ಭಟ್ಕಳ: ಸಂಘಟನಾ ಶಕ್ತಿಯಿಂದ ಮಾತ್ರ ಹಿಂದೂ ಧರ್ಮವನ್ನು ನಾವು ಕಾಪಾಡಿಕೊಂಡು ಬರುವುದಕ್ಕೆ ಸಾಧ್ಯ ಎಂದು ಹಿಂದೂ ಜಾಗರಣಾ ವೇದಿಕೆಯ ಉತ್ತರ ಪ್ರಾಂತ ಸಂಚಾಯಕ ಕೃಷ್ಣಮೂರ್ತಿ ಹೇಳಿದರು.
ಅವರು ಇಲ್ಲಿನ ಬೈಲೂರು ನೀರಗದ್ದೆಯಲ್ಲಿರುವ ರಾಘವೇಶ್ವರ ಸ್ವಾಮೀಜಿ ಹವ್ಯಕ ಸಭಾ ಭವನದಲ್ಲಿ ಏರ್ಪಡಿಸಲಾಗಿದ್ದ ಸಾಮೂಹಿಕ ಸತ್ಯನಾರಾಯಣ ಪೂಜೆಯ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡುತ್ತಿದ್ದರು.
ಭಟ್ಕಳದಲ್ಲಿ 1993ರ ಗಲಭೆಯ ಸಂದರ್ಭದಲ್ಲಿ ಹಿಂದೂ ಜಾಗರಣಾ ವೇದಿಕೆಯ ಅವಶ್ಯಕತೆ ಕಂಡು ಬಂದಿದ್ದು ಅಂದಿನಿಂದ ಇಂದಿನ ತನಕ ಸಕ್ರಿಯವಾಗಿ ಕಾರ್ಯನಿರ್ವಹಿಸುತ್ತಾ ಇದೆ. ಬೇರೆ ಬೇರೆ ಧರ್ಮದವರು ಸಾಂಘಿಕವಾಗಿ ನಮ್ಮ ಮೇಲೆ ದಬ್ಬಾಳಿಕೆಯನ್ನು ಮಾಡುತ್ತಲೇ ಬಂದಿದ್ದಾರೆ. ಅಂಗಹ ಸಂಚುಗಳನ್ನು ವಿಫಲಗೊಳಿಸಲು ನಾವು ಸಂಘಟಿತರಾಗುವುದು ಅತ್ಯವಶ್ಯಕವಾಗಿದೆ. ಸಮಾಜ ಅಂತಹ ಸಂಚುಗಳನ್ನು ವಿಫಲಗೊಳಿಸಲು ಸದಾ ಜಾಗೃತ ಸ್ಥಿತಿಯಲ್ಲಿರಬೇಕು ಎಂದೂ ಅವರು ಯುವ ಪೀಳಿಗೆಗೆ ಕರೆ ನೀಡಿದರು.
ಈ ಸದರ್ಭದಲ್ಲಿ ಸತ್ಯನಾರಾಯಣ ವೃತಕಥೆಯನ್ನು ನೆರವೇರಿಸಿ ಆಶೀರ್ವಾದ ಪೂರ್ವಕವಾಗಿ ಮಾತನಾಡಿದ ವಿಧ್ವಾನ್ ನೀಲಕಂಠ ಯಾಜಿ ಅವರು ಮಾನವನಾಗಿ ಬಂದ ನಾವು ಭೂಮಿಯ ಮೇಲೆ ಪುಣ್ಯ ಸಂಗ್ರಹ ಮಾಡಿದಾಗ ಮಾತ್ರ ನಮಗೆ ಸ್ವರ್ಗ ಪ್ರಾಪ್ತಿಯಾಗುತ್ತದೆ. ಸತ್ಯನಾರಾಯಣ ವೃಥಕಥೆಯು ಭೂಲೋಕದಲ್ಲಿಯ ಜನರ ಸಂಕಷ್ಟ ನಿವಾರಣೆಗಾಗಿ ಶ್ರೀಮನ್ನಾರಾಯಣನು ಹೇಳಿರುವುದು. ನಾವು ನಮ್ಮ ಸನಾತನ ಧರ್ಮ ಈ ಹಿಂದೆ ಇಡೀ ಜಗತ್ತನ್ನು ಆಳುತ್ತಿತ್ತು ಎಂತಹ ಆಕ್ರಮಣವಾದರೂ ಕೂಡಾ ಲಕ್ಷ ಲಕ್ಷ ವರ್ಷಗಳಿಂದ ಹಿಂದೂ ಧರ್ಮ ಉಳಿದುಕೊಂಡು ಬಂದಿದೆ, ಇದೊಂದು ಜೀವನ ಕ್ರಮವಾಗಿದೆ ಎಂದ ಅವರು ಸಂಘಟಿತರಾಗಿ ನಮ್ಮ ಧರ್ಮದ ಮೇಲೆ ಆಗುತ್ತಿರುವ ಅತಿಕ್ರಮಣವನ್ನು ತಡೆಯಬೇಕಾಗಿದೆ ಎಂದರು.
ಸಂಘಟನೆಯಿಂದ ಜಾಗೃತ ಸ್ಥಿತಿಯಲ್ಲಿಡಲು ಸಹಕಾರಿಯಾಗಿದೆ. ಸಮಾಜ ಒಗ್ಗಟ್ಟಾಗಿ ನಿಂತರೆ ಸಮಾಜದಲ್ಲಿಯ ಅಶಕ್ತರಿಗೆ ಸಹಾಯ ಮಾಡಲು ಸಾಧ್ಯವಾಗುವುದು ಎಂದೂ ಅವರು ಹೇಳಿದರು. ಪ್ರಾಂತ ಸಂಚಾಲಕ ಭಾಸ್ಕರ ನಾಯ್ಕ ಕಾರವಾರ, ಉತ್ತರ ಕನ್ನಡ ಜಿಲ್ಲಾಧ್ಯಕ್ಷ ಸದಾನಂದ ಕಾಮತ್ ಕುಮಟಾ, ಪ್ರಮುಖರಾದ ಗೋವಿಂದ ನಾಯ್ಕ ಭಟ್ಕಳ, ಸುರೇಶ ದೇವಾಡಿಗ ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಸಾಮೂಹಿ ಸತ್ಯನಾರಾಯಣ ಪೂಜೆಯನ್ನು ನೆರವೇರಿಸಿದ ನಂತರ ತೀರ್ಥ ಪ್ರಸಾದ ವಿತರಿಸಲಾಯಿತು. ನೂರಾರು ಜನರು ಪ್ರಸಾದ ಭೋಜನವನ್ನು ಸ್ವೀಕರಿಸಿದರು.
ಕಾರ್ಯಕ್ರಮದಲ್ಲಿ ಶಾಸಕ ಸುನಿಲ್ ನಾಯ್ಕ, ಮಹೇಂದ್ರ ನಾಯ್ಕ, ರವಿ ನಾಯ್ಕ ಜಾಲಿ, ಕೃಷ್ಣಾ ನಾಯ್ಕ ಆಸರಕೇರಿ, ರಾಘವೇಂದ್ರ ನಾಯ್ಕ, ದಿನೇಶ ಗವಾಳಿ, ದಿನೇಶ ನಾಯ್ಕ ಚೌಥನಿ, ಶಂಕರ ನಾಯ್ಕ, ಸುರೇಶ ನಾಯ್ಕ, ಕೃಷ್ಣಮೂರ್ತಿ ಹೆಗಡೆ, ನಾರಾಯಣ ಭಟ್ಟ ಮುಂತಾದವರು ಭಾಗವಹಿಸಿದ್ದರು.