿಗೊಳಿಸಿದರು. ಕೃಷ್ಣನಾಗಿ ನಾಟ್ಯಚತುರ ತೀರ್ಥಹಳ್ಳಿ ಗೋಪಾಲಾಚಾರ್ಯರ ಪಾದರಸದಂತ ಚುರುಕಿನ ಪಾದಚಲನೆಯ ನಾಟ್ಯಾಭಿನಯ ಪರಿಪೂರ್ಣವಾಗಿತ್ತು. ಬಲರಾಮನಾಗಿ ಯುವ ಕಲಾವಿದ ತೊಂಬಟ್ಟು ವಿಶ್ವನಾಥ ಆಚಾರ್ಯರ ನಾಟ್ಯಾಭಿನಯ ಮೋಹಕವಾಗಿತ್ತು. ರಾಜ ರಜಕನಾಗಿ ಕಾಸರಕೋಡು ಶ್ರೀಧರ ಭಟ್‌ ಮೊನಚಾದ
ಮಾತುಗಳಿಂದ ರಂಜಿಸಿದರು. ಚೆಂಡೆ ಮದ್ದಳೆಯಲ್ಲಿ ಸಹಕರಿಸಿದವರು ಸುನಿಲ್‌ ಭಂಡಾರಿ ಕಡತೋಕ, ಮತ್ತು ಶಿವಾನಂದ ಕೋಟ. 

Advertisement

Udayavani is now on Telegram. Click here to join our channel and stay updated with the latest news.

Next