Advertisement

ಕೃಷ್ಣಾ-ತುಂಗಭದ್ರಾ ಸ್ವಚ್ಛತೆಗೆ ಅಭಿಯಾನ

03:23 PM Sep 20, 2022 | Team Udayavani |

ಹುಬ್ಬಳ್ಳಿ: “ದೇಶದಲ್ಲಿ ಬಹುತೇಕ ನದಿಗಳು ಕಲುಷಿತಗೊಂಡಿವೆ. ನದಿಗಳ ನೈಸರ್ಗಿಕ ಹರಿವಿಗೆ ಅಡ್ಡಿಯಾಗುತ್ತಿದೆ. ಗಂಗಾ ನದಿ ಮಾತ್ರವಲ್ಲದೆ ಕೃಷ್ಣಾ, ತುಂಗಭದ್ರಾ ನದಿಗಳ ಸ್ವಚ್ಛತೆ-ಸಂರಕ್ಷಣೆ ನಿಟ್ಟಿನಲ್ಲಿ ಜನಜಾಗೃತಿಗೆ ಸಿದ್ಧನಿದ್ದೇನೆ. ಕೃಷ್ಣಾ-ತುಂಗಭದ್ರಾ ನದಿಗಳ ವಿಚಾರದಲ್ಲಿ ಈಗಾಗಲೇ ಒಂದು ಸುತ್ತಿನ ಮಾತುಕತೆಯೂ ನಡೆದಿದೆ. ಜೀವನದಿಗಳ ಸಂರಕ್ಷಣೆ ಆಗದಿದ್ದರೆ ದೇಶದ ಭವಿಷ್ಯಕ್ಕೆ, ನಾಗರಿಕತೆ ಅಸ್ತಿತ್ವಕ್ಕೆ ಗಂಡಾಂತರ ಎದುರಾದೀತು’.

Advertisement

– ಹೀಗೆಂದು ಎಚ್ಚರಿಸಿದವರು ತಮ್ಮ 80ನೇ ವಯಸ್ಸಿನಲ್ಲಿಯೂ ಗಂಗಾನದಿ ಉಳಿವಿಗಾಗಿ 400 ಕಿಮೀ ಪಾದಯಾತ್ರೆಗೆ ಮುಂದಾಗಿರುವ ರಾಷ್ಟ್ರೀಯವಾದಿ ಚಿಂತಕ, ಭಾರತ ವಿಕಾಸ ಸಂಗಮ ಸಂಸ್ಥಾಪಕ ಕೆ.ಎನ್‌.ಗೋವಿಂದಾಚಾರ್ಯ. ಗಂಗಾ ನದಿ ಸ್ವಚ್ಛತೆ-ಸಂರಕ್ಷಣೆಗಾಗಿ ಪಾದಯಾತ್ರೆ, ಕರ್ನಾಟಕದಲ್ಲಿ ಕೃಷ್ಣಾ-ತುಂಗಭದ್ರಾ ನದಿಗಳ ಸ್ವಚ್ಛತೆ, ಸುಸ್ಥಿರ ಅಭಿವೃದ್ಧಿ ನಿಟ್ಟಿನಲ್ಲಿ ದೇಶ ಮುಂದೆ ಇರಿಸಬೇಕಾದ ಹೆಜ್ಜೆಗಳ ಕುರಿತಾಗಿ ಅವರು “ಉದಯವಾಣಿ’ಯೊಂದಿಗೆ ತಮ್ಮ ಮನದಾಳದ ಅನಿಸಿಕೆಗಳನ್ನು ಹಂಚಿಕೊಂಡರು.

