Advertisement

ಪ್ರೇಕ್ಷಕ ಅಳ್ಳೋದು ಗ್ಯಾರಂಟಿ

06:15 AM Apr 20, 2018 | Team Udayavani |

ನಿರ್ಮಾಪಕ ನಾರಾಯಣಸ್ವಾಮಿಯವರು ಡಬಲ್‌ ಮೀನಿಂಗ್‌ ಇರದ, ಕುಟುಂಬ ಸಮೇತ ಕುಳಿತು ನೋಡುವಂತಹ ಸಿನಿಮಾ ಮಾಡಿಕೊಡಬೇಕು ಎಂದು ನಿರ್ದೇಶಕ ಸುಖೇಶ್‌ ಅವರಲ್ಲಿ ಮೊದಲೇ ಹೇಳಿದ್ದರಂತೆ. ಅದರಂತೆ ಈಗ “ಕೃಷ್ಣ ತುಳಸಿ’ ಚಿತ್ರ ಸಿದ್ಧವಾಗಿದೆ.

Advertisement

ಈ ಚಿತ್ರ ಇಂದು ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದ್ದು, ಚಿತ್ರದ ಬಗ್ಗೆ ಒಂದಿಷ್ಟು ಮಾತನಾಡುವುದಕ್ಕೆ ಚಿತ್ರತಂಡದವರು ಜಮಾಯಿಸಿದ್ದರು. ಎಲ್ಲರೂ ಖುಷಿಯಾಗಿದ್ದರು. ಅದರಲ್ಲೂ ನಿರ್ಮಾಪಕ ನಾರಾಯಣಸ್ವಾಮಿ ಸ್ವಲ್ಪ ಜಾಸ್ತಿಯೇ ಖುಷಿಯಾಗಿದ್ದರು. “ಇತ್ತೀಚೆಗೆ ಸಿನಿಮಾ ನೋಡಿದೆ. ತುಂಬಾ ಖುಷಿಯಾಯಿತು. ಬಜೆಟ್‌ ಸ್ವಲ್ಪ ಜಾಸ್ತಿಯಾಯಿತು ಅನ್ನೋದು ಬಿಟ್ಟರೆ ಉಳಿದಂತೆ ನಿರ್ದೇಶಕರು ಕಥೆ ಹೇಳಿದಂತೆ ಸಿನಿಮಾ ಮಾಡಿದ್ದಾರೆ. ಸಿನಿಮಾ ತುಂಬಾ ಸೆಂಟಿಮೆಂಟ್‌ನಿಂದ ಕೂಡಿದ್ದು, ಪ್ರೇಕ್ಷಕರಿಗೆ ಒಂದೊಂದು ಕರ್ಚಿಫ್ ಬೇಕಾಗಬಹುದು. ಸಿನಿಮಾ ನೋಡಿ ಅತ್ತುಕೊಂಡೆ ಬರುತ್ತಾರೆ. ಈಗಾಗಲೇ ಸಿನಿಮಾ ಬಗ್ಗೆ ಮೆಚ್ಚುಗೆ ವ್ಯಕ್ತವಾಗುತ್ತಿದ್ದು, ತೆಲುಗಿನಿಂದಲೂ ಚಿತ್ರದ ರೀಮೇಕ್‌ ರೈಟ್ಸ್‌ ಕೇಳುತ್ತಿದ್ದಾರೆ. ಜೊತೆಗೆ ಟಿವಿ ರೈಟ್ಸ್‌ಗೂ ಬೇಡಿಕೆ ಇದೆ’ ಎಂದು ಸಿನಿಮಾ ಬಗ್ಗೆ ಮಾತನಾಡಿದರು.

