Advertisement

Flood ಭೀತಿ ಹುಟ್ಟಿಸಿದ ಕೃಷ್ಣೆ…..!ಎರಡು ದಶಕಗಳು ಕಳೆದರೂ ಸಿಗದ ಪುನರ್ವಸತಿ

09:18 PM Jul 29, 2024 | Team Udayavani |

ರಬಕವಿ-ಬನಹಟ್ಟಿ : ಮಹಾರಾಷ್ಟ್ರದ ಜಲಾನಯನ ಪ್ರದೇಶಗಳಲ್ಲಿ ಭಾರೀ ಪ್ರಮಾಣದ ಮಳೆ ಹಾಗೂ ಮಹಾರಾಷ್ಟ್ರದ ಇತರೆ ಜಲಾಶಯಗಳಿಂದ ಅಪಾರ ಪ್ರಮಾಣದ ನೀರನ್ನು ಹೊರ ಹಾಕುತ್ತಿರುವುದರಿಂದ ತಾಲೂಕಿನ ಕೆಲವು ಗ್ರಾಮಗಳು ಪ್ರವಾಹ ಭೀತಿಯನ್ನು ಎದುರಿಸುತ್ತಿವೆ.

Advertisement

ಕೃಷ್ಣಾ ನದಿ ಪಾತ್ರದ ಗ್ರಾಮಗಳಾದ ತಮದಡ್ಡಿ, ಹಳಿಂಗಳಿ(ಗುಳ್ಳಿಮನೆ), ಮದನಮಟ್ಟಿ, ಆಸಂಗಿ, ಅಸ್ಕಿ, ಕುಲಹಳ್ಳಿ ಹಾಗೂ ಹಿಪ್ಪರಗಿ ಗ್ರಾಮದ ಸುತ್ತಮುತ್ತಲೀನ ನದಿ ತೀರದ ರೈತಸರಲ್ಲಿ ಮಳೆಗಾಲ ಆರಂಭಗೊಂಡರೆ ಒಂದೆಡೆ ಖುಷಿ ಇನ್ನೊಂದೆಡೆ ಆತಂಕದ ನಡುವೆ ಜೀವನ ಸಾಗಿಸಬೇಕಾದ ಅನಿವಾರ್ಯತೆ ನಿರಂತರವಾಗಿದೆ.

ಕೃಷ್ಣಾನದಿ ಉಕ್ಕಿ ಹರಿದು ನೀರಿನ ಪ್ರವಾಹ ಹೆಚ್ಚಾದಾಗ ಆತಂಕ ಸೃಷ್ಠಿ ಮಾಡಿ ರೈತರು ಮತ್ತು ಸಾರ್ವಜನಿಕರನ್ನು ಭಾಗಶಃ ಕಾಡುತ್ತಿರುವುದಂತು ವಾಸ್ತವ.

2005, 2009 ಮತ್ತು 2019ರಲ್ಲಿ ಉಂಟಾಗಿದ್ದ ಪ್ರವಾಹದ ರುದ್ರನರ್ತನವನ್ನು ಇಲ್ಲಿಯ ಗ್ರಾಮಸ್ಥರು ಇಂದಿಗೂ ಮರೆತಿಲ್ಲ. 2005ರಲ್ಲಿ ಉಂಟಾದ ಪ್ರವಾಹ ಈ ಭಾಗದ ಮನೆ, ಬೆಳೆ, ಕೋಟ್ಯಾಂತರ ಮೊತ್ತದ ಸಾರ್ವಜನಿಕ ಆಸ್ತಿ ಪಾಸ್ತಿ ಕೊಚ್ಚಿಕೊಂಡು ಹೋಗುವಂತೆ ಮಾಡಿತ್ತು. ಪ್ರವಾಹಕ್ಕೆ ತುತ್ತಾಗಿದ್ದ ಹಳ್ಳಿಗರಿಗೆ ಅಂದು ರಾಜ್ಯ ಸರಕಾರ, ಹಲವಾರು ಸಂಘ ಸಂಸ್ಥೆಗಳ, ದಾನಿಗಳ ನೆರವಿಗೂ ಮನವಿ ಮಾಡಿತ್ತು. ಅದರ ಫಲವಾಗಿ ಹಲವಾರು ಸಂಸ್ಥೆಗಳು ಜಿಲ್ಲಾಡಳಿತ ಪ್ರವಾಹಕ್ಕೆ ಸಿಲುಕಿ ನಲುಗಿದವರಿಗೆ ಆಹಾರ ಪೊಟ್ಟಣ, ಶಾಲು, ಜಮಖಾನೆ, ಕುಡಿಯುವ ನೀರು, ಶೆಟಡ್‌ನಲ್ಲಿ ಆಶ್ರಯ ಕಲ್ಪಿಸಲಾಗಿತ್ತು. ಆಗ ಆದ ನಷ್ಟ ಪರಿಹಾರದ ಜೊತೆ ಮುಳುಗಡೆ ಪ್ರದೇಶಗಳನ್ನು ಗುರುತಿಸಿ ಪರಿಹಾರ ಧನ ಕೂಡಾ ನೀಡಿತ್ತು. ಇಲ್ಲಿನ ಬಹುತೇಕ ಗ್ರಾಮಗಳ ಜನರ ಜಮೀನುಗಳು ಮುಳಗಡೆ ವ್ಯಾಪ್ತಿಯಲ್ಲಿ ಬರುತ್ತಿದ್ದು, ಆಶ್ರಯ ವಿಷಯಕ್ಕೆ ಸಂಬಂದಿಸಿದಂತೆ ಅಸ್ಕಿ ಹಾಗೂ ತಮದಡ್ಡಿ ಗ್ರಾಮಸ್ಥರ ತಕರಾರು ಸರಕಾರದ ಜೊತೆ ಮುಂದುವರೆದಿದೆ.

