Advertisement

ಶ್ರೀಕೃಷ್ಣ ಮಠದ ಸಾಂಪ್ರದಾಯಿಕ ಕಟ್ಟಳೆಗಳಿಗೆ ಸೀಮಿತ; ಮನೆಗಳಲ್ಲೇ ಕೃಷ್ಣಜನ್ಮಾಷ್ಟಮಿ ಆಚರಣೆ

10:01 PM Sep 10, 2020 | mahesh |

ಉಡುಪಿ: ಈ ಬಾರಿ ಕೃಷ್ಣಜನ್ಮಾಷ್ಟಮಿ ಉತ್ಸವ ಸಾಂಪ್ರದಾಯಿಕವಾಗಿ ಜರಗಿತು. ಕೋವಿಡ್‌-19 ಸೋಂಕಿನ ಕಾರಣದಿಂದ ಶ್ರೀಕೃಷ್ಣ ಮಠಕ್ಕೆ ಸಾರ್ವಜನಿಕರ ಪ್ರವೇಶಕ್ಕೆ ನಿಷೇಧ ಮುಂದುವರಿದಿದೆ. ಇದರಿಂದ ವರ್ಷಂಪ್ರತಿ ಕಂಡುಬರುತ್ತಿದ್ದ ಜನಸಂದಣಿ, ವೇಷಗಳ ಸಾಲು ಇರಲಿಲ್ಲ. ಮನೆ ಗಳಲ್ಲೇ ಅಷ್ಟಮಿ ಆಚರಣೆಗೆ ಜನರು ಹೆಚ್ಚು ಒತ್ತು ನೀಡಿದ್ದರು.

Advertisement

ಗರ್ಭಗುಡಿಯಲ್ಲಿ ಅರ್ಚನೆ, ಮಹಾಪೂಜೆ ನಡೆಯುವಾಗ ಕನಕನ ಕಿಂಡಿ ಹೊರಗೆ ಭಕ್ತರು ನಿಂತು ದರ್ಶನ ಪಡೆದರು. ಮನೆಮನೆಗಳಲ್ಲಿದ್ದು ಕೃಷ್ಣನಿಗೆ ಪೂಜೆಗಳನ್ನು ಭಕ್ತರು ನಡೆಸಿದರು. ನಗರದ ಕೆಎಂ ಮಾರ್ಗ, ಮೆಸ್ಕಾಂ ಕಚೇರಿ ಮಾರ್ಗದಲ್ಲಿ ಹಾಸನ ಜಿಲ್ಲೆಯ ವಿವಿಧೆಡೆಗಳಿಂದ ಬಂದ ಹೂವಿನ ವ್ಯಾಪಾರಸ್ಥರಿಗೆ ಗುರುವಾರ ಹಗಲಿನಲ್ಲಿ ಸುರಿದ ಮಳೆ ತೊಂದರೆ ಕೊಟ್ಟಿತು. ರಥಬೀದಿಯಲ್ಲಿ ಬುಧವಾರಕ್ಕಿಂತ ಹೆಚ್ಚು ವ್ಯಾಪಾರಸ್ಥರು ಗುರುವಾರ ಕಂಡುಬಂದರು. ಮಳೆ ಇರುವ ಕಾರಣ ಜನರೂ ಮನೆಯಿಂದ ಹೊರಬರಲು ಹಿಂದೇಟು ಹಾಕಿದರು.

ಹೂವಿನ ಅಲಂಕಾರ
ವಿಶೇಷ ಹೂವಿನ ಅಲಂಕಾರದಿಂದ ಶ್ರೀಕೃಷ್ಣ ಮಠ ಅಲಂಕರಿಸಲಾಗಿತ್ತು. ಗರ್ಭಗುಡಿ, ಸುತ್ತುಪೌಳಿ, ಚಂದ್ರಶಾಲೆ, ತೀರ್ಥ ಮಂಟಪಗಳನ್ನು ವಿಶೇಷವಾಗಿ ಹೂವುಗಳಿಂದ ಮತ್ತು ವಿದ್ಯುದ್ದೀಪಗಳಿಂದ ಆಕರ್ಷಕವಾಗಿ ಅಲಂಕರಿಸಲಾಗಿತ್ತು.

ಶಾಂತಾರಾಮ ಸಿದ್ದಿ ಭೇಟಿ
ಶ್ರೀಕೃಷ್ಣ ಮಠಕ್ಕೆ ಗುರುವಾರ ವಿಧಾನ ಪರಿಷತ್‌ ಸದಸ್ಯ ಶಾಂತಾರಾಮ ಸಿದ್ದಿ ಭೇಟಿ ನೀಡಿ ದೇವರ ದರ್ಶನ ಪಡೆದುಕೊಂಡರು.

ತುಂತುರು ಮಳೆ
ಒಂದೆಡೆ ವ್ಯಾಪಾರ ವಿರಳ ಮತ್ತೂಂದೆಡೆ ತುಂತುರು ಮಳೆ ಸುರಿದ ಕಾರಣದಿಂದಾಗಿ ವ್ಯಾಪಾರಿಗಳಿಗೆ ಮತ್ತಷ್ಟು ಹೊಡೆತ ಬಿದ್ದಂತಾಗಿತ್ತು.