ಗಂಗಾನದಿ ಸೇರಿದಂತೆ ದೇಶದ ನದಿಗಳ ಸ್ವಚ್ಛತೆ, ಸಂರಕ್ಷಣೆ ಬಗ್ಗೆ ಹಲವು ವರ್ಷಗಳಿಂದ ಧ್ವನಿ ಎತ್ತುತ್ತ ಬಂದಿದ್ದೇನೆ. ಹಲವು ಜಾಗೃತಿ ಜಾಥಾ, ಅಭಿಯಾನಗಳನ್ನು ಕೈಗೊಂಡಿದ್ದೇನೆ. ಇದೀಗ ಅದರ ಮುಂದುವರಿದ ಭಾಗವಾಗಿ ಗಂಗಾ ನದಿ ಸ್ವಚ್ಛತೆ ಹಾಗೂ ಸಂರಕ್ಷಣೆ ನಿಟ್ಟಿನಲ್ಲಿ 400 ಕಿಮೀ ಪಾದಯಾತ್ರೆ ಕೈಗೊಂಡಿದ್ದೇನೆ. ಸುಮಾರು 40 ದಿನಗಳ ಪಾದಯಾತ್ರೆ ಅ.11ರಿಂದ ನರೋಡಾದಿಂದ ಆರಂಭಗೊಳಿಸಿ ಕಾನ್ಪುರದಲ್ಲಿ ಮುಕ್ತಾಯಗೊಳಿಸಲಾಗುವುದು.

ನನ್ನ ಚಿಂತನೆ-ಕಾರ್ಯ ಕೇವಲ ಗಂಗಾ ನದಿಗೆ ಕೇಂದ್ರೀಕೃತವಾಗಿಲ್ಲ. ದೇಶದ ಎಲ್ಲ ನದಿಗಳ ಬಗ್ಗೆಯೂ ಚಿಂತನೆ ಇದೆ. ಕರ್ನಾಟಕದ ಕೃಷ್ಣಾ, ತುಂಗಭದ್ರಾ ಸೇರಿದಂತೆ ಅನೇಕ ನದಿಗಳ ಸ್ವಚ್ಛತೆ-ಸಂರಕ್ಷಣೆ ಅವಶ್ಯಕತೆ ಇದೆ. ಈಗಾಗಲೇ ಕೃಷ್ಣಾ ನದಿ ಸ್ವಚ್ಛತಾ ಅಭಿಯಾನ ಕುರಿತಾಗಿ ಒಂದು ಸುತ್ತಿನ ಮಾತುಕತೆಯಾಗಿದೆ. ತುಂಗಭದ್ರಾ ನದಿ ಸ್ವಚ್ಛತೆ ವಿಚಾರದಲ್ಲೂ ಮಂತ್ರಾಲಯಕ್ಕೆ ಹೋಗಿದ್ದಾಗ ಪ್ರಸ್ತಾಪಕ್ಕೆ ಬಂದಿತ್ತು. ಕರ್ನಾಟಕದಲ್ಲಿಯೂ ನದಿಗಳ ಸ್ವಚ್ಛತೆ, ಸಂರಕ್ಷಣೆ ಅಭಿಯಾನಕ್ಕೆ ಸ್ವಯಂ ಸೇವಾ ಸಂಸ್ಥೆಗಳು, ಜನರು ಮುಂದಾದರೆ ತೊಡಗಿಕೊಳ್ಳಲು ಸಿದ್ಧನಿದ್ದೇನೆ. ದೇಶದ ಎಲ್ಲ ನದಿಗಳಲ್ಲಿಯೂ ಗಂಗೆ ಇದ್ದಾಳೆ. ಗಂಗೆಯ ಸಂರಕ್ಷಣೆ ನಮ್ಮೆಲ್ಲರ ಹೊಣೆ. ಹಲವು ಜೀವನದಿಗಳಿಗೆ ಜನ್ಮನೀಡಿದ ಪಶ್ಚಿಮಘಟ್ಟದ ಸಂರಕ್ಷಣೆ ವಿಚಾರದಲ್ಲೂ ಹಿಂದೆಯೇ ಧ್ವನಿ ಎತ್ತಿದ್ದೇನೆ.