ಚಿತ್ರದ ನಿರ್ದೇಶಕ ಸುಕೇಶ್‌ಗೆ “ಕೃಷ್ಣ ತುಳಸಿ’ ಕನ್ನಡಕ್ಕೊಂದು ಒಳ್ಳೆಯ ಸಿನಿಮಾವಾಗುವ ವಿಶ್ವಾಸವಿದೆ. “ದೃಷ್ಟಿವಿಕಲಚೇತನ ಬದುಕಿನ ಸುತ್ತ ಈ ಕಥೆ ಮಾಡಿದ್ದು, ಚಿತ್ರದಲ್ಲಿ ಸಾಕಷ್ಟು ಸೂಕ್ಷ್ಮ ಅಂಶಗಳನ್ನು ಹೇಳಿದ್ದೇವೆ. ಈ ಚಿತ್ರಕ್ಕಾಗಿ ಸಾಕಷ್ಟು ತಯಾರಿ ಕೂಡಾ ಮಾಡಿಕೊಂಡಿದ್ದು, ಅದು ಚಿತ್ರೀಕರಣ ಸಮಯದಲ್ಲಿ ಸಹಾಯಕ್ಕೆ ಬಂತು. ಚಿತ್ರದಲ್ಲಿ ಬಸ್‌ ಕೂಡಾ ಪ್ರಮುಖವಾಗಿದ್ದು, ಬಸ್‌ ಒಳಗಡೆ ಟ್ರಾಲಿ ಹಾಕಿ ಚಿತ್ರೀಕರಣ ಮಾಡಿದ್ದೇವೆ’ ಎಂದ ಅವರು ನಿರ್ಮಾಪಕರ ಸಿನಿಮಾ ಪ್ರೀತಿಯ ಬಗ್ಗೆಯೂ ಮಾತನಾಡಿದರು. 

ನಾಯಕ ಸಂಚಾರಿ ವಿಜಯ್‌ ಮೊದಲಿಗೆ ನಿರ್ಮಾಪಕರಿಗೆ ಥ್ಯಾಂಕ್ಸ್‌ ಹೇಳಿದರು. ಅದಕ್ಕೆ ಕಾರಣ ಚಿತ್ರದ ಬಜೆಟ್‌. “ನಾನು ಯಾವುದೇ ಕಮರ್ಷಿಯಲ್‌ ಹಿಟ್‌ ಕೊಡದಿದ್ದರೂ ನನ್ನನ್ನು ನಂಬಿ ಈ ಸಿನಿಮಾ ಮಾಡಿದ್ದೀರಿ. ನಾನು ಯಾವತ್ತೂ ನಿಮ್ಮನ್ನು ಮರೆಯೋದಿಲ್ಲ’ ಎಂದರು. ಈ ಚಿತ್ರದಲ್ಲಿ ವಿಜಯ್‌, ಅಂಧನಾಗಿ ಕಾಣಿಸಿಕೊಂಡಿದ್ದಾರೆ. “ತುಂಬಾ ಸೂಕ್ಷ್ಮ ಅಂಶಗಳನ್ನೊಳಗೊಂಡಿರುವ ಕಥೆ. ಈ ಚಿತ್ರಕ್ಕಾಗಿ ದೃಷ್ಟಿವಿಕಲಚೇತನರ ದಿನಚರಿ, ಅವರ ಹಾವಭಾವ ಸೇರಿದಂತೆ ಅನೇಕ ವಿಷಯಗಳನ್ನು ನಾನು ನೋಡಿಕೊಂಡೆ. ನಿರ್ದೇಶಕರಿಗೆ ಈ ಪಾತ್ರದ ಬಗ್ಗೆ ಸ್ಪಷ್ಟತೆ ಇತ್ತು. ಹಾಗಾಗಿ, ನಾನು ಒಂಚೂರು ಎಡವಿದರೂ ಅವರೇ ನಟಿಸಿ ತೋರಿಸುತ್ತಿದ್ದರು’ ಎಂದು ಸಿನಿಮಾ ಬಗ್ಗೆ ಹೇಳಿದರು. 

ನಾಯಕಿ ಮೇಘಶ್ರೀ ಕೂಡಾ ತಮ್ಮ ಪಾತ್ರದ ಬಗ್ಗೆ ಮಾತನಾಡಿದರು. ಚಿತ್ರಕ್ಕೆ ಕಿರಣ್‌ ರವೀಂದ್ರನಾಥ್‌ ಸಂಗೀತ, ನವೀನ್‌ ಛಾಯಾಗ್ರಹಣವಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next