ಅಸ್ಕಿ ಗ್ರಾಮಕ್ಕೆ ಸಂಬಂಧಿಸಿದಂತೆ ಹಲವಾರು ಪ್ರದೇಶಗಳನ್ನು ಗುರುತಿಸಿದ್ದರು ಸಮಸ್ಯೆ ನಿವಾರಣೆಯಾಗಿಲ್ಲ. ಇದೀಗ ಅರಣ್ಯ ಇಲಾಖೆ ಜಾಗೆ ತೋರಿಸಿದ್ದು, ಸರಕಾರ ಮಟ್ಟದಲ್ಲಿ ಕಂದಾಯ ಭೂಮಿ ಹಸ್ತಾಂತರಿಸಿ ಅರಣ್ಯ ಭೂಮಿ ಪಡೆದುಕೊಳ್ಳುವ ಪ್ರಕ್ರಿಯೆ ಸರಕಾರ ಮಟ್ಟದಲ್ಲಿದೆ. ಅದೇ ರೀತಿ ಸಂಪೂರ್ಣ ಮುಳಗಡೆಯಾಗುವ ತಮದಡ್ಡಿ ಗ್ರಾಮಕ್ಕೆ ಸಂಬಂಧಿಸಿದಂತೆ ಈಗಾಗಲೇ ಹಳಿಂಗಳಿ ಗ್ರಾಮದ ಗುಡ್ಡದಲ್ಲಿ ಸುಮಾರು 89 ಎಕರೆ ಕಂದಾಯ ಭೂಮಿ ನೀಡಲಾಗಿದೆ. ಆದರೆ ಹಳಿಂಗಳಿ ಗ್ರಾಮಸ್ಥರು ಅದು ಪ್ರಾಚೀನ ಇತಿಹಾಸದ ಕುರುಹುಗಳಿರುವ ಜಾಗೆ ಅದನ್ನು ಅವರಿಗೆ ಬಿಟ್ಟು ಕೊಡಬೇಡಿ ಎಂದು ನ್ಯಾಯಾಲಯದ ತಡೆಯಾಜ್ಞೆಯನ್ನು ತಂದಿರುವುದರಿಂದ ಅದು ನೆನೆಗುದಿಗೆ ಬಿದ್ದಿದೆ.