ರಾಜೀವ್‌ ಗಾಂಧಿಯಿಂದ ಮೋದಿ ತನಕ: ಭಾವನಾತ್ಮಕತೆ ಮೆಟ್ಟಿ ನಿಂತು ಮಾರುಕಟ್ಟೆ ಶಕ್ತಿ ಬೆಳೆಯತೊಡಗಿರುವುದೇ ಗಂಗೆ ಕಲುಷಿತಗೊಳ್ಳಲು ಕಾರಣ. ಇದು ಗಂಗಾ ತಟದ ಜನರ ಅಸಹಾಯಕತೆಗೆ ಕಾರಣವಾಗುತ್ತಿದೆ. ಅವರಲ್ಲಿ ಜಾಗೃತಿ-ಪ್ರೇರಣೆ ತುಂಬಲು ಪಾದಯಾತ್ರೆ ಕೈಗೊಳ್ಳುತ್ತಿದ್ದೇನೆ. ಗಂಗಾನದಿ ಸ್ವಚ್ಛತೆ, ಸಂರಕ್ಷಣೆ ಕುರಿತಾಗಿ ನೆಹರು ಕಾಲದಿಂದಲೂ ಮಾತುಗಳು ಕೇಳಿಬಂದಿವೆ. ರಾಜೀವ್‌ ಗಾಂಧಿ ಪ್ರಧಾನಿಯಾಗಿದ್ದಾಗ ಕ್ರಿಯಾಯೋಜನೆ ರೂಪಿಸಿ, ಪ್ರತ್ಯೇಕ ಸಚಿವಾಲಯ ಆರಂಭಿಸಿದ್ದರು. ಅಷ್ಟಾದರೂ ಗಂಗಾ ನದಿ ಸ್ವಚ್ಛತೆ ಹಾಗೂ ಸಂರಕ್ಷಣೆ ನಿರೀಕ್ಷಿತ ಮಟ್ಟದಲ್ಲಿ ಆಗಿರಲಿಲ್ಲ. ಪ್ರಧಾನಿ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಗಂಗಾ ನದಿ ಸ್ವಚ್ಛತೆ-ಸಂರಕ್ಷಣೆ ನಿಟ್ಟಿನಲ್ಲಿ ಹಲವು ಕ್ರಮಗಳನ್ನು ಕೈಗೊಂಡಿದ್ದು, ಹಲವು ಕಾರ್ಯಗಳು ಆಗಿವೆ. ಆದರೆ, ನಿರಂತರತೆ ಕಾರ್ಯಗಳಾಗಲಿ, ಸಕ್ರಿಯತೆ ಯತ್ನಗಳ ಅಗತ್ಯತೆ ಇನ್ನಷ್ಟು ಇದೆ. ನೀರಾವರಿ, ಕುಡಿಯಲು, ಕೈಗಾರಿಕೆ ಎಂದೆಲ್ಲ ಗಂಗಾನದಿ ನೀರಿನ ಮಿತಿಮೀರಿದ ಮಾರಾಟ ನಿಲ್ಲಬೇಕಾಗಿದೆ. ನದಿಯ ನೈಸರ್ಗಿಕ ಹರಿವಿಗೆ ಹೆಚ್ಚು ಅಡ್ಡಿಯಾಗದಂತೆ ಯೋಜಿಸಬೇಕಾಗಿದೆ.

