Advertisement

ಕೃಷ್ಣಾ ಯೋಜನೆ ನಿರಾಶ್ರಿತರ ಬಗ್ಗೆ ಮರುಕ

11:49 AM Jun 08, 2017 | Team Udayavani |

ವಿಧಾನಪರಿಷತ್ತು: ಕೃಷ್ಣಾ ಮೇಲ್ದಂಡೆ ಯೋಜನೆ ವ್ಯಾಪ್ತಿಯ ನಿರಾಶ್ರಿತರ ಪುನರ್ವಸತಿ ಕೇಂದ್ರಗಳಲ್ಲಿ ಜನ ಸತ್ತರೆ ಹೆಣ ಹೂಳಲೂ ಸ್ಮಾಶನ ಇಲ್ಲ ಎಂಬ ವಿಚಾರಕ್ಕೆ ಮೇಲ್ಮನೆ ಮರುಕಪಟ್ಟ ಪ್ರಸಂಗ ಬುಧವಾರ ನಡೆಯಿತು.

Advertisement

ನಿಯಮ 330ರಡಿ ವಿಷಯ ಪ್ರಸ್ತಾಪಿಸಿದ ಬಿಜೆಪಿ ಸದಸ್ಯ ಹನುಮಂತ ನಿರಾಣಿ, ಕೃಷ್ಣಾಮೇಲ್ದಂಡೆ ಯೋಜನೆಯ ಆಲಮಟ್ಟಿ ಮತ್ತು ನಾರಾಯಣಪುರ ಜಲಾಶಯದ ವ್ಯಾಪ್ತಿಯಲ್ಲಿ 176 ಗ್ರಾಮಗಳು ಮುಳುಗಡೆ ಆಗಿವೆ. ಮೂರನೇ ಹಂತದಲ್ಲಿ 20 ಗ್ರಾಮಗಳು ಮುಳುಗಡೆ ಆಗುತ್ತವೆ. 124 ಗ್ರಾಮಗಳು ಸ್ಥಳಾಂತರಗೊಂಡಿವೆ. 34 ಗ್ರಾಮಗಳಿಗೆ ಜಾಗ ಸಿಕ್ಕಿಲ್ಲ. 14 ಗ್ರಾಮಗಳು ಭಾಗಶಃ ಸ್ಥಳಾಂತರಗೊಂಡಿವೆ. ಇದರಲ್ಲಿ 13 ಪುನರ್ವಸತಿ ಕೇಂದ್ರಗಳಲ್ಲಿ ಇಲ್ಲಿವರೆಗೆ ಸ್ಮಶಾನ ಇಲ್ಲ. ಯಾರಾದರೂ ಸತ್ತರೆ, ಹಳೆ ಗ್ರಾಮದಲ್ಲಿ ಅಂತ್ಯಕ್ರಿಯೆ ನಡೆಸಬೇಕು ಇಲ್ಲ, ಬೇರೆ ಗ್ರಾಮಕ್ಕೆ ಹೆಣ ತೆಗೆದುಕೊಂಡು ಹೋಗಬೇಕು ಎಂದು ಸಮಸ್ಯೆ ಬಿಚ್ಚಿಟ್ಟಿರು.

ಪಕ್ಷಭೇದ ಮರೆತು ಸ್ಪಂದಿಸಿ: ಮಧ್ಯಪ್ರವೇಶಿದ ಕಂದಾಯ ಸಚಿವ ಕಾಗೋಡು ತಿಮ್ಮಪ್ಪ, ಮುಳುಗಡೆ ಪ್ರದೇಶದ ಸಮಸ್ಯೆ ಏನೆಂದು ನನಗೆ ಚೆನ್ನಾಗಿ ಗೊತ್ತು. ಹತ್ತಾರು ವರ್ಷಗಳ ಹಿಂದೆ ಮುಳುಗಡೆಗೊಂಡ ಗ್ರಾಮದವರಿಗೆ ಇನ್ನೂ ನೆಲೆ ಸಿಕ್ಕಿಲ್ಲ.ಪಕ್ಷಭೇದ ಮರೆತು ಜನಪ್ರತಿನಿಧಿಗಳು ಸ್ಪಂದಿಸಬೇಕು ಎಂದರು.

ಇದಕ್ಕೆ ಧ್ವನಿಗೂಡಿಸಿದ ಸಭಾಪತಿ ಡಿ.ಎಚ್‌.ಶಂಕರಮೂರ್ತಿ, ಸಂತ್ರಸ್ತರಿಗೆ ಹತ್ತಾರು ವರ್ಷಗಳಿಂದ ಸುಸಜ್ಜಿತ ಪುನರ್ವಸತಿ ಕಲ್ಪಿಸಿಕೊಡುವಲ್ಲಿ ನಾವು ವಿಫ‌ಲರಾಗಿದ್ದೇವೆ. ಅದರಲ್ಲೂ ಸ್ಮಶಾನದ ವ್ಯವಸ್ಥೆ ಮಾಡಲು ಆಗಿಲ್ಲ ಎಂಬುದು ಅತ್ಯಂತ ನೋವಿನ ಸಂಗತಿ. ನಿರಾಣಿ ಮತ್ತು ಕಾಗೋಡು ಅವರ ಮಾತುಗಳಿಂದ ನನ್ನ ಹೃದಯ ತುಂಬಿ ಬಂತು. ಬದ್ದತೆ ಇರುವ ಪ್ರಾಮಾಣಿಕ ಅಧಿಕಾರಿಗಳನ್ನು ನಿಯೋಜಿಸಿ ಸಂತ್ರಸ್ತರಿಗೆ ನ್ಯಾಯ ಒದಗಿಸಿಕೊಡುವ ನಿಟ್ಟಿನಲ್ಲಿ ಪ್ರಯತ್ನಿಸಬೇಕು ಎಂದು ಸರ್ಕಾರಕ್ಕೆ ಕಿವಿಮಾತು ಹೇಳಿದರು.

ಅಧಿಕಾರಿಗಳು ಸಿಕ್ಕರೆ ಸಾಕಾಗಿದೆ: ಇದಕ್ಕೆ ಪ್ರತಿಕ್ರಿಯಿಸಿದ ಸಚಿವ ಎಂ.ಬಿ. ಪಾಟೀಲ್‌, ಬದ್ದತೆ ಇರುವ ಪ್ರಾಮಾಣಿಕ ಅಧಿಕಾರಿಗಳ ವಿಚಾರ ಬಿಡಿ, ಯಾರಾದರೊಬ್ಬರು ಅಧಿಕಾರಿ ಸಿಕ್ಕರೆ ಸಾಕು ಎನ್ನುವಂತಾಗಿದೆ ನಮ್ಮ ಪರಿಸ್ಥಿತಿ. ಮುಳುಗಡೆ ಪ್ರದೇಶದ ಪುನರ್ವಸತಿ ಯೋಜನೆಗಳಿಗೆ ಬರಲು ಯಾವೊಬ್ಬ ಅಧಿಕಾರಿ ಮುಂದೆ ಬರುವುದಿಲ್ಲ.ಎಲ್ಲರೂ ಬೆಂಗಳೂರಿನಲ್ಲೇ ಇರುಬೇಕು ಎನ್ನುತ್ತಾರೆ ಎಂದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next