Advertisement

ಕೃಷ್ಣೆ ರಾಷ್ಟ್ರೀಯ ಯೋಜನೆಯಾಗಲಿ: ರೈತರ ಒತ್ತಾಯ

05:28 PM Mar 01, 2022 | Shwetha M |

ವಿಜಯಪುರ: ರಾಜ್ಯ ಸರ್ಕಾರ ಬರುವ ಬಜೆಟ್‌ನಲ್ಲಿ ಕೃಷ್ಣಾ ಮೇಲ್ದಂಡೆ ಯೋಜನೆಯನ್ನು ರಾಷ್ಟ್ರೀಯ ಯೋಜನೆ ಎಂದು ಘೋಷಿಸಲು ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡುವಂತೆ ಆಗ್ರಹಿಸಿ ಅಖಂಡ ಕರ್ನಾಟಕ ರೈತ ಸಂಘದಿಂದ ಪ್ರತಿಭಟನೆ ನಡೆಸಿ ಜಿಲ್ಲಾಡಳಿತದ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಲಾಯಿತು.

Advertisement

ಈ ವೇಳೆ ಮಾತನಾಡಿದ ಸಂಘಟನೆಯ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಅರವಿಂದ ಕುಲಕರ್ಣಿ, ಆಲಮಟ್ಟಿಯ ಲಾಲ್‌ ಬಹಾದ್ದೂರ್‌ ಶಾಸ್ತ್ರಿ ಜಲಾಶಯದ ನೀರಿನ ಮಟ್ಟವನ್ನು 524.256 ಮೀ. ನೀರು ನಿಲ್ಲಿಸಲು ಶೀಘ್ರದಲ್ಲಿ ಗೇಟ್‌ ಅಳವಡಿಸಬೇಕು. ಇದರಿಂದ ಹಿನ್ನೀರಿನಲ್ಲಿ 22 ಹಳ್ಳಿಗಳು ಮುಳುಗಡೆಯಾಗಲಿವೆ. 1 .20 ಲಕ್ಷ ಎಕರೆ ಜಮೀನು ಮುಳುಗಡೆ ಆಗುತ್ತವೆ. ಸಂತ್ರಸ್ತ ಹಳ್ಳಿಗಳಿಗೆ ತುರ್ತಾಗಿ ಪುನರ್ವಸತಿ-ಪುನರ್‌ ನಿರ್ಮಾಣಕ್ಕೆ ಬೇಕಿರುವ 1 ಲಕ್ಷ ಕೋಟಿ ಹಣ ಬೇಕಾಗುತ್ತದೆ ಎಂದು ವಿವರಿಸಿದರು.

ರಾಜ್ಯ ಸರ್ಕಾರದಿಂದ ಈ ಮೊತ್ತದ ಹಣ ನೀಡಲು ಸಾಧ್ಯವಿಲ್ಲದ ಕಾರಣ ಕೂಡಲೇ ಕೃಷ್ಣಾ ಮೇಲ್ದಂಡೆ ಯೋಜನೆಯನ್ನು ಕೇಂದ್ರ ಸರ್ಕಾರ ರಾಷ್ಟ್ರೀಯ ಯೋಜನೆಯಾಗಿ ಘೋಷಿಸಬೇಕು. ಇದಕ್ಕಾಗಿ ರಾಜ್ಯ ಸರ್ಕಾರ ಮಾ. 4ರಂದು ಮಂಡಿಸಲಿರುವ ಬಜೆಟ್‌ನಲ್ಲಿ ಕೇಂದ್ರಕ್ಕೆ ಶಿಫಾರಸು ಮಾಡುವ ನಿರ್ಧಾರ ಪ್ರಕಟಿಸಬೇಕು ಎಂದು ಆಗ್ರಹಿಸಿದರು.