Advertisement

ತಂಡ ಕಾರ್ಯ ಅಗತ್ಯವಿದ್ದು, ಇನ್‌ಹೌಸ್‌ ತಂಡದ ರಚನೆ ಆಗಬೇಕಾಗಿದೆ. ಪ್ರಕೃತಿ ಕೇಂದ್ರಿತ ಅಭಿವೃದ್ಧಿಗೆ ಮುಂದಾದರೆ ಭಾರತ ವಿಶ್ವಕ್ಕೆ ಮಾದರಿಯಾಗಲಿದೆ. ದೇಶದ ಭೌಗೋಳಿಕ ಆಧಾರದಲ್ಲಿ ಶೇ.33 ಅರಣ್ಯ ಪ್ರದೇಶ ಇರಬೇಕು. ಆದರೆ, ಶೇ.15 ಅರಣ್ಯ ಪ್ರದೇಶವೇ ಮಾಯವಾಗಿದೆ. ಮುಂದಿನ ಹತ್ತು ವರ್ಷಗಳಲ್ಲಿ ಶೇ.20 ಪ್ರದೇಶ ಬೆಳವಣಿಗೆ ಕಾಣಬೇಕಾಗಿದೆ. ಗೋ ಹತ್ಯೆ ನಿಷೇಧ ಕಾಯ್ದೆ ದೇಶಾದ್ಯಂತ ಸಮರ್ಪಕ ರೀತಿಯಲ್ಲಿ ಅನುಷ್ಠಾನಗೊಳ್ಳಬೇಕಿದೆ. ಪ್ರಕೃತಿ ಸಮತೋಲನಕ್ಕೆ ದೇಸಿ ಹಸುಗಳ ಸಂಖ್ಯೆ ಹೆಚ್ಚಬೇಕು, ವಿಷಮುಕ್ತ ಕೃಷಿ ಪ್ರಮಾಣ ಬೆಳೆಯಬೇಕು. ಮುಖ್ಯವಾಗಿ ಕೇಂದ್ರ ಸರಕಾರ ಪ್ರಕೃತಿ ಕೇಂದ್ರಿತ ಅಭಿವೃದ್ಧಿಯತ್ತ ಗಂಭೀರ ಚಿಂತನೆ ನಡೆಸಬೇಕಾಗಿದೆ.

ಮಹಿಳೆಯರ ಗೌರವಯುತ ಬದುಕಿಗೆ ಪೂರಕವಾಗಿ ಅ.8-9ರಂದು ಹೃಷಿಕೇಶದಲ್ಲಿ ಮಹಿಳಾ ಸಂಸತ್ತು ನಡೆಯಲಿದೆ. ಅವರ ಅನಿಸಿಕೆ, ಚಿಂತನೆ, ಮುಂದಾಲೋಚನೆಗಳ ಅಭಿವ್ಯಕ್ತಿ, ಚಿಂತನ-ಮಂಥನಕ್ಕೆ ವೇದಿಕೆಯಾಗಲಿದೆ. ದೇಶದ ಎಲ್ಲ ಜಿಲ್ಲೆಗಳ ಮಹಿಳಾ ಸ್ವಯಂ ಸೇವಾ ಸಂಸ್ಥೆಗಳು, ಸಾಧಕಿಯರನ್ನು ಒಂದೇ ವೇದಿಕೆಯಲ್ಲಿ ತರುವ ಯತ್ನ ಇದಾಗಿದೆ. ದೇಶದ ಎಲ್ಲ ಇಕೋ ವಲಯದಲ್ಲಿ ಸುಮಾರು 2,000 ಯಶೋಗಾಥೆಗಳ ಡೈರೆಕ್ಟರಿ, ಸುಮಾರು 10 ಸಾವಿರ ಬದ್ಧ ಕಾರ್ಯಕರ್ತ ಮಾಹಿತಿ ಹೊತ್ತಿಗೆ ಹೊರಬರಲಿದೆ. ಕಳೆದ 10 ವರ್ಷಗಳಲ್ಲಿ ಕೈಗೊಂಡ ಕಾರ್ಯಗಳ ಬಗ್ಗೆ ತೃಪ್ತಿ ಇದೆ. -ಕೆ.ಎನ್‌. ಗೋವಿಂದಾಚಾರ್ಯ, ಭಾರತ ವಿಕಾಸ ಸಂಗಮ ಸಂಸ್ಥಾಪಕ

-ಅಮರೇಗೌಡ ಗೋನವಾರ

Advertisement

Udayavani is now on Telegram. Click here to join our channel and stay updated with the latest news.

Next