Advertisement

ಇಂದು ಸೋಮವಾರ ಕೃಷ್ಣಾ ನದಿಗೆ 2,77,820 ಕ್ಯೂಸೆಕ್ ನೀರು ಹರಿದು ಬಂದಿದ್ದು ಮತ್ತಷ್ಟು ಪ್ರವಾಹದ ಬೀತಿ ಗ್ರಾಮಸ್ಥರಲ್ಲಿ ಆವರಿಸಿದೆ. ಆಸಂಗಿ ಗ್ರಾಮ ಪಂಚಾಯತಿ ವ್ಯಾಪ್ತಿಗೆ ಬರುವ ಅಸ್ಕಿ ಗ್ರಾಮ ಕೃಷ್ಣಾ ನದಿ ತೀರದ ಗ್ರಾಮವಾಗಿದ್ದು ಗ್ರಾಮದ ತೋಟದ ವಸತಿಯಲ್ಲಿನ ಹಲವಾರು ಕುಟುಂಬಗಳ ತೋಟದ ಪ್ರದೇಶ ಜಲಾವೃತವಾಗಿದ್ದು, ನೀರು ಗ್ರಾಮವನ್ನು ಸುತ್ತುವರೆಯುತ್ತಿದ್ದು, ಆ ನಿಟ್ಟಿನಲ್ಲಿ ಸರಕಾರಿ ಅಧಿಕಾರಿಗಳು ಅವರ ಮನವೊಲಿಸಿ ಅವರನ್ನು ಹಾಗೂ ಜಾನವಾರುಗಳನ್ನು ಗ್ರಾಮದ ಮನೆಗಳಿಗೆ ಹಾಗೂ ತಮ್ಮ ಸಂಬಂಧಿಕರ ಮನೆಗಳಿಗೆ ಸ್ಥಳಾಂತರಿಸಿದ್ದಾರೆ. ಹಾಗೂ ಗಂಜಿ ಕೇಂದ್ರವನ್ನು ಪ್ರಾರಂಭಿಸಿದ್ದಾರೆ. ಹಳಿಂಗಳಿ ತೋಟದ ಮನೆಯ ಹತ್ತಿರ ಪ್ರವಾಹ ಬಾಧಿತವಾಗಿರುವ ಪ್ರದೇಶದಲ್ಲಿನ 40 ಕುಟುಂಬ 175 ಜನ, 208 ಜಾನುವಾರುಗಳನ್ನು ಸ್ಥಳಾಂತರಿಸಿದ್ದು, ಹಳಿಂಗಳಿಯ ಮಹಾವೀರ ಪ್ರಾಥಮಿಕ ಶಾಲೆಯಲ್ಲಿ ಕಾಳಜಿ ಕೇಂದ್ರ ಸ್ಥಾಪಿಸಿ ಅದರಲ್ಲಿ 15ಕುಟುಂಬಗಳ 74 ಜನ ಆಶ್ರಯ ಪಡೆದುಕೊಂಡಿದ್ದಾರೆ. ಉಳಿದ ಕುಟುಂಬಗಳು ಸಮೀಪದ ಸಂಬಂಧಿಕರ ಮನೆ ಹಾಗೂ ಸ್ವಂತ ಮನೆಗಳಲ್ಲಿ ವಸತಿ ಪಡೆದಿದ್ದಾರೆ. ಸುಮಾರು 5,000ಸಾವಿರ ಜನಸಂಖ್ಯೆಯ ತಮದಡ್ಡಿಯ 1,100 ಕುಟುಂಬಗಳು ವಾಸವಿದ್ದಾರೆ. ಸದ್ಯ ತಮದಡ್ಡಿಯ ಸರಕಾರಿ ಪ್ರೌಢಶಾಲೆಯಲ್ಲಿ ಕಾಳಜಿ ಕೇಂದ್ರ ಆರಂಭಿಸಿದ್ದು, ನದಿ ಪಾತ್ರದಲ್ಲಿರುವ 6 ಕುಟುಂಬಗಳ 20 ಜನ ಮತ್ತು 78 ಜಾನುವಾರುಗಳು ಆಶ್ರಯ ಪಡೆದುಕೊಂಡಿದ್ದಾರೆ. ನೀರಿನ ತೀವ್ರತೆ ಇನ್ನೂ ಹೆಚ್ಚಾದಲ್ಲಿ ಆದಷ್ಟು ಬೇಗನೆ ಗಂಜಿ ಕೇಂದ್ರ ತೆರೆಯಲು ಎಲ್ಲ ಸಿದ್ದತೆಗಳನ್ನು ಮಾಡಿಕೊಂಡಿರುವುದಾಗಿ ಅಧಿಕಾರಿಗಳು ಹೇಳುತ್ತಾರೆ.

ಮುಳುಗಡೆ : ರಬಕವಿ-ಬನಹಟ್ಟಿ ಸಮೀಪದ ಜಾಕವೆಲ್ ರಸ್ತೆ, ಮದನಮಟ್ಟಿ ರಬಕವಿ ಬನಹಟ್ಟಿ ರಸ್ತೆಯ ಸೇತುವೆ ಮೇಲೆ ನೀರು ಬಂದಿದ್ದರಿಂದ ಮದನಮಟ್ಟಿಯ ಗುಡ್ಡದಲ್ಲಿರುವ ಸರಕಾರಿ ಪದವಿ ವಿದ್ಯಾಲಯದ ವಿದ್ಯಾರ್ಥಿಗಳಿಗೆ ಸಾಕಷ್ಟು ತೊಂದರೆಯಾಗಿದೆ. ಅಲ್ಲದೆ. ಕುಲಹಳ್ಳಿಯಿಂದ ಹಿಪ್ಪರಗಿಗೆ ತೆರಳುವ ರಸ್ತೆ ಹಿನ್ನೀರಿನಿಂದ ಜಲಾವೃತವಾಗಿದ್ದು ರಸ್ತೆ ಸಂಚಾರಕ್ಕೆ ತೊಂದರೆಯಾಗಿದೆ.