ಸಂಘಟನೆಯ ಜಿಲ್ಲಾ ಸಂಘಟನಾ ಕಾರ್ಯದರ್ಶಿ ಸದಾಶಿವ ಬರಟಗಿ ಮಾತನಾಡಿ, ರೈತರು ಜಮೀನುಗಳಿಗೆ ಹೋಗುವ ವಹಿವಾಟು ದಾರಿ ಸಮಸ್ಯೆ ಹಳ್ಳಿಗಳಲ್ಲಿ ತಾರಕಕ್ಕೇರಿದೆ. ಇದರಿಂದ ಕೃಷಿ ಚಟವಟಿಕೆ ನಡೆಸಲು ರೈತರ ಮಧ್ಯ ಹೊಡೆದಾಟ ನಡೆಯುತ್ತಿವೆ. ಸರ್ಕಾರ ಕೂಡಲೇ ದಾರಿ ಸಮಸ್ಯೆ ಇತ್ಯರ್ಥಕ್ಕೆ ಕಾನೂನು ತಿದ್ದುಪಡಿ ಮಾಡಿ ತಹಶೀಲ್ದಾರ್‌ಗಳಿಗೆ ಅಧಿಕಾರ ನೀಡಬೇಕು ಎಂದು ಆಗ್ರಹಿಸಿದರು.

ರೈತರು ಜಮೀನು ದಾರಿ ಸಮಸ್ಯೆ ಇತ್ಯರ್ಥಕ್ಕೆ ಆಗ್ರಹಿಸಿ ಕಳೆದ 7 ವರ್ಷಗಳಿಂದ ಹೋರಾಟ ನಡೆಸುತ್ತಿದ್ದರೂ ಸರ್ಕಾರ ಸ್ಪಂದಿಸಿಲ್ಲ. ದಾರಿ ಸಮಸ್ಯೆ ಪರಿಹಾರವಾಗಿ ಕಾನೂನು ತಿದ್ದುಪಡಿಗೆ ಸರ್ಕಾರಕ್ಕೆ ಇರುವ ಸಮಸ್ಯೆಯಾದರೂ ಏನು ಎಂದು ಪ್ರಶ್ನಿಸಿರುವ ಅವರು, ಜನಪ್ರತಿನಿಧಿಗಳು ತಮಗೆ ಬೇಕಾದ ವಿಷಯಗಳಲ್ಲಿ ಕಾನೂನಿನ ತೊಡಕುಗಳು ಎಷ್ಟೇ ಇದ್ದರೂ ತಮ್ಮ ಅನುಕೂಲಕ್ಕೆ ತಕ್ಕಂತೆ ಕಾನೂನು ತಿದ್ದುಪಡಿ ಮಾಡಿಕೊಳ್ಳುತ್ತಾರೆ. ಆದರೆ ರೈತರು ಜಮೀನಿನ ದಾರಿ ಸಮಸ್ಯೆ ಇತ್ಯರ್ಥಕ್ಕೆ ಮಾತ್ರ ಕಾನೂನಿನ ನೆಪ ಹೇಳುತ್ತಿದ್ದಾರೆ. ಹೀಗಾಗಿ ಬರುವ ಬಜೆಟ್‌ನಲ್ಲಿ ಜಮೀನಿನ ದಾರಿ ಸಮಸ್ಯೆ ಕಾನೂನು ತಿದ್ದುಪಡಿಗೆ ಮುಂದಾಗಬೇಕು ಎಂದು ಆಗ್ರಹಿಸಿದರು.

Advertisement

ಅಖಂಡ ಕರ್ನಾಟಕ ರೈತ ಸಂಘದ ಹೊನಕೇರಪ್ಪ ತೆಲಗಿ, ಬಸವರಾಜ ಜಂಗಮಶೆಟ್ಟಿ, ನಂದುಗೌಡ ಬಿರಾದಾರ, ಮಲ್ಲು ಕನ್ನೂರ, ಸಂಗಪ್ಪ ಕಾಗಿ, ಗುರು ಸಾನ್ನಿಂಗಿಗೋಳ, ಬಸವರಾಜ ಉಪ್ಪಾರ, ಅರ್ಜುನ ಹಾವಗೊಂಡ, ಸಿದ್ದಪ್ಪ ಕಲಬೀಳಗಿ, ಸಂಗಪ್ಪ ಮಂಡಗನೂರ, ಶೇಖಪ್ಪ ಕರಾಬಿ, ಅಶೋಕ ಕಟ್ಟಿ, ಮಾನಪ್ಪ ಬಡಿಗೇರ (ಕರನಾಳ) ಸೇರಿದಂತೆ ಇತರರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next