Advertisement

ಲಕ್ಷ ತುಳಸೀ ಅರ್ಚನೆ
ಗುರುವಾರ ಬೆಳಗ್ಗೆ ಪರ್ಯಾಯ ಅದಮಾರು ಮಠದಿಂದ ಲಕ್ಷ ತುಳಸೀ ಅರ್ಚನೆಯನ್ನು ಆಯೋಜಿಸಲಾಗಿತ್ತು. ಪರ್ಯಾಯ ಶ್ರೀ ಈಶಪ್ರಿಯತೀರ್ಥ ಶ್ರೀಪಾದರು ಮಹಾಪೂಜೆ ಬಳಿಕ ರಾತ್ರಿ ನಿವೇದನೆ ಮಾಡಲು ಲಡ್ಡು ಕಟ್ಟಿ ಮುಹೂರ್ತ ಮಾಡಿದರು. ಪಲಿಮಾರು ಮಠದ ಶ್ರೀ ವಿದ್ಯಾಧೀಶತೀರ್ಥ ಶ್ರೀಪಾದರು, ಶ್ರೀ ವಿದ್ಯಾರಾಜೇಶ್ವರತೀರ್ಥ ಶ್ರೀಪಾದರು, ಕಾಣಿಯೂರು ಮಠದ ಶ್ರೀ ವಿದ್ಯಾವಲ್ಲಭತೀರ್ಥ ಶ್ರೀಪಾದರು ಲಡ್ಡು ಕಟ್ಟಿದರು.

ವ್ಯಾಪಾರ, ಜನವಿರಳ
ಶ್ರೀಕೃಷ್ಣ ಮಠದ ರಥಬೀದಿಯಲ್ಲಿ ಗುರುವಾರ ವ್ಯಾಪಾರ ಇಳಿಮುಖವಾಗಿತ್ತು. ಮಠದೊಳಗೆ ಭಕ್ತರಿಗೆ ನಿಷೇಧ, ಕೋವಿಡ್‌-19ನಿಂದಾಗಿ ಜನ ವಿರಳ ವಾಗಿದ್ದರಿಂದ ಖರೀದಿಗೆ ಅಷ್ಟೊಂದು ಉತ್ಸುಕತೆ ಇರಲಿಲ್ಲ. ಹಿಂದಿನ ವರ್ಷಗಳಲ್ಲಿ ಅಷ್ಟಮಿಯಂದು ಜನರಿಂದ ತುಂಬಿರುತ್ತಿದ್ದ ರಥಬೀದಿಯಲ್ಲಿ ಹಾಸನ,  ಚಿಕ್ಕಮಗಳೂರು, ಸ್ಥಳೀಯ ವ್ಯಾಪಾರಿಗಳು ವ್ಯಾಪಾರದಲ್ಲಿ ನಿರತರಾಗಿದ್ದರು. ಅಗ್ಗದ ದರದಲ್ಲಿ ಹೂಗಳನ್ನು ವ್ಯಾಪಾರಿಗಳು ಮಾರಾಟ ಮಾಡುತ್ತಿದ್ದರೂ ಜನ ವಿರಳದಿಂದಾಗಿ ಹೂವುಗಳೂ ಮಾರಾಟವಾಗದೆ ಹಾಗೆಯೇ ಉಳಿದಿದ್ದವು.

ಸಂಜೆ 5ಕ್ಕೆ ವ್ಯಾಪಾರ ಬಂದ್‌
ರಥಬೀದಿಯ ಆವರಣದೊಳಗೆ ಸಂಜೆ 5 ಗಂಟೆಯ ಅನಂತರ ಯಾವುದೇ ವ್ಯಾಪಾರವಿರಲಿಲ್ಲ. ರಥಬೀದಿಯ ಹೊರಭಾಗದಲ್ಲಿ ವ್ಯಾಪಾರ ನಡೆಯಿತು. ತುಳಸಿ, ಸೇವಂತಿಗೆ, ಮೇಘನಾ, ಐಶ್ವರ್ಯ, ಸಿಂಟೆಲ್ಲೋ, ವೈಲೆಟ್‌ ಹೂವುಗಳು ಮೊಳಕ್ಕೆ 10 ರೂ.ಗಳಂತೆ ಮಾರಾಟವಾದವು. ಮಲ್ಲಿಗೆ ಅಟ್ಟೆಗೆ 400 ರೂ.ಗೆ ಮಾರಾಟ ಮಾಡಲಾಗುತ್ತಿತ್ತು. ಮೂಡೆ 100 ರೂ.ಗೆ 8 ಹಾಗೂ ಕಡುಬು ಮಾಡುವ ಎಲೆ 100 ರೂ.ಗೆ 20ರಂತೆ ಮಾರಾಟ ಮಾಡಲಾಗಿತ್ತು.

Advertisement

Udayavani is now on Telegram. Click here to join our channel and stay updated with the latest news.

Next