ಬೆಳೆ ಹಾನಿ : ತಮದಡ್ಡಿ, ಹಳಿಂಗಳಿ(ಗುಳ್ಳಿಮನೆ), ಮದನಮಟ್ಟಿ, ಆಸಂಗಿ, ಅಸ್ಕಿ, ಕುಲಹಳ್ಳಿ ಹಾಗೂ ಹಿಪ್ಪರಗಿ ಗ್ರಾಮದ ಕೃಷ್ಣಾ ನದಿ ತೀರದ ಬಹುತೇಕ ರೈತರ ಜಮೀನಿಗೆ ನೀರು ನುಗ್ಗಿರುವುದರಿಂದ ಅಪಾರ ಪ್ರಮಾಣದ ಬೆಳೆ ಹಾನಿಯಾಗಿದೆ.

ಪ್ರವಾಹದ ಕುರಿತು ಜಾಗೃತಿ ಮೂಡಿಸಲು ಸರಕಾರದಿಂದ ಡಂಗೂರಗಳನ್ನು ಹಾಕಲಾಗುತ್ತಿದ್ದು, ಜೊತೆಗೆ ಆಯಾ ಗ್ರಾಮದ ವ್ಯಾಪ್ತಿಯಲ್ಲಿ ಆರೋಗ್ಯಾಧಿಕಾರಿಗಳು ಹಾಗೂ ಪಶುವೈದ್ಯಾಧಿಕಾರಿಗಳು ತುರ್ತು ಚಿಕಿತ್ಸೆಗಾಗಿ ಬೀಡು ಬಿಟ್ಟಿದ್ದು ಸಾರ್ವಜನಿಕರ ಆರೋಗ್ಯದ ದೃಷ್ಠಿಯಿಂದ ಎಲ್ಲ ಮುಂಜಾಗೃತ ಕ್ರಮಗಳನ್ನು ಕೈಗೊಂಡಿದ್ದಾರೆ.

ಮಹಾರಾಷ್ಟ್ರದ ಜಲಾನಯನ ಅಧಿಕಾರಿಗಳ ಜೊತೆ ಇಲ್ಲಿನ ಕೃಷ್ಣಾ ಮೇಲದಂಡೆ ಯೋಜನೆ ಅಧಿಕಾರಿಗಳು ನಿರಂತರ ಸಂಪರ್ಕದಲ್ಲಿರುವುದರಿಂದ ಹಾಗೂ ಮಹಾರಾಷ್ಟ್ರದಿಂದ ಹರಿದು ಬರುವ ಕೃಷ್ಣಾ ನದಿಯ ನೀರನ್ನು ಇಲ್ಲಿನ ಹಿಪ್ಪರಗಿ ಜಲಾಶಯದಿಂದ ಹಾಗೂ ಆಲಮಟ್ಟಿ ಜಲಾಶಯದಿಂದ ಹೆಚ್ಚಿನ ಪ್ರಮಾಣದಲ್ಲಿ ನೀರನ್ನು ಬೀಡುತ್ತಿರುವುದರಿಂದ ಪ್ರವಾಹ ಅಷ್ಟಾಗಿ ಬರಲಿಕ್ಕಿಲ್ಲ ಎಂಬುದು ಅಧಿಕಾರಿಗಳ ಅನಿಸಿಕೆ ಆದರೂ ಸದ್ಯಕ್ಕೆ ಪ್ರವಾಹ ಬೀತಿ ಅಧಿಕವಾಗಿದ್ದು ಇನ್ನೂ ಇದೇ ಪ್ರಮಾಣದಲ್ಲಿ ನೀರು ಹರಿದುಬರುವ ಸಂಭವವಿರುವುದರಿಂದ ತಾಲ್ಲೂಕು ಆಡಳಿತ ಎಲ್ಲ ಗ್ರಾಮಗಳಲ್ಲಿ ಕಟ್ಟೆಚ್ಚರ ವಹಿಸಿದೆ. ಆದರೂ ಹಿಪ್ಪರಗಿ ಜಲಾಶಯದ ಹಿನ್ನೀರಿನಿಂದಾಗಿ ರೈತಾಪಿ ಜನತೆ ಸದಾ ಆತಂಕದಲ್ಲಿರುವುದಂತು ಸತ್ಯ.

