ಮುದ್ದೇಬಿಹಾಳ: ತಾಲೂಕಿನ ಕೃಷ್ಣಾ ನದಿ ತೀರದ ಹಂಡರಗಲ್ ಗ್ರಾಮ ವ್ಯಾಪ್ತಿಯ ಬಹುಹಳ್ಳಿ ಕುಡಿವ ನೀರಿನ ಜಾಕವೆಲ್ ಬಳಿ ಮೊಸಳೆ ಹಾವಳಿ ಹೆಚ್ಚಾಗಿದ್ದು ಜನ, ಜಾನುವಾರುಗಳ ಆತಂಕಕ್ಕೆ ಕಾರಣವಾಗಿದೆ.
ಜಾಕವೆಲ್ ಸುತ್ತ ಮುತ್ತ ಈ ಮೊಸಳೆಗಳ ಕಾಟ ಹೆಚ್ಚಾಗಿದೆ. ಇದುವರೆಗೆ ಹಲವು ಕುರಿ, ಆಡು, ನಾಯಿ ಮುಂತಾದ ಸಣ್ಣ ಜಾನುವಾರುಗಳನ್ನು ಕಚ್ಚಿ ನೀರಲ್ಲಿ ಎಳೆದೊಯ್ದಿವೆ. ಆದರೆ ಈಗ ದೊಡ್ಡ ಜಾನುವಾರುಗಳಾದ ಎಮ್ಮೆ, ಆಕಳು ಮುಂತಾದವುಗಳ ಮೇಲೆ ದಾಳಿ ನಡೆಸಿ ಪ್ರಾಣಕ್ಕೆ ಎರವಾಗತೊಡಗಿವೆ.
ಮೊಸಳೆ ದಾಳಿಗೆ ಒಳಗಾದ ಜಾನುವಾರುಗಳು ಮರಣವನ್ನಪ್ಪುವ ಮೂಲಕ ರೈತರಿಗೆ, ಬಡವರಿಗೆ ಸಾಕಷ್ಟು ಹಾನಿ ತಂದೊಡ್ಡುತ್ತಿವೆ. ಈ ಭಾಗದಲ್ಲಿ ಮೊಸಳೆ ಕಾಟ ಹೆಚ್ಚಾಗಿರುವುದರಿಂದ ಜನರೂ ಸಹಿತ ಅಲ್ಲಿ ತಿರುಗಾಡಲು, ಜಾಕವೆಲ್ ದುರಸ್ತಿ ಮತ್ತಿತರ ಕಾರ್ಯಕ್ಕೆ ಹೋಗಿ ಬರಲು ಹಿಂದೇಟು ಹಾಕುತ್ತಿದ್ದಾರೆ.
ಇದನ್ನೂ ಓದಿ : ಪಿಎಸ್ಐ ಪರೀಕ್ಷೆ ಅಕ್ರಮ ಬಯಲು ಮಾಡಿದ ಅಭ್ಯರ್ಥಿಯೂ ಅರೆಸ್ಟ್: ಬಂಧಿತರ ಸಂಖ್ಯೆ 25ಕ್ಕೆ
ಪ್ರಾದೇಶಿಕ ಅರಣ್ಯ ಇಲಾಖೆಯ ಅಧಿಕಾರಿಗಳು, ಸಿಬ್ಬಂದಿ ಆದಷ್ಟು ಬೇಗ ಸ್ಥಳಕ್ಕೆ ಭೇಟಿ ನೀಡಿ ಮೊಸಳೆ ಹಾವಳಿ ಮಟ್ಟ ಹಾಕಬೇಕು ಎಂದು ಯರಝರಿ ಗ್ರಾಪಂ ಮಾಜಿ ಉಪಾಧ್ಯಕ್ಷ ಹಾಗೂ ಕನ್ನಡ ಜಾನಪದ ಪರಿಷತ್ ನ ಮುಖಂಡ ಮಹಾಂತೇಶ ಪಟ್ಟಣದ ಮತ್ತು ಗ್ರಾಮಸ್ಥರು ಆಗ್ರಹಿಸಿದ್ದಾರೆ.