ಮಹಾರಾಷ್ಟ್ರದ ಕೃಷ್ಣಾ ಜಲಾನಯನ ಪ್ರದೇಶಗಳಲ್ಲಿ ಮಳೆಯಾಗುತ್ತಿದ್ದು ಹೆಚ್ಚಿನ ಪ್ರಮಾಣದಲ್ಲಿ ನೀರು ಹರಿದು ಬರುತ್ತಿರುವುದರಿಂದ ಮುನ್ನೆಚ್ಚರಿಕೆ ಕ್ರಮವಾಗಿ ಅಗತ್ಯವಿದ್ದ ಕಡೆ ಕಾಳಜಿ ಕೇಂದ್ರವನ್ನು ತೆರಯಲಾಗಿದ್ದು, ನದಿ ಪಾತ್ರದ ಜನರು ಜಾಗ್ರತರಾಗಿರಬೇಕು. ತಾಲೂಕು ಆಡಳಿತ ಸದಾ ತಮ್ಮ ಜೊತೆಗೆ ಇರುತ್ತದೆ
-ಗಿರೀಶ ಸ್ವಾದಿ ತಹಶೀಲ್ದಾರರು, ರಬಕವಿ ಬನಹಟ್ಟಿ

ಅಸ್ಕಿ ಗ್ರಾಮಕ್ಕೆ ಸಂಬಂದಿಸಿದಂತೆ ಅರಣ್ಯ ಇಲಾಖೆ ಜಾಗೆ ತೋರಿಸಿದ್ದು, ಸರಕಾರ ಮಟ್ಟದಲ್ಲಿ ಕಂದಾಯ ಭೂಮಿ ಹಸ್ತಾಂತರಿಸಿ ಅರಣ್ಯ ಭೂಮಿ ಪಡೆದುಕೊಳ್ಳುವ ಪ್ರಕ್ರಿಯೆ ಸರಕಾರ ಮಟ್ಟದಲ್ಲಿದ್ದು ಆದಷ್ಟು ಬೇಗನೆ ಪೂರ್ಣ ಗೊಳಿಸಲು ಸರಕಾರದ ಮೇಲೆ ಒತ್ತಡ ಹಾಕಲಾಗುವುದು. ಅದೇ ರೀತಿ ತಮದಡ್ಡಿ ಗ್ರಾಮಕ್ಕೆ ಸಂಬಂಧಿಸಿದಂತೆ ಈಗಾಗಲೇ ಹಳಿಂಗಳಿ ಗ್ರಾಮದ ಗುಡ್ಡದಲ್ಲಿ ಸುಮಾರು 89 ಎಕರೆ ಕಂದಾಯ ಭೂಮಿ ನೀಡಲಾಗಿದೆ. ಆದರೆ ಹಳಿಂಗಳಿ ಗ್ರಾಮಸ್ಥರು ಅದು ಪ್ರಾಚೀನ ಇತಿಹಾಸದ ಕುರುಹುಗಳಿರುವ ಜಾಗೆ ಅದನ್ನು ಅವರಿಗೆ ಬಿಟ್ಟು ಕೊಡಬೇಡಿ ಎಂದು ನ್ಯಾಯಾಲಯದ ತಡೆಯಾಜ್ಞೆಯನ್ನು ತಂದಿರುವುದರಿಂದ ಅದು ನೆನೆಗುದಿಗೆ ಬಿದ್ದಿದೆ. ಆದರೂ ಆದಷ್ಟು ಬೇಗನೆ ಆ ಸಮಸ್ಯೆಯನ್ನು ಕೂಡಾ ಬಗೆ ಹರಿಸಲಾಗುವುದು. ನೀರಿನ ಪ್ರಮಾಣ ಹೆಚ್ಚಾಗುತ್ತಿರುವುದರಿಂದ ಬಾಧಿತವಾಗುವ ಗ್ರಾಮಗಳ ಜನತೆಗೆ ಊಟ, ವಸತಿ ಹಾಗೂ ಜಾನುವಾರುಗಳಿಗೆ ಮೇವು ವಿತರಿಸುವ ನಿಟ್ಟಿನಲ್ಲಿ ತಾಲೂಕು ಆಡಳಿತ ಕೆಲಸ ಮಾಡುತ್ತಿದೆ.
-ಸಿದ್ದು ಸವದಿ ಶಾಸಕರು ತೇರದಾಳ ಮತಕ್ಷೇತ್ರ

-ಕಿರಣ ಶ್ರೀಶೈಲ ಆಳಗಿ

Advertisement

Udayavani is now on Telegram. Click here to join our channel and stay updated with the latest